Advertisement

ಕಮಲ ಪಡೆ ರಣಕಹಳೆ; ಕಾಂಗ್ರೆಸ್‌ ವಿರುದ್ಧ ಬೊಮ್ಮಾಯಿ, ಯಡಿಯೂರಪ್ಪ ವಾಗ್ಧಾಳಿ

01:14 AM Oct 12, 2022 | Team Udayavani |

ರಾಯಚೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲುವ ಆತ್ಮವಿಶ್ವಾಸದೊಂದಿಗೆ ರಾಜ್ಯದ ಕಮಲಪಡೆ ನಾಯಕರು ಬಿಸಿಲೂರು ರಾಯಚೂರಿನಲ್ಲಿ ಮಂಗಳವಾರ ರಣಕಹಳೆ ಮೊಳಗಿಸಿದರು. ಜನಸಂಕಲ್ಪ ಯಾತ್ರೆಗೆ ಚಾಲನೆ ನೀಡಿದ ನಾಯಕರು ಕಾಂಗ್ರೆಸ್‌ ವಿರುದ್ಧ ವಾಗ್ಧಾಳಿ ನಡೆಸಿದರು.

Advertisement

ಗಿಲ್ಲೆಸೂಗೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಯಾತ್ರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಜಂಟಿಯಾಗಿ ಚಾಲನೆ ನೀಡಿ ಚುನಾವಣೆ ಪ್ರಚಾರಕ್ಕೆ ಶ್ರೀಕಾರ ಹಾಡಿದರು.

ಕಾಂಗ್ರೆಸ್‌ನ ಜೋಡೋ ಯಾತ್ರೆಯ ವಿರುದ್ಧ ಟೀಕಾ ಪ್ರಹಾರ ನಡೆಸಿದ ಸಿಎಂ ಬಸವರಾಜ ಬೊಮ್ಮಾಯಿ, “ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅಸ್ತಿತ್ವ ಉಳಿಸಿ ಕೊಳ್ಳಲು ಭಾರತ್‌ ಜೋಡೋ ಯಾತ್ರೆ ಮಾಡುತ್ತಿದ್ದಾರೆ. ಅಂಥ ಯಾತ್ರೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯನಂಥ ನಾಯಕರು ಸೂತ್ರದ ಬೊಂಬೆಯಂತೆ ವರ್ತಿಸುತ್ತಿರುವುದು ನಾಚಿಕೆಗೇಡು’ ಎಂದರು.

ಸಿದ್ದರಾಮಯ್ಯ ಸಮಾಜವಾದಿ ಸಿದ್ಧಾಂತ ವನ್ನು ಕಾಂಗ್ರೆಸ್‌ ಸೇರುವಾಗಲೇ ಮಡಚಿ ಮನೆ ಯಲ್ಲಿಟ್ಟಿದ್ದಾರೆ. ಸಣ್ಣ ಹುಡುಗನ ಕೈಕೆಳಗೆ ಸೇವೆ ಮಾಡುವಂಥ ಹೀನಾಯ ಸ್ಥಿತಿಗೆ ಅವರು ಹೋಗಿರುವುದು ದುಃಖದ
ಸಂಗತಿ. ಅಧಿಕಾರಕ್ಕಾಗಿ ಏನಾದರೂ ಮಾಡಲು ಸಿದ್ಧರಾಗಿರುವ ಸಿದ್ದರಾಮಯ್ಯ, ರಾಹುಲ್‌ ಗಾಂಧಿ ಓಡು ಎಂದರೆ ಓಡುತ್ತಾರೆ, ಕುಳಿತುಕೋ ಎಂದರೆ ಕುಳಿತುಕೊಳ್ಳುತ್ತಾರೆ. ಇದು ಸ್ವಾಭಿಮಾನದ ಸಂಕೇತವೇ ಎಂದು ಪ್ರಶ್ನಿಸಿದರು.

ನಿಮ್ಮಿಂದ ನಾವು ಪಾಠ ಕಲಿಯಬೇಕಿಲ್ಲ. ಕಾಂಗ್ರೆಸ್‌ ಮುಳುಗುತ್ತಿರುವ ಹಡಗು. ಅಲ್ಲಿರುವವರು ನಮ್ಮ ಸಂಪರ್ಕದಲ್ಲಿದ್ದು, ಶೀಘ್ರವೇ ಭಾರೀ ಬದಲಾವಣೆಗಳಾಗಲಿವೆ. ಕಾಂಗ್ರೆಸ್‌ ನಾಯಕರು ಹೇಳುವ ಅಹಿಂದದಲ್ಲಿ ಹಿಂದುಳಿದವರು, ದೀನ ದಲಿತರು ಬಿಟ್ಟುಹೋಗಿದ್ದಾರೆ. ಈಗ ಅಲ್ಪಸಂಖ್ಯಾಕರು ಮಾತ್ರ ಉಳಿದಿದ್ದಾರೆ ಎಂದರು.
ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮೀಸಲಾತಿ ಹೆಚ್ಚಿಸಿದ ಬಗ್ಗೆಯೂ ಪ್ರಸ್ತಾವಿಸಿದ ಬೊಮ್ಮಾಯಿ, ಇದನ್ನು ಟೀಕಿಸುವವರು ಎಸ್ಸಿ-ಎಸ್ಟಿ ವಿರೋಧಿಗಳು ಎಂದು ಕಾಂಗ್ರೆಸ್‌ಗೆ ಟಾಂಗ್‌ ನೀಡಿದರು.

Advertisement

ಈ ಮಧ್ಯೆ, ಬುಧವಾರ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಜನಸಂಕಲ್ಪ ಯಾತ್ರೆ ನಡೆಯಲಿದ್ದು, ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಸೇರಿದಂತೆ ಹಲವು ನಾಯಕರು ಭಾಗಿಯಾಗುವರು.

ಹಗರಣ ಬಯಲಿಗೆ
ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಮಾತನಾಡಿ, ಸಿದ್ದರಾಮಯ್ಯ ಅವರ ಸಿಎಂ ಕುರ್ಚಿ ಕನಸು ಎಂದಿಗೂ ನನಸಾಗುವುದಿಲ್ಲ. ನಿಮ್ಮ ಅ ಧಿಕಾರವಧಿ ಯಲ್ಲಿ ಏನೆಲ್ಲ ಅಕ್ರಮಗಳನ್ನು ಮಾಡಿದ್ದೀರಿ ಎಂಬುದು ಗೊತ್ತಿದೆ. ವಿಧಾನ ಮಂಡಲ ಅ ಧಿವೇಶನದಲ್ಲಿ ಎಲ್ಲ ಹಗರಣ ಬಯಲಿಗೆಳೆಯುತ್ತೇವೆ ಎಂದು ಅವರು ಗುಡುಗಿದರು.
ಎಂಟು ವರ್ಷದಿಂದ ಒಂದೇ ಒಂದು ಕಪ್ಪುಚುಕ್ಕೆ ಇಲ್ಲದೇ ಕೆಲಸ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ರಾಹುಲ್‌ ಗಾಂಧಿ ಯಂಥ ಬಚ್ಚಾ ಟೀಕಿಸುತ್ತಾರಾ? ಎಂದು ಬಿಎಸ್‌ವೈ ಪ್ರಶ್ನಿಸಿದರು.

ನ್ಯಾಶನಲ್‌ ಹೆರಾಲ್ಡ್‌ ಹಗರಣದಲ್ಲಿ ಜಾಮೀನು ಮೇಲೆ ಹೊರಗಿರುವ ರಾಹುಲ್‌ ಗಾಂಧಿ , ಸೋನಿಯಾ ಗಾಂ ಧಿ ಅವರಿಗೆ ಮೋದಿಯನ್ನು ಟೀಕಿಸುವ ನೈತಿಕತೆ ಇದೆಯೇ? ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ ತಲೆತಿರುಕರಂತೆ ಮಾತನಾಡು ತ್ತಾರೆ. ರಾಯರ ಈ ಪುಣ್ಯನೆಲದಲ್ಲಿ ಆಣೆ ಮಾಡಿ ಹೇಳುವೆ ಬಿಜೆಪಿ ಈ ಬಾರಿ 150 ಸ್ಥಾನ ಗೆಲ್ಲುವುದು ನಿಶ್ಚಿತ. ಇದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಬಿಎಸ್‌ ಯಡಿಯೂರಪ್ಪ ಹೇಳಿದರು.

ರಾಯಚೂರಿಗೆ ಏಮ್ಸ್‌ ಖಚಿತ
ರಾಯಚೂರು ಜಿಲ್ಲೆಯ ಏಳು ಸ್ಥಾನಗಳ ಪೈಕಿ ಐದರಲ್ಲಿ ಬಿಜೆಪಿಯನ್ನು ಗೆಲ್ಲಿಸಿ. ಏಮ್ಸ್‌ ಸ್ಥಾಪಿಸಲು ಸಿಎಂಗೆ ಮನವಿ ಮಾಡುವುದಾಗಿ ಮಾಜಿ ಸಿಎಂ ಬಿಎಸ್‌ವೈ ಭರವಸೆ ಕೊಟ್ಟರು. ಬಳಿಕ ಮಾತನಾಡಿದ ಸಿಎಂ ಬೊಮ್ಮಾಯಿ, ರಾಯಚೂರು ಜಿಲ್ಲೆಗೆ ಏಮ್ಸ್‌ ಮಂಜೂರು ಮಾಡಿಸುವ ಸಂಬಂಧ ಒಂದು ವಾರದಲ್ಲಿ ಕೇಂದ್ರ ಸರಕಾರದೊಂದಿಗೆ ಚರ್ಚಿಸುವುದಾಗಿ ಹೇಳಿದರು. ಅದಕ್ಕೂ ಮುನ್ನ ಮಾತನಾಡಿದ ಶಾಸಕ ಕೆ.ಶಿವನಗೌಡ ನಾಯಕ, ನನಗೆ ಯಾವುದೇ ಅ ಧಿಕಾರ ನೀಡದಿದ್ದರೂ ಪರವಾಗಿಲ್ಲ. ಜಿಲ್ಲೆಗೆ ಏಮ್ಸ್‌ ಕೊಡಿ ಎಂದು ಕೋರಿದರು.

ಆರೆಸ್ಸೆಸ್‌ ಒಂದು ದೇಶಭಕ್ತಿಯ ಸಂಸ್ಥೆ. ದೇಶ ಒಗ್ಗೂಡಿಸಿ, ಕಟ್ಟಲು ಶ್ರಮಿಸಿದ, ದೀನ ದಲಿತರ ಸೇವೆ, ಅನಾಥರ ಸೇವೆ ಮಾಡಿ, ತಳ ಸಮುದಾಯಕ್ಕೆ ಧ್ವನಿ ಕೊಟ್ಟು ಮುಖ್ಯವಾಹಿನಿಗೆ ತಂದ ಶ್ರೇಷ್ಠ ಸಂಸ್ಥೆ. ಆರೆಸ್ಸೆಸ್‌ ಬಗ್ಗೆ ಮಾತನಾಡುವ ನೈತಿಕ ಹಕ್ಕು ಕಾಂಗ್ರೆಸ್‌ಗಿಲ್ಲ.
– ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next