Advertisement

ಕರ್ನಾಟಕ ಚುನಾವಣೆ 2023: ಚಿಕ್ಕೋಡಿ ಮೂರು ಬಾರಿ “ಪಕ್ಷೇತರರ ಪಾರುಪತ್ಯ”

06:31 PM Apr 11, 2023 | Team Udayavani |

ಚಿಕ್ಕೋಡಿ: ರಾಜ್ಯ ವಿಧಾನಸಭೆ ಕ್ಷೇತ್ರದ ಕ್ರಮಾಂಕದಲ್ಲಿ ಮೊದಲ ಸ್ಥಾನ ಪಡೆದಿರುವ ನಿಪ್ಪಾಣಿ ವಿಧಾನಸಭೆ ಕ್ಷೇತ್ರಕ್ಕೆ ನಡೆದ 12 ಸಾರ್ವತ್ರಿಕ ಚುನಾವಣೆಯಲ್ಲಿ ಮೂರು ಬಾರಿ ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿ ವಿಧಾನಸಭೆ ಮೆಟ್ಟಿಲೇರಿದ್ದಾರೆ.

Advertisement

ಹೌದು. 1967 ರಿಂದ 2018ರವರೆಗೆ ನಡೆದ 12 ಚುನಾವಣೆಯಲ್ಲಿ ನಿಪ್ಪಾಣಿ ವಿಧಾನಸಭೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಗಳು ಕಣಕ್ಕಿಳಿದು ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆದು ಶಾಸಕರಾಗಿ ಆಯ್ಕೆಯಾಗಿರುವುದು ಇತಿಹಾಸ. ಅಂದು ರಾಜ್ಯದಲ್ಲಿ ಇರುವ ಕಾಂಗ್ರೆಸ್‌ ಮತ್ತು ಜನತಾ ಪಕ್ಷದ ವಿರುದ್ಧ ಸ್ಪರ್ಧಿಸಿದ್ದ ಪಕ್ಷೇತರ ಅಭ್ಯರ್ಥಿಗಳು ಮೂರು ಬಾರಿ ನಿಪ್ಪಾಣಿ ಕ್ಷೇತ್ರದಲ್ಲಿ ಪಾರುಪತ್ಯ ಸಾಧಿಸಿದ್ದಾರೆ.

ನೆರೆಯ ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ನಿಪ್ಪಾಣಿ ಕ್ಷೇತ್ರದಲ್ಲಿ 1967ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎಸ್‌. ವೈ.ಮಿರ್ಜೆ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಜಿ.ಕೆ.ಮಾನ್ವಿ ಸುಮಾರು 12 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಿ ಶಾಸಕರಾಗಿ ಆಯ್ಕೆಗೊಂಡಿದ್ದರು.

ನಂತರ 1978ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಯಾಗಿ ಸ್ಪರ್ಧಿಸಿದ್ದ ಜಿ.ಎಂ. ದಾರಿಯಾ ವಿರುದ್ಧ ಮತ್ತೋರ್ವ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದ ಬಿ.ಜಿ.ಚವ್ಹಾಣ ಸುಮಾರು 24 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಿ ವಿಧಾನಸಭೆಗೆ ಹೋಗಿದ್ದರು. 1983ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಎಸ್‌.ಎಸ್‌.ಜೋಶಿ ವಿರುದ್ಧ ಮತ್ತೋರ್ವ ಪಕ್ಷೇತರ ಅಭ್ಯರ್ಥಿ ಬಿ.ಡಿ.ಶಿಂಧೆ ಸುಮಾರು
3 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿ ಶಾಸಕರಾಗಿ ಆಯ್ಕೆಯಾಗಿದ್ದು ಇತಿಹಾಸ.

ಪಕ್ಷೇತರರಿಗೆ ಬ್ರೇಕ್‌ ಹಾಕಿದ ವೀರಕುಮಾರ: ಸತತ ಮೂರು ಬಾರಿ ಪಕ್ಷೇತರರ ಪಾಲಾಗಿದ್ದ ನಿಪ್ಪಾಣಿ ವಿಧಾನಸಭೆ ಕ್ಷೇತ್ರದಲ್ಲಿ 1985ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಿದ ವೀರಕುಮಾರ ಪಾಟೀಲ ಪಕ್ಷೇತರ ಅಭ್ಯರ್ಥಿ ಬಿ.ಜಿ.ಚವ್ಹಾಣ ವಿರುದ್ಧ ಸುಮಾರು 30 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಿ ಪಕ್ಷೇತರ ಗೆಲುವಿಗೆ ಬ್ರೇಕ್‌ ಹಾಕಿದರು. 1989 ಮತ್ತು 1994ರಲ್ಲಿ ಎರಡು ಅವ ಧಿಗೆ ಸುಭಾಷ ಜೋಶಿ ಮೊದಲ ಅವ ಧಿಗೆ ಜನತಾದಳ ಎರಡನೇ ಅವಧಿಗೆ ಜೆಡಿಯು ಪಕ್ಷದಿಂದ ಶಾಸಕರಾಗಿ ಆಯ್ಕೆಯಾದರು.

