Advertisement

ಮಡೆ, ಮಾಟ ಬಂದ್‌ ವಾಸ್ತುಗೆ “ಭವಿಷ್ಯ”ಗಟ್ಟಿ​​​​​​​

06:00 AM Sep 28, 2017 | |

ಬೆಂಗಳೂರು: ಮಡೆ ಸ್ನಾನ, ಮಾಟ -ಮಂತ್ರ, ದೆವ್ವ-ಭೂತ ಬಿಡಿಸುವ ಹೆಸರಲ್ಲಿ ಹಿಂಸೆ ನೀಡುವುದನ್ನು ತಡೆಗಟ್ಟುವ, ಜೋತಿಷ -ವಾಸ್ತುಶಾಸ್ತ್ರಕ್ಕೆ ನಿರ್ಬಂಧ ಹೇರದ “ಮೌಡ್ಯ ನಿಷೇಧ (ಕರ್ನಾಟಕ ಅಮಾನ ವೀಯ ದುಷ್ಟ ಮತ್ತು ವಾಮಾಚಾರ ಪ್ರತಿಬಂಧ ಮತ್ತು ನಿರ್ಮೂಲನೆ ಮಸೂದೆ 2017)ಕ್ಕೆ ‘ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

Advertisement

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಸಾಕಷ್ಟು ಪರ-ವಿರೋಧ ಚರ್ಚೆ ಹಾಗೂ ಹಿರಿಯ ಸಚಿವರ ಆಕ್ಷೇಪದ ನಡುವೆಯೇ ಈ ವಿವಾದಿತ ಮಸೂದೆಗೆ ಸಂಪುಟ ಒಪ್ಪಿಗೆ ನೀಡಿತು.

ನವೆಂಬರ್‌ನಲ್ಲಿ ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಮಸೂದೆ ಮಂಡಿಸಿ ಒಪ್ಪಿಗೆ ಪಡೆ
ಯಲು ಸಂಪುಟ ತೀರ್ಮಾನಿಸಿದೆ. ಸಾಕಷ್ಟು ವಿವಾದಕ್ಕೆ ಕಾರಣವಾಗಿರುವುದರಿಂದ ಮಸೂದೆಯಲ್ಲಿ ಹೊಸ ಅಂಶ ಗಳನ್ನು ಸೇರಿಸಲು ಮತ್ತು ವಿವಾದಿತ ವಿಷಯಗಳನ್ನು  ತೆಗೆದು ಹಾಕಲು ಮುಕ್ತ ಅವಕಾಶ ಇಟ್ಟುಕೊಳ್ಳಲಾಗಿದೆ. ಜತೆಗೆ, ರಾಜ್ಯ ವಿಧಾನಸಭೆಗೆ ಚುನಾವಣೆ ಹತ್ತಿರ ಇರುವುದರಿಂದ ಹೆಚ್ಚಿನ ವಿವಾದವನ್ನು ಮೈಮೇಲೆ ಎಳೆದು ಕೊಳ್ಳದೇ ಮಸೂದೆ ಜಾರಿಗೊಳಿಸಲು ಸರಕಾರ ಮುಂದಾಗಿದೆ.

ಹೊಸ ಮಸೂದೆಯಲ್ಲಿ ಪ್ರಾಣಿ ಬಲಿ ಮತ್ತು ನರ ಬಲಿಯನ್ನು ಸೇರಿಸಲು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅಧ್ಯಕ್ಷತೆಯ ಸಂಪುಟ ಉಪ ಸಮಿತಿ ಸೂಚಿಸಿತ್ತು. ಆದರೆ, ಪ್ರಾಣಿ ಬಲಿ ನಿಷೇಧಕ್ಕೆ ಪ್ರತ್ಯೇಕ ಕಾನೂನು ಇರುವುದರಿಂದ ಅದನ್ನು ಕೈ ಬಿಟ್ಟು ನರ ಬಲಿ ನಿಷೇಧವನ್ನು ಮಾತ್ರ ಹೊಸ ಮಸೂದೆಯಲ್ಲಿ ಸೇರಿಸಿಕೊಳ್ಳಲಾಗಿದೆ. ಅದರಂತೆ ಪ್ರಗತಿಪರರು ಸೂಚಿಸಿದ್ದ ಮಡೆ ಸ್ನಾನ ಮತ್ತು ಜೋತಿಷ ನಿಷೇಧದ ಮನವಿಯಲ್ಲಿ ಮಡೆ ಸ್ನಾನಕ್ಕೆ ಮಾತ್ರ ನಿರ್ಬಂಧಿಸಿ, ಜೋತಿಷವನ್ನು ಮುಟ್ಟಲು ಹೋಗಿಲ್ಲ.

ಶಿಕ್ಷೆ: ಮೌಡ್ಯ ನಿಷೇಧ ಮಸೂದೆಯಲ್ಲಿ ಮೌಢಾÂಚರಣೆ ನಡೆದ ವ್ಯಾಪ್ತಿಯ ಪೊಲಿಸ್‌ ಠಾಣೆಯ ಇನ್ಸ್‌ಪೆಕ್ಟರ್‌ ರ್‍ಯಾಂಕ್‌ ಮೇಲಿನವರನ್ನು ವಿಚಕ್ಷಣಾ ಅಧಿಕಾರಿಯನ್ನಾಗಿ ನೇಮಕ ಮಾಡುವುದು. ಮೌಢಾÂಚರಣೆ ಮಾಡಿದಲ್ಲಿ 1 ವರ್ಷದಿಂದ 7 ವರ್ಷಗಳ ವರೆಗೆ ಜೈಲು ಶಿಕ್ಷೆ ಹಾಗೂ ರೂ. 5 ಸಾವಿರದಿಂದ 50 ಸಾವಿರದ ವರೆಗೆ ದಂಡ ವಿಧಿಸಲು ನೂತನ ಮಸೂದೆಯಲ್ಲಿ ಸೂಚಿಸಲಾಗಿದೆ.  

Advertisement

ನಿಷೇಧ
– ಮಡೆ ಸ್ನಾನ
– ಸಿಡಿ ಹಾಯುವುದು 
– ಬಾಯಿಯಲ್ಲಿ ಕಬ್ಬಿಣದ ಸಲಾಕೆ ತೂರಿಸುವುದು
– ತಲೆ ಕೂದಲಿನಿಂದ ಎತ್ತಿನ ಬಂಡಿ ಎಳೆಯುವುದು.
– ಮಾಟ ಮಂತ್ರ ಮಾಡುವುದು.
– ದೆವ್ವ ಭೂತ ಬಂದಿದೆ ಎಂದು ಹಿಂಸಿಸುವುದು 
– ಮೆಣಸಿನ ಕಾಯಿ ಹೊಗೆ ಹಾಕುವುದು 
– ಪಾದ ಪೂಜೆಯ ನೀರು ಕುಡಿಯುವುದು 
– ಸಾರ್ವಜನಿಕ ಸ್ಥಳಗಳಲ್ಲಿ ಲೈಂಗಿಕತೆ ಪ್ರಚೋದಿಸುವುದು 
– ಬಾಯಲ್ಲಿ ಮೂತ್ರ ಸುರಿಯುವುದು
– ಮಂತ್ರದ ಮೂಲಕ ಹಸುವಿನ ಹಾಲು ಹೆಚ್ಚಿಸುವುದಾಗಿ ನಂಬಿಸುವುದು 
– ಸೈತಾನ ಬಂದಿದೆ ಎಂದು ಕೂಡಿ ಹಾಕುವುದು
– ದೈವಿ ಶಕ್ತಿ ಇದೆ ಎಂದು ಜನರನ್ನು ನಂಬಿಸಿ ಆರ್ಥಿಕ ನಷ್ಟ ಉಂಟು ಮಾಡುವುದು
– ದೈಹಿಕವಾಗಿ ಹಿಂಸೆ ಮಾಡುವುದು 
– ರೋಗಕ್ಕೆ ತುತ್ತಾದ ವ್ಯಕ್ತಿಗೆ ವೈದ್ಯಕೀಯ ಚಿಕಿತ್ಸೆ ಪಡೆಯಲು ಅಡ್ಡಿ ಪಡಿಸುವುದು
– ಮಾಟ ಮಂತ್ರದ ಮೂಲಕ ರೋಗ ನಿವಾರಿಸುವುದಾಗಿ ನಂಬಿಸುವುದು 
– ಬೆರಳಿನಿಂದ ಆಪರೇಶನ್‌ ಮಾಡುವುದಾಗಿ ನಂಬಿಸುವುದು 
– ಪೂರ್ವ ಜನ್ಮದ ಪಾಪದ ಹೆಸರಿನಲ್ಲಿ ಮಹಿಳೆಯರನ್ನು ಲೈಂಗಿಕ ಕ್ರಿಯೆಗೆ ಬಳಸಿಕೊಳ್ಳುವುದು
– ದೇವರ ಹೆಸರಿನಲ್ಲಿ ಮಕ್ಕಳನ್ನು ಮೇಲಿನಿಂದ ಎಸೆಯುವುದು 
– ದೇವರ ಸೇವೆ ಹೆಸರಿನಲ್ಲಿ ಬೆತ್ತಲೆ ಸೇವೆ ಮಾಡಿಸುವುದು 
– ಬಾಯಿಂದ ಕಚ್ಚಿ ಪ್ರಾಣಿಯನ್ನು ಕೊಲ್ಲುವುದು
– ಕೆಂಡ ಹಾಯುವಂತೆ ವ್ಯಕ್ತಿಯನ್ನು  ಪ್ರೇರೇಪಿಸುವುದು
– ಹಾವು, ಚೇಳು,ನಾಯಿ ಕಚ್ಚಿದಾಗ ಚಿಕಿತ್ಸೆಗೆ ಬದಲು ಮಂತ್ರದಿಂದ ನಿವಾರಿಸುವುದು
– ಭಾನಾಮತಿ ಹೆಸರಿನಲ್ಲಿ ಮನೆಯ ಮೇಲೆ ಕಲ್ಲು ತೂರುವುದು
– ಋತುಮತಿಯಾದ ಯುವತಿ, ಗರ್ಭಿಣಿ ಮಹಿಳೆಯನ್ನು ಹೊರಗಿಡುವುದು
– ಗರ್ಭದಲ್ಲಿರುವ ಭ್ರೂಣ ಬದಲಾವಣೆ ಮಾಡುವುದು
– ಬಲವಂತವಾಗಿ, ಬಹಿರಂಗವಾಗಿ ಲೈಂಗಿಕ ಕ್ರಿಯೆ ನಡೆಸುವಂತೆ ಪ್ರಚೋದಿಸುವುದು
– ಒತ್ತಾಯಪೂರ್ವಕವಾಗಿ ಮಲ ತಿನ್ನಿಸುವುದು 

