Advertisement

Karnataka Election 2023; ಬೈರತಿ ವಿರುದ್ಧ ಸ್ಪರ್ಧೆಗೆ ಬಿಜೆಪಿಯಲ್ಲಿ ಟಿಕೆಟ್‌ ಫೈಟ್‌

11:52 AM Apr 07, 2023 | Team Udayavani |

ಬೆಂಗಳೂರು: ಬಿಜೆಪಿ ಹಿಡಿತದಲ್ಲಿದ್ದ ಹೆಬ್ಬಾಳ ಕ್ಷೇತ್ರ ಈಗ ಕಾಂಗ್ರೆಸ್‌ ತೆಕ್ಕೆಯಲ್ಲಿದೆ. ಕ್ಷೇತ್ರ ಮರುವಶಕ್ಕೆ ಬಿಜೆಪಿ ಕಸರತ್ತು ನಡೆಸಿದ್ದರೆ, ಕಾಂಗ್ರೆಸ್‌ ಕ್ಷೇತ್ರ ಉಳಿಸಿಕೊಳ್ಳಲು ತಂತ್ರ ರೂಪಿಸಿದೆ. ಅದರ ನಡುವೆಯೇ ರಾಷ್ಟ್ರೀಯ ಪಕ್ಷಗಳಿಗೆ ಶಾಕ್‌ ನೀಡಲು ಜೆಡಿಎಸ್‌ ಕೂಡ ಸಜ್ಜಾಗಿದೆ.

Advertisement

ಶ್ರೀಮಂತ, ಮಧ್ಯಮ, ಬಡ ಹೀಗೆ ಎಲ್ಲ ವರ್ಗದ ಜನರು ಸಮಾನವಾಗಿರುವ ಹೆಬ್ಬಾಳ ಕ್ಷೇತ್ರದಲ್ಲಿ ಚುನಾವಣಾ ಕಾವು ಜೋರಾಗಿದೆ. ಡಾಲರ್ ಕಾಲೋನಿ, ಆರ್‌ಎಂವಿ ಎಕ್ಸ್‌ಟೆನ್ಸನ್‌ ನಂತಹ ಶ್ರೀಮಂತ ಬಡಾವಣೆಗಳು, ಮನೋರಾಯನಪಾಳ್ಯ, ಜೆಸಿ ನಗರ, ಗಂಗೇನಹಳ್ಳಿಯಂತಹ ಮಧ್ಯಮ ವರ್ಗದವರೇ ಹೆಚ್ಚಿರುವ ಪ್ರದೇಶಗಳಲ್ಲಿ ರಾಜಕಾರಣಿಗಳ ಮತಬೇಟೆ ಈಗಾಗಲೇ ಆರಂಭವಾಗಿದೆ. ಕ್ಷೇತ್ರದಲ್ಲಿ ಮೇಲ್ನೋಟಕ್ಕೆ ಕಾಂಗ್ರೆಸ್‌ ಪ್ರಬಲವಾಗಿದೆ ಎಂಬುದು ಕಂಡು ಬಂದರೂ, ಬಿಜೆಪಿ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಎಲ್ಲ ಕಸರತ್ತು ನಡೆಸುತ್ತಿದೆ.ಅದರ ನಡುವೆ ರಾಷ್ಟ್ರೀಯ ಪಕ್ಷಗಳಿಗೆ ಒಳೇಟು ನೀಡಲು ಜೆಡಿಎಸ್‌ ಕೂಡ ತಯಾರಿ ನಡೆಸಿದೆ.

