Advertisement

ಬಲ ಆಧರಿಸಿ ಕಮಲ ಟಿಕೆಟ್‌

06:00 AM Apr 10, 2018 | |

ಬೆಂಗಳೂರು: ಅಳೆದು ಸುರಿದು ವಿವಿಧ ಲೆಕ್ಕಾಚಾರಗಳೊಂದಿಗೆ ಬಿಡುಗಡೆ ಮಾಡಿರುವ ಬಿಜೆಪಿಯ ಮೊದಲ ಪಟ್ಟಿಯನ್ನು ಜಾತಿ ಬಲ, ಸಂಪನ್ಮೂಲ ಸಂಗ್ರಹ ಸಾಮರ್ಥ್ಯ, ವೈಯಕ್ತಿಕ ವರ್ಚಸ್ಸು ಆಧಾರದ ಮೇಲೆ ಸಿದ್ಧಪಡಿಸಲಾಗಿದೆ.

Advertisement

ಪ್ರಮುಖವಾಗಿ ನಾಯಕ ಸಮುದಾಯದ ಶ್ರೀರಾಮುಲು, ಈಡಿಗ ಸಮುದಾಯದ ಮಾಲಿಕಯ್ಯ ಗುತ್ತೆದಾರ್‌, ಒಕ್ಕಲಿಗ‌ ಸಮುದಾಯದ ಸಿ.ಪಿ.ಯೋಗೇಶ್ವರ್‌ ಜತೆಗೆ ಬಿಜೆಪಿಯ ಸಾಂಪ್ರದಾಯಿಕ ಮತಬ್ಯಾಂಕ್‌ ಲಿಂಗಾಯತ ವರ್ಚಸ್ವಿ ನಾಯಕರಿಗೆ ಮೊದಲ ಪಟ್ಟಿಯಲ್ಲೇ ಅವಕಾಶ ಮಾಡಿಕೊಟ್ಟಿರುವುದು “ಕಾರ್ಯತಂತ್ರ’ದ ಭಾಗ ಎನ್ನಲಾಗಿದೆ.

ರಾಜ್ಯದಲ್ಲಿರುವ 15 ಎಸ್‌ಟಿ ಮೀಸಲು ಕ್ಷೇತ್ರಗಳಲ್ಲಿ ಸಿಂಹಪಾಲು ಪಡೆಯಲು ಶ್ರೀರಾಮುಲು ಅವರಿಗೆ ವಿಧಾನಸಭೆ ಚುನಾವಣೆಗೆ ಟಿಕೆಟ್‌ ನೀಡಲಾಗಿದೆ. ಬಳ್ಳಾರಿಯಲ್ಲಿ ಹೇಗೂ ಬಿಜೆಪಿ ಗಟ್ಟಿಯಾಗಿರುವುದರಿಂದ ಚಿತ್ರದುರ್ಗದಲ್ಲಿ ಪಕ್ಷದ ಬಲಪಡಿಸಲು ಶ್ರೀರಾಮುಲುಗೆ ಮೊಳಕಾಳೂ¾ರು ಕ್ಷೇತ್ರದ ಟಿಕೆಟ್‌ ನೀಡಲಾಗಿದೆ. ಆ ಜಿಲ್ಲೆಯಲ್ಲಿರುವ ನಾಯಕ ಸಮುದಾಯದವನ್ನು ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯತ್ತ ಸೆಳೆಯುವುದು ಜತೆಗೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಆ ಕ್ಷೇತ್ರ ವಾಪಸ್‌ ತೆಕ್ಕೆಗೆ ತೆಗೆದುಕೊಳ್ಳುವುದು ಲೆಕ್ಕಾಚಾರವಾಗಿದೆ.

ಯಾದವ ಸಮುದಾಯದ ಮತ ಬ್ಯಾಂಕ್‌ ಮೇಲೆ ಕಣ್ಣಿಟ್ಟು ಮಾಜಿ ಸಚಿವ ಎ.ಕೃಷ್ಣಪ್ಪ ಪುತ್ರಿ ಪೂರ್ಣಿಮಾ ಶ್ರೀನಿವಾಸ್‌ ಅವರಿಗೆ ಹಿರಿಯೂರಿನಲ್ಲಿ ಟಿಕೆಟ್‌ ನೀಡಲಾಗಿದ್ದು, ಜತೆಗೆ ಗೂಳಿಹಟ್ಟಿ ಶೇಖರ್‌ಗೆ ಹೊಸದುರ್ಗದಲ್ಲಿ ಟಿಕೆಟ್‌ ನೀಡುವ ಮೂಲಕ ಚಿತ್ರದುರ್ಗ ಜಿಲ್ಲೆಯಲ್ಲಿ ಬಿಜೆಪಿ ಬಲಗೊಳಿಸುವ ಉದ್ದೇಶವೂ ಇದೆ ಎಂದು ಮೂಲಗಳು ತಿಳಿಸಿವೆ.

