Advertisement

ಸ್ವಾಮಿ ಹ್ಯಾಟ್ರಿಕ್‌ ಗೆಲುವಿಗೆ ರೆಡ್ಡಿ ಸವಾಲು

03:35 PM Mar 07, 2023 | Team Udayavani |

ಕೋಲಾರ: ರಾಜ್ಯದ ಮಾವಿನ ರಾಜಧಾನಿ ಶ್ರೀನಿವಾಸ ಪುರ. ಆಂಧ್ರದ ಗಡಿಗೆ ಹೊಂದಿಕೊಂಡಿರು ವುದರಿಂದ ಅಲ್ಲಿನ ಪಾಳೇಗಾರಿಕೆ ರಾಜಕೀಯ ಸಂಸ್ಕೃತಿಯ ಹೆಗ್ಗುರು ತಾಗಿ ಕರ್ನಾಟಕದಲ್ಲಿ ಉಳಿದುಕೊಂಡಿದೆ. ನಾಯಕನ ನಿಷ್ಠೆ ಮುಂದೆ ಪಕ್ಷ ರಾಜಕಾರಣಕ್ಕೆ ಇಲ್ಲಿ ಜಾಗವೇ ಇಲ್ಲ. ರಕ್ತರಂಜಿತ ಚುನಾವಣೆಗಳಿಗೆ ಕುಖ್ಯಾತಿ ಪಡೆದಿದ್ದ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಜನ ಇತ್ತೀಚಿಗೆ ಸಮಾಧಾನದಿಂದ ಶಾಂತಿಯುತವಾಗಿ ಚುನಾವಣೆ ನಡೆಸುವುದನ್ನು ಅಭ್ಯಾಸ ಮಾಡಿಕೊಳ್ಳುತ್ತಿದ್ದಾರೆ.

Advertisement

ಇಬ್ಬರದೇ ರಾಜ್ಯಭಾರ: ಶ್ರೀನಿವಾಸಪುರ ಕ್ಷೇತ್ರದಲ್ಲಿ 1978ರಲ್ಲಿ ಮೊದಲ ಬಾರಿಗೆ ರಮೇಶ್‌ಕುಮಾರ್‌ ಶಾಸಕರಾಗಿ ಆಯ್ಕೆಯಾದರು. 1983ರಲ್ಲಿ ಇವರ ವಿರುದ್ಧ ಜಿ.ಕೆ.ವೆಂಕಟಶಿವಾರೆಡ್ಡಿ ಚುನಾವಣೆ ಗೆದ್ದರು. ಅಲ್ಲಿಂದ 2018ರವರೆಗೂ ಅವರೊಮ್ಮೆ ಇವರೊಮ್ಮೆ ಎಂಬಂತೆ ಚುನಾವಣೆ ಸೋತು ಗೆಲುತ್ತಲೇ ಬರುತ್ತಿದ್ದರು. 2018ರ ಚುನಾವಣೆ ಯಲ್ಲಿ ರಮೇಶ್‌ಕುಮಾರ್‌ ಸತತವಾಗಿ ಗೆಲುವು ದಾಖಲಿಸುವ ಮೂಲಕ ಸೋಲು ಗೆಲುವಿನ ಸರಪಳಿಯನ್ನು ಮುರಿದಿದ್ದಾರೆ. ಶ್ರೀನಿವಾಸಪುರದ ಹಿಂದಿನ 45 ವರ್ಷಗಳ ಇತಿಹಾಸದಲ್ಲಿ ಕೇವಲ ಇಬ್ಬರೇ ಶಾಸಕರಾಗಿ ಆಯ್ಕೆಯಾಗುತ್ತಿರುವುದು ರಾಜ್ಯದಲ್ಲಿಯೇ ವಿಶೇಷ. ಈ ಬಾರಿ ರಮೇಶ್‌ಕುಮಾರ್‌ ಅಥವಾ ಜಿ.ಕೆ.ವೆಂಕಟಶಿವಾರೆಡ್ಡಿ ಯಾರೇ ಗೆದ್ದರೂ 50 ವರ್ಷಗಳ ರಾಜಕೀಯ ಜೀವನವನ್ನು ಪೂರೈಸುತ್ತಾರೆ.

