Advertisement

ಪ್ರತಿಷ್ಠೆಗೆ ಅಧಿವೇಶನ ಬಲಿ; ಆಡಳಿತ; ವಿಪಕ್ಷಗಳ ಹಠ; ಐದು ದಿನಗಳಿಂದ ಕಲಾಪ ವ್ಯರ್ಥ

02:05 AM Feb 21, 2022 | Team Udayavani |

ಬೆಂಗಳೂರು: ಆಡಳಿತ ಮತ್ತು ವಿಪಕ್ಷಗಳ ಪ್ರತಿಷ್ಠೆಯ ತಿಕ್ಕಾಟದ ನಡುವೆ ರಾಜ್ಯ ವಿಧಾನಮಂಡಲದ ಜಂಟಿ ಅಧಿ ವೇಶನದ ಕಲಾಪಗಳು ಆಹುತಿಯಾಗುತ್ತಿವೆ. ಐದು ದಿನಗಳಿಂದ ಸದನದ ಕಾರ್ಯ ಕಲಾಪ ನಡೆಯದಿರುವುದು ರಾಜ್ಯದ ಜನರ ಅಸಮಾಧಾನಕ್ಕೆ ಕಾರಣವಾಗಿದೆ.

Advertisement

ರಾಜ್ಯದ ಇತಿಹಾಸದಲ್ಲಿ ಹಲವು ಬಾರಿ ವಿಪಕ್ಷಗಳು ಆಡಳಿತ ಪಕ್ಷದ ವಿರುದ್ಧ ಅಹೋ ರಾತ್ರಿ ಧರಣಿ ನಡೆಸಿವೆ. ಈ ಬಾರಿಯೂ ರಾಜಕೀಯ ಪಕ್ಷಗಳ ಪ್ರತಿಷ್ಠೆಯಿಂದಾಗಿ ಮಹತ್ವದ ಕಲಾಪ ಬಲಿಯಾಗಿ ಸಾರ್ವ ಜನಿಕರ ತೆರಿಗೆ ಹಣಪೋಲಾಗುತ್ತಿರುವುದು ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ.

ಸಚಿವ ಈಶ್ವರಪ್ಪ ರಾಷ್ಟ್ರಧ್ವಜದ ಕುರಿತು ನೀಡಿರುವ ಹೇಳಿಕೆಗಾಗಿ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಿ ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸುವಂತೆ ಆಗ್ರಹಿಸಿ ಕಾಂಗ್ರೆಸ್‌ ಅಹೋರಾತ್ರಿ ಧರಣಿ ನಡೆಸುತ್ತಿದೆ. ಆದರೆ ಯಾವುದೇ ಕಾರಣಕ್ಕೂ ಈಶ್ವರಪ್ಪ ಅವರ ರಾಜೀನಾಮೆ ಪಡೆಯುವುದಿಲ್ಲ ಎಂದು ಬಿಜೆಪಿ ಪಟ್ಟು ಹಿಡಿದಿದೆ.

ಆಡಳಿತ ಮತ್ತು ವಿಪಕ್ಷಗಳ ಪ್ರತಿಷ್ಠೆ ಮಹತ್ವದ ವಿಧಾನಮಂಡಲದ ಕಲಾಪ ವನ್ನೇ ಬಲಿ ಪಡೆಯುತ್ತಿದೆ. ಜ್ವಲಂತ ಸಮಸ್ಯೆಗಳಾದ ರೈತರ ಬೆಳೆಗಳಿಗೆ ಸರಿ ಯಾದ ಬೆಲೆ ಸಿಗದಿರುವುದು, ಪ್ರವಾಹ ದಿಂದ ಆಗಿರುವ ಬೆಳೆಹಾನಿಗೆ ಸೂಕ್ತ ಪರಿಹಾರ ದೊರೆಯದಿರುವುದು, ಹಿಜಾಬ್‌ ಗೊಂದಲದಿಂದಾಗಿ ಶಾಲೆ ಕಾಲೇಜುಗಳು ನಡೆಯದಿರುವುದರ ಸಹಿತ ಶಾಸಕರು ಸಮಸ್ಯೆಗಳ ಕುರಿತು ಚರ್ಚಿಸಬೇಕಿದೆ.

