Advertisement

Karnataka Election 2023: ಕಮಲಕ್ಕೆ ಕಗ್ಗಂಟಾದ ರೋಣ ಟಿಕೆಟ್‌ ಹಂಚಿಕೆ

06:44 PM Apr 06, 2023 | Team Udayavani |

ಗಜೇಂದ್ರಗಡ: ಬಯಲುಸೀಮೆ ನಾಡಿನಲ್ಲಿ ಚುನಾವಣಾ ಪ್ರಖರತೆ ಬಿಸಿಲಿಗಿಂತಲೂ ಹೆಚ್ಚಾಗಿದ್ದು, ರೋಣ ಮತಕ್ಷೇತ್ರದಲ್ಲಿ ಟಿಕೆಟ್‌ ಹಂಚಿಕೆ ಬಿಜೆಪಿ ಹೈಕಮಾಂಡ್‌ ನಾಯಕರಿಗೆ ಕಗ್ಗಂಟಾಗಿದೆ. ಹಾಲಿ ಶಾಸಕ ಕಳಕಪ್ಪ ಬಂಡಿ ಅವರ ಧರ್ಮಪತ್ನಿ ಸಂಯುಕ್ತಾ ಬಂಡಿ ಅವರು ಸಹ ಪ್ರಬಲ ಟಿಕೆಟ್‌ ಆಕಾಂಕ್ಷಿಯಾಗಿರುವುದು ವಿಶೇಷವಾಗಿದೆ. ಹೀಗಾಗಿ, ರೋಣ ಕ್ಷೇತ್ರದ ಕೇಸರಿ ಕಲಿ ಯಾರಾಗುತ್ತಾರೆಂಬುದು ಇನ್ನೂ ರಣರೋಚಕವಾಗಿದೆ.

Advertisement

ಹೌದು, ಈ ಮುಂಚೆ 6ಕ್ಕಿದ್ದ ರೋಣ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ಇದೀಗ 8ಕ್ಕೇರಿದೆ. ಹಾಲಿ ಶಾಸಕ ಕಳಕಪ್ಪ ಬಂಡಿ, ಅಂದಪ್ಪ ಸಂಕನೂರ, ಸಂಯುಕ್ತಾ ಬಂಡಿ, ರವಿ ದಂಡಿನ್‌, ಸಿದ್ದಪ್ಪ ಬಂಡಿ, ಹೇಮಗಿರೀಶ ಹಾವಿನಾಳ, ಮುತ್ತಣ್ಣ ಲಿಂಗನಗೌಡರ, ಮೋಹನಸಾ ರಾಯಬಾಗಿ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ದಿನೇ ದಿನೆ ಆಕಾಂಕ್ಷಿಗಳು ಹೈಕಮಾಂಡ್‌ ದುಂಬಾಲು ಬೀಳುತ್ತಿದ್ದಾರೆ.

ಗದಗ ಜಿಲ್ಲೆಯಲ್ಲಿಯೇ ದೊಡ್ಡ ಮತಕ್ಷೇತ್ರವಾಗಿರುವ ರೋಣ ರಣ-ಕಣ ಧುಮುಕುವ ಕೇಸರಿ ಕಲಿಗಳು ಯಾರೆಂದು ಇನ್ನೂ ಅಂತಿಮವಾಗದ ಕಾರಣ ಮತಕ್ಷೇತ್ರದ ಜನತೆಯಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ದಿನಕ್ಕೊಬ್ಬರಂತೆ ಆಕಾಂಕ್ಷಿಗಳ ಹೆಸರು ಹೊರಬೀಳುತ್ತಿದ್ದು, ಬಿಜೆಪಿ ಅಭ್ಯರ್ಥಿ ಯಾರಾಗುತ್ತಾರೆಂಬುದು ಈ ಕ್ಷಣಕ್ಕೂ ಚಿದಂಬರ ರಹಸ್ಯವಾಗಿಯೇ ಉಳಿದಿದೆ.