ಬಿಜೆಪಿಯಲ್ಲಿ ಯಾರಿಗೆ ಟಿಕೆಟ್‌: ಸ್ವಾಮಿ(ರಮೇಶ್‌ ಕುಮಾರ್‌) ಮತ್ತು ರೆಡ್ಡಿ(ವೆಂಕಟಶಿವಾರೆಡ್ಡಿ)ಯ ನಡುವೆ ರಾಜಕೀಯ ಮಾಡಲು ಬಿಜೆಪಿಗೆ ಸಾಮರ್ಥ್ಯ ಸಾಲುತ್ತಿಲ್ಲ. ಆದರೂ, ಹಿಂದಿನ ಚುನಾವಣೆಯಲ್ಲಿಯೂ ಡಾ. ವೇಣುಗೋಪಾಲ್‌ ಸಾಂಕೇತಿಕವಾಗಿ ಸ್ಪರ್ಧೆ ಮಾಡಿದ್ದರು. ಕೋಲಾರ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿದ್ದ ಇವರು, ಪಡೆದು ಕೊಂಡಿದ್ದ ಮತಗಳು ಐದು ಸಾವಿರ ತಲುಪಿರಲಿಲ್ಲ. ಆದ್ದರಿಂದಲೇ ಈ ಬಾರಿ ಡಾ.ವೇಣುಗೋಪಾಲ್‌ ಬದಲಿಗೆ ಕಳೆದ 8 ವರ್ಷಗಳಿಂದಲೂ ಕ್ಷೇತ್ರದಲ್ಲಿ ಸಂಚರಿಸುತ್ತ, ಸೇವಾ ಕಾರ್ಯಕ್ರಮಗಳ ಮೂಲಕ ಗಮನ ಸೆಳೆದಿರುವ ಎಸ್‌ಎಲ್‌ಎನ್‌ ಮಂಜುನಾಥ್‌ ಅಭ್ಯರ್ಥಿಯಾಗಬೇಕೆಂಬ ಮಾತುಗಳು ಪಕ್ಷದ ಕಾರ್ಯಕರ್ತರ ವಲಯದಲ್ಲಿ ಕೇಳಿ ಬರುತ್ತಿದೆ. ಆದರೆ, ಸ್ವಾಮಿ-ರೆಡ್ಡಿ ಮಧ್ಯೆ ಒಕ್ಕಲಿಗರೇ ಅಭ್ಯರ್ಥಿಯಾಗಬೇಕು ಎನ್ನುವುದಾದರೆ ಡಾ.ವೇಣುಗೋಪಾಲ್‌ ಮತ್ತೆ ಟಿಕೆಟ್‌ ಗಿಟ್ಟಿಸಿಕೊಳ್ಳುತ್ತಾರೆ. ಹಿಂದುಳಿದವರಿಗೆ ಅವಕಾಶ ಎನ್ನುವುದಾದರೆ ಎಸ್‌ಎಲ್‌ಎನ್‌ ಮಂಜುನಾಥ್‌ ಮುನ್ನಲೆಗೆ ಬರಲಿದ್ದಾರೆ.

ಆಪ್‌ ಸವಾಲು: ಶ್ರೀನಿವಾಸಪುರದಲ್ಲಿ ಒಂದೆರೆಡು ದಶಕಗಳಿಂದಲು ವೈದ್ಯರಾಗಿ ಜನಪ್ರಿಯರಾಗಿರುವವರು ಡಾ.ವೆಂಕಟಾಚಲ. ಆರೇಳು ತಿಂಗಳ ಹಿಂದೆಯೇ ಆಮ್‌ ಆದ್ಮಿ ಪಕ್ಷವನ್ನು ಸೇರ್ಪಡೆಯಾಗಿ ಪ್ರಚಾರದಲ್ಲಿ ತೊಡಗಿಸಿ ಕೊಂಡಿದ್ದಾರೆ. ವೃತ್ತಿಯಲ್ಲಿ ವೈದ್ಯರಾಗಿರುವ ಡಾ.ವೆಂಕಟಾ ಚಲ ಕಳೆದ ಆರು ತಿಂಗಳಿಂದಲೂ ಕ್ಷೇತ್ರದಲ್ಲಿ ನಡೆಯುವ ಸಂತೆಗಳಲ್ಲಿ ಆಮ್‌ ಆದ್ಮಿ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸುವ ಮೂಲಕ ಜನಪ್ರಿಯರಾಗಿದ್ದಾರೆ. 8 ದೊಡ್ಡ ಮಟ್ಟದ ಸಂತೆಗಳಲ್ಲಿ ಪ್ರತಿ ಹದಿನೈದು ದಿನಕ್ಕೊಮ್ಮೆ ಆರೋಗ್ಯ ಶಿಬಿರವನ್ನು ತಪ್ಪದೇ ನಡೆಸುತ್ತಿದ್ದಾರೆ. ಹೀಗೆ ನಾಲ್ಕೈದು ಸಾವಿರಮಂದಿಗೆ ಆರೋಗ್ಯ ಸೇವೆ ಒದಗಿಸಿದ್ದಾರೆ. ಬಿಡುವಿನ ವೇಳೆ ಕ್ಷೇತ್ರದ ಪ್ರತಿ ಗ್ರಾಮವನ್ನು ಸುತ್ತುತ್ತಿದ್ದಾರೆ. ಸ್ವಾಮಿ-ರೆಡ್ಡಿಯ ನಡುವೆ ಬದಲಾವಣೆ ಬಯಸುತ್ತಿರುವ ಮತದಾರರ ಮನಸು ಗೆಲ್ಲುವ ಪ್ರಯತ್ನದಲ್ಲಿದ್ದಾರೆ. ದಾವಣಗೆರೆಯ ಆಪ್‌ ಸಮಾವೇಶಕ್ಕೂ ಶ್ರೀನಿವಾಸಪುರದಿಂದ ಎರಡು ಬಸ್‌ ಗಳಲ್ಲಿ 100 ಮಂದಿ ಮುಖಂಡರನ್ನು ಕರೆದೊಯ್ದು ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.