ಅಲ್ಪಸಂಖ್ಯಾತ ಮತಗಳು ಹೆಚ್ಚು: ಹೆಬ್ಬಾಳ ಕ್ಷೇತ್ರದ ಒಟ್ಟಾರೆ ಮತದಾರರ ಪೈಕಿ ಅಲ್ಪಸಂಖ್ಯಾತರೇ ಹೆಚ್ಚಿದ್ದಾರೆ. ಅದರಲ್ಲೂ ಮುಸ್ಲಿಂ ಮತದಾರರು 59 ಸಾವಿರಕ್ಕೂ ಹೆಚ್ಚಿದ್ದಾರೆ. 2ನೇ ಸ್ಥಾನದಲ್ಲಿ ಒಕ್ಕಲಿಗರಿದ್ದಾರೆ. ಉಳಿದಂತೆ ದಲಿತ, ಕುರುಬ ಸಮುದಾಯಕ್ಕೆ ಸೇರಿದ ಮತದಾರರೂ ಇದ್ದು, ಚುನಾವಣೆಯಲ್ಲಿ ಇವರು ನಿರ್ಣಾಯಕ ಪಾತ್ರವಹಿಸಲಿದ್ದಾರೆ. ಅದರ ಜತೆಗೆ ತೆಲಗು ಮತ್ತು ಹಿಂದು ಭಾಷಿಕರು ಹೆಚ್ಚಿದ್ದು, ಮತದಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡರೆ ಫ‌ಲಿತಾಂಶ ಬದಲಿಸಬಹುದಾದ ಸಾಮರ್ಥ್ಯ ಅವರಿಗಿದೆ. ಒಟ್ಟಾರೆ ಕ್ಷೇತ್ರದಲ್ಲಿ 2,83,731 ಮತದಾರರಿದ್ದಾರೆ.

ಕ್ಷೇತ್ರದಲ್ಲಿ ಅಲ್ಪಸಂಖ್ಯಾತರು ಹೆಚ್ಚಿದ್ದರೂ ಈವರೆಗೆ ಅಲ್ಪ ಸಂಖ್ಯಾತ ಅಭ್ಯರ್ಥಿ ಗೆದ್ದಿಲ್ಲ. 2013ರ ಸಾರ್ವತ್ರಿಕ ಚುನಾವಣೆ ಹಾಗೂ 2016ರ ಉಪ ಚುನಾವಣೆಗಳಲ್ಲಿ ಕಾಂಗ್ರೆಸ್‌ನಿಂದ ಕೇಂದ್ರ ಮಾಜಿ ಸಚಿವ ಜಾಫ‌ರ್‌ ಷರೀಫ್ ಮೊಮ್ಮಗ ಸಿ.ಕೆ. ಅಬ್ದುಲ್‌ ರೆಹಮಾನ್‌ ಶರೀಫ್ ಸ್ಪರ್ಧಿಸಿದ್ದರಾದರೂ ಸೋಲನ್ನಪ್ಪಿದ್ದರು.

ಬಿಜೆಪಿ ಅಭ್ಯರ್ಥಿ ಅಂತಿಮವಾಗಿಲ್ಲ: ಹಾಲಿ ಶಾಸಕ, ಕಾಂಗ್ರೆಸ್‌ ಅಭ್ಯರ್ಥಿ ಎಂದೇ ಬಿಂಬಿತವಾಗಿರುವ ಬೈರತಿ ಸುರೇಶ್‌ ಸಕ್ರಿಯರಾಗಿದ್ದಾರೆ. ಅದರ ನಡುವೆ ಬಿಜೆಪಿಯಲ್ಲಿ ಇನ್ನೂ ಅಭ್ಯರ್ಥಿ ಅಂತಿಮವಾಗಿಲ್ಲ. ಹೆಬ್ಬಾಳದಲ್ಲಿ ಈಗಲೂ ಹಿಡಿತವಿರುವ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹಾಗೂ 2016ರ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ವೈ.ಎ. ನಾರಾಯಣಸ್ವಾಮಿ ಬಿಜೆಪಿ ಆಕಾಂಕ್ಷಿಗಳಾಗಿದ್ದಾರೆ. ಕ್ಷೇತ್ರದಲ್ಲಿನ ಅಲ್ಪಸಂಖ್ಯಾತ ಬಾಹುಳ್ಯವನ್ನು ಬಳಸಿ ಗೆಲ್ಲುವ ಲೆಕ್ಕಾಚಾರದಲ್ಲಿರುವ ಜೆಡಿಎಸ್‌, ಅದಕ್ಕಾಗಿ ಈ ಬಾರಿ ಮೊಹಿದ್‌ ಅಲ್ತಾಫ್ ಅವರನ್ನು ಕಣಕ್ಕಿಳಿಸಿದೆ.