Advertisement

ಸತತ ಮೂರು ಬಾರಿ ಗೆದ್ದ ಕಾಕಾಸಾಹೇಬ ಪಾಟೀಲ: ನಿಪ್ಪಾಣಿ ಕ್ಷೇತ್ರದಲ್ಲಿ ಸತತ ಎರಡು ಅವಧಿಗೆ ಗೆಲುವು ಸಾಧಿಸಿ ಹ್ಯಾಟ್ರಿಕ್‌ ಗೆಲುವಿಗಾಗಿ ಮತ್ತೂಮ್ಮೆ ಕಣಕ್ಕಿಳಿದಿದ್ದ ಸುಭಾಷ ಜೋಶಿ ವಿರುದ್ಧ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಿದ್ದ ಕಾಕಾಸಾಹೇಬ ಪಾಟೀಲ ಸತತ ಮೂರು ಬಾರಿ ಗೆದ್ದು ವಿಧಾನಸಭೆ ಮೆಟ್ಟಿಲೇರಿದ್ದರು. 2008ರಲ್ಲಿ ರಲ್ಲಿ ನಿಪ್ಪಾಣಿ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟ ಶಶಿಕಲಾ ಜೊಲ್ಲೆ ಅವರು ಕ್ಷೇತ್ರದಲ್ಲಿ ಅಂದು ಸಾಕಷ್ಟು ಪ್ರವಾಸ ಮಾಡಿ ಬಿಜೆಪಿ ಸಂಘಟನೆ ಮಾಡಿದ್ದರು.

ಕಾಕಾಸಾಹೇಬ ಪಾಟೀಲ ವಿರುದ್ಧ ಚುನಾವಣೆಯಲ್ಲಿ ಸೋತು ಬಿಟ್ಟರು. ನಂತರ 2013ಲ್ಲಿ ಕಾಕಾಸಾಹೇಬ ಪಾಟೀಲ ವಿರುದ್ಧ ಶಶಿಕಲಾ ಜೊಲ್ಲೆ ಗೆದ್ದು ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. 2018ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿ ಕ್ಯಾಬಿನೆಟ್‌ ದರ್ಜೆ ಸಚಿವರಾದರು. ಈಗ ಮತ್ತೂಮ್ಮೆ ಹ್ಯಾಟ್ರಿಕ್‌ ಗೆಲುವಿನತ್ತ ಮತ್ತೂಮ್ಮೆ ಬಿಜೆಪಿಯಿಂದ ಶಶಿಕಲಾ ಜೊಲ್ಲೆ ಅವರು ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಕಾಕಾಸಾಹೇಬ ಪಾಟೀಲ ವಿರುದ್ಧ ಸ್ಪರ್ಧೆಗಿಳಿದಿದ್ದಾರೆ.

ಪಕ್ಷೇತರ ಅಭ್ಯರ್ಥಿ ಉತ್ತಮ ಪಾಟೀಲ ಕಣಕ್ಕೆ: ಕಾಂಗ್ರೆಸ್‌ ಮತ್ತು ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಬೋರಗಾಂವ ಅರಿಹಂತ ಉದ್ಯೋಗ ಸಮೂಹದ ಮುಖಂಡ ಉತ್ತಮ ರಾವಸಾಹೇಬ ಪಾಟೀಲ ನಿಪ್ಪಾಣಿ ಭಾಗದಲ್ಲಿ ಸಾಕಷ್ಟು ಪ್ರಭಾವ ಬೀರುವ ರಾಜಕಾರಣಿ. ಎರಡೂ ಪಕ್ಷದ ಟಿಕೆಟ್‌ ಆಕಾಂಕ್ಷಿಯಾಗಿದ್ದ ಉತ್ತಮ ಪಾಟೀಲ ಅವರಿಗೆ ಟಿಕೆಟ್‌ ನಿರಾಕರಿಸಲಾಗಿದೆ. ಹೀಗಾಗಿ ಕ್ಷೇತ್ರದ ಇತಿಹಾಸದಲ್ಲಿ ಪಕ್ಷೇತರ ಅಭ್ಯರ್ಥಿಗಳು ಮೂರು ಬಾರಿ ಗೆಲುವು ಸಾಧಿಸಿದ್ದನ್ನು ಮನಗಂಡು ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ನಿರ್ಧಾರಕ್ಕೆ ಬಂದಿದ್ದಾರೆನ್ನುವ ಮಾತುಗಳು ಕ್ಷೇತ್ರದಲ್ಲಿ ಹರಿದಾಡುತ್ತಿದೆ.

*ಮಹಾದೇವ ಪೂಜೇರಿ

 

Advertisement

Udayavani is now on Telegram. Click here to join our channel and stay updated with the latest news.

Next