ರಾಜ್ಯದ ಕೆಲ ಹಾಲಿ ಶಾಸಕರಿಗೆ ಟಿಕೆಟ್‌ ಡೌಟ್‌ ಎಂಬ ಸುದ್ದಿ ರೋಣ ಮತಕ್ಷೇತ್ರ¨ ‌ ಆಕಾಂಕ್ಷಿಗಳಿಗೆ ಮತ್ತಷ್ಟು ಹುಮ್ಮಸ್ಸು ತಂದೊಡ್ಡಿದೆ. ಈ ಬಾರಿ ಹೊಸಬರಿಗೆ ಮಣೆ ಹಾಕುತ್ತಾರಾ ಎಂಬ ಪ್ರಶ್ನೆ ಉದ್ಭವವಾದ ಬೆನ್ನಲ್ಲೇ, ಶತಾಯಗತಾಯ ಟಿಕೆಟ್‌ ಗಿಟ್ಟಿಸಿಕೊಳ್ಳಲು ಆಕಾಂಕ್ಷಿಗಳು ಬಿಜೆಪಿ ವರಿಷ್ಠರ ಮುಂದೆ ಪರೇಡ್‌ ನಡೆಸುತ್ತಿದ್ದಾರೆ.

ಮೂವರ ನಡುವೆ ಟಿಕೆಟ್‌ ಫೈಟ್‌: ರೋಣ ಮತಕ್ಷೇತ್ರದಲ್ಲಿ ಈ ಬಾರಿಯೂ ಟಿಕೆಟ್‌ ನನಗೆ ಎಂದು ಆತ್ಮವಿಶ್ವಾಸದಿಂದ ಈಗಾಗಲೇ ಹಾಲಿ ಶಾಸಕ ಕಳಕಪ್ಪ ಬಂಡಿ ಪಕ್ಷ ಸಂಘಟನೆ, ಸಮಾವೇಶಗಳನ್ನು ಮಾಡುತ್ತಾ ಚುನಾವಣಾ ಪ್ರಚಾರಕ್ಕೆ ಧುಮುಕಿದ್ದಾರೆ. ಆದರೆ ಹೈಕಮಾಂಡ್‌ ಇನ್ನೂ ಯಾರಿಗೂ ಟಿಕೆಟ್‌ ಹಂಚಿಕೆ ಮಾಡಿಲ್ಲ. ನನ್ನ ಹೆಸರೂ ಮುಂಚೂಣಿಯಲ್ಲಿದೆ ಎಂದು ಮುಖಂಡ ರವಿ ದಂಡಿನ್‌, ಯುವ ನಾಯಕ ಅಂದಪ್ಪ ಸಂಕನೂರ, ಸಿದ್ದಪ್ಪ ಬಂಡಿ ಸಹ ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿದ್ದಾರೆ. ಹೀಗಾಗಿ, ಈ ಮೂವರ ನಡುವೆ ಬಿಗ್‌ ಫೈಟ್‌ ಶುರುವಾಗಿದೆ.

Advertisement

ಮಹಿಳೆಯರಿಗೆ ಸಿಗುತ್ತಾ ಕಮಲ ಟಿಕೆಟ್‌:
ರೋಣ ವಿಧಾನಸಭಾ ಮತಕ್ಷೇತ್ರ 1957ರಿಂದಲೇ ಉಗಮವಾಗಿದೆ. ಅಲ್ಲಿಂದ ಇಲ್ಲಿಯವರೆಗೆ 14 ವಿಧಾನಸಭಾ ಚುನಾವಣೆಗಳು ನಡೆದಿವೆ. ಈ ಕ್ಷೇತ್ರದಲ್ಲಿ ರಾಷ್ಟ್ರೀಯ ಪಕ್ಷಗಳಿಂದ ಒಮ್ಮೆಯೂ ಮಹಿಳೆಯರು ಸ್ಪರ್ಧೆ ಮಾಡಿರುವ ಇತಿಹಾಸವೇ ಇಲ್ಲ. ಆದರೆ ಈ ಬಾರಿಯ ಚುನಾವಣೆಯಲ್ಲಿ ಹಾಲಿ ಶಾಸಕ ಕಳಕಪ್ಪ ಬಂಡಿಯವರ ಧರ್ಮಪತ್ನಿ ಸಂಯುಕ್ತಾ ಬಂಡಿ ಪ್ರಬಲ ಟಿಕೆಟ್‌ ಆಕಾಂಕ್ಷಿಯಾಗಿದ್ದು, ಈಗಾಗಲೇ ಕೇಂದ್ರ ಮತ್ತು ರಾಜ್ಯ ನಾಯಕರನ್ನು ಭೇಟಿಯಾಗಿ ಪತಿಗೆ ಪ್ರಬಲ ಪೈಪೋಟಿ ಒಡ್ಡುತ್ತಿದ್ದಾರೆ. ಅಂತಿಮವಾಗಿ ರೋಣ ಕಣದಲ್ಲಿ ಮಹಿಳೆಯರಿಗೆ ಕಮಲ ಪಾರುಪತ್ಯ ದೊರೆತಲ್ಲಿ ಇತಿಹಾಸದ ಪುಟದಲ್ಲಿ ದಾಖಲಾರ್ಹವಾಗಲಿದೆ.

