Advertisement

Karnataka Budget: ಯುವಜನತೆಯಲ್ಲಿ ಕರ್ನಾಟಕದ ಅರಿವು ಮೂಡಿಸುವ ಯೋಜನೆ

03:23 PM Jul 07, 2023 | Team Udayavani |

ಬೆಂಗಳೂರು: ಮೈಸೂರು ರಾಜ್ಯವು ಕರ್ನಾಟಕ ಎಂದು ಮರುನಾಮಕರಣವಾಗಿ 1ನೇ ನವೆಂಬರ್, 2023ಕ್ಕೆ 50 ವರ್ಷ ಪೂರ್ಣಗೊಳ್ಳಲಿದೆ. ಈ ಶುಭ ಸಂದರ್ಭದಲ್ಲಿ ʻಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡʼ ಎಂಬ ಹೆಸರಿನಲ್ಲಿ ಇಡೀ ವರ್ಷ ಕರ್ನಾಟಕದ ಇತಿಹಾಸ, ಕಲೆ, ಸಾಹಿತ್ಯ, ಸಂಸ್ಕೃತಿ, ಹಾಗೂ ನಾಡು-ನುಡಿಗೆ ಸಂಬಂಧಿಸಿದಂತೆ ಮತ್ತು ಯುವಜನತೆಯಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕದ ಅರಿವು ಮೂಡಿಸುವ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಿದ ಆಯವ್ಯಯದಲ್ಲಿ ಘೋಷಿಸಿದ್ದಾರೆ.

Advertisement

ಕನ್ನಡ ಮತ್ತು ಸಂಸ್ಕೃತಿ
ಒಂದೇ ಒಂದೇ ಒಂದೇ ಕರ್ನಾಟಕವೊಂದೇ,
ಹಿಂದೆ ಮುಂದೆ ಎಂದೆ ಕರ್ನಾಟಕ ಒಂದೇ,
ಜಗದೇಳಿಗೆಯಾಗುವುದಿದೆ ಕರ್ನಾಟಕದಿಂದೆ.
ಡಾ. ದ.ರಾ. ಬೇಂದ್ರೆ ಅವರ ಸಾಲನ್ನು ಸಿಎಂ ಸಿದ್ದರಾಮಯ್ಯ ಉಲ್ಲೇಖಿಸಿದರು.

ಕನ್ನಡ ಸಾಹಿತ್ಯ ಲೋಕಕ್ಕೆ ಸಲ್ಲಿಸಿದ ಅನುಪಮ ಸೇವೆಯನ್ನು ಸ್ಮರಿಸಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ. ಎಂ. ಎಂ. ಕಲಬುರಗಿ ಅವರ ಹೆಸರಿನಲ್ಲಿ ಒಂದು ಟ್ರಸ್ಟ್ ಅನ್ನು ಸ್ಥಾಪಿಸಲಾಗುವುದು. ಖ್ಯಾತ ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಪ್ರತಿಷ್ಠಾನದ ಮೂಲಕ ಅವರ ಸಾಹಿತ್ಯ ಹಾಗೂ ಪರಿಸರ ಸಂರಕ್ಷಣೆಯ ಚಿಂತನೆಗಳನ್ನು ಯುವಜನಾಂಗಕ್ಕೆ ಪರಿಚಯಿಸುವ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಎರಡು ಕೋಟಿ ರೂ. ಗಳನ್ನು ಒದಗಿಸಲಾಗುವುದು ಎಂದು ಘೋಷಿಸಿದರು.

ನಮ್ಮ ರಾಜ್ಯದ ಜಾನಪದ ಕಲೆಗಳನ್ನು ಉಳಿಸಿ ಬೆಳೆಸಲು ಮತ್ತು ಯುವ ಪೀಳಿಗೆಗೆ ಪರಿಚಯಿಸಲು ಪ್ರಮುಖ ಪಾತ್ರವಹಿಸುತ್ತಿರುವ ರಾಮನಗರ ಜಿಲ್ಲೆಯ ಜಾನಪದ ಲೋಕಕ್ಕೆ ಎರಡು ಕೋಟಿ ರೂ. ಅನುದಾನ ನೀಡಲಾಗುವುದು. ಇದೇ ಮಾದರಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಕೊಪ್ಪಳ ಜಿಲ್ಲೆಯಲ್ಲಿ ಜಾನಪದ ಲೋಕ ಸ್ಥಾಪನೆ ಮಾಡಲಾಗುವುದು. ಬಂಜಾರ ಸಮುದಾಯದ ಸಾಂಸ್ಕೃತಿಕ ಮತ್ತು ಜಾನಪದ ನೃತ್ಯ ಕಲೆಗಳು ನಶಿಸಿ ಹೋಗುತ್ತಿರುವ ಕಾರಣ ಅವರ ಸಂಸ್ಕೃತಿಯನ್ನು ಬೆಳೆಸುವ ಹಾಗೂ ಉಳಿಸುವ ನಿಟ್ಟಿನಲ್ಲಿ ವಿನೂತನ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.

ಕರ್ನಾಟಕದ ಬುಡಕಟ್ಟು ಸಮುದಾಯದ ಜನರ ಕಲಾಪ್ರತಿಭೆಯನ್ನು ಪರಿಚಯಿಸುವ ಹಿತದೃಷ್ಟಿಯಿಂದ ಮತ್ತು ಅವರ ಸಂಸ್ಕೃತಿ, ಜಾನಪದ ವೈದ್ಯ ಪದ್ಧತಿ, ಜಾನಪದ ಕಲೆಗಳ ಪ್ರದರ್ಶನ, ಕರಕುಶಲ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವುದಕ್ಕೆ ಉತ್ತೇಜನ ನೀಡಲು ಬುಡಕಟ್ಟು ಜನಾಂಗದ ಕಲಾವಿದರ ಸಮಾವೇಶವನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next