Advertisement

ಮೂಲ-ವಲಸಿಗ ಫೈಟ್‌ ಜೋರು; ಸಂಪುಟ ಸರ್ಜರಿ ಮಾತುಗಳ ಬೆನ್ನಲ್ಲೇ ಹೊಸ ಬೆಳವಣಿಗೆ

12:11 AM Nov 26, 2020 | mahesh |

ಬೆಂಗಳೂರು: ಇನ್ನು ಎರಡು ಮೂರು ದಿನಗಳಲ್ಲಿ ಸಂಪುಟ ವಿಸ್ತರಣೆಯಾಗಲಿದೆ ಎಂಬುದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ವಿಶ್ವಾಸ. ಇದರ ನಡುವೆಯೇ ಮೂಲ ಮತ್ತು ವಲಸಿಗ ನಾಯಕರ ನಡುವೆ ವಾಕ್ಸಮರವೂ ಜೋರಾಗಿದೆ. ಸಂಪುಟ ವಿಸ್ತರಣೆ ಅಥವಾ ಪುನಾರಚನೆ ವಿಳಂಬವಾಗುತ್ತಿರುವ ನಡುವೆಯೇ ಒಡಕಿನ ಮಾತುಗಳು ಕೇಳಿಬಂದಿವೆ.

Advertisement

ವಿವಾದಕ್ಕೆ ಎಂ.ಪಿ. ರೇಣುಕಾಚಾರ್ಯ, ಎಂಟಿಬಿ ನಾಗರಾಜ್‌ ನಾಂದಿ ಹಾಡಿದ್ದಾರೆ. ಬಿಜೆಪಿ ಸರಕಾರ ರಚನೆಗೆ 17 ಮಂದಿ ಕಾರಣ ಎಂಬುದು ಸುಳ್ಳು ಎನ್ನುವುದು ರೇಣುಕಾಚಾರ್ಯ ಹೇಳಿಕೆ. ಆದರೆ 105 ಶಾಸಕರೇ ಮುಖ್ಯವಾಗಿದ್ದರೆ, ಆಗ ಏಕೆ ಸರ ಕಾರ ರಚನೆಯಾಗಲಿಲ್ಲ ಎಂಬುದು ಎಂಟಿಬಿ ನಾಗರಾಜ್‌ ಪ್ರಶ್ನೆ.

ಈ ಮಧ್ಯೆ ವಿಧಾನ ಪರಿಷತ್‌ ಸದಸ್ಯ ಸಿ.ಪಿ. ಯೋಗೇಶ್ವರ್‌ಗೆ ಸಚಿವ ಸ್ಥಾನ ನೀಡಬಾರದು ಎಂಬುದಾಗಿ ಮೂಲ ಬಿಜೆಪಿಯ ಹಲವರು ಆಕ್ಷೇಪಿಸುತ್ತಿರುವುದನ್ನು ರಮೇಶ್‌ ಜಾರಕಿಹೊಳಿ ಒಪ್ಪಿ ಕೊಂಡರೂ ಯೋಗೇಶ್ವರ್‌ಗೆ ಸಚಿವ ಸ್ಥಾನ ಕೊಡಿಸಲು ಹೋರಾಟ ಮಾಡುವುದು ನನ್ನ ಧರ್ಮ ಎಂದಿದ್ದಾರೆ. ಇದು ಮೂಲ ಬಿಜೆಪಿಯ ಕೆಲವರನ್ನು ಇನ್ನಷ್ಟು ಕೆರಳಿಸಿದೆ.

ಇದರ ನಡುವೆಯೇ ರೇಣುಕಾಚಾರ್ಯ ನಿವಾಸದಲ್ಲಿ ಕೆಲವು ಶಾಸಕರು ಸಭೆ ನಡೆಸಿದರು. ಅತ್ತ ರಮೇಶ್‌ ಜಾರಕಿಹೊಳಿ ನಿವಾಸದಲ್ಲಿ ನಡೆದ ಸಭೆಯಲ್ಲಿ ಸಚಿವ ಬಿ. ಶ್ರೀರಾಮುಲು, ಮಾಜಿ ಸಂಸದ ಪ್ರಭಾಕರ ಕೋರೆ, ವಿಧಾನ ಪರಿಷತ್‌ ಆಡಳಿತ ಪಕ್ಷದ ಮುಖ್ಯ ಮಹಾಂತೇಶ್‌ ಕವಟಗಿಮಠ ಪಾಲ್ಗೊಂಡಿದ್ದರು. ಬಳಿಕ ಜಾರಕಿಹೊಳಿ ಅವರು ದಿಲ್ಲಿಗೆ ಪ್ರಯಾಣ ಬೆಳೆಸಿದರು. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಜತೆ ಚರ್ಚಿಸುವ ಸಾಧ್ಯತೆಗಳಿವೆ ಎಂದು ದಿಲ್ಲಿ ಮೂಲಗಳು ತಿಳಿಸಿವೆ.

