ಬೆಂಗಳೂರು: ಕೋವಿಡ್ 19 ಸೋಂಕಿನ ಆರ್ಥಿಕ ಸಂಕಷ್ಟದ ನಡುವೆಯೂ 2021-22ನೇ ಸಾಲಿನ ಬಜೆಟ್ ಅನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೋಮವಾರ(ಮಾರ್ಚ್ 08) ಮಂಡಿಸಿದ್ದು, ಈ ವರ್ಷವೂ ಮಠಗಳು, ಜಾತಿವಾರು ನಿಗಮಗಳಿಗೆ ಅನುದಾನ ಘೋಷಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಬಜೆಟ್ 2021: ಪೆಟ್ರೋಲ್, ಡೀಸೆಲ್ ಹಾಗೂ ಅಬಕಾರಿ ತೆರಿಗೆ ಹೆಚ್ಚಳ ಇಲ್ಲ
ವೀರಶೈವ ಲಿಂಗಾಯತ ಅಭಿವೃದ್ಧಿಗೆ 500 ಕೋಟಿ ರೂಪಾಯಿ, ಒಕ್ಕಲಿಗ ಅಭಿವೃದ್ಧಿ ನಿಗಮಕ್ಕೆ 500 ಕೋಟಿ ರೂಪಾಯಿ, ಹಿಂದುಳಿದ ವರ್ಗಗಳ ಅಭಿವೃದ್ಧಿಗೆ 500 ಕೋಟಿ ರೂಪಾಯಿ, ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ 50 ಕೋಟಿ ರೂಪಾಯಿ ಅನುದಾನ ಘೋಷಿಸಲಾಗಿದೆ.
ಆದಿಚುಂಚನಗಿರಿ ನಾಥ ಪರಂಪರೆ ಮಠಕ್ಕೆ 10 ಕೋಟಿ ರೂಪಾಯಿ ಅನುದಾನ, ಅಯೋಧ್ಯೆಯ ಶ್ರೀರಾಮಜನ್ಮಭೂಮಿಯಲ್ಲಿ ಕರ್ನಾಟಕದ ಯಾತ್ರಿ ನಿವಾಸ ನಿರ್ಮಾಣಕ್ಕೆ 10 ಕೋಟಿ ರೂಪಾಯಿ ಅನುದಾನವನ್ನು ಬಿಎಸ್ ವೈ ಬಜೆಟ್ ನಲ್ಲಿ ಘೋಷಿಸಿದ್ದಾರೆ.
ಅಲ್ಪಸಂಖ್ಯಾತರಿಗೆ ಅನುದಾನ:
ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗೆ 200 ಕೋಟಿ ರೂಪಾಯಿ, ಅಲ್ಪಸಂಖ್ಯಾತ ಸಮುದಾಯಗಳ ವಿವಿಧ ಕಲ್ಯಾಣ ಅಭಿವೃದ್ಧಿಗಾಗಿ 1,500 ಕೋಟಿ ರೂಪಾಯಿ ಅನುದಾನ ಮೀಸಲಿಟ್ಟಿರುವುದಾಗಿ ಬಿಎಸ್ ವೈ ತಿಳಿಸಿದ್ದಾರೆ.
2021ನೇ ಸಾಲಿನ ಬಜೆಟ್ ಮಂಡನೆಗೂ ಮುನ್ನ ಬಿಎಸ್ ಯಡಿಯೂರಪ್ಪನವರು ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ, ಸಚಿವ ಸಂಪುಟದಲ್ಲಿ ಬಜೆಟ್ ಅನುಮೋದನೆಗೆ ಅಂಗೀಕಾರ ಪಡೆದು ವಿಧಾನಸೌಧಕ್ಕೆ ಆಗಮಿಸಿದ್ದರು.