ಯಾವುದಕ್ಕೆ ನಿಷೇಧವಿಲ್ಲ
– ಜೋತಿಷ ಹೇಳುವುದು
– ಪೂಜೆ ಮಾಡುವುದು
– ಪ್ರದಕ್ಷಿಣೆ ಹಾಕುವುದು
– ಪರಿಕ್ರಮ ಮಾಡುವುದು
– ಹರಿಕಥೆ, ಕೀರ್ತನೆ
– ಭಜನೆ, ಪ್ರವಚನ
– ಪುರಾತನ ಮತ್ತು ಸಾಂಪ್ರದಾಯಿಕ ಕಲೆಗಳ ಬಗ್ಗೆ ಬೋಧನೆ ಮಾಡುವುದು
– ಮನುಷ್ಯನ ದೈಹಿಕ ಹಿಂಸೆ ಮಾಡದ ಪವಾಡಗಳ ಬಗ್ಗೆ ಪ್ರಚಾರ ಮಾಡುವುದು
– ದೇವಸ್ಥಾನಗಳಲ್ಲಿ ಪ್ರಾರ್ಥನೆ, ಉಪವಾಸ ಮಾಡುವುದು
– ಧಾರ್ಮಿಕ ಯಾತ್ರೆಗಳನ್ನು ಕೈಗೊಳ್ಳುವುದು
– ಹಬ್ಬಗಳ ಆಚರಣೆ, ಧಾರ್ಮಿಕ ಮೆರವಣಿಗೆ ಕೈಗೊಳ್ಳುವುದು
– ಕಿವಿ ಮತ್ತು ಮೂಗು ಚುಚ್ಚುವುದು
– ಜೈನರು ಕೇಶ ಮುಂಡನ ಮಾಡಿಸಿಕೊಳ್ಳುವುದು

ನಿರ್ಧಾರವಾಗದ ವಿಷಯಗಳು
– ಅಡ್ಡ ಪಲ್ಲಕ್ಕಿ ಉತ್ಸವ
– ಸ್ವಾಮೀಜಿಗಳ ಪಾದ ಪೂಜೆ
– ಹೋಮ ಹವನ ಮಾಡುವುದು

ಮೌಡ್ಯ ಪ್ರತಿಬಂಧಕ ವಿಧೇಯಕಕ್ಕೆ ಪ್ರತಿಕ್ರಿಯೆ

ಪ್ರಗತಿಪರರು, ಸಾಮಾಜಿಕ ಕಾರ್ಯಕರ್ತರು ಹಾಗೂ ಕಾನೂನು ತಜ್ಞರು ನೀಡಿರುವ ಮನವಿ ಆಧರಿಸಿ ಮಹಾರಾಷ್ಟ್ರ ಮಾದರಿಯಲ್ಲಿ ರಾಜ್ಯದಲ್ಲಿಯೂ ಮೌಡ್ಯ ನಿಷೇಧ ಕಾಯ್ದೆ ಜಾರಿಗೆ ಸಂಪುಟ ಒಪ್ಪಿಗೆ ನೀಡಿದೆ. ನವೆಂಬರ್‌ ಅಧಿವೇಶನದಲ್ಲಿ ಮಂಡನೆ ಮಾಡಲು ತೀರ್ಮಾನಿ ಸಲಾಗಿದೆ.
– ಟಿ.ಬಿ.ಜಯಚಂದ್ರ,
ಕಾನೂನು ಸಚಿವ