ಚುನಾವಣಾ ಪ್ರಚಾರ ನೋಟ: ಸ್ವಾಮಿ ರೆಡ್ಡಿಯ ಜನಪ್ರಿಯತೆ ಮಾತ್ರವೇ ಚುನಾವಣೆಯಲ್ಲಿ ಓರೆಗೆ ಹಚ್ಚಲಾಗುತ್ತದೆ. ಮತದಾನ ನಡೆಯುವ ದಿನಕ್ಕೆ ಯಾರ ಪರ ಹೆಚ್ಚು ಜನರು ವಾಲುತ್ತಾರೋ ಅವರು ವಿಜೇತರಾ ಗುವುದು ವಾಡಿಕೆ. ಚುನಾವಣೆಗೂ ಮುನ್ನ ಕ್ಷೇತ್ರದ ಜನ ಸ್ವಾಮಿಯಿಂದ ರೆಡ್ಡಿಯತ್ತ, ರೆಡ್ಡಿಯಿಂದ ಸ್ವಾಮಿಯತ್ತ ಚಿತ್ತ ಹರಿಸಿ ಸೇರ್ಪಡೆಯಾಗುವುದು ಮಾಮೂಲಿ. ಆದರೆ, ಈ ಬಾರಿ ಹೀಗೆ ಮನಸು ಬದಲಾಯಿಸುವವರ ಮನ ಗೆಲ್ಲಲು ಆಪ್‌ ಸಕಲ ಪ್ರಯತ್ನಗಳನ್ನು ನಡೆಸುತ್ತಿದೆ. ಬಿಜೆಪಿ ಈ ಬಾರಿಯೂ ಚುನಾವಣೆಯನ್ನು ಗಂಭೀರ ವಾಗಿ ಪರಿಗಣಿಸದೆ ಸಾಂಕೇತಿಕವಾಗಿ ಎದುರಿಸುವಂತಿದ್ದರೆ ಮತ್ತೇ ಡಾ.ವೇಣುಗೋಪಾಲ್‌ ಅಭ್ಯರ್ಥಿಯಾಗುತ್ತಾರೆ. ಕೊಂಚ ಪೈಪೋಟಿ ನೀಡಬೇಕು ಎನ್ನುವುದಾದರೆ ಎಸ್‌ ಎಲ್‌ಎನ್‌ ಮಂಜುನಾಥ್‌ ಅಭ್ಯರ್ಥಿಯಾಗುತ್ತಾರೆ. ಒಟ್ಟಾರೆ ಸ್ವಾಮಿ ರೆಡ್ಡಿ ಮಧ್ಯೆ ಮಾತ್ರವೇ ನಡೆಯುವ ಚುನಾವಣೆಯನ್ನು ಆಪ್‌ ಅಥವಾ ಬಿಜೆಪಿ ತನ್ನತ್ತ ಎಷ್ಟರ ಮಟ್ಟಿಗೆ ಸೆಳೆಯುತ್ತದೆ ಎನ್ನುವುದೇ ಕುತೂಹಲ.

Advertisement

ಸಪಕ್ಷದ ವಿರೋಧವೇ ರಮೇಶ್‌ಕುಮಾರ್‌ಗೆ ಸವಾಲು : ಕಾಂಗ್ರೆಸ್‌ ಪಕ್ಷದಿಂದ ಸತತ ಎರಡು ಬಾರಿ ಗೆಲುವು ದಾಖಲಿಸಿರುವ ರಮೇಶ್‌ಕುಮಾರ್‌, ಈ ಬಾರಿ ಹ್ಯಾಟ್ರಿಕ್‌ ಗೆಲುವಿಗೆ ಪ್ರಯತ್ನಿಸುತ್ತಿದ್ದಾರೆ. ಇತ್ತೀಚಿಗೆ ಗೌನಿಪಲ್ಲಿಯಲ್ಲಿ ದೊಡ್ಡ ಮಟ್ಟದ ರಾಜಕೀಯ ಸಮಾವೇಶವನ್ನು ಆಯೋಜಿಸುವ ಮೂಲಕ ಚುನಾ ವಣಾ ಪ್ರಚಾರಕ್ಕೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ. ಆದರೆ, ಕೆಲವು ದಿನಗಳ ಹಿಂದಷ್ಟೇ ಅವರ ಪತ್ನಿ ವಿಜಯಮ್ಮ ತೀರಿಕೊಂಡಿ ದ್ದರಿಂದ ಪ್ರಚಾರ ಕಾರ್ಯ ಕೊಂಚ ಸ್ಥಗಿತಗೊಂಡಿದೆ. ಪತ್ನಿಯ ತಿಥಿ ಕಾರ್ಯಯನ್ನು ಮುಗಿಸಿಕೊಂಡಿರುವ ರಮೇಶ್‌ಕುಮಾರ್‌, ಮತ್ತೆ ಚುನಾವಣಾ ರಾಜಕೀಯಕ್ಕೆ ಮರಳುತ್ತಿದ್ದಾರೆ. ಜಿಲ್ಲಾ ಕಾಂಗ್ರೆಸ್‌ನ ಹೈಕಮಾಂಡ್‌ನ‌ಂತಿದ್ದ ಕೆ.ಎಚ್‌.ಮುನಿಯಪ್ಪರಿಗೆ ಕಳೆದ ಲೋಕಸಭಾ ಚುನಾವಣೆ ಯಲ್ಲಿ ಸೋಲುಣಿಸಿದ ಕಾರಣಕ್ಕಾಗಿ ಅವರ ವಿರೋಧ ಕಟ್ಟಿಕೊಂಡಿದ್ದಾರೆ. ಇದು ಜಿಲ್ಲಾ ಕಾಂಗ್ರೆಸ್‌ನಲ್ಲಿ ರಮೇಶ್‌ಕುಮಾರ್‌ ಮತ್ತು ಕೆ.ಎಚ್‌. ಮುನಿಯಪ್ಪ ನೇತೃತ್ವದ ಎರಡು ತಂಡವಾಗಿ ಇಬ್ಭಾಗವಾಗಿದೆ. ಕೋಲಾರ ಜಿಲ್ಲೆಯಲ್ಲಿ ಕಾಂಗ್ರೆಸ್‌ ಪಕ್ಷವು ವಿರೋಧಿ ಗಳನ್ನು ಎದುರಿಸುವುದಕ್ಕಿಂತಲೂ ಮುಂಚೆ ತಮ್ಮದೇ ಪಕ್ಷದ ಮತ್ತೂಂದು ಗುಂಪನ್ನು ಎದುರಿಸ ಬೇಕಾಗ ವುದು ಅನಿವಾರ್ಯವಾಗಿದೆ.

