ಶಿವಮೊಗ್ಗ: ಮಲ್ಲಿಕಾರ್ಜುನ ಖರ್ಗೆ ಅವರನ್ನು ತಂದೆ ಸ್ಥಾನದಲ್ಲಿ ಇಟ್ಟಿದ್ದೆವು.ಆದರೆ ಇಂಥ ಹೇಳಿಕೆ ನಿರೀಕ್ಷಿಸಿರಲಿಲ್ಲ, ಅವರಿಗೆ ಇಂಥ ದುಸ್ಥಿತಿ ಏಕೆ ಬಂತು ಗೊತ್ತಿಲ್ಲ ಎಂದು ಬಿಜೆಪಿ ಹಿರಿಯ ನಾಯಕ ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದ್ದಾರೆ
ಸುದ್ದಿಗಾರರೊಂದಿಗೆ ಮಾತನಾಡಿ, ನಿನ್ನೆ ಸಿದ್ದರಾಮನಹುಂಡಿಯಲ್ಲಿ ಕಾಂಗ್ರೆಸ್ ಗೂಂಡಾಗಿರಿ ನಡೆಸಿದೆ. ಬಕೆಟ್ ನಲ್ಲಿ ಕಲ್ಲು ತುಂಬಿಕೊಂಡು ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ನಾವು ಪೊಲೀಸ್ ದೂರನ್ನು ದಾಖಲಿಸಿದ್ದೇವೆ. ಸೋಲುವ ಹತಾಶೆಯಿಂದ ಕಾಂಗ್ರೆಸ್ ಈ ರೀತಿಯ ಕೆಲಸ ಮಾಡುತ್ತಿದೆ ಎಂದರು.
ಸೋನಿಯಾಗಾಂಧಿ ಹಾಗೂ ರಾಹುಲ್ ಗಾಂಧಿ ಮೆಚ್ಚಿಸಿ ಖರ್ಗೆ ಎಐಸಿಸಿ ಅಧ್ಯಕ್ಷರಾಗಿದ್ದಾರೆ.ಖರ್ಗೆಯವರಿಗಿಂತ ಕೆಟ್ಟ ಭಾಷೆಯಲ್ಲಿ ಟೀಕಿಸಬಲ್ಲೆ. ಆದರೆ ಆ ಕೆಲಸ ಮಾಡಲ್ಲ.ನಾನು ಟೀಕೆ ಮಾಡಿ ಆಮೇಲೆ ನಾನು ಹಾಗೆ ಹೇಳಿಲ್ಲ ಎಂದು ಹೇಳುವುದಿಲ್ಲ.ಖರ್ಗೆಯವರಿಗೆ ಒಂದು ತೂಕವಿತ್ತು. ಅದಕ್ಕೆ ಎಐಸಿಸಿ ಅಧ್ಯಕ್ಷರಾದರೂ. ಆದರೆ ಈಗ ಏನಾಗಲು ಹೊರಟಿದ್ದಾರೋ ಗೊತ್ತಿಲ್ಲ.ನರೇಂದ್ರ ಮೋದಿ ಅವರನ್ನು ಟೀಕಿಸಿದವರು ಯಾರೂ ಉದ್ಧಾರವಾಗಿಲ್ಲ ಎಂದರು.
ಎಲ್ಲರೂ ಅವರ ವಿರುದ್ಧ ಟೀಕೆ ಮಾಡಲು ಜಗದೀಶ್ ಶೆಟ್ಟರ್ ಇಂಟರ್ನ್ಯಾಷನಲ್ ಲೀಡರಾ? ಹುಬ್ಬಳ್ಳಿ ಏನು ಪಾಕಿಸ್ಥಾನದಲ್ಲಿದೆಯಾ? ಎಲ್ಲ ಕ್ಷೇತ್ರಗಳಿಗೆ ಹೋದಂತೆ ನಾಯಕರು ಹುಬ್ಬಳ್ಳಿಗೂ ಹೋಗಿದ್ದಾರೆ. ಜಗದೀಶ್ ಶೆಟ್ಟರ್ ಪರ್ಮಿಷನ್ ತೆಗೆದುಕೊಂಡು ಹುಬ್ಬಳ್ಳಿಗೆ ಹೋಗಬೇಕಾ ಎಂದು ಈಶ್ವರಪ್ಪ ಪ್ರಶ್ನಿಸಿದರು.
ಜಗದೀಶ್ ಶೆಟ್ಟರ್ ತಾಯಿಗೆ ದ್ರೋಹ ಮಾಡಿದವನು.ಬೆಳಸಿದ ತಾಯಿಯನ್ನೇ ಸಾಯಿಸಲು ಹೊರಟವನು. ಬಾರಪ್ಪ ವಾಪಸ್ ಬಾ ಎಂದೆ. ಆದರೆ ಮಾತು ಕೇಳಲಿಲ್ಲಶೆಟ್ಟರ್ ಗೆ ಸೊಕ್ಕು ಬಂದಿದೆ. 16 ಜನ ಕಾರ್ಪೊರೇಟರ್ ಗಳಲ್ಲಿ ಒಬ್ಬರೂ ಶೆಟ್ಟರ್ ಜತೆ ಹೋಗಿಲ್ಲ. ಜಗದೀಶ್ ಶೆಟ್ಟರ್ ದು ಹಿಂದುತ್ವದ ರಕ್ತ. ಹಿಂದುತ್ವದ ಶೆಟ್ಟರ್ ಹೀಗೆ ಮಾಡುತ್ತಿದ್ದಾರಲ್ಲಾ ಎಂಬ ಕಾರಣಕ್ಕೆ ಆಕ್ರೋಶ ಅಷ್ಟೇ ಎಂದರು.
ನಮಗೆ ರಾಷ್ಟ್ರೀಯವಾದಿ ಮುಸ್ಲಿಮರು ಮತ ಹಾಕುತ್ತಾರೆ.ರಾಷ್ಟ್ರದ್ರೋಹಿಗಳ ಮತ ನನಗೆ ಬೇಡ. ಹಿಂದೂಗಳಿಗೆ ಧಕ್ಕೆಯಾದರೆ ಒಂದು ಕ್ಷಣವೂ ನಾನು ತಡೆಯಲ್ಲ.ಶಿವಮೊಗ್ಗ ನಗರ ಸೇರಿದಂತೆ ರಾಜ್ಯದಲ್ಲಿ ನಾವು 140 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದರು.