Advertisement

ಚುನಾವಣ ವರ್ಷ ಎಲ್ಲರಿಗೂ ಹರ್ಷ: ಕಾರ್ಮಿಕ ಮಹಿಳೆಯರಿಗೆ ಮಾಸಿಕ 500 ರೂ.

12:23 AM Feb 18, 2023 | Team Udayavani |

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ 2ನೇ ಮತ್ತು ಪ್ರಸಕ್ತ ಸರಕಾರದ ಕೊನೆಯ ಬಜೆಟ್‌ ಅನ್ನು  ಅತ್ಯಂತ ನಾಜೂಕು ಹಾಗೂ ಲೆಕ್ಕಾಚಾರದಿಂದ ಮಂಡಿಸಿದ್ದಾರೆ.ಎಲ್ಲಿಯೂ, ಯಾರಿಗೂ ಹೊರೆ ನೀಡದೆ, ಸರ್ವರನ್ನೂ ಸಂತೃಪ್ತಗೊಳಿಸಲು ಪ್ರಯತ್ನಿಸಿದ್ದಾರೆ. ಅದರಲ್ಲೂ ಕೃಷಿಕರು, ಮಹಿಳೆಯರು, ವಿದ್ಯಾರ್ಥಿಗಳು, ಯುವಕರು ಹಾಗೂ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ.ಹಾಗಂತ ದೇಗುಲ, ಮಠಗಳನ್ನು  ಮರೆತಿಲ್ಲ.  ಎಲ್ಲರನ್ನೂ ಗಮನದಲ್ಲಿಟ್ಟುಕೊಂಡು ಈ ಬಜೆಟ್‌  ಮಂಡಿಸಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಈ ಮುಂಗಡಪತ್ರ ಪ್ರಾಮುಖ್ಯ ಪಡೆದಿದೆ…

Advertisement

ಬೆಂಗಳೂರು: ಚುನಾವಣ ವರ್ಷದಲ್ಲಿ ಜನಪ್ರಿಯ ಯೋಜನೆಗಳ “ಮಾಯಾ ದಂಡ’ವನ್ನು ಯಥೇತ್ಛವಾಗಿ ಬೀಸುವುದಕ್ಕೆ ತುಸು “ಜಿಪುಣತನ’ವನ್ನೇ ತೋರಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿತ್ತೀಯ ಶಿಸ್ತಿನ “ಸೌಷ್ಠವ’ ಪ್ರದರ್ಶನಕ್ಕೆ ತಮ್ಮ ಎರಡನೇ ಬಜೆಟ್‌ನಲ್ಲಿ ಹೆಚ್ಚು ಒತ್ತು ನೀಡಿದ್ದಾರೆ.

2023-24ನೇ ಸಾಲಿಗೆ 3,09,182 ಕೋಟಿ ರೂ. ಗಾತ್ರದ ಆಯವ್ಯಯ ಮಂಡಿಸಿರುವ  ಬೊಮ್ಮಾಯಿ, ಬಜೆಟ್‌ ಪುಸ್ತಕ ದಲ್ಲೂ ಆ ಬಳಿಕ ನಡೆದ ಪತ್ರಿಕಾ ಗೋಷ್ಠಿಯಲ್ಲೂ “ಇದು ರಾಜಸ್ವ ಹೆಚ್ಚುವರಿ’ ಬಜೆಟ್‌ ಎಂದು ಅತ್ಯಂತ ಜತನದಿಂದ ಪ್ರತಿಪಾದಿಸಿ ಕೊಂಡಿದ್ದಾರೆ. ವಿತ್ತೀಯ ಹೊಣೆಗಾರಿಕೆ ಅಧಿನಿಯಮದ ಚೌಕಟ್ಟಿನೊಳಗೆ ಕೋವಿಡ್‌ ಬಳಿಕದ ದುರಿತ ಕಾಲವನ್ನು ಯಶಸ್ವಿಯಾಗಿ ನಿಭಾಯಿಸಿದ್ದೇನೆ ಎಂಬ ಸಂದೇಶ ನೀಡುವ ಪ್ರಯತ್ನ ನಡೆಸಿದ್ದಾರೆ.