ಕೆಜಿಎಫ್ ಕ್ಷೇತ್ರ ಮಾತ್ರ ಈ ಗುಂಪು ರಾಜಕೀಯದಿಂದ ದೂರ ಉಳಿದಿದೆ. ಗುಂಪು ರಾಜಕೀಯದ ವಿರೋಧದ ಬಿಸಿಯನ್ನು ಕಡಿಮೆ ಮಾಡಿಕೊಳ್ಳುವ ಸಲುವಾಗಿಯೇ ರಮೇಶ್‌ ಕುಮಾರ್‌ ಕೋಲಾರಕ್ಕೆ ಸಿದ್ದರಾಮಯ್ಯರನ್ನು ಆಹ್ವಾನಿ ಸಿದ್ದಾರೆನ್ನಲಾಗುತ್ತಿದೆ. ಆದರೆ, ಶ್ರೀನಿವಾಸಪುರ ರಾಜಕೀ ಯದಲ್ಲಿ ಹೊರಗಿನ ವ್ಯಕ್ತಿ ಶಕ್ತಿಗಳ ಪ್ರಭಾವಕ್ಕಿಂತಲೂ ಸ್ಥಳೀಯ ನಾಯಕರ ನಿಲುವು ಬೆಂಬಲಗಳೇ ಅಂತಿ ಮವಾಗಿರುತ್ತದೆ. ಇದರಿಂದಾಗಿ ರಮೇಶ್‌ಕುಮಾರ್‌ ಹ್ಯಾಟ್ರಿಕ್‌ ಗೆಲುವಿನ ದಾಖಲೆ ಮಾಡಬೇ ಕಾದರೆ ಮೊದಲು ತಮ್ಮದೇ ಪಕ್ಷದ ವಿರೋಧಿಗಳನ್ನು ಮಣಿಸ ಬೇಕಾಗಿರುವ ಸವಾಲು ಸ್ವೀಕರಿಸಬೇಕಾಗುತ್ತದೆ.

