Advertisement

ಫೆ. 12:  ಉಡುಪಿಯಲ್ಲಿ  ಪ್ರಶಸ್ತಿ ಪ್ರದಾನ

12:30 AM Feb 07, 2019 | |

ಉಡುಪಿ: ಕರ್ನಾಟಕ ನಾಟಕ ಅಕಾಡೆಮಿಯ ಪ್ರಶಸ್ತಿ ಪ್ರದಾನ ಸಮಾರಂಭ ಫೆ. 12ರಂದು ಸಂಜೆ 5 ಗಂಟೆಗೆ ಅಜ್ಜರಕಾಡು ಪುರಭವನದಲ್ಲಿ ಜರಗಲಿದೆ ಎಂದು ಅಕಾಡೆಮಿ ಅಧ್ಯಕ್ಷ ಜೆ. ಲೋಕೇಶ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ಲೇಖಕ ಬರಗೂರು ರಾಮಚಂದ್ರಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ರಂಗ ನಿರ್ದೇಶಕ ಎಂ.ಎಸ್‌.ಸತ್ಯು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕನ್ನಡ ಸಂಸ್ಕೃತಿ ಇಲಾಖೆಯ ನಿಕಟಪೂರ್ವ ನಿರ್ದೇಶಕ ಎನ್‌.ಆರ್‌. ವಿಶುಕುಮಾರ್‌ ಅಧ್ಯಕ್ಷತೆ ವಹಿಸಲಿದ್ದಾರೆ.

ಪದ್ಮಾ ಕೊಡಗು ಅವರ “ಉಡುಪಿ ಜಿಲ್ಲಾ ರಂಗ ಮಾಹಿತಿ’, ಬಸವರಾಜ ಬೆಂಗೇರಿ ಅವರ “ಅವಿಭಜಿತ ಧಾರವಾಡ ಜಿಲ್ಲಾ ರಂಗ ಮಾಹಿತಿ’, ಗಣೇಶ ಅಮೀನಗಡ ಅವರ “ರಹಿಮಾನವ್ವ ಕಲ್ಮನಿ’ ಪುಸಕ್ತ ಬಿಡುಗಡೆಗೊಳಿಸಲಾಗುವುದು ಎಂದರು.

ದಾಖಲೆ ಡಿಜಿಟಲೀಕರಣ
ಅಕಾಡೆಮಿ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದ್ದು, ರಂಗಚಟುವಟಿಕೆಗಳ ಫೊಟೋ, ವೀಡಿಯೋ, ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿ ರಂಗಭೂಮಿಯ ಇತಿಹಾಸವನ್ನು ರಕ್ಷಿಸಲಾಗುತ್ತಿದೆ. ಕಳೆದ ವರ್ಷ 10, ಈ ಬಾರಿ 99 ನಾಟಕಗಳು ಸ್ಪರ್ಧೆಗೆ ಬಂದಿವೆ. ರಂಗಭೂಮಿಯ ಬಗ್ಗೆ ಸಂಶೋಧನೆ ಮಾಡುವ ಆಸಕ್ತಿ ಇರುವ 55 ಮಂದಿ ಯುವಕರಿಗೆ ತಲಾ 1 ಲ.ರೂ.ಗಳ ಫೆಲೋಶಿಪ್‌ ನೀಡಲಾಗುತ್ತಿದೆ ಎಂದರು.

ಕಾಮಗಾರಿಯೂ ಇಲ್ಲ, ಹಣವೂ ಇಲ್ಲ!
ರಂಗ ಮಂದಿರ ನಿರ್ಮಾಣ ಹೊಣೆಯನ್ನು ಸರಕಾರ ಪಿಡಬ್ಲೂéಡಿಗೆ ನೀಡಿದೆ. ಅವರು ಸುಮಾರು 50 ಮಂದಿ ನಾಟಕ ನೋಡುಗರ ಊರಿನಲ್ಲಿ ಸಾವಿರಾರು ಮಂದಿ ಕುಳಿತುಕೊಳ್ಳುವ ರಂಗ ಮಂದಿರ ನಿರ್ಮಾಣಕ್ಕೆ 10 – 15 ಕೋ.ರೂ. ಯೋಜನೆ ರೂಪಿಸುತ್ತಾರೆ. ಮೊದಲ ಹಂತದಲ್ಲಿ ಬಿಡುಗಡೆಯಾಗುವ 1 ಕೋ.ರೂ.ನಲ್ಲಿ ನಾಲ್ಕು ಕಂಬಗಳನ್ನು ನಿರ್ಮಿಸುತ್ತಾರೆ. ಅನಂತರದ ಕಾಮಗಾರಿಗೆ ಹಣವೂ ಇಲ್ಲ, ಸುಸಜ್ಜಿತ ರಂಗ ಮಂದಿರವೂ ಇಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಲೋಕೇಶ ಬೇಸರ ವ್ಯಕ್ತಪಡಿಸಿದರು.

