Advertisement
ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿಯೇ ಬಿಜೆಪಿಗೆ ಮೀಸಲಾತಿ ವಿಚಾರ ಸಮಸ್ಯೆಯಾಗಿ ಕಾಡತೊಡಗಿತ್ತು. ಪಂಚಮಸಾಲಿ ಸಮಾಜ, ಒಕ್ಕಲಿಗರ ಸಹಿತ ವಿವಿಧ ಸಮಾಜಗಳು ಮೀಸಲಾತಿ ಪ್ರವರ್ಗದಲ್ಲಿ ಸೇರ್ಪಡೆಗಾಗಿ ಹೋರಾಟದ ಹಾದಿ ಹಿಡಿದಿದ್ದರೆ, ಪರಿಶಿಷ್ಟ ಪಂಗಡದವರು ಇನ್ನಿತರರು ಮೀಸಲು ಹೆಚ್ಚಳ, ದಲಿತರು ಒಳಮೀಸಲಾತಿಗೆ ಒತ್ತಡದ ಹೋರಾಟ ನಡೆಸಿದ್ದರು. ಬಿಜೆಪಿಗೆ ಇದು ಮುಳುವಾಗಲಿದೆ ಎಂದೇ ರಾಜಕೀಯವಾಗಿ ವ್ಯಾಖ್ಯಾನಿಸಲಾಗಿತ್ತು. ಆದರೆ ಪಕ್ಷ ತನ್ನದೇ ಧೈರ್ಯ ತೋರುವ ಮೂಲಕ ಮೀಸಲಾತಿ ಹೆಚ್ಚಳದ ಜತೆಗೆ ಒಳಮೀಸಲು ನೀಡಿಕೆ ಘೋಷಣೆ ಮಾಡಿ ರಾಜಕೀಯ ವಿರೋಧಿಗಳನ್ನು ಚಿಂತೆಗೀಡು ಮಾಡುವಂತೆ ಮಾಡಿದೆ. ಮೀಸಲು ವಿಚಾರದಲ್ಲಿ ಸಂವಿಧಾನಿಕ ಅಂಶಗಳು ತೊಡಕಾಗಲಿವೆ. ಕೇಂದ್ರದ ಒಪ್ಪಿಗೆ ಸುಲಭವಲ್ಲ ಎಂಬ ಅನಿಸಿಕೆಗಳ ನಡುವೆಯೂ ಬಿಜೆಪಿ ಮಹತ್ವದ ಹೆಜ್ಜೆಯನ್ನಂತೂ ಇರಿಸಿದೆ. ಈ ಕ್ರಮಕ್ಕೆ ಬಂಜಾರ ಸಹಿತ ಕೆಲವು ಸಮಾಜಗಳಿಂದ ವಿರೋಧವೂ ವ್ಯಕ್ತವಾಗಿದೆ.
Related Articles
Advertisement
ಬಿಜೆಪಿ ಬಗೆಗಿನ ದಲಿತರ ಭಾವನೆ, ದಲಿತರ ರಾಜಕೀಯ ಬೆಂಬಲ ಕುರಿತ ಪಕ್ಷದ ಅನಿಸಿಕೆ ಎರಡೂ ಬದಲಾದಂತೆ ಭಾಸವಾಗುತ್ತಿದೆ. ಇದಕ್ಕೆ ಮೂಲ ಕಾರಣವಾಗಿರುವುದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಚಿಂತನೆ-ಮಾರ್ಗದರ್ಶನ ಎನ್ನಬಹುದಾಗಿದೆ. ಸದೃಢ ಭಾರತಕ್ಕೆ ಜಾತಿ ಹಾಗೂ ಅಸ್ಪೃಶ್ಯತೆ ದೊಡ್ಡ ಅಡ್ಡಿಯಾಗುತ್ತಿದೆ ಎಂಬ ಬಗ್ಗೆ ಪ್ರತಿಪಾದನೆಗೆ ಮುಂದಾದ ಸಂಘ, ದಲಿತರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಹಲವು ಕಾರ್ಯಗಳಿಗೆ ಮುಂದಾಗಿದೆ. ಅದರ ಭಾಗವಾಗಿಯೇ ಮೀಸಲು ವಿಚಾರದಲ್ಲಿ ಬಿಜೆಪಿ ಕೆಲವೊಂದು ನಿರ್ಣಯಕ್ಕೆ ಮುಂದಾಗಿದೆ ಎನ್ನಲಾಗುತ್ತಿದೆ.