ಇಂದು ಬಿಜೆಪಿ ಪ್ರತಿತಂತ್ರ
ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್‌ ಸೋಮವಾರ ಎಲ್ಲ ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಿದೆ. ಸೋಮವಾರವೂ ಅದು ಧರಣಿ ವಾಪಸ್‌ ಪಡೆಯದಿದ್ದರೆ, ಸರಕಾರ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡುವ ಸಾಧ್ಯತೆ ಇದೆ. ಧರಣಿಗೆ ಪ್ರತಿತಂತ್ರ ಸಂಬಂಧ ಸೋಮವಾರ ಬೆಳಗ್ಗೆ ಬಿಜೆಪಿ ನಾಯಕರ ಸಭೆ ನಡೆಯಲಿದೆ.

Advertisement

ಇಂದು ಜೆಡಿಎಸ್‌ ಧರಣಿ
ಸುಗಮ ಕಲಾಪಕ್ಕೆ ಕಾಂಗ್ರೆಸ್‌-ಬಿಜೆಪಿ ಎರಡೂ ಅಡ್ಡಿಪಡಿಸುತ್ತಿವೆ ಎಂದು ಆರೋಪಿಸಿ ಜೆಡಿಎಸ್‌ ಸದನದ ಹೊರಗೆ ಸೋಮವಾರ ಧರಣಿ ನಡೆಸಲು ನಿರ್ಧರಿಸಿದೆ.

ಇದನ್ನೂ ಓದಿ:ಇತಿಮಿತಿಯಲ್ಲಿ ಬಜೆಟ್‌ ಮಂಡನೆ: ಸಿಎಂ ಬೊಮ್ಮಾಯಿ

ಸ್ಪೀಕರ್‌ ದೃಢ
ನಿರ್ಧಾರ ಕೈಗೊಳ್ಳಲಿ
ಶಾಸನಸಭೆಗಳಲ್ಲಿ ಚರ್ಚೆ, ಸಂವಾದಗಳು ನಡೆಯಬೇಕು. ಯಾವುದೇ ಸಮಸ್ಯೆಯಿದ್ದರೂ ಆಡಳಿತ ಮತ್ತು ವಿಪಕ್ಷಗಳು ಚರ್ಚಿಸಿ ಬಗೆಹರಿಸಿಕೊಳ್ಳ ಬೇಕು. ಇಲ್ಲಿ ಇತ್ತಂಡಗಳಿಗೂ ಪ್ರತಿಷ್ಠೆಯೇ ಮುಖ್ಯವಾಗಿದೆ. ಸ್ಪೀಕರ್‌ ದೃಢ ನಿಲುವು ತೆಗೆದುಕೊಳ್ಳಬೇಕು. ಹಲವು ಬಾರಿ ಪ್ರತಿಭಟನೆಗಳು ನಡೆದಿವೆ. ಚರ್ಚೆಗೆ ಅವಕಾಶ ನೀಡದವರನ್ನು ಅಮಾನತು ಮಾಡಿರುವ ಉದಾ ಹರಣೆಗಳೂ ಇವೆ. ಸುಗಮ ಕಲಾಪ ನಡೆ ಸಲು ದಿಟ್ಟ ನಿರ್ಧಾರದ ಅಗತ್ಯವಿದೆ.
– ಬಿ.ಎಲ್‌. ಶಂಕರ್‌, ಮಾಜಿ ಸಭಾಪತಿ