ಹೀಗಾಗಿ ಚುನಾವಣ ವರ್ಷವಾಗಿದ್ದರೂ ಜನಪ್ರಿಯ ತೆಯ ಸವಿ ಲೇಪದ ಬದಲು ವಾಸ್ತವದ ಲೆಕ್ಕಾಚಾರಕ್ಕೇ ಅವರು ಆದ್ಯತೆ ನೀಡಿದ್ದಾರೆ. ತನ್ಮೂಲಕ ತಾನೊಬ್ಬ “ಚತುರ ಅರ್ಥ ಶಾಸ್ತ್ರಜ್ಞ’ ಎಂದು ನಿರೂಪಿಸುವುದಕ್ಕೆ ಬೊಮ್ಮಾಯಿ ಹೆಚ್ಚು ಶ್ರಮ ವಹಿಸಿದಂತೆ ತೋರುತ್ತಿದೆ.

ಬಜೆಟ್‌ನಲ್ಲಿ ರೈತರು, ಮಹಿಳೆಯರು ಹಾಗೂ ವಿದ್ಯಾರ್ಥಿ ವರ್ಗವನ್ನು ಗುರಿಯಾಗಿಸಿಕೊಂಡು ಬೊಮ್ಮಾಯಿ ಒಂದಿಷ್ಟು ಮಹತ್ವದ ಘೋಷಣೆ ಮಾಡಿದ್ದಾರೆ. ಹಾಗೆ ನೋಡಿದರೆ ಬೊಮ್ಮಾಯಿ ಅವರ ಬಜೆಟ್‌ ಆದ್ಯತಾ ವಲಯವೇ ಈ ಮೂರು ಕ್ಷೇತ್ರಗಳು ಎಂದು  ವ್ಯಾಖ್ಯಾನಿಸಬಹುದಾಗಿದ್ದು, ಈ ಮೂಲಕ ಹೊಸ ಮತಬ್ಯಾಂಕ್‌ ಸೃಷ್ಟಿಗೆ ಅವರು ಮುಂದಾದಂತೆ ಕಾಣುತ್ತಿದೆ.

Advertisement

ಚುನಾವಣೆ ಇದೆ ಎಂಬ ಕಾರಣಕ್ಕೆ ನಾನು ಬೇಕಾಬಿಟ್ಟಿ ಯೋಜನೆಗಳನ್ನು ಘೋಷಿಸಬಹುದಿತ್ತು.  ಆದರೆ ನಮ್ಮದು ಜವಾಬ್ದಾರಿ ಯುತವಾದ ಪಕ್ಷ ಹಾಗೂ ಸರಕಾರ. ಆರ್ಥಿಕ ಸ್ಥಿತಿಗತಿ ನೋಡಿಕೊಂಡು ಈ ಬಜೆಟ್‌ ಮಾಡಿದ್ದೇವೆ.
-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

ಯಾರಿಗೆ ಏನು?

