Advertisement
ಜೆಡಿಎಸ್‌ನಿಂದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸ್ಪರ್ಧಿಸಿದರೆ, ಅವರ ವಿರುದ್ಧ ಸುಮಲತಾ ಅಂಬರೀಶ್ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದಾರೆ.
ಚನ್ನಪಟ್ಟಣ ಕ್ಷೇತ್ರದ ಜೊತೆಗೆ ರಾಮನಗರದ ಅಭ್ಯರ್ಥಿ ತಮ್ಮ ಪುತ್ರ ನಿಖೀಲ್ ಗೆಲ್ಲಿಸುವ ಜವಾಬ್ದಾರಿಯೂ ಕುಮಾರಸ್ವಾಮಿ ಮೇಲಿದೆ. ಚನ್ನಪಟ್ಟಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಪ್ರಬಲ ಪೈಪೋಟಿ ನೀಡಲು ಸಜ್ಜಾಗಿದ್ದಾರೆ. ಆ ಹಿನ್ನೆಲೆಯಲ್ಲಿ ಮಂಡ್ಯ ಕ್ಷೇತ್ರವನ್ನು ಎರಡನೇ ಕ್ಷೇತ್ರವಾಗಿ ಆಯ್ಕೆ ಮಾಡಿಕೊಂಡು ಸ್ಪರ್ಧೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಗೊಂದಲಕ್ಕೆ ತೆರೆ:
ಮೊದಲಿನಿಂದಲೂ ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಗೊಂದಲ ಮುಂದುವರೆದಿತ್ತು. ಶಾಸಕ ಎಂ.ಶ್ರೀನಿವಾಸ್ ಹೆಸರು ಘೋಷಣೆ ಮಾಡಿದ್ದರೂ, ಗೊಂದಲ ಮಾತ್ರ ಬಗೆಹರಿದಿರಲಿಲ್ಲ. ಅಲ್ಲದೆ, ಬಿ ಫಾರಂ ನೀಡದೆ ವಿಳಂಬ ಮಾಡಲಾಗಿತ್ತು. ಗೊಂದಲ ನಿವಾರಣೆ ಮಾಡಲು ಕುಮಾರಸ್ವಾಮಿ ಅವರು ಆಕಾಂಕ್ಷಿಗಳ ಸಭೆ ನಡೆಸಿದ್ದರು. ಅಲ್ಲದೆ, ಎಂ.ಶ್ರೀನಿವಾಸ್ ನಿಯೋಗ ತೆರಳಿ ನನಗೆ ಬಿ ಫಾರಂ ನೀಡಬೇಕು ಎಂದು ಒತ್ತಾಯ ಮಾಡಿದ್ದರು. ಇದೀಗ ಗೊಂದಲಕ್ಕೆ ತೆರೆ ಎಳೆಯಲು ಕುಮಾರಸ್ವಾಮಿಯೇ ಸ್ಪರ್ಧೆ ಮಾಡಲು ಮುಂದಾಗಿದ್ದಾರೆ.
Related Articles
ಕಳೆದ ಹಲವು ದಿನಗಳಿಂದ ಕ್ಷೇತ್ರದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರ ಸ್ವಾಮಿ ಅವರು ಸ್ಪರ್ಧೆ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿತ್ತು. ಆ ಸುದ್ದಿಗೆ ಈಗ ರೆಕ್ಕೆಪುಕ್ಕ ಬಂದಂತಾಗಿದೆ. ಆದರೆ, ಎಲ್ಲವನ್ನು ಗೌಪ್ಯವಾಗಿಡಲಾಗಿದೆ. ಇದರ ನಡುವೆ ಶಾಸಕ ಎಂ.ಶ್ರೀನಿವಾಸ್ ಕ್ಷೇತ್ರ ಬಿಟ್ಟು ಕೊಡುವ ಮಾತುಗಳನ್ನಾಡಿದ್ದಾರೆ. ಇದರಿಂದ ಕುಮಾರಸ್ವಾಮಿ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ.