ಇದೇ ಕಾರಣಕ್ಕೆ ಕೇಂದ್ರ ಚುನಾವಣಾ ಸಮಿತಿ ಸಭೆಗೆ ಮುನ್ನ ಖುದ್ದು ದೆಹಲಿ ನಾಯಕರು ಶ್ರೀರಾಮುಲು ಅವರನ್ನು ಕರೆಸಿಕೊಂಡು ಮಾತುಕತೆ ನಡೆಸಿದ್ದಾರೆ. ಬಿಜೆಪಿಯ ಪ್ರಮುಖ ಪ್ರಚಾರಕರಲ್ಲಿ ಒಬ್ಬರಾಗಿರುವ ಶ್ರೀರಾಮುಲು ಮೂಲಕ ನಾಯಕ ಸಮುದಾಯವಷ್ಟೇ ಅಲ್ಲದೆ ಹಿಂದುಳಿದ ವರ್ಗದವರನ್ನೂ ಸೆಳೆಯಲು ಅಮಿತ್‌ ಶಾ ಕಾರ್ಯತಂತ್ರ ರೂಪಿಸಿದ್ದಾರೆಂದು ಹೇಳಲಾಗಿದೆ.

Advertisement

ಅದೇ ರೀತಿ ಹೈದರಾಬಾದ್‌ -ಕರ್ನಾಟಕ ಭಾಗದಲ್ಲಿ ಬಿಜೆಪಿಯ ಶಕ್ತಿ ವೃದ್ಧಿಸಿಕೊಳ್ಳಲು ಪಕ್ಷಕ್ಕೆ ಕರೆತರಲಾದ ಮಾಲಿಕಯ್ಯ ಗುತ್ತೆದಾರ್‌, ಮಲ್ಲಿಕಾರ್ಜುನ ಖೂಬಾಗೆ ಟಿಕೆಟ್‌ ಘೋಷಿಸಿ ಆ ಭಾಗದಲ್ಲಿ ಪಕ್ಷಕ್ಕೆ ಬಲ ತುಂಬಿಸುವ ಕೆಲಸ ಮಾಡಲಾಗಿದೆ. ವಿಜಯಪುರದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮದ ಮುಂಚೂಣಿ ವಹಿಸಿದ್ದ ಸಚಿವ ಎಂ.ಬಿ.ಪಾಟೀಲ್‌ಗೆ ತಿರುಗೇಟು ನೀಡುವ ಸಲುವಾಗಿಯೇ ಪಕ್ಷಕ್ಕೆ ಕರೆತರಲಾದ ಎ.ಎಸ್‌.ಪಾಟೀಲ್‌ ನಡಹಳ್ಳಿ ಅವರಿಗೆ ಟಿಕೆಟ್‌ ನೀಡಲಾಗಿದೆ.

ರಾಮನಗರ, ಮಂಡ್ಯ ಭಾಗದಲ್ಲಿ ಬಿಜೆಪಿಗೆ ಅಷ್ಟಾಗಿ ಶಕ್ತಿ ಇಲ್ಲದ ಕಾರಣ ಸಿ.ಪಿ.ಯೋಗೇಶ್ವರ್‌ ಮೂಲಕ ಎರಡೂ ಜಿಲ್ಲೆಗಳಲ್ಲಿ ಅಸ್ತಿತ್ವ ಸಾಬೀತುಪಡಿಸಲು ಬಿಜೆಪಿ ಮುಂದಾಗಿದ್ದು, ಮೊದಲ ಪಟ್ಟಿಯಲ್ಲಿ ಅವರಿಗೆ ಟಿಕೆಟ್‌ ಘೋಷಿಸಿ ಎರಡೂ ಜಿಲ್ಲೆಗಳ ಅಭ್ಯರ್ಥಿಗಳ ಆಯ್ಕೆಯಲ್ಲೂ ಅವರ ಸಲಹೆ ಪರಿಗಣಿಸಲಾಗುತ್ತಿದೆ ಎಂದು ಹೇಳಲಾಗಿದೆ.

