Advertisement

ತೆರಿಗೆ ವಂಚಕರ ವಿರುದ್ಧ ಸಮರ: ಜಿಎಸ್‌ಟಿ ಸಂಗ್ರಹದಲ್ಲಿ ದೇಶದಲ್ಲಿ ರಾಜ್ಯ ಎರಡನೇ ಸ್ಥಾನ: ಸಿಎಂ

08:59 PM Feb 23, 2023 | Team Udayavani |

ಬೆಂಗಳೂರು: ತೆರಿಗೆ ವಂಚಕರು ತಪ್ಪಿಸಿಕೊಳ್ಳದಂತೆ ಬಿಗಿ ಕ್ರಮಗಳನ್ನು ಕೈಗೊಂಡ ಪರಿಣಾಮವಾಗಿ ಜಿಎಸ್‌ಟಿ ಸಂಗ್ರಹದಲ್ಲಿ ದೇಶದಲ್ಲಿ ರಾಜ್ಯ ಎರಡನೇ ಸ್ಥಾನಕ್ಕೆ ಬರಲು ಸಾಧ್ಯವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮರ್ಥಿಸಿಕೊಂಡಿದ್ದಾರೆ.

Advertisement

ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ಪ್ರಕಾಶ್‌ ರಾಥೋಡ್‌ ಪರವಾಗಿ ಎಂ. ನಾಗರಾಜು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಯವರು, ತೆರಿಗೆ ಸಂಗ್ರಹಕ್ಕೆ ಸರಕಾರ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು.

ಅಧಿಕಾರಿಗಳ ದಕ್ಷತೆ, ತಂತ್ರಜ್ಞಾನದ ಸಮರ್ಥ ಬಳಕೆ ಮತ್ತು ವಿಚಕ್ಷಣೆ ಹೆಚ್ಚು ಮಾಡಿದ್ದರಿಂದ ತೆರಿಗೆ ಸಂಗ್ರಹ ಹೆಚ್ಚಾಗಿದೆ. ಕೆಲವು ವಸ್ತುಗಳನ್ನು ತೆರಿಗೆ ಇಲ್ಲದೆ ಮಾರಾಟ ಮಾಡುವ ದೊಡ್ಡ ಜಾಲವೇ ಸಕ್ರಿಯವಾಗಿತ್ತು. ಆ ಜಾಲವನ್ನು ಪತ್ತೆಹಚ್ಚಿ ಬಿಗಿ ಕ್ರಮಗಳನ್ನು ಕೈಗೊಂಡು ಅಂತಹ ವಸ್ತುಗಳನ್ನು ತೆರಿಗೆ ವ್ಯಾಪ್ತಿಗೆ ತರಲಾಗಿದೆ. ಉದಾಹರಣೆಗೆ ಅಡಿಕೆಯನ್ನು° ತೆರಿಗೆಯಿಂದ ಹೊರಗಿಟ್ಟು ಮಾರಾಟ ಮಾಡಲಾಗುತ್ತಿತ್ತು. ವಿಶೇಷ ಕ್ರಮಗಳನ್ನು ಕೈಗೊಂಡಿದ್ದರ ಪರಿಣಾಮ ಈಗ ಪ್ರತಿದಿನ 8 ಕೋಟಿ ರೂ. ತೆರಿಗೆ ಸಂಗ್ರಹವಾಗುತ್ತಿದೆ.

ಅದೇ ರೀತಿ ರಾಜ್ಯದಿಂದ ದೇಶ-ವಿದೇಶಕ್ಕೆ ಹೋಗುತ್ತಿದ್ದ ಗುಜರಿ ಬಗ್ಗೆ ಲೆಕ್ಕವೇ ಸಿಗುತ್ತಿರಲಿಲ್ಲ. ಮಂಗಳೂರಿನಿಂದ ದಿಲ್ಲಿವರೆಗೆ ತೆರಿಗೆ ಇಲ್ಲದೆ ಗುಜರಿ ಹೋಗುತ್ತಿತ್ತು. ಇದನ್ನು ಪತ್ತೆ ಹಚ್ಚಿ ಬಿಗಿ ಕ್ರಮಗಳನ್ನು ಜರಗಿಸಿದ್ದರಿಂದ ವರ್ಷಕ್ಕೆ 800 ಕೋಟಿ ರೂ. ತೆರಿಗೆ ಬರುತ್ತಿದೆ. ಬೆಂಗಳೂರಿನಲ್ಲಿ ಮಾರಾಟ ಮಳಿಗೆಯ ಲೆಕ್ಕವೇ ಬೇರೆ, ದಾಸ್ತಾನು ಮಳಿಗೆಗಳ ಲೆಕ್ಕವೇ ಬೇರೆ ಇರುತ್ತಿತ್ತು. ತಂತ್ರಜ್ಞಾನದ ಬಳಕೆಯ ಮೂಲಕ ಇದನ್ನು ಸರಿಪಡಿಸಲಾಗಿದೆ. ಈ ರೀತಿ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇಂತಹ ಶೋಧನೆಗಳು ಮುಂದುವರಿದಿದೆ. ಸಮರೋಪಾದಿಯಲ್ಲಿ ಕ್ರಮಗಳನ್ನು ಕೈಗೊಂಡು ರಾಜ್ಯದ ಬೊಕ್ಕಸಕ್ಕೆ ಆದಾಯ ತರಲು ಎಲ್ಲ ರೀತಿಯ ಪ್ರಯತ್ನಗಳನ್ನು ಸರಕಾರ ಮಾಡಲಿದೆ ಎಂದರು.

11 ಸಾವಿರ ಪ್ರಕರಣಗಳು
ಬಿಚಿಟ್ಟು ವಹಿವಾಟು, ಇನ್‌ಪುಟ್‌ ತೆರಿಗೆಯನ್ನು ನಕಲಿ ದಾಖಲೆಗಳೊಂದಿಗೆ ಪೂರೈಸುವುದು, ಸೂಕ್ತ ದಾಖಲೆಗಳಿಲ್ಲದೆ ಸರಕು ಸಾಗಿಸುವುದು, ಸೂಕ್ತ ಮಾರಾಟ ಬಿಲ್‌ ನೀಡದಿರುವುದು ಈ ರೀತಿ ಅನೇಕ ಮಾರ್ಗಗಳನ್ನು ಮೂಲಕ ತೆರಿಗೆ ವಂಚಿಸಲಾಗುತ್ತಿತ್ತು. ಈ ಕುರಿತು ಜಾರಿ ಮತ್ತು ಜಾಗೃತಿ ವಿಭಾಗದ ಅಧಿಕಾರಿಗಳಿಂದ 2022-23ನೇ ಸಾಲಿನಲ್ಲಿ ಡಿಸೆಂಬರ್‌-22ರ ಅಂತ್ಯದವರೆಗೆ ಒಟ್ಟು 11,914 ಪ್ರಕರಣಗಳನ್ನು ತನಿಖೆ, ತಪಾಸಣೆ ನಡೆಸಲಾಗಿದೆ. ತೆರಿಗೆ ವಂಚಿಸಿದ ಒಟ್ಟು ಮೊತ್ತ 1,819.94 ಕೋಟಿ ರೂ. ಆಗಿದೆ. ಇದರಲ್ಲಿ 497.98 ಕೋಟಿ ತೆರಿಗೆ, 19.34 ಕೋಟಿ ಬಡ್ಡಿ ಮತ್ತು 131.53 ಕೋಟಿ ದಂಡ ಸೇರಿ ಒಟ್ಟು 648.85 ಕೋಟಿ ರೂ. ಸಂಗ್ರಹ ಮಾಡಲಾಗಿದೆ. ಉಳಿದ ಮೊತ್ತವನ್ನು ವಸೂಲಿ ಮಾಡಲು ಕ್ರಮ ಮುಂದುವರಿದಿದೆ ಎಂದು ಮುಖ್ಯಮಂತ್ರಿಯವರು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next