ಈ ಬಾರಿಯ ಚುನಾವಣೆಯಲ್ಲಿ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೇರಬೇಕೆಂದು ರಣತಂತ್ರ ಹೆಣೆಯುತ್ತಿರುವ ಬಿಜೆಪಿ ನಾಯಕರಿಗೆ ಗೆಲುವೊಂದೇ ಮಾರ್ಗವಾಗಿದ್ದು, ಯಾವ ಕ್ಷೇತ್ರದಲ್ಲಿ ಯಾವ ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಾರೋ ಎಂಬುದನ್ನು ಕಾದುನೋಡಬೇಕಿದೆ.

ರೋಣ ಮತಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಸಂಘಟನೆಗಾಗಿ ಕಳೆದೆರಡು ದಶಕಗಳಿಂದ ಶ್ರಮಿಸಿದ್ದೇನೆ. ಮತಕ್ಷೇತ್ರದಲ್ಲಿ ಒಮ್ಮೆಯಾದರೂ ಮಹಿಳೆಯರಿಗೆ ಅವಕಾಶ ದೊರೆಯಬೇಕೆನ್ನುವುದು ಮತದಾರರ ಅಭಿಲಾಷೆಯಾಗಿದೆ. ಹೀಗಾಗಿ, ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಬೇಕೆಂದು ನಾನೂ ಸಹ ಟಿಕೆಟ್‌ಗಾಗಿ ವರಿಷ್ಠರಲ್ಲಿ ಅರಿಕೆ ಮಾಡಿಕೊಂಡಿದ್ದು, ಟಿಕೆಟ್‌ ಸಿಗುವ ವಿಶ್ವಾಸವಿದೆ.
*ಸಂಯುಕ್ತಾ ಬಂಡಿ, ಬಿಜೆಪಿ ಟಿಕೆಟ್‌ ಆಕಾಂಕ್ಷಿ

ಬಿಜೆಪಿ ಪಕ್ಷಕ್ಕಾಗಿ ಕಾರ್ಯಕರ್ತನಾಗಿ, ಮುಖಂಡನಾಗಿ ದುಡಿದಿದ್ದೇನೆ. ಈ ಬಾರಿ ನಾನೂ ಸಹ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದೇನೆ. ಪಕ್ಷದ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವ ನನಗಿದೆ. ಮತಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸಲು ನಮ್ಮ ನಾಯಕರು ನನಗೆ ಟಿಕೆಟ್‌ ನೀಡುತ್ತಾರೆಂಬ ವಿಶ್ವಾಸವಿದೆ.
*ಮುತ್ತಣ್ಣ ಲಿಂಗನಗೌಡರ, ಬಿಜೆಪಿ ಟಿಕೆಟ್‌ ಆಕಾಂಕ್ಷಿ

ಡಿ.ಜಿ. ಮೋಮಿನ್‌

Advertisement

Udayavani is now on Telegram. Click here to join our channel and stay updated with the latest news.

Next