ವೆಂಕಟಶಿವಾರೆಡ್ಡಿಗೆ ಕೈ ಗುಂಪುಗಾರಿಕೆ ಲಾಭ? : ರಮೇಶ್‌ಕುಮಾರ್‌ರ ಸಂಪ್ರದಾಯಿಕ ರಾಜಕೀಯ ಎದುರಾಳಿ ಜಿ.ಕೆ.ವೆಂಕಟಶಿವಾರೆಡ್ಡಿ. ಕೋಲಾರ ಜಿಲ್ಲಾ ಜೆಡಿಎಸ್‌ ಅಧ್ಯಕ್ಷರೂ ಆಗಿದ್ದಾರೆ. ಈವರೆಗೂ ಹತ್ತು ಚುನಾವಣೆಗಳಲ್ಲಿ ರಮೇಶ್‌ಕುಮಾರ್‌ರನ್ನು ಎದುರಿಸಿ ನಾಲ್ಕು ಬಾರಿ ಗೆದ್ದಿರುವ ಜಿ.ಕೆ.ವೆಂಕಟ ಶಿವಾರೆಡ್ಡಿ 2023ರಲ್ಲಿ ಗೆದ್ದರೆ ಐದನೇ ಗೆಲುವನ್ನು ದಾಖಲಿಸುತ್ತಾರೆ. ಐದನೇ ಗೆಲುವನ್ನು ಪಡೆದೇ ತೀರಬೇಕೆಂಬ ಛಲ ಮತ್ತು ಹಠದಿಂದ ಕಳೆದ ಐದಾರು ತಿಂಗಳಿಂದಲೂ ಕ್ಷೇತ್ರ ಸುತ್ತಾಡುತ್ತಿ ದ್ದಾರೆ. ಪ್ರತಿ ನಿತ್ಯವೂ ಐದರಿಂದ ಹತ್ತು ಗ್ರಾಮಗಳಲ್ಲಿ ಜೆಡಿಎಸ್‌ ಸಭೆ ನಡೆಸುತ್ತ, ಪ್ರಚಾರದಲ್ಲಿ ತೊಡಗಿ ಕೊಂಡಿದ್ದಾರೆ. ಕುಮಾರಸ್ವಾಮಿ ನೇತೃತ್ವದ ಪಂಚರತ್ನ ಮತ್ತು ಜಲಧಾರೆ ಕಾರ್ಯಕ್ರಮಗಳಲ್ಲಿ ಆಯೋಜಿಸಿದ್ದ ಸಮಾವೇಶಗಳು ಪ್ರಚಾರಕ್ಕೆ ಪೂರಕವಾಗಿ ಉಪ ಯೋಗವಾಗಿವೆ. ಕಾಂಗ್ರೆಸ್‌ ಪಕ್ಷದಲ್ಲಿರುವ ಗುಂಪು ಗಾರಿಕೆಯ ಲಾಭವನ್ನು ಪಡೆದುಕೊಳ್ಳಲು ಉತ್ಸುಕರಾಗಿದ್ದಾರೆ.

ಅದೇ ರೀತಿ ರಮೇಶ್‌ಕುಮಾರ್‌ ಸ್ಪೀಕರ್‌ ಆಗಿದ್ದ ಸಂದರ್ಭದಲ್ಲಿ ಅನರ್ಹ ಗೊಂಡಿದ್ದ ಶಾಸಕರ ಸಹಕಾರ ಸಿಗುವ ನಿರೀಕ್ಷೆಯೂ ಇದೆ. ಒಟ್ಟಾರೆ ರಮೇಶ್‌ಕುಮಾರ್‌ರ ಹ್ಯಾಟ್ರಿಕ್‌ ಗೆಲುವನ್ನು ತಡೆಯುವ ಎಲ್ಲಾ ರೀತಿಯ ಪ್ರಯತ್ನ ಗಳನ್ನು ಜಿ.ಕೆ.ವೆಂಕಟಶಿವಾರೆಡ್ಡಿ ಮಾಡುತ್ತಿದ್ದಾರೆ. ಈ ವಿಚಾರದಲ್ಲಿ ಯಾವುದೇ ವ್ಯಕ್ತಿ ಮತ್ತು ಯಾರದೇ ಸಲಹೆ ಸೂಚನೆಯನ್ನು ಕಡೆಗಣಿಸದೆ ಪಾಲಿಸುತ್ತಾ ಪ್ರಚಾರ ಮುಂದುವರಿಸುತ್ತಿದ್ದಾರೆ.

– ಕೆ.ಎಸ್‌.ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next