Advertisement
ಪಂಚಮಸಾಲಿ 2ಎ ಹೋರಾಟ, ಒಕ್ಕಲಿಗರ ಮೀಸಲು ಪ್ರಮಾಣ ಹೆಚ್ಚಳ ಬೇಡಿಕೆ, ನ್ಯಾ. ಸದಾಶಿವ ಆಯೋಗದ ಒಳಮೀಸಲು ಜಾರಿ, ಬಲಿಜ, ಮರಾಠರ 2ಎ ಬೇಡಿಕೆ ಹಾಗೂ ಎಸ್‌ಟಿಗೆ ಸೇರಿಸಬೇಕೆಂಬ ಕುರುಬ ಸಮುದಾಯದ ಹಕ್ಕೊತ್ತಾಯ ಪ್ರಸ್ತುತ ಚುನಾವಣಾ ಕಣದಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ. ಜತೆಗೆ ಬಲಿಜ ಸಮುದಾಯ ಸೇರಿದಂತೆ ಇನ್ನಿತರ ಸಣ್ಣ ಸಣ್ಣ ಸಮುದಾಯಗಳೂ ಮೀಸಲು ಹೆಚ್ಚಳದ ಬೇಡಿಕೆ ಮುಂದಿಟ್ಟಿರುವುದರಿಂದ ಎಲ್ಲ ರಾಜಕೀಯ ಪಕ್ಷಗಳೂ ಎಚ್ಚರಿಕೆಯಿಂದ ಹೆಜ್ಜೆ ಇಡುವಂತಾಗಿದೆ. ತುಟಿ ಮೀರಿ ಆಡುವ ಮಾತುಗಳು ದುಬಾರಿ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿರುವುದರಿಂದ ಮುಂಚೂಣಿ ನಾಯಕರು ಈ ವಿಚಾರದಲ್ಲಿ ಎಷ್ಟು ಸಾಧ್ಯವೋ ಅಷ್ಟು ಮೌನಕ್ಕೆ ಜಾರಿದ್ದಾರೆ.
Related Articles
Advertisement
ಕಗ್ಗಂಟಾದ ಪಂಚಮಸಾಲಿ: ರಾಜ್ಯದಲ್ಲಿ ಕಳೆದ ಎರಡು ವರ್ಷದಿಂದ ಪಂಚಮಸಾಲಿ 2ಎ ಮೀಸಲು ಹೋರಾಟ ಬಹುಚರ್ಚೆಯ ವಿಚಾರ. ಈ ಚುನಾವಣೆಯಲ್ಲಿ ಫಲಿತಾಂಶ ಬದಲಾಯಿಸುವ ಸಾಮರ್ಥ್ಯ ಇರುವ ಹೋರಾಟ ಇದೇ ಎಂದು ರಾಜಕೀಯ ತಜ್ಞರು ವ್ಯಾಖ್ಯಾನಿಸುತ್ತಿದ್ದಾರೆ. ಪರಿಸ್ಥಿತಿ ನಿಭಾಯಿಸುವುದಕ್ಕೆ ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಧ್ಯಂತರ ವರದಿಯನ್ನು ಗುರಾಣಿಯಂತೆ ಬಳಸಿಕೊಳ್ಳುತ್ತಿದೆ. ಪಂಚಮಸಾಲಿಗಳಿಗೆ ಹಾಗೂ ಒಕ್ಕಲಿಗರಿಗೆ ಆಯೋಗ ಪ್ರತ್ಯೇಕ ಪ್ರವರ್ಗ (2ಸಿ ಹಾಗೂ 2ಡಿ) ಸೃಷ್ಟಿ ಮಾಡಿದೆಯಾದರೂ ಮೀಸಲು ನಿಗದಿ ಪ್ರಮಾಣದಲ್ಲಿ ಸ್ಪಷ್ಟತೆ ಇಲ್ಲ ಎಂಬುದು ಸಮುದಾಯದ ಆಕ್ಷೇಪವಾಗಿದೆ. ಈ ವಿಚಾರದಲ್ಲಿ ಸ್ಪಷ್ಟತೆ ನೀಡುವ ಹೋರಾಟದ ಮುಂಚೂಣಿಯಲ್ಲಿರುವ ಜಯಮೃತ್ಯುಂಜಯ ಸ್ವಾಮೀಜಿ ಸರ್ಕಾರಕ್ಕೆ ಈಗಾಗಲೇ ಆಗ್ರಹಿಸಿದ್ದಾರೆ. ಆದರೆ ಹೋರಾಟಕ್ಕೆ ರಾಜಕೀಯ ಶಕ್ತಿ ನೀಡಿದ್ದ ಬಿಜೆಪಿ ಶಾಸಕರೇ ಆದ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್, ಸಚಿವ ಮುರುಗೇಶ್ ನಿರಾಣಿ, ಸಿ.ಸಿ.ಪಾಟೀಲ್ ಮೊದಲಾದವರು ತಟಸ್ಥರಾಗುತ್ತಿರುವುದು ಹೋರಾಟದ ಮೊನಚನ್ನು ತುಸು ಕಡಿಮೆ ಮಾಡಿದೆ. ಕಾಂಗ್ರೆಸ್‌ನ ಒಂದು ವರ್ಗ ಪಂಚಮಸಾಲಿ ಮೀಸಲು ಹೋರಾಟವನ್ನು ಬಲವಾಗಿ ವಿರೋಧಿಸುತ್ತಿದೆ. ಹೀಗಾಗಿ ಪಂಚಮಸಾಲಿ ಸಮುದಾಯ ಈಗ ಗೊಂದಲಕ್ಕೆ ಸಿಲುಕಿದೆ. ಅವರ ರಾಜಕೀಯ ನಿಲುವು ಕೂಡಾ ಹೊಯ್ದಾಟಕ್ಕೆ ಒಳಗಾಗಿದೆ ಎಂದು ವ್ಯಾಖ್ಯಾನಿಸಬಹುದು.
ಪ್ರಖರವಲ್ಲ: ಇದರ ಜತೆಗೆ ಇಡಬ್ಲ್ಯುಎಸ್‌ನಲ್ಲಿ ಒಕ್ಕಲಿಗರಿಗೂ ಅವಕಾಶ ಕಲ್ಪಿಸಬೇಕೆಂದು ಮನವಿ ಸಲ್ಲಿಸಿದೆ. ಮೀಸಲು ಪ್ರಮಾಣ ಹೆಚ್ಚಳಕ್ಕೂ ಅದು ಒತ್ತಾಯಿಸಿದೆ. ಹಿಂದುಳಿದ ವರ್ಗಗಳ ಆಯೋಗ ಒಕ್ಕಲಿಗರಿಗೂ ಪ್ರತ್ಯೇಕ ಪ್ರವರ್ಗ ರಚನೆ ಮಾಡಿದೆ. ಆದರೆ ಒಕ್ಕಲಿಗರ ಮೀಸಲು ಹೋರಾಟ ಉಳಿದ ಸಮುದಾಯದಷ್ಟು ಪ್ರಖರವಾಗಿಲ್ಲದೇ ಇರುವುದರಿಂದ ಈ ವಿಚಾರವನ್ನು ತಕ್ಕಮಟ್ಟಿಗೆ ಬಿಜೆಪಿ ನಿಭಾಯಿಸಿದೆ ಎಂದೇ ಹೇಳಬಹುದು. ಈ ಮಧ್ಯೆ ಕುರುಬ ಸಮುದಾಯವನ್ನು ಎಸ್‌ಟಿಗೆ ಸೇರಿಸಬೇಕೆಂಬ ಬೇಡಿಕೆಯೂ ಪ್ರಬಲವಾಗಿ ಕೇಳಿ ಬರುತ್ತಿದೆ. ಇದಕ್ಕೆ ಹೋರಾಟಗಳು ನಡೆದಿವೆ. ಚುನಾವಣೆಯಲ್ಲಿ ಈ ವಿಷಯವನ್ನು ರಾಜಕೀಯ ಪಕ್ಷಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಲು ಸಜ್ಜಾಗಿವೆ.