ದಾವಣಗೆರೆ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾಯ್ದೆ ರದ್ಧುಪಡಿಸುವುದು ಒಳಗೊಂಡಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಭಾರತ್ ಬಂದ್‌ಗೆ ಬೆಂಬಲವಾಗಿ ಸೆ.27 ರಂದು ಕರ್ನಾಟಕ ಬಂದ್ ನಡೆಸಲಾಗುವುದು ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರಿಗೆ ಮರಣ ಶಾಸನವಾಗಿರುವ ಮೂರು ಕೃಷಿ ಕಾಯ್ದೆ ರದ್ದುಪಡಿಸಬೇಕು. ಕನಿಷ್ಠ ಬೆಂಬಲ ಬೆಲೆ ಯೋಜನೆಗೆ ಕಾನೂನು ಮಾನ್ಯತೆ, ವಿದ್ಯುತ್ ಖಾಸಗೀಕರಣಕ್ಕೆ ತಡೆ, ಕಬ್ಬಿಗೆ ನಿಗದಿಪಡಿಸಿರುವ ಎಫ್ ಆರ್‌ಪಿ ದರ ಪುನರ್ ಪರಿಶೀಲನೆ ಒಳಗೊಂಡಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಶಾಂತಿಯುತವಾಗಿ ಕರ್ನಾಟಕ ಬಂದ್ ಮಾಡಲಾಗುವುದು ಎಂದರು.
ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿ ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ 500ಕ್ಕೂ ಹೆಚ್ಚು ರೈತ ಸಂಘಟನೆಗಳು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿವೆ. 600ಕ್ಕೂ ಹೆಚ್ಚು ರೈತರು ಹುತಾತ್ಮರಾಗಿದ್ದಾರೆ. ಕೇಂದ್ರ ಸರ್ಕಾರ ರೈತರೊಂದಿಗೆ ಮಾತುಕತೆ ನಡೆಸುವ ಸೌಜನ್ಯವನ್ನೂ ತೋರುತ್ತಿಲ್ಲ ಎಂದು ದೂರಿದರು. ದೇಶದ ಅನ್ನದಾತರು ನಡೆಸುತ್ತಿರುವ ಹೋರಾಟ ನ. 22ಕ್ಕೆ ಒಂದು ವರ್ಷವಾಗುತ್ತಿದೆ. ಹೋರಾಟವನ್ನ ಇನ್ನೂ ಹೆಚ್ಚು ತೀವ್ರಗೊಳಿಸುವ ಉದ್ದೇಶದಿಂದ ಭಾರತ್ ಬಂದ್ ನಡೆಸಲಾಗುವುದು. ಸರ್ಕಾರ ಭಾರತ್ ಬಂದ್ ಗೂ ಸ್ಪಂದಿಸದೇ ಇದ್ದಲ್ಲಿ ನ. 26 ರಂದು ದೆಹಲಿಯಲ್ಲಿ ಕೋಟಿ ರೈತರ ಸಮಾವೇಶ ನಡೆಸಲಾಗುವುದು ಎಂದು ತಿಳಿಸಿದರು. ಕೇಂದ್ರ ಸರ್ಕಾರ ಪ್ರತಿ ಕ್ವಿಂಟಲ್ ಕಬ್ಬಿಗೆ 5 ರೂಪಾಯಿ ಹೆಚ್ಚಿಸಿದೆ. ಎರಡು ವರ್ಷಗಳ ನಂತರ 5 ರೂಪಾಯಿ ಹೆಚ್ಚಿಸುವಂತಹ ನಿರ್ಧಾರ ಮಾಡಿದೆ. ಸರ್ಕಾರ ಕಬ್ಬಿಗೆ ನಿಗದಿಪಡಿಸಿರುವ ಎಫ್‌ಆರ್‌ಪಿ ದರ ಪುನರ್ ಪರಿಶೀಲನೆ ಮಾಡಬೇಕು. ಇಲ್ಲವಾದಲ್ಲಿ ಸರ್ಕಾರ ನೀಡಿರುವ 5 ರೂಪಾಯಿ ನಮಗೆ ಬೇಡ. ನಾವೇ ಸರ್ಕಾರಕ್ಕೆ 50 ರೂಪಾಯಿ ಕೊಡುತ್ತೇವೆ ಎಂಬ ಘೋಷಣೆಯೊಂದಿಗೆ ಅ. 5 ರಂದು ವಿಧಾನ ಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.
ಪ್ರಧಾನಿ ನರೇಂದ್ರ ಮೋದಿಯವರು 2022ಕ್ಕೆ ರೈತರ ಆದಾಯ ದ್ವಿಗುಣ ಮಾಡಲಾಗುವುದು ಎಂದು ಹೇಳಿದ್ದಾರೆ. ಇನ್ನೂ ಮೂರು ತಿಂಗಳು ಮಾತ್ರ ಕಾಲಾವಕಾಶ ಇದೆ. ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಈಗ ಯೋಜನೆ ರೂಪಿಸಲಾಗುತ್ತಿದೆ ಎನ್ನುತ್ತಿದ್ದಾರೆ. ಇದೆಲ್ಲವೂ ರೈತರ ಕಣ್ಣೊರೆಸುವ ತಂತ್ರ ಎಂದು ಟàಕಿಸಿದರು. ವೀರನಗೌಡ ಪಾಟೀಲ್, ಪತ್ರಹಳ್ಳಿ ದೇವರಾಜ್, ಅಂಜಿನಪ್ಪ ಪೂಜಾರ್, ಹನುಮೇಗೌಡ, ಶಂಕರ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.
ಶಾಂತಿಯುತ ಬಂದ್
ಸೆ.27ರ ಭಾರತ್ ಬಂದ್ ಹಿನ್ನೆಲೆಯಲ್ಲಿ ದಾವಣಗೆರೆ ಬಂದ್ ನಡೆಸುವ ಕುರಿತಂತೆ ರೈತ ಸಂಘ, ಕನ್ನಡ, ಪ್ರಗತಿಪರ ಸಂಘಟನೆಗಳೊಡನೆ ಚರ್ಚಿಸಿ, ರೂಪುರೇಷೆ ಸಿದ್ಧಪಡಿಸಲಾಗುವುದು. ಬಂದ್ ಶಾಂತಿಯುತವಾಗಿರಲಿದೆ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯ ಉಪಾಧ್ಯಕ್ಷ ತೇಜಸ್ವಿ ಪಟೇಲ್ ತಿಳಿಸಿದರು. ಕೇಂದ್ರ ಸರ್ಕಾರಕ್ಕೆ ಕಾಯ್ದೆಗಳ ಬಗ್ಗೆ ಖಾತರಿ ಇದ್ದಲ್ಲಿ ಜಿಲ್ಲಾವಾರು ರೈತರೊಂದಿಗೆ ಸಂವಾದ ಸಭೆ ನಡೆಸಿ ಅನುಕೂಲಗಳ ಬಗ್ಗೆ ಮಾಹಿತಿ ನೀಡಲಿ. ನಾವು ರೈತರು ಕಾಯ್ದೆಗಳ ಅನಾನುಕೂಲಗಳ ಬಗ್ಗೆ ಸರ್ಕಾರಕ್ಕೆ ತಿಳಿಸುತ್ತೇವೆ. ಸರ್ಕಾರಕ್ಕೆ ರೈತರನ್ನು ಎದುರಿಸುವ ಶಕ್ತಿಯೇ ಇಲ್ಲ. ಒಂದೊಮ್ಮೆ ರೈತರ ಹೋರಾಟ ಪ್ರಾಯೋಜಕತ್ವದ್ದಾಗಿದ್ದರೆ ಕೃಷಿ ಸಚಿವರು ಯಾವ ಕಾರಣಕ್ಕೆ ಸಭೆ ನಡೆಸುತ್ತಿದ್ದರು, ಸರ್ಕಾರ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ತಾಕೀತು ಮಾಡಿದರು.