Advertisement
ಖಾತೆ ತೆರೆದ ಎಚ್‌ಡಿಕೆ:ಕುಮಾರಸ್ವಾಮಿ ಅವರು ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸುವುದು ಖಚಿತವಾಗುತ್ತಿದ್ದಂತೆ ಚುನಾವಣೆ ಆಯೋಗದ ನಿರ್ದೇಶನದಂತೆ ಖರ್ಚು-ವೆಚ್ಚಗಳನ್ನು ತೋರಿಸುವ ಹಿನ್ನೆಲೆಯಲ್ಲಿ ನಗರದ ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಖಾತೆ ತೆರೆಯಲಾಗಿದೆ. ಖಾಸಗಿ ಹೋಟೆಲ್ ರೂಂ ಬುಕ್ಕಿಂಗ್:
ಕುಮಾರಸ್ವಾಮಿ ಮಂಡ್ಯ ವಿಧಾನಸಭಾ ಕ್ಷೇತ್ರಕ್ಕೆ ಬರುತ್ತಿರುವ ಹಿನ್ನೆಲೆ ಅವರ ಬೆಂಬಲಿಗರಿಗಾಗಿ ನಗರ ಸೇರಿದಂತೆ ಹೊರ ವಲಯದ ಖಾಸಗಿ ಹೋಟೆಲ್‌ಗಳಲ್ಲಿನ ಎಲ್ಲ ರೂಂಗಳು ಬುಕ್ ಆಗಿವೆ. ಏ.20ರಂದು ನಾಮಪತ್ರ ಸಲ್ಲಿಕೆ:
ನಾಮಪತ್ರ ಸಲ್ಲಿಕೆಗೆ ಕೊನೇ ದಿನವಾದ ಏ.20ರಂದು ಕುಮಾರಸ್ವಾಮಿ ಅವರು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿವೆ. ಅಂದು ಅಮಾವಾಸ್ಯೆ ಆಗಿರುವುದರಿಂದ ಆದಿಚುಂಚನಗಿರಿ ಮಠದ ಶ್ರೀ ಕಾಲಭೈರವೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ನಂತರ ನೇರವಾಗಿ ಮಂಡ್ಯಕ್ಕೆ ಆಗಮಿಸಿ ಉಮೇದುವಾರಿಕೆ ಸಲ್ಲಿಸಲಿದ್ದಾರೆ. ಅದಕ್ಕಾಗಿ ಎಲ್ಲ ದಾಖಲೆಗಳ ಸಿದ್ಧತೆ ನಡೆಸಲಾಗುತ್ತಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಸುಮಲತಾ ಸ್ಪರ್ಧೆಗೆ ಸಿದ್ಧತೆ
ಎಚ್.ಡಿ.ಕುಮಾರಸ್ವಾಮಿ ಮಂಡ್ಯ ವಿಧಾನಸಭಾ ಕ್ಷೇತ್ರಕ್ಕೆ ಬಂದರೆ ಅವರ ವಿರುದ್ಧ ಸ್ಪರ್ಧೆಗೆ ಸಿದ್ಧತೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಸುಮಲತಾ ಹೆಸರಿನಲ್ಲಿ ನಗರದ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ಖಾತೆ ತೆರೆಯಲಾಗಿದೆ. ಅಲ್ಲದೆ, ನಾಮಪತ್ರ ಸಲ್ಲಿಕೆಗೆ ಎಲ್ಲ ರೀತಿಯ ದಾಖಲಾತಿಗಳನ್ನು ಸಿದ್ಧಪಡಿಸಿಕೊಳ್ಳಲಾಗುತ್ತಿದೆ. ಆದರೆ, ಬಿಜೆಪಿಯಿಂದಲೋ ಅಥವಾ ಪಕ್ಷೇತರವಾಗಿಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಬಹುತೇಕ ಬಿಜೆಪಿಯಿಂದ ಸ್ಪರ್ಧಿಸಲಿದ್ದಾರೆ ಎಂದು ಅವರ ಬೆಂಬಲಿಗರು ಹೇಳುತ್ತಿದ್ದಾರೆ. ಹೈಕಮಾಂಡ್ ಸೂಚಿಸಿದರೆ ಸ್ಪರ್ಧೆ ಎಂದ ಸುಮಲತಾ
ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಎಚ್.ಡಿ.ಕುಮಾರಸ್ವಾಮಿ ಸ್ಪರ್ಧಿಸಿದರೆ ಅವರ ವಿರುದ್ಧ ನಾನು ಸ್ಪರ್ಧಿಸಲು ಸಿದ್ಧನಿದ್ದೇನೆ. ಬಿಜೆಪಿ ಹೈಕಮಾಂಡ್ ಸೂಚಿಸಿದರೆ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ. ಎಚ್‌ಡಿಕೆ ಎದುರಿಸಲು ಕಾಂಗ್ರೆಸ್ ಸಿದ್ಧತೆ
ಎಚ್.ಡಿ.ಕುಮಾರಸ್ವಾಮಿ ಅಭ್ಯರ್ಥಿಯಾದರೆ ಅದನ್ನು ಸಮರ್ಥವಾಗಿ ಎದುರಿಸಲು ಕಾಂಗ್ರೆಸ್ ಕೂಡ ಸಿದ್ಧತೆ ನಡೆಸುತ್ತಿದೆ. ಕುಮಾರಸ್ವಾಮಿ ವಿರುದ್ಧ ಕೈ ಪಕ್ಷದ ಪ್ರಭಾವಿ ನಾಯಕರೊಬ್ಬರು ಅಥವಾ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಮುಂದಾಗಿದೆ. ಎರಡು ಸಾಧ್ಯವಾಗದಿದ್ದರೆ ಸಾಮಾನ್ಯ ಕಾರ್ಯಕರ್ತನ ಕಣಕ್ಕಿಳಿಸಿ ಸ್ವಾಭಿಮಾನ ಮೂಲಕ ಕುಮಾರಸ್ವಾಮಿ ವಿರುದ್ಧ ಹೋರಾಟ ಮಾಡಲಾಗುವುದು ಎಂದು ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ತಿಳಿಸಿದರು. ಗೊಂದಲ ಹೇಳಿಕೆ ನೀಡಿದ ಎಚ್‌ಡಿಕೆ
ಮಂಡ್ಯದಲ್ಲಿ ಸ್ಪರ್ಧೆ ಬಗ್ಗೆ ಕುಮಾರಸ್ವಾಮಿ ಗೊಂದಲದ ಹೇಳಿಕೆ ನೀಡಿದರು. ಪಾಂಡವಪುರದಲ್ಲಿ ಮಾತನಾಡಿದ ಅವರು, ಮಂಡ್ಯ ಜನರ ಋಣ ನನ್ನ ಮೇಲಿದೆ. ಆ ಋಣ ತೀರಿಸದೆ ನಾನು ಮಣ್ಣಿಗೆ ಹೋಗಲ್ಲ. ಇನ್ನೆರಡು ದಿನಗಳಲ್ಲಿ ನಿರ್ಧಾರ ಮಾಡುತ್ತೇನೆ. ನಾನು ಸ್ಪರ್ಧೆ ಮಾಡಿದರೆ ಕಾಂಗ್ರೆಸ್, ಬಿಜೆಪಿ, ರೈತಸಂಘ ಅಭ್ಯರ್ಥಿ ಹಾಕಲ್ಲ. ಎಲ್ಲರೂ ಒಗ್ಗಟ್ಟಾಗಲಿದ್ದಾರೆ. ಇದಕ್ಕೆ ನಾನು ಬಲಿಪಶು ಆಗಲ್ಲ. ಒಬ್ಬ ಸಾಮಾನ್ಯ ಕಾರ್ಯಕರ್ತನ ನಿಲ್ಲಿಸಿ ಗೆಲ್ಲಿಸಲಿದ್ದೇನೆ ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಹೇಳಿದರು. ಇದು ಮಂಡ್ಯದ ಸ್ವಾಭಿಮಾನ ಆಗಿದೆ. ಜೆಡಿಎಸ್‌ನಲ್ಲಿ ಸಮರ್ಥ ಅಭ್ಯರ್ಥಿಗಳಿದ್ದರೂ ಕುಮಾರಸ್ವಾಮಿ ಸ್ಪರ್ಧಿಸಲು ಮುಂದಾಗಿದ್ದಾರೆ. ಆದ್ದರಿಂದ ಅವರ ವಿರುದ್ಧ ಸುಮಲತಾ ಅವರು ಕಣಕ್ಕಿಳಿಯಲಿದ್ದಾರೆ. ಅದಕ್ಕಾಗಿ ಬ್ಯಾಂಕ್ ಖಾತೆ ತೆರೆಯಲಾಗಿದೆ. ದಾಖಲೆಗಳ ಸಿದ್ಧತೆ ನಡೆಸಲಾಗಿದೆ. ಅಶೋಕ್ ಜಯರಾಂ ಕೂಡ ಸಮರ್ಥ ಅಭ್ಯರ್ಥಿ ಆಗಿದ್ದಾರೆ. ಆದರೂ, ಕುಮಾರಸ್ವಾಮಿ ಎದುರಿಸುವ ಅಗತ್ಯವಾಗಿದೆ.
– ಬೇಲೂರು ಸೋಮಶೇಖರ್, ಸುಮಲತಾ ಆಪ್ತ – ಎಚ್.ಶಿವರಾಜು