Advertisement

ಕ್ರಿಯಾಯೋಜನೆ ಏನಾಯಿತು?
ನಾಟಕ ಅಕಾಡೆಮಿಯ 1 ಕೋ.ರೂ. ಅನುದಾನಲ್ಲಿ ಸಿಬಂದಿ ವೇತನಕ್ಕೆ 35 ಲ.ರೂ. ಬೇಕು. ಬಾಕಿ ಉಳಿದ 65 ಲ.ರೂ. ರಂಗಚಟುವಟಿಕೆಗೆ ಏನೂ ಸಾಲದು. ಆದ್ದರಿಂದ ಅನುದಾನ ಹೆಚ್ಚಿಸಬೇಕು. ಸರಕಾರದ ನಿಯಮದಂತೆ ಪೂರ್ವಭಾವಿಯಾಗಿ 2 ವರ್ಷಗಳಿಂದ ಕ್ರಿಯಾಯೋಜನೆ ಸಲ್ಲಿಸಲಾಗಿದೆ. ಆದರೆ ಅದು ಏನಾಗಿದೆ ಎಂಬ ಮಾಹಿತಿಯೇ ಇಲ್ಲ ಎಂದರು.

ಪ್ರತ್ಯೇಕ ರಂಗಮಂದಿರ ಬೇಡಿಕೆ
ಜಿಲ್ಲೆ ಮತ್ತು ತಾಲೂಕು ಕೇಂದ್ರದಲ್ಲಿ ಪ್ರತ್ಯೇಕ ರಂಗಮಂದಿರಗಳನ್ನು ನಿರ್ಮಿಸುವುದಕ್ಕಾಗಿ ರಂಗಮಂದಿರಗಳ ಪ್ರಾಧಿಕಾರವನ್ನು ರಚಿಸಬೇಕು. ಅದಕ್ಕೆ ಅಗತ್ಯವಿರುವ 40 ಕೋ. ರೂ. ಅನುದಾನ ನೀಡಬೇಕು. ಆ ಮೂಲಕ ಪ್ರತಿ ತಾಲೂಕಿನಲ್ಲಿ 100 x 200 ಅಡಿ ಜಮೀನಿನಲ್ಲಿ ಕೇವಲ 50 ಲ.ರೂ.ಗಳಲ್ಲಿ ಪಾರ್ಕಿಂಗ್‌ ಸಹಿತ ಅತ್ಯಂತ ಸುಸಜ್ಜಿತ ರಂಗಮಂದಿರವನ್ನು ಅತ್ಯಂತ ಕಲಾತ್ಮಕವಾಗಿ ನಿರ್ಮಿಸಲು ಸಾಧ್ಯವಿದೆ. ಪ್ರಾಧಿಕಾರಕ್ಕೆ ರಂಗಭೂಮಿಯ ಹಿನ್ನೆಲೆಯವರನ್ನು ಅಧ್ಯಕ್ಷ -ಸದಸ್ಯರನ್ನಾಗಿ ಮಾಡಬೇಕು. ಹಣಕಾಸು ವ್ಯವಹಾರಕ್ಕೆ ಬೇಕಿದ್ದರೆ ಐಎಎಸ್‌ ಅಧಿಕಾರಿಯನ್ನು ನೇಮಿಸಲಿ ಎಂದು ಲೋಕೇಶ ಆಗ್ರಹಿಸಿದ್ದಾರೆ.ಪ್ರಶಸ್ತಿ ಪ್ರದಾನ ಸಮಾರಂಭದ ಸಂಚಾಲಕ ಬಾಸುಮಾ ಕೊಡಗು ಪತ್ರಿಕಾಗೋಷ್ಠಿಯಲ್ಲಿದ್ದರು.

ಯಾರಿಗೆ ಯಾವ ಪ್ರಶಸ್ತಿ ?
ಗೌರವ ಪ್ರಶಸ್ತಿ

ಪ್ರಸಕ್ತ ಸಾಲಿನ ರಂಗ ಕರ್ಮಿಗಳಿಗೆ ಕೊಡ ಮಾಡುವ ಗೌರವ ಪ್ರಶಸ್ತಿಗೆ ಪಿ. ಗಂಗಾಧರ ಸ್ವಾಮಿ ಅಯ್ಕೆಯಾಗಿದ್ದಾರೆ. ಪ್ರಶಸ್ತಿ 50,000 ರೂ. ನಗದು ಒಳಗೊಂಡಿದೆ. 