ಮೌಡ್ಯ ನಿಷೇಧ ವಿಧೇಯಕಕ್ಕೆ ಸಂಪುಟ ಒಪ್ಪಿಗೆ ನೀಡಿರುವುದು ಸ್ವಾಗತಾರ್ಹ. ರಾಜ್ಯದ ಜನರ ಹಿತದೃಷ್ಟಿಯಿಂದ ಎಲ್ಲ ಪ್ರಗತಿಪರ ಪ್ರಜ್ಞಾವಂತರ ಆಸೆ ಇದಾಗಿತ್ತು. ಆದರೂ ಸಮಗ್ರ ಹಾಗೂ ಪರಿಣಾಮಕಾರಿಯಾಗಿ ಕಾಯ್ದೆ ಜಾರಿಗೆ ತರಲು ಆಗುತ್ತಿಲ್ಲ. ಕೆಲವು ಪ್ರಮುಖ ಅಂಶ ಕೈ ಬಿಡಲಾಗಿದೆ. ಹೀಗಾಗಿ, ಇದು ದುರ್ಬಲ ಕಾಯ್ದೆಯಾಗುತ್ತಾ ಎಂಬ ಅನುಮಾನವೂ ಇದೆ.
-ವೀರಭದ್ರ ಚೆನ್ನಮಲ್ಲ ಸ್ವಾಮೀಜಿ, ನಿಡುಮಾಮಿಡಿ ಮಠ

ಮೌಡ್ಯ ನಿಷೇಧ ಕಾಯ್ದೆಗೆ ಸಚಿವ ಸಂಪುಟದ ತೀರ್ಮಾನ ಸ್ವಾಗತಾರ್ಹ. ನಂಬಿಕೆಗಳು, ಆಚರಣೆಗಳು ಜನರ ಶೋಷಣೆ ಮತ್ತು ಅವಮಾನಕ್ಕೆ ಕಾರಣ ಆಗಬಾರದು. ಈ ಬಗ್ಗೆ ಸರ್ಕಾರ ಸೂಕ್ತ ಮುಂಜಾಗ್ರತೆ ಕೈಗೊಳ್ಳಬೇಕು.
– ಬಂಜಗೆರೆ ಜಯಪ್ರಕಾಶ್‌, ಮಾಜಿ ಅಧ್ಯಕ್ಷ, ಕನ್ನಡ ಪುಸ್ತಕ ಪ್ರಾಧಿಕಾರ

ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದಿರುವ ಮೌಡ್ಯ ಪ್ರತಿಬಂಧಕ ವಿಧೇಯಕವನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು. ಸಾರ್ವಜನಿಕವಾಗಿ ಆ ಕುರಿತು ಚರ್ಚೆಯಾಗಬೇಕು. ಬಳಿಕ ವಿಧೇಯಕ ಅಂತಿಮಗೊಳಿಸಬೇಕು. ಮುಂದಿನ ಅಧಿವೇಶನದಲ್ಲಿ ಸರ್ಕಾರ ಈ ವಿಧೇಯಕವನ್ನು ಯಾವ ರೂಪದಲ್ಲಿ ತೆಗೆದುಕೊಂಡು ಬರುತ್ತದೆ ಎಂಬುದನ್ನು ನೋಡಿಕೊಂಡು ನಂತರ ಆ ಬಗ್ಗೆ ಚರ್ಚಿಸಲಾಗುವುದು.
– ಜಗದೀಶ್‌ ಶೆಟ್ಟರ್‌, ವಿಧಾನಸಭೆ ಪ್ರತಿಪಕ್ಷ ನಾಯಕ

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಮೌಡ್ಯ ಪ್ರತಿಬಂಧಕ ವಿಧೇಯಕ ಬಗ್ಗೆ ಹೇಳುತ್ತಲೇ ಇದ್ದಾರೆ. ಈಗ ಸಂಪುಟ ಒಪ್ಪಿಗೆ ನೀಡಿರುವ ವಿಧೇಯಕದ ಬಗ್ಗೆ ಅವರಲ್ಲೇ ಗೊಂದಲವಿದೆ. ಜನರು ಅನುಸರಿಸುತ್ತಿರುವ ಪದ್ಧತಿ ಸರಿ ಇದೆಯೇ ಇಲ್ಲವೇ ಎಂಬುದನ್ನು ಜನ ನಿರ್ಧರಿಸುತ್ತಾರೆಯೇ ಹೊರತು ಸರ್ಕಾರವಲ್ಲ. ವಿಧೇಯಕ ಸದನದಲ್ಲಿ ಚರ್ಚೆಗೆ ಬಂದಾಗ ಹೇಗಿರುತ್ತದೋ ನೋಡೋಣ.
– ಕೆ.ಎಸ್‌.ಈಶ್ವರಪ್ಪ, ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next