ರಾಜ್ಯದಲ್ಲಿ ಸುಮಾರು ಒಂದೂವರೆ ಕೋಟಿಯಷ್ಟು ದಲಿತ ಸಮುದಾಯದವರಿದ್ದು, ಇದರ ಲಾಭ ಪಡೆಯಲು, ಕಾಂಗ್ರೆಸ್‌ನಿಂದ ದಲಿತ ಮತಬ್ಯಾಂಕ್ ಕಿತ್ತುಕೊಳ್ಳಲು ಬಿಜೆಪಿ ಹಲವು ವರ್ಷಗಳಿಂದ ಯತ್ನಿಸುತ್ತಿದ್ದರೂ ನಿರೀಕ್ಷಿತ ಫಲ ಪೂರ್ಣ ಪ್ರಮಾಣದಲ್ಲಿ ಸಿಕ್ಕಿಲ್ಲವಾಗಿತ್ತು. ಇದೀಗ ಆ ನಿಟ್ಟಿನಲ್ಲಿ ಮತ್ತೂಂದು ಹೆಜ್ಜೆಯಾಗಿ ಮೀಸಲು ಹೆಚ್ಚಳ ಹಾಗೂ ಒಳಮೀಸಲು ನೀಡಿಕೆ ಘೋಷಣೆಯಾಗಿದೆ. ಪರಿಶಿಷ್ಟ ಜಾತಿಗಳಿಗಿದ್ದ ಶೇ.15 ಮೀಸಲಾತಿ ಪ್ರಮಾಣವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಶೇ.17ಕ್ಕೆ ಹೆಚ್ಚಿಸಿದೆ. ಅದೇ ರೀತಿ ಪರಿಶಿಷ್ಟ ಪಂಗಡಕ್ಕಿದ್ದ ಶೇ.3 ಮೀಸಲಾತಿಯನ್ನು ಶೇ.7ಕ್ಕೆ ಹೆಚ್ಚಿಸಿದೆ. ಇದು ಪರಿಶಿಷ್ಟ ಜಾತಿ-ಪಂಗಡಗಳ ಮನಕ್ಕೆ ತಲುಪುವ ನಿಟ್ಟಿನಲ್ಲಿ ಬಿಜೆಪಿಯ ಮಹತ್ವದ ಹೆಜ್ಜೆ ಎಂದೇ ರಾಜಕೀಯವಾಗಿ ಭಾವಿಸಲಾಗುತ್ತಿದೆ. 2016ರಲ್ಲಿ ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಸಮಾವೇಶ ನಡೆಸಲಾಗಿತ್ತು. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಒಳಮೀಸಲಾತಿ ಜಾರಿಗೆ ಮಹತ್ವದ ಘೋಷಣೆ ಆಗಲಿದೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ ಅಂತಹ ಯಾವುದೇ ಮಹತ್ವದ ಘೋಷಣೆ ಆಗದೆ ನಿರೀಕ್ಷೆಯಂತೆ ಖಂಡಿತ ಕ್ರಮ ಕೈಗೊಳ್ಳುವೆ ಎಂಬ ಭರವಸೆ ಸಿಕ್ಕಿತ್ತು. ಇದೀಗ ಬಿಜೆಪಿ ಮೀಸಲು ಹೆಚ್ಚಳ ಹಾಗೂ ಒಳಮೀಸಲಾತಿ ನೀಡಿಕೆ ಘೋಷಣೆ ಅನಂತರ ಹುಬ್ಬಳ್ಳಿಯ ಅದೇ ನೆಹರೂ ಮೈದಾನದಲ್ಲಿ ಅಭಿನಂದನ ಸಮಾವೇಶ ನಡೆಸುವ ಮೂಲಕ ಕಾಂಗ್ರೆಸ್‌ಗೆ ಟಕ್ಕರ್ ಕೊಡಲು, ದಲಿತ ಸಮುದಾಯದ ಆಕರ್ಷಣೆಗೆ ಮುಂದಾಗಿದೆ. ಮೀಸಲು ಹೆಚ್ಚಳ ಹಾಗೂ ಒಳ ಮೀಸಲಾತಿ ಜಾರಿ ಜೇನುಗೂಡಿಗೆ ಕೈ ಇರಿಸಿದಂತೆ ಎಂಬ ಅನಿಸಿಕೆಯಂತೆ ಆ ಬಗ್ಗೆ ಧೈರ್ಯ ತೋರಿರುವ ಬಿಜೆಪಿ ಮಾತ್ರ ಇದೀಗ ಜೇನು ಫಸಲು ಕೊಯ್ಲುಗೆ ಮುಂದಾಗಿದೆ. ದಲಿತರ ಹಿತ ಕಾಯುವ ನಿಜವಾದ ಪಕ್ಷ ಕಾಂಗ್ರೆಸ್ ಅಲ್ಲ, ಬಿಜೆಪಿ ಎಂಬುದನ್ನು ಪರಿಶಿಷ್ಟ ಜಾತಿ-ಪಂಗಡಗಳ ನಡುವೆ ಬಿಂಬಿಸಿಕೊಳ್ಳುವ ಯತ್ನಕ್ಕೆ ಮುಂದಾಗಿದೆ. ಮೀಸಲು ವಿಚಾರವಾಗಿ ಹುಬ್ಬಳ್ಳಿಯಲ್ಲಿ ಅಭಿನಂದನ ಸಮಾರಂಭದ ಮೂಲಕ ಚಾಲನೆಗೊಂಡಿರುವ ದಲಿತರ ಮತ ಬೇಟೆ ಚುನಾವಣೆ ಸಂದರ್ಭ ರಾಜ್ಯದ ವಿವಿಧೆಡೆಯೂ ನಡೆಯಲಿದೆ. ಇದು ಎಷ್ಟರ ಮಟ್ಟಿಗೆ ಫಲ ನೀಡಲಿದೆ ಎಂಬುದು ವಿಧಾನಸಭೆ ಚುನಾವಣೆ ಫಲಿತಾಂಶ ತಿಳಿಸಲಿದೆ. ಇಚ್ಛಾಶಕ್ತಿ ಬೇಕು: ಮೀಸಲಾತಿ ಹೆಚ್ಚಳ, ಒಳಮೀಸಲಾತಿ ನೀಡಿಕೆ ಅಂದುಕೊಂಡಷ್ಟು ಸುಲಭವಲ್ಲ, ರಾಜಕೀಯವಾಗಿ ಆರೋಪಿಸುವಂತೆ ಅಸಾಧ್ಯವೂ ಅಲ್ಲ. ಆದರೆ ಅದರ ಅನುಷ್ಠಾನಕ್ಕೆ ರಾಜಕೀಯ ಇಚ್ಛಾಶಕ್ತಿ ಬೇಕಷ್ಟೆ. ಮೀಸಲು ಹೆಚ್ಚಳ ಸಂವಿಧಾನಿಕ ಸಮಸ್ಯೆ, ಕಾನೂನು ತೊಡಕು ತಂದೊಡ್ಡಬಹುದು. ಕೇಂದ್ರದಿಂದ ಒಪ್ಪಿಗೆ ಪಡೆಯಬೇಕಾಗುತ್ತದೆ. ಕೇಂದ್ರ ಒಪ್ಪಿಗೆ ನೀಡಿದರೆ ಇದು ಕೇವಲ ಕರ್ನಾಟಕಕ್ಕೆ ಸೀಮಿತವಾಗಿರದೆ ದೇಶದ ಇತರ ರಾಜ್ಯ-ಭಾಗಗಳಿಗೂ ಪರಿಣಾಮ ಬೀರಬಹುದು. ಮೀಸಲು ಬೇಡಿಕೆ ಆಯಾ ರಾಜ್ಯಗಳಲ್ಲಿ ಹೋರಾಟ ರೂಪ ಪಡೆಯಬಹುದಾಗಿದೆ. ಇದೆಲ್ಲವನ್ನು ದೃಷ್ಟಿಯಲ್ಲಿಟ್ಟುಕೊಂಡು ಕೇಂದ್ರ ಒಪ್ಪಿಗೆ ಮುದ್ರೆಯೊತ್ತಬೇಕಿದೆ.
ರಾಜ್ಯದಲ್ಲಿ ಮೀಸಲು ಹೆಚ್ಚಳ ಹಾಗೂ ಒಳಮೀಸಲು ನೀಡಿಕೆ ಘೋಷಣೆ ಮಹತ್ವದ ಮೈಲುಗಲ್ಲಾಗಿದ್ದು, ಕೇಂದ್ರದಿಂದ ಒಪ್ಪಿಗೆ ಪಡೆದು ಅದು ಅನುಷ್ಠಾನಗೊಂಡಾಗಲೇ ನೊಂದವರಿಗೆ, ನೋವುಂಡವರಿಗೆ ಫಲ ದೊರೆತಂತಾಗಲಿದೆ. ಇಲ್ಲವಾದರೆ ಚುನಾವಣೆ ಸಂದರ್ಭದಲ್ಲಿನ ಮತ್ತೂಂದು ಭರವಸೆ ಆಗಲಿದೆಯಷ್ಟೇ ಎಂಬುದನ್ನು ತಳ್ಳಿ ಹಾಕುವಂತಿಲ್ಲ. ಅಮರೇಗೌಡ ಗೋನವಾರ