ಶಿವಮೊಗ್ಗದಲ್ಲಿ ವಿರೋಧದ ನಡುವೆಯೂ ಕೆ.ಎಸ್‌. ಈಶ್ವರಪ್ಪ, ವಿಜಯಪುರದಲ್ಲಿ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರಿಗೆ ಟಿಕೆಟ್‌ ನೀಡುವ ಮೂಲಕ ಪಕ್ಷದಲ್ಲಿ ಒಗ್ಗಟ್ಟು ಕಾಯ್ದುಕೊಳ್ಳುವ ಯತ್ನ ಮಾಡಲಾಗಿದೆ. ಹನೂರು ಟಿಕೆಟ್‌ ಸಿಗದೆ ಬೇಸರಗೊಂಡಿದ್ದ ವಿ.ಸೊಮಣ್ಣಗೆ ಗೋವಿಂದರಾಜನಗರ ಟಿಕೆಟ್‌ ನೀಡಿ ಸಮಾಧಾನಪಡಿಸಲಾಗಿದೆ. ಸೋಮಣ್ಣ ಅವರಿಗೆ ಟಿಕೆಟ್‌ ನೀಡಿರುವುದರಿಂದ ಅವರ ಪುತ್ರನಿಗೆ ಅರಸೀಕರೆ ಟಿಕೆಟ್‌ ಸಿಗುವುದು ಅನುಮಾನ ಎಂಬ ಮಾತುಗಳೂ ಇವೆ. ಈ ಮಧ್ಯೆ, ಭಾನುವಾರದ ಪಟ್ಟಿಗೆ ವಿವಿಧ ಕ್ಷೇತ್ರಗಳಲ್ಲಿ ಅಸಮಾಧಾನ ಮೂಡಿದ್ದರೂ ನಾಯಕರು ತಣಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಜಾತಿವಾರು ಪ್ರಾತಿನಿಧ್ಯಕ್ಕೆ ಆದ್ಯತೆ
ಮೇಲ್ನೋಟಕ್ಕೆ ಯಡಿಯೂರಪ್ಪ, ಶ್ರೀರಾಮುಲು, ಅನಂತಕುಮಾರ್‌, ಬಿ.ಎಲ್‌.ಸಂತೋಷ್‌ ಅವರು ಟಿಕೆಟ್‌ ಹಂಚಿಕೆಯಲ್ಲಿ ಮೇಲುಗೈ ಸಾಧಿಸಿರುವಂತೆ ಕಂಡುಬಂದರೂ ಅಮಿತ್‌ ಶಾ ಲೆಕ್ಕಾಚಾರದಂತೆಯೇ ಟಿಕೆಟ್‌ ನೀಡಿ ಲಿಂಗಾಯತರ ಜತೆ ನಾಯಕ, ಹಿಂದುಳಿದ, ಒಕ್ಕಲಿಗ ಸಮುದಾಯವನ್ನು ಬಿಜೆಪಿಯತ್ತ ಸೆಳೆಯುವ ಕಾರ್ಯತಂತ್ರ ರೂಪಿಸಲಾಗಿದೆ ಎನ್ನಲಾಗಿದೆ. ಅದಕ್ಕಾಗಿಯೇ ಮೊದಲ ಪಟ್ಟಿಯಲ್ಲಿ ಲಿಂಗಾಯತರಿಗೆ 21, ಹಿಂದುಳಿದ ವರ್ಗದವರಿಗೆ 19,  ಒಕ್ಕಲಿಗ 10, ಪರಿಶಿಷ್ಟರಿಗೆ 10 ಕ್ಷೇತ್ರಗಳಲ್ಲಿ ಅವಕಾಶ ಕಲ್ಪಿಸಲಾಗಿದೆ. 72  ಕ್ಷೇತ್ರಗಳಿಗೆ ಘೋಷಿಸಿರುವ ಅಭ್ಯರ್ಥಿಗಳ ಪೈಕಿ ಬಿಜೆಪಿ ಮೂಲಗಳ ಪ್ರಕಾರ ಕನಿಷ್ಠ 50 ಕ್ಷೇತ್ರಗಳಲ್ಲಿ ಗೆದ್ದೇ ಗೆಲ್ಲುವ ವಿಶ್ವಾಸ ಹೊಂದಲಾಗಿದೆ ಎಂದು ಹೇಳಲಾಗಿದೆ.

ಟಿಕೆಟ್‌ ಪಕ್ಕಾ ಆಗದವರಲ್ಲಿ ಆತಂಕ
ಬಿಜೆಪಿ ಮೊದಲ ಪಟ್ಟಿಯಲ್ಲಿ ಟಿಕೆಟ್‌ ಘೋಷಣೆಯಾಗದ ಹಾಲಿ ಶಾಸಕರು ಹಾಗೂ ಆಕಾಂಕ್ಷಿಗಳಾಗಿದ್ದ ಮಾಜಿ ಶಾಸಕರಿಗೆ ಆತಂಕ