ಪ್ರತಿಷ್ಠೆಯೇ ಮುಖ್ಯವಾಗಬಾರದು
ಈಗಿನ ವಿಚಾರದಲ್ಲಿ ಅಹೋರಾತ್ರಿ ಧರಣಿ ಸರಿಯಲ್ಲ. ಎರಡೂ ಪಕ್ಷಗಳು ಗಂಭೀರವಾಗಿ ಚರ್ಚಿಸಬೇಕು. ಜನರ ಸಮಸ್ಯೆ ಬಗ್ಗೆ ಆದ್ಯತೆ ನೀಡಬೇಕು. ಈಶ್ವರಪ್ಪ ಅವರ “ನೂರು ಮುನ್ನೂರು ವರ್ಷಗಳ ಅನಂತರ ರಾಷ್ಟ್ರಧ್ವಜ ಹಾರಬಹುದು’ ಎಂಬ ಹೇಳಿಕೆಯಿಂದ ಜನರ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ. ಸರಕಾರ ಸಾಕಷ್ಟು ತಪ್ಪುಗಳನ್ನು ಮಾಡಿರುತ್ತದೆ. ವಿಪಕ್ಷ ಅಂಥ ತಪ್ಪುಗಳನ್ನು ಎತ್ತಿ ತೋರಿಸುವ ಕೆಲಸ ಮಾಡಬೇಕು. ಇಲ್ಲಿ ಪ್ರತಿಷ್ಠೆ ಮುಖ್ಯವಾಗಬಾರದು. ಜನರ ಸಮಸ್ಯೆಗೆ ಸದನದಲ್ಲಿ ಸ್ಪಂದನೆ ಸಿಗಬೇಕು.
-ಡಿ.ಎಚ್‌. ಶಂಕರ ಮೂರ್ತಿ, ಮಾಜಿ ಸಭಾಪತಿ

ಅಹೋರಾತ್ರಿ ಧರಣಿಗೆ ಪರಿಹಾರ ಮಾರ್ಗೋಪಾಯ ಸ್ಪೀಕರ್‌ ಬಳಿ ಇತ್ತು. ಚೆಂಡು ಅವರ ಅಂಗಳದಲ್ಲಿ ಇರುವಾಗ ವಿವೇಚನೆ ಮತ್ತು ಸೂಕ್ಷ್ಮತೆಯಿಂದ ವಿವಾದವನ್ನು ಸದನದೊಳಗೆ ಬಗೆಹರಿಸಿಕೊಳ್ಳಬಹುದಿತ್ತು. ಸಿದ್ದರಾಮಯ್ಯ ನಿಯಮ 60ರಡಿ ಮಂಡಿಸಿದ ನಿಲುವಳಿ ಸೂಚನೆ ಮೇಲೆ ಪ್ರಾಥಮಿಕ ವಿಷಯ ಮಂಡನೆಗೆ ಅವಕಾಶ ಕೊಟ್ಟು, ಅದನ್ನು ನಿಯಮ 69ಕ್ಕೆ ಪರಿವರ್ತಿಸಿ ಎರಡೂ ಕಡೆಯವರಿಗೆ ಚರ್ಚೆಗೆ ಅವಕಾಶ ಒದಗಿಸಿ, ಯಾವುದಾದರೂ ತೀರ್ಮಾನಕ್ಕೆ ಬರಬೇಕಿತ್ತು. ಕಾಂಗ್ರೆಸ್‌-ಬಿಜೆಪಿ ಎರಡೂ ಪಕ್ಷಗಳು ಪ್ರತಿಷ್ಠೆಗೆ ಬಿದ್ದಿವೆ. ಸೋಮವಾರ ಸ್ಪೀಕರ್‌ ಕಲಾಪ ಸಲಹಾ ಸಮಿತಿಯ ಸಭೆ ಕರೆದು ತೀರ್ಮಾನ ತೆಗೆದುಕೊಳ್ಳಬೇಕು.
-ವೈಎಸ್‌ವಿ ದತ್ತಾ, ಜೆಡಿಎಸ್‌ ಮುಖಂಡ

Advertisement

Udayavani is now on Telegram. Click here to join our channel and stay updated with the latest news.

Next