ಬೆಂಗಳೂರು: ಇಂಡಸ್‌ಇಂಡ್ ಬ್ಯಾಂಕ್ ದೃಷ್ಟಿ ವಿಶೇಷಚೇತನ ಮಹಿಳೆಯರ ರಾಷ್ಟ್ರೀಯ ಟಿ20 ಟೂರ್ನಿಯ 2ನೇ ಆವೃತ್ತಿಯಲ್ಲಿ ಆತಿಥೇಯ ಕರ್ನಾಟಕ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಬೆಂಗಳೂರಿನ ಆಲ್ಟಿಯಾರ್ ಕ್ರಿಕೆಟ್ ಮೈದಾನದಲ್ಲಿ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಉದ್ಘಾಟನಾ ಆವೃತ್ತಿಯ ಚಾಂಪಿಯನ್ ಒಡಿಶಾ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿದ ಕರ್ನಾಟಕದ ಮಹಿಳೆಯರು ಟ್ರೋಫಿ ಗೆದ್ದು ಸಂಭ್ರಮಿಸಿದರು.
ಜಿದ್ದಾಜಿದ್ದಿನಿಂದ ಕೂಡಿದ ಹಣಾಹಣಿಯಲ್ಲಿ ಟಾಸ್ ಗೆದ್ದ ಕರ್ನಾಟಕ ತಂಡದ ನಾಯಕಿ ವರ್ಷಾ ಯು. ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ ಒಡಿಶಾ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 148 ರನ್ ಬಾರಿಸಿತು. ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಕರ್ನಾಟಕ ತಂಡ 16.5 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 150 ರನ್ ಬಾರಿಸಿ ಜಯ ಸಾಧಿಸಿತು.
ಕಳೆದ ನಾಲ್ಕು ಪಂದ್ಯಗಳಲ್ಲಿ ಕರ್ನಾಟಕ ತಂಡದ ಪರ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಆರಂಭಿಕ ಬ್ಯಾಟರ್ ಗಂಗಾ ಪಶಸ್ತಿ ಫೈಟ್‌ನಲ್ಲೂ ಅಮೋಘ 43 ರನ್ ಬಾರಿಸಿದರು. ಅಂತೆಯೇ ನಾಯಕಿ ವರ್ಷಾ (62) ಅಜೇಯ ಅರ್ಧಶತಕ ಬಾರಿಸಿ ಬೃಹತ್ ಮೊತ್ತ ಪೇರಿಸಲು ನೆರವಾದರು. ಇವರಿಬ್ಬರ ಆಟದ ನೆರವಿನಿಂದ ಕರ್ನಾಟಕ ಸುಲಭ ಜಯ ದಾಖಲಿಸಿತು. ಅದಕ್ಕಿಂತ ಮೊದಲು ಬ್ಯಾಟ್ ಮಾಡಿದ ಒಡಿಶಾ ಪರ ಆರಂಭಿಕರಾದ ರಚನಾ ಜನಾ (26) ಮತ್ತು ಝಿಲಿ ಬಿರುಹಾ (31) ರನ್ ಬಾರಿಸಿದರೆ ಉಳಿದವರು ರನ್ ಗಳಿಸಲು ಪರದಾಡಿದರು. ಅಜೇಯ ಅರ್ಧಶತಕ ಹಾಗೂ 25 ರನ್ ವೆಚ್ಚದಲ್ಲಿ 1 ವಿಕೆಟ್ ಪಡೆದ ವರ್ಷಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಸಂಕ್ಷಿಪ್ತ ಸ್ಕೋರ್
ಒಡಿಶಾ ಮಹಿಳೆಯರು: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 148 (ಝಿಲಿ ಬಿರುಹಾ 31; ರಚನಾ ಜನಾ 26, ಗಂಗಾ 10ಕ್ಕೆ1).
ಕರ್ನಾಟಕ ಮಹಿಳೆಯರು: 16.5 ಓವರ್‌ಗಳಲ್ಲಿ 5ವಿಕೆಟ್‌ಗೆ 150 (ಗಂಗಾ 43, ವರ್ಷಾ ಯು. 62; ರಚನಾ ಜನಾ 32ಕ್ಕೆ1).
ಪಂದ್ಯಶ್ರೇಷ್ಠ: ವರ್ಷಾ ಯು.