ಶ್ರೀರಂಗಪಟ್ಟಣ: ಪ್ರಜಾಧ್ವನಿ ಯಾತ್ರೆಗೆ ಪ್ರತಿ ಗ್ರಾಮಗಳಿಂದಲೂ ಕಾರ್ಯಕರ್ತರನ್ನು ಕರೆ ತರುವ ಮೂಲಕ ವಿಧಾನ ಸಭಾ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷ ಸಂಘಟನೆಗೆ ಬದ್ಧರಾಗಿ ಕೆಲಸ ಮಾಡಬೇಕು ಎಂದು ಮಾಜಿ ಶಾಸಕ ರಮೇಶ ಬಂಡಿಸಿದ್ದೇಗೌಡ ಹೇಳಿದರು.
ಪಟ್ಟಣದ ಗಾಯಿತ್ರಿ ಕಲ್ಯಾಣ ಮಂಟಪದಲ್ಲಿ ಮಾ.12ರಂದು ನಡೆಯುವ ಪ್ರಜಾಧ್ವನಿ ಯಾತ್ರೆ ಪ್ರಯುಕ್ತ ನಡೆದ ಕಾಂಗ್ರೆಸ್ ಕಾರ್ಯಕರ್ತರ ಪೂವ ಭಾವಿ ಸಭೆಯಲ್ಲಿ ಮಾತನಾಡಿ, ಕೇವಲ 50- 60 ದಿನದಲ್ಲಿ ಚುನಾವಣೆ ಪ್ರಕ್ರಿಯೆ ನಡೆಯುವ ಸಾಧ್ಯತೆಗಳಿದೆ. ಕಾಂಗ್ರೆಸ್ ಕಾರ್ಯಕರ್ತರು ವಿವಿಧ ಪಕ್ಷದ ಮುಖಂಡರು, ಕಾರ್ಯಕರ್ತರನ್ನು ಪಕ್ಷಕ್ಕೆ ಕರೆತರುವ ಮೂಲಕ ಸಂಘಟನೆಗೆ ಆದ್ಯತೆ ನೀಡಬೇಕು. ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿದೆ. ಇಂದಿನ ಸರ್ಕಾರಗಳು ಜನವಿರೋಧಿ ಕೆಲಸಗಳನ್ನು ಮಾಡುತ್ತಿವೆ. ಇದರಿಂದ ನಮ್ಮ ಪಕ್ಷದ ಕಾರ್ಯಕರ್ತರು ಜನಪರ ಕೆಲಸ ಮಾಡಲು ಜನರೊಂದಿಗೆ ಇರಬೇಕು. ಅದಕ್ಕೆ ನಾವೆಲ್ಲರೂ ನಿಮಗೆ ಸಹಕಾರ ನೀಡಲಿದ್ದು, ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದರು.
ಪ್ರಜಾಧ್ವನಿ ಯಾತ್ರೆ ಮಾರ್ಗ: ಮಾ.12ರ ಸಂಜೆ 4 ಗಂಟೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಇತರ ನಾಯಕರೊಂದಿಗೆ ಪ್ರಜಾಧ್ವನಿ ಯಾತ್ರೆ ಪಾಂಡವಪುರ ಮಾರ್ಗವಾಗಿ ಶ್ರೀರಂಗಪಟ್ಟಣಕ್ಕೆ ಬರಲಿದೆ. ಶ್ರೀರಂಗಪಟ್ಟಣ ಗಡಿಭಾಗದ ಕಪರನಕೊಪ್ಪಲು ಗ್ರಾಮದ ಬಳಿ ಪಟ್ಟಣ, ಬೆಳಗೊಳ, ಕೆ.ಶೆಟ್ಟಹಳ್ಳಿ ಹೋಬಳಿಯ ಕಾರ್ಯಕರ್ತರು ಸ್ವಾಗತಿಸಿ, ಹೆದ್ದಾರಿಯಲ್ಲಿ ರ್ಯಾಲಿ ಮೂಲಕ ಆಗಮಿಸಿ, ಪಟ್ಟಣದ ಕಲ್ಯಾಣ ಮಂಟಪದಲ್ಲಿ ಮುಖಂಡರು ಮಾತನಾಡಲಿದ್ದಾರೆ.
ನಂತರ ಶ್ರೀನಿವಾಸ ಅಗ್ರಹಾರ ಗ್ರಾಮದ ಮಾರ್ಗವಾಗಿ ಶಾಂತಿಕೊಪ್ಪಲಿನಿಂದ ಮಹದೇವಪುರ ಗ್ರಾಮಕ್ಕೆ ತೆರಳಿ ಕಾರ್ಯಕರ್ತರ ಸಭೆ ನಡೆಯಲಿದೆ. ಮಂಡ್ಯದ ಕೊಪ್ಪಲಿನಿಂದ ಅರಕೆರೆ ಹೋಬಳಿ ಕಾರ್ಯಕರ್ತರು ರ್ಯಾಲಿ ಮೂಲಕ ಅರಕೆರೆ ತೆರಳಿ, ಬಹಿರಂಗ ಸಭೆ ನಡೆಯಲಿದೆ. ಆ ನಂತರ ಕೊತ್ತತ್ತಿ ಮಾರ್ಗವಾಗಿ ಮಂಡ್ಯಕ್ಕೆ ಪ್ರಜಾಧ್ವನಿ ಯಾತ್ರೆ ತೆರಳಲಿದೆ ಎಂದು ತಿಳಿಸಿದರು.
ಜೆಡಿಎಸ್, ಬಿಜೆಪಿಯ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು. ಶ್ರೀರಂಗ ಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಪ್ರಕಾಶ್ ಮತ್ತು ಮುಖಂಡರು ಹಾಜರಿದ್ದರು.