Advertisement

Karnataka Election; ಲಿಂಗಾಯತರು ಭ್ರಷ್ಟರು ಎಂದಿಲ್ಲ: ಹೇಳಿಕೆ ಕುರಿತು ಸಿದ್ದರಾಮಯ್ಯ

07:37 PM Apr 22, 2023 | Team Udayavani |

ಮೈಸೂರು : ರಾಜ್ಯದಲ್ಲಿ ಚುನಾವಣ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು ಆರೋಪ ಪ್ರತ್ಯಾರೋಪಗಳು ತೀವ್ರವಾಗಿದೆ. ಈ ನಡುವೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದ ತುಣುಕು ಬಿಜೆಪಿಗೆ ಅಸ್ತ್ರವಾಗಿ ವ್ಯಾಪಕವಾಗಿ ವೈರಲ್ ಆಗಿದೆ.

Advertisement

ಬಿಜೆಪಿ ಲಿಂಗಾಯತ ಸಿಎಂ ಮಾಡಿ ಎಂಬ ಅಸ್ತ್ರ ಕಾಂಗ್ರೆಸ್ ಮೇಲೆ ಪ್ರಯೋಗಿಸುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ ‘ಈಗಾಗಲೇ ಲಿಂಗಾಯತರೇ ಮುಖ್ಯಮಂತ್ರಿ ಇದ್ದಾರಲ್ಲ. ಅವರೇ ಎಲ್ಲ ಭ್ರಷ್ಟಾಚಾರ ಮಾಡಿ ಹಾಳು ಮಾಡಿರುವುದು ರಾಜ್ಯವನ್ನು ” ಎಂದು ಪ್ರತಿಕ್ರಿಯಿಸಿದ್ದರು.

ಈ ಹಿಂದೆ ವೀರಶೈವ ಲಿಂಗಾಯತ ಸಮಾಜವನ್ನು ಒಡೆಯಲು ಯತ್ನಿಸಿದ ಸಿದ್ದರಾಮಯ್ಯ, ಈಗ ಆ ಸಮುದಾಯದವರೆಲ್ಲ ಭ್ರಷ್ಟರು, ರಾಜ್ಯವನ್ನು ಹಾಳುಗೆಡವುವವರು ಎಂಬ ಸಂವೇದನಾರಹಿತ ದ್ವೇಷಪೂರಿತ ಹೇಳಿಕೆ ನೀಡಿರುವುದು ಅಕ್ಷಮ್ಯ.ಜಗದ್ಗುರು ಬಸವಣ್ಣನ ಆದರ್ಶ ಪಾಲಿಸುವ 7 ಕೋಟಿ ಕನ್ನಡಿಗರು, ಅವರನ್ನು ಎಂದಿಗೂ ಕ್ಷಮಿಸುವುದಿಲ್ಲ.” ಎಂದು ಬಿಜೆಪಿ ಟ್ವೀಟ್ ಮಾಡಿ ಆಕ್ರೋಶ ಹೊರ ಹಾಕಿತ್ತು.

ಸಿದ್ದರಾಮಯ್ಯ ಸ್ಫಷ್ಟನೆ
ಬಿಜೆಪಿ ಹೇಳಿಕೆಯ ಲಾಭ ಪಡೆಯಲು ಮುಂದಾಗಿರುವುದನ್ನು ಅರಿತ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿ , ”ನಾನು ಬಸವರಾಜ್ ಬೊಮ್ಮಾಯಿ ಅವರು ಭ್ರಷ್ಟ ಎಂದು ಹೇಳಿದ್ದು ಅವರಿಗೆ ಸೀಮಿತವಾಗಿ, ಲಿಂಗಾಯತರು ಭ್ರಷ್ಟರು ಎಂದು ಹೇಳಿಲ್ಲ. ಆ ರೀತಿಯಾಗಿ ವರದಿ ಮಾಡಿರುವುದು ಸರಿಯಿಲ್ಲ. ಲಿಂಗಾಯತರಲ್ಲಿ ಬಹಳಷ್ಟು ಜನ ಪ್ರಾಮಾಣಿಕ ಮುಖ್ಯಮಂತ್ರಿಗಳು ಇದ್ದರು. ವೀರೇಂದ್ರ ಪಾಟೀಲ್, ನಿಜಲಿಂಗಪ್ಪನವರು, ಜೆ.ಎಚ್.ಪಟೇಲ್ ರಂತವರು ಇದ್ದರು. ಈಗ ಮುಖ್ಯಮಂತ್ರಿಯಾಗಿರುವ ಬಸವರಾಜ್ ಬೊಮ್ಮಾಯಿ ಭ್ರಷ್ಟ ಎಂದು ಹೇಳಿದ್ದೇನೆ. ಚುನಾವಣ ಸಂದರ್ಭದಲ್ಲಿ ಬಿಜೆಪಿಯವರು ತಿರುಚಿ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ. ಬಿಜೆಪಿಯವರು ರಾಜಕೀಯ ದುರುದ್ದೇಶದಿಂದ ಮಾಡುತ್ತಿದ್ದಾರೆ. ನನಗೆ ವೀರಶೈವ-ಲಿಂಗಾಯತರ ಬಗ್ಗೆ ಅಪಾರವಾದ ಗೌರವವಿದೆ. ಈ ಬರಿ ಲಿಂಗಾಯತರಿಗೆ ನಾವು 50 ಕ್ಕಿಂತ ಹೆಚ್ಚು ಟಿಕೆಟ್ ನೀಡಿದ್ದೇವೆ” ಎಂದರು.

”ನಾವು ಜಾತಿ ಮೇಲೆ ಮುಖ್ಯಮಂತ್ರಿ ಮಾಡುವುದಿಲ್ಲ, ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಶಾಸಕರು ತೀರ್ಮಾನ ಮಾಡುತ್ತಾರೆ . ಅದು ನಮ್ಮ ಪಕ್ಷದ ಪದ್ಧತಿ” ಎಂದು ಸಿದ್ದರಾಮಯ್ಯ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next