ದಿಲ್ಲಿಗೆ ಗಣ್ಯರ ದಂಡು
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಸಿ.ಟಿ. ರವಿ ಅವರು ಶುಕ್ರವಾರ ದಿಲ್ಲಿಯಲ್ಲಿ ಕಚೇರಿ ಪೂಜಾ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಅದರಲ್ಲಿ ಪಾಲ್ಗೊಳ್ಳುವ ಸಲುವಾಗಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಚಿವ ಆರ್‌. ಅಶೋಕ್‌ ಗುರುವಾರ ಸಂಜೆ ಪ್ರಯಾಣ ಬೆಳೆಸಲಿದ್ದಾರೆ. ಇದೇ ನೆಪದಲ್ಲಿ ಹಲವರು ದಿಲ್ಲಿಗೆ ತೆರಳಲು ಸಿದ್ಧತೆ ನಡೆಸಿದ್ದಾರೆ. ಅವಕಾಶ ಸಿಕ್ಕರೆ ವರಿಷ್ಠರನ್ನು ಭೇಟಿಯಾಗಿ ಸಚಿವ ಸ್ಥಾನಕ್ಕಾಗಿ ಹಾಗೂ ಸಚಿವರು ತಮ್ಮ ಸ್ಥಾನಮಾನ ಭದ್ರಪಡಿಸಿಕೊಳ್ಳಲು ಲಾಬಿ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.

Advertisement

ಹಿರಿಯ ನಾಯಕರು ಗರಂ
ಪಕ್ಷದ ಶಾಸಕರೇ ವ್ಯತಿರಿಕ್ತ ಹೇಳಿಕೆ ನೀಡುತ್ತಿರುವ ಬಗ್ಗೆ ಪಕ್ಷದ ಹಿರಿಯ ನಾಯಕರು ಗರಂ ಆಗಿದ್ದಾರೆ. ಮುಂದೆ ಈ ರೀತಿಯ ಹೇಳಿಕೆ ನೀಡದಂತೆ ಹಿರಿಯ ನಾಯಕರು ಪಕ್ಷದ ಶಾಸಕರಿಗೆ ಖಡಕ್‌ ಸೂಚನೆ ನೀಡುವ ಸಾಧ್ಯತೆ ಇದೆ. ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಕೂಡ ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆಗೆ ಅನ್ಯ ಪಕ್ಷಗಳ 17 ಶಾಸಕರು ಹೇಗೆ ಕಾರಣವೋ ಹಾಗೆಯೇ ಬಿಜೆಪಿಯ 105 ಶಾಸಕರೂ ಕಾರಣರಾಗಿದ್ದಾರೆ ಎಂಬ ಬಿಜೆಪಿ ನಾಯಕರ ಅಭಿಪ್ರಾಯ ನಿಜ. ಅವರ ಮಾತು ಸತ್ಯ.
– ರಮೇಶ್‌ ಜಾರಕಿಹೊಳಿ, ಸಚಿವ

ಮೂಲ-ವಲಸಿಗ ಎಂಬ ಪ್ರಶ್ನೆಯೇ ಇಲ್ಲ. 105 ಶಾಸಕರು ಮೂಲ ಬಿಜೆಪಿಗರು ಹಾಗೂ 17 ಮಂದಿ ವಲಸಿಗರು ಎಂಬ ಯಾವುದೇ ವರ್ಗೀಕರಣವೂ ಅಗತ್ಯವಿಲ್ಲ.
– ಎಸ್‌.ಟಿ. ಸೋಮಶೇಖರ್‌, ಸಚಿವ

Advertisement

Udayavani is now on Telegram. Click here to join our channel and stay updated with the latest news.

Next