Advertisement

2018ರವರೆಗೆ ಬಿಜೆಪಿ ಪ್ರಾಬಲ್ಯ: ಯಲಹಂಕ ಕ್ಷೇತ್ರದ ಭಾಗವಾಗಿದ್ದ ಹೆಬ್ಟಾಳ ಕ್ಷೇತ್ರವನ್ನು 2008ರ ಕ್ಷೇತ್ರ ಮರುವಿಂಗಡಣೆ ವೇಳೆ ರಚಿಸಲಾಯಿತು. 2008ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಬಿಜೆಪಿಯ ಕಟ್ಟಾ ಸುಬ್ರಹ್ಮಣ್ಯ ನಾಯ್ಡುಗೆದಿದ್ದರು. ಬಳಿಕ 2013ರಲ್ಲಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಆಪ್ತ ಜಗದೀಶ್‌ ಕುಮಾರ್‌ ಗೆದಿದ್ದರು. ಆದರೆ, 2016ರಲ್ಲಿ ಜಗದೀಶ್‌ ಅಕಾಲಿಕ ಸಾವಿನಿಂದ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯ
ವೈ.ಎ.ನಾರಾಯಣಸ್ವಾಮಿ ಗೆದ್ದಿದ್ದರು. 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಮೊದಲ ಬಾರಿಗೆ ಕಾಂಗ್ರೆಸ್‌ನ ಬೈರತಿ ಸುರೇಶ್‌ ಗೆದ್ದು, ಕ್ಷೇತ್ರದಲ್ಲಿ ಹಿಡಿತ ಸಾಧಿಸಿದರು.

2018ರಲ್ಲಿ ಏನಾಗಿತ್ತು?
2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಬೈರತಿ ಸುರೇಶ್‌ ಅವರು ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ವೈ.ಎ. ನಾರಾಯಣಸ್ವಾಮಿ ವಿರುದ್ಧ 21,140 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಆ ಚುನಾವಣೆಯಲ್ಲಿ ಬೈರತಿ ಸುರೇಶ್‌ 74,453, ಬಿಜೆಪಿಯ ವೈ.ಎ. ನಾರಾಯಣ ಸ್ವಾಮಿ 53,313, ಜೆಡಿಎಸ್‌ನ ಹನುಮಂತೇ ಗೌಡ
14,092 ಮತಗಳನ್ನು ಪಡೆದಿದ್ದರು.

ಕ್ಷೇತ್ರದಲ್ಲಿರುವ ವಾರ್ಡ್‌ಗಳು
ಬಿಬಿಎಂಪಿ ವಾರ್ಡ್‌ ಮರುವಿಂಗಡಣೆ ನಂತರವೂ ಹೆಬ್ಬಾಳ ಕ್ಷೇತ್ರ ವ್ಯಾಪ್ತಿಯಲ್ಲಿನ ವಾರ್ಡ್‌ಗಳ ಸಂಖ್ಯೆಯಲ್ಲಿ ಬದಲಾ ವಣೆಯಾಗಿಲ್ಲ. 8 ವಾರ್ಡ್‌ಗಳಿದ್ದು, ರಾಧಾಕೃಷ್ಣ ದೇವಸ್ಥಾನ ವಾರ್ಡ್‌, ಸಂಜಯನಗರ, ವಿಶ್ವನಾಥ
ನಾಗೇನಹಳ್ಳಿ, ಮನೊರಾಯನಪಾಳ್ಯ, ಹೆಬ್ಟಾಳ, ಚಾಮುಂಡಿನಗರ, ಗಂಗಾನಗರ, ಜೆಸಿ ನಗರ ವಾರ್ಡ್‌ಗಳಿವೆ.

-ಗಿರೀಶ್‌ ಗರಗ

Advertisement

Udayavani is now on Telegram. Click here to join our channel and stay updated with the latest news.

Next