ವಾರ್ಷಿಕ ಪ್ರಶಸ್ತಿ 
ವಾರ್ಷಿಕ ಪ್ರಶಸ್ತಿಗೆ ರಂಗಕರ್ಮಿಗಳಾದ ರಾಜಪ್ಪ ಕಿರಗಸೂರು, ಬಸಪ್ಪ ಶರಣಪ್ಪ ಮದರಿ, ಹುಲಿವಾನ ಗಂಗಾಧರಯ್ಯ, ಹನುಮಂತಪ್ಪ ಬಾಗಲಕೋಟ, ಅಂಜಿನಪ್ಪ, ಸಾವಿತ್ರಿ ನಾರಾಯಣಪ್ಪ ಗೌಡ, ಜಕಾವುಲ್ಲಾ ಗಂಡಸಿ, ಖಾಜೇಸಾಬ ನಬೀಸಾಬ ಜಂಗಿ, ಮೈಮ್‌ ರಮೇಶ್‌, ಕೆಂಚೇಗೌಡ ಟಿ., ಪಿ. ಪ್ರಭಾಕರ ಕಲ್ಯಾಣಿ, ಚಿಂದೋಡಿ ಎಲ್‌. ಚಂದ್ರಧರ, ಡಿ.ಎಂ. ರಾಜಕುಮಾರ್‌, ಡಿ.ಎಲ್‌. ನಂಜುಂಡ ಸ್ವಾಮಿ, ಈಶ್ವರ ದಲ, ಮೋಹನ್‌ ಮಾರ್ನಾಡು, ಉಷಾ ಭಂಡಾರಿ, ಪ್ರಭಾಕರ ಜೋಷಿ, ಎಸ್‌. ಅಂಜೀನಮ್ಮ, ಡಾ| ಕೆ.ವೈ. ನಾರಾಯಣ ಸ್ವಾಮಿ, ಜಗದೀಶ್‌ ಕೆಂಗನಾಳ್‌, ಉಗಮ ಶ್ರೀನಿವಾಸ, ವಿಜಯಾನಂದ ಕರಡಿಗುಡ್ಡ, ಮಕಬೂಲ ಹುಣಸಿಕಟ್ಟಿ, ಎಂ. ರವಿ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ತಲಾ 25,000 ರೂ. ನಗದು ಒಳಗೊಂಡಿರುತ್ತದೆ.

ದತ್ತಿ ಪುರಸ್ಕಾರ
ಮೃತ್ಯುಂಜಯ ಸ್ವಾಮಿ ಅವರಿಗೆ ಹಿರೇಮಠ ನಟರತ್ನ ಚಿಂದೋಡಿ ವೀರಪ್ಪ ದತ್ತಿ ಪುರಸ್ಕಾರ, ನಿಕೋಲಸ್‌ ಅವರಿಗೆ ಕಲ್ಚರ್‌ ಕಮೆಡಿಯನ್‌ ಕೆ. ಹಿರಿಯಣ್ಣ ದತ್ತಿ ಪುರಸ್ಕಾರ, ಎಂ.ಎಸ್‌. ಮಾಳವಾಡ ಅವರಿಗೆ ಪದ್ಮಶ್ರೀ ಚಿಂದೋಡಿ ಲೀಲಾ ದತ್ತಿ ಪುರಸ್ಕಾರ ಹಾಗೂ ನ.ಲಿ. ನಾಗರಾಜ್‌ ಅವರಿಗೆ ಕೆ. ರಾಮಚಂದ್ರಯ್ಯ ದತ್ತಿ ಪುರಸ್ಕಾರ ಪ್ರದಾನ ಮಾಡಲಾಗುವುದು. ಈ ಪ್ರಶಸ್ತಿ 5,000 ರೂ. ನಗದುಒಳಗೊಂಡಿದೆ.

ಪುಸಕ್ತ ಬಹುಮಾನ
ಪುಸಕ್ತ ಬಹುಮಾನಕ್ಕೆ ಸಿರಿಗೇರಿ ಯರಿಸ್ವಾಮಿ ಅವರ “ರಂಗ ಸಂಭ್ರಮ’ ಕೃತಿ ಆಯ್ಕೆಯಾಗಿದೆ. ಪ್ರಶಸ್ತಿ 25,000 ರೂ. ನಗದು ಒಳಗೊಂಡಿದೆ. 

1 ಕೋ.ರೂ. ಸಾಲದು
ರಾಜ್ಯ ಸರಕಾರ ಎಸಿ ಕೋಣೆಯಲ್ಲಿ ಕುಳಿತು ಬರೆಯುವವರ ಸಾಹಿತ್ಯ ಅಕಾಡೆಮಿಗೆ 1 ಕೋ.ರೂ., ಊರೂರು ತಿರುಗಿ ರಾತ್ರಿ ಹಗಲು ಕೆಲಸ ಮಾಡುವ ನಾಟಕ ಅಕಾಡೆಮಿಗೂ 1ಕೋ.ರೂ. ವಾರ್ಷಿಕ ಅನುದಾನ ನೀಡುತ್ತಿದೆ. ಇದು ಸರಿಯಲ್ಲ. ನಾಟಕ ಅಕಾಡೆಮಿಗೆ 1 ಕೋ.ರೂ. ಸಾಲದು.
ಜೆ. ಲೋಕೇಶ, 
ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next