Advertisement

Budget: ಕ್ರೀಡಾಪಟುಗಳಿಗೆ ಪೊಲೀಸ್‌ ಮತ್ತು ಅರಣ್ಯ ಇಲಾಖೆಯಲ್ಲಿ ಶೇ. 3 ರಷ್ಟು ಹುದ್ದೆ

03:42 PM Jul 07, 2023 | Team Udayavani |

ಬೆಂಗಳೂರು: ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವ ಸಾಮರ್ಥ್ಯವುಳ್ಳ ರಾಜ್ಯದ ಕ್ರೀಡಾಪಟುಗಳನ್ನು ತಯಾರಿಸಲು ಬೆಂಗಳೂರಿನಲ್ಲಿ ಬಾಸ್ಕೆಟ್‌ಬಾಲ್‌ ಪ್ರಾದೇಶಿಕ ತರಬೇತಿ ಕೇಂದ್ರ ಮತ್ತು ಮೈಸೂರಿನಲ್ಲಿ ಸೈಕ್ಲಿಂಗ್‌ ವೇಲೋಡ್ರೋಮ್‌ ಅನ್ನು ತಲಾ 10 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುವುದು. ಕ್ರೀಡಾಪಟುಗಳಿಗೆ ಪೊಲೀಸ್‌ ಮತ್ತು ಅರಣ್ಯ ಇಲಾಖೆಯ ನೇಮಕಾತಿಯಲ್ಲಿ ಶೇ. 3 ರಷ್ಟು ಹುದ್ದೆಗಳನ್ನು ಮೀಸಲಿಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಶುಕ್ರವಾರ ಮಂಡಿಸಿದ ಬಜೆಟ್ ನಲ್ಲಿ ಘೋಷಿಸಿದ್ದಾರೆ.

Advertisement

ಕ್ರೀಡಾ ಚಟುವಟಿಕೆಗಳಲ್ಲಿ ವಿಶೇಷಚೇತನರ ಮತ್ತು ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಅಗತ್ಯವಾದ ಮೂಲಭೂತ ಸೌಕರ್ಯಗಳು ಮತ್ತು ನುರಿತ ತರಬೇತುದಾರರ ಸೇವೆಯನ್ನು ಒದಗಿಸಲು 10 ಕೋಟಿ ರೂ. ಅನುದಾನವನ್ನು ಒದಗಿಸಲಾಗುವುದು.ಬೆಂಗಳೂರಿನ ಶ್ರೀಕಂಠೀರವ ಕ್ರೀಡಾಂಗಣದಲ್ಲಿ ಕ್ರೀಡಾ ವಸ್ತು ಸಂಗ್ರಹಾಲಯವನ್ನು ಸ್ಥಾಪಿಸಲು ಐದು ಕೋಟಿ ರೂ. ಅನುದಾನವನ್ನು ಒದಗಿಸಲಾಗುವುದು ಮತ್ತು ಕ್ರೀಡಾಪಟುಗಳಿಗೆ ತಂಗಲು ಅನುಕೂಲವಾಗುವಂತೆ ಸುಸಜ್ಜಿತವಾದ ಕ್ರೀಡಾ ವಸತಿ ನಿಲಯವನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಲಾಗುವುದು. ಇದಕ್ಕಾಗಿ 10 ಕೋಟಿ ರೂ. ಅನುದಾನವನ್ನು ಒದಗಿಸಲಾಗುವುದು ಎಂದು ಘೋಷಿಸಿದ್ದಾರೆ.

ಒಲಂಪಿಕ್‌ ಹಾಗೂ ಪ್ಯಾರಾಲಿಂಪಿಕ್‌ ವಿಜೇತರಿಗೆ ಗ್ರೂಪ್‌ ಎ ಹುದ್ದೆ ಮತ್ತು ಏಷಿಯನ್‌ ಹಾಗೂ ಕಾಮನ್‌ ವೆಲ್ತ್‌ ಕ್ರೀಡಾ ವಿಜೇತರಿಗೆ ಗ್ರೂಪ್‌-ಬಿ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಪ್ರಸಕ್ತ ಸಾಲಿನಿಂದ ಕ್ರಮಕೈಗೊಳ್ಳಲಾಗುವುದು. ಕರ್ನಾಟಕ ಈಜು ಅಸೋಸಿಯೇಷನ್‌ ಸಹಭಾಗಿತ್ವದಲ್ಲಿ ರಾಜ್ಯದ ಪ್ರತಿಭಾವಂತ ಈಜು ಕ್ರೀಡಾಪಟುಗಳಿಗೆ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಯಶಸ್ವಿಯಾಗಿ ಭಾಗವಹಿಸಲು ತರಬೇತಿಯನ್ನು ನೀಡುವ ಸಲುವಾಗಿ ಮುಂದಿನ ಐದು ವರ್ಷಗಳವರೆಗೆ ಪ್ರತಿ ವರ್ಷ ಎರಡು ಕೋಟಿ ರೂ.ಗಳ ಅನುದಾನ ಒದಗಿಸಲಾಗುವುದು ಎಂದು ಘೋಷಣೆ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next