ಕಾರವಾರ: ಮೂರು ಲಕ್ಷ ಜನ ಸೇರಿಸಿ,ಮೇ.3 ರಂದು ಜಿಲ್ಲೆಗೆ ಪ್ರಧಾನಿ ಮೋದಿ ಅವರನ್ನು ಕರೆಸಲಿದ್ದೇವೆ ಎಂದು ಕೇಂದ್ರ ಪ್ರವಾಸೋದ್ಯಮ ಮತ್ತು ಬಂದರು ಖಾತೆ ರಾಜ್ಯ ಸಚಿವ ಶ್ರೀಪಾದ ನಾಯ್ಕ ಹೇಳಿದರು.
ಕಾರವಾರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಮಾಡಿದ ಅವರು ಮೇ. 3 ರಂದು ಮಂಗಳೂರು, ಉತ್ತರ ಕನ್ನಡ, ಬೆಳಗಾವಿಯಲ್ಲಿ ಮೋದಿ ಪ್ರಚಾರ ಮಾಡಲಿದ್ದಾರೆ. ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತಯಾಚಿಸಲಿದ್ದಾರೆಂದು ನುಡಿದ ಅವರು ರಾಜ್ಯ ಸರ್ಕಾರ ಮಾಡಿದ ಅಭಿವೃದ್ಧಿ ಕೆಲಸಗಳು ನಮಗೆ ವರದಾನವಾಗಿವೆ. ಕೇಂದ್ರ ,ರಾಜ್ಯ ಸರ್ಕಾರದ ಸಾಧನೆಗಳನ್ನು ಮುಂದಿಟ್ಟು ಮತಕೇಳುತ್ತೇವೆ. ಉತ್ತರ ಕನ್ನಡ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ವಾತಾವರಣ ಬಿಜೆಪಿ ಪರವಾಗಿದೆ. ಆರು ಕ್ಷೇತ್ರಗಳಲ್ಲಿ ಗೆಲ್ಲಲಿದ್ದೇವೆ ಎಂದರು.
ಕಾರವಾರ ಶಾಸಕಿ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಸಚಿವ ಶ್ರೀಪಾದ ನಾಯ್ಕ ನುಡಿದರು. ಕೆನರಾ ಕ್ಷೇತ್ರದ ಸಂಸದ ಅನಂತ ಕುಮಾರ್ ಹೆಗಡೆ ಪ್ರಚಾರಕ್ಕೆ ಬರುತ್ತಿಲ್ಲವಲ್ಲ ಎಂಬ ಪ್ರಶ್ನೆಗೆ ಅವರಿಗೆ ಅನ್ಯ ಜಿಲ್ಲೆಯ ಹೊಣೆ ಹೊರಿಸಲಾಗಿರಬಹುದು ಎಂದ ಕೇಂದ್ರ ಸಚಿವರು, ಅವರ ಆರೋಗ್ಯ ಸರಿಯಿಲ್ಲ. ಹಾಗಾಗಿ ಅವರು ಬಂದಿಲ್ಲ ಎಂದರು.
ಸೀಬರ್ಡ್ ಯೋಜನೆಯ ಕೆಲ ನಿರಾಶ್ರಿತರಿಗೆ ಪೂರ್ಣ ಪ್ರಮಾಣದಲ್ಲಿ ಪರಿಹಾರ ಸಿಕ್ಕಿಲ್ಲ ಎಂಬ ಮಾಹಿತಿ ಇದೆ. ಆ ಪಟ್ಟಿ ಪಡೆದು ಪರಿಹಾರ ವಿತರಿಸಲು ಕೇಂದ್ರದ ಮೇಲೆ ಒತ್ತಡ ಹಾಕುವೆ ಎಂದರು. 9 ವರ್ಷಗಳಾದರೂ ಕಾರವಾರ – ಕುಂದಾಪುರ ಹೆದ್ದಾರಿ ಕೆಲಸ ಮುಗಿದಿಲ್ಲ ಎಂಬ ಪ್ರಶ್ನೆಗೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಜೊತೆ ಈ ಸಂಬಂಧ ಚರ್ಚಿಸುವೆ ಎಂದರು. ಸೀಬರ್ಡ್ ಮತ್ತು ಕೈಗಾದಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುವ ಸಂಬಂಧ ಕೇಂದ್ರ ಸರ್ಕಾರದ ಜೊತೆ ಚರ್ಚಿಸುವೆ ಎಂದರು.
ಈ ಸಂಗತಿಗಳು ಈಗ ಗಮನಕ್ಕೆ ಬಂದಿವೆ. ಪಕ್ಕದ ರಾಜ್ಯ ಗೋವಾವನ್ನು ಪ್ರತಿನಿಧಿಸಿದರೂ , ಕಾರವಾರದ ಹೈವೆ ಹಾಗೂ ಇತರೆ ಸಮಸ್ಯೆಗಳನ್ನು ಚರ್ಚಿಸಿ ಪರಿಹಾರ ಹುಡುಕಲು ಯತ್ನಿಸುವೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಅಧ್ಯಕ್ಷ ನಿತಿನ್ ಪಿಕಳೆ, ವಿಪ ಸದಸ್ಯ ಗಣಪತಿ ಉಳ್ವೇಕರ್, ಉಪಾಧ್ಯಕ್ಷ ಪಿ.ಪಿ.ನಾಯ್ಕ, ಪೌಲೆಲಂ ಶಾಸಕ, ಸ್ಥಳೀಯ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.