ರೈತರಿಗೆ “ಭೂಸಿರಿ’, ಜೀವನ ಜ್ಯೋತಿ
ಬಡ್ಡಿ ರಹಿತ ಸಾಲದ ಮೊತ್ತ ರೂ.3ರಿಂದ 5 ಲಕ್ಷ ರೂ.ಕ್ಕೇರಿಕೆ. ಬೀಜ, ಗೊಬ್ಬರ ಖರೀದಿಗೆ “ಭೂಸಿರಿ’  ಯೋಜನೆ ಜಾರಿಗೆ ತಂದು 10,000 ರೂ. ಸಹಾಯ ಧನ ಒದಗಿಸು ವುದು, ಹಾಗೂ 180 ಕೋಟಿ ರೂ. ವೆಚ್ಚದಲ್ಲಿ ಜೀವನ ಜ್ಯೋತಿ ವಿಮಾ ಯೋಜನೆ.  ಬೆಂಬಲ ಬೆಲೆಯಲ್ಲಿ ಕೃಷಿ ಉತ್ಪನ್ನಗಳನ್ನು ಖರೀದಿಸಲು ಆವರ್ತ ನಿಧಿಯನ್ನು 3,500 ಕೋಟಿ ರೂ.ಗೆ ಏರಿಕೆ. ಕೃಷಿ ಜತೆಗೆ ತೋಟಗಾರಿಕೆ, ರೇಷ್ಮೆ ಹಾಗೂ ಹೈನೋದ್ಯಮಕ್ಕೂ ಆದ್ಯತೆ ದೊರೆತಿದೆ.  ಕೃಷಿ ಹಾಗೂ ಕೃಷಿ ಪೂರಕ ಕ್ಷೇತ್ರಕ್ಕೆ 39,031 ಕೋಟಿ ರೂ. ಮೀಸಲು.

ಮಹಿಳೆಯರಿಗೆ ಉದ್ಯೋಗ ತರಬೇತಿ
ಮಹಿಳಾ ಉದ್ದೇಶಿತ ಯೋಜನೆಗಳಿಗಾಗಿ  47,255 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಶ್ರಮಶಕ್ತಿ ಯೋಜನೆಯಡಿ ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಮಾಸಿಕ 500 ರೂ.  ನೀಡುವುದು, ಸಂಘಟಿತ ವಲಯದ ಮಹಿಳಾ ಕಾರ್ಮಿಕರಿಗೆ  ಉಚಿತ ಬಸ್‌ ಪಾಸ್‌, ವಿವಾಹಿತೆಯರಿಗೆ ಆರೋಗ್ಯಪುಷ್ಟಿ, 1 ಲಕ್ಷ ಮಹಿಳೆಯರಿಗೆ ಉದ್ಯೋಗ ತರಬೇತಿ.

ವಿದ್ಯಾ ವಾಹಿನಿ, ವಿದ್ಯಾಶಕ್ತಿ
ಶಾಲಾ ಕಾಲೇಜು ವಿದ್ಯಾರ್ಥಿನಿಯರಿಗೆ ಉಚಿತ ಬಸ್‌ ಪಾಸ್‌ ನೀಡುವ “ವಿದ್ಯಾ ವಾಹಿನಿ’, ಸರಕಾರಿ ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳ ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ಶಿಕ್ಷಣ ನೀಡುವ “ವಿದ್ಯಾಶಕ್ತಿ’, 21 ಲಕ್ಷ ಶಾಲಾ- ಕಾಲೇಜು ವಿದ್ಯಾರ್ಥಿಗಳಿಗಾಗಿ 100 ಕೋಟಿ ರೂ. ವೆಚ್ಚದಲ್ಲಿ ಪ್ರಾರಂಭಿಸುವ “ಶಾಲಾ ಬಸ್‌’, ಶಾಲಾ ಶಿಕ್ಷಣದ ಬಳಿಕ ಐಟಿಐ ತರಬೇತಿ ಪಡೆಯುವ ನಿರುದ್ಯೋಗಿ ಯುವಕರಿಗೆ ಮೂರು ತಿಂಗಳು 1,500 ರೂ. ಶಿಷ್ಯ ವೇತನ, ಪದವಿ ಮುಗಿಸಿ ಮೂರು ವರ್ಷ ಕಳೆದರೂ ಉದ್ಯೋಗ ಸಿಗದ ಯುವಕರಿಗೆ 2,000 ರೂ. ಆರ್ಥಿಕ ನೆರವು.

Advertisement

Udayavani is now on Telegram. Click here to join our channel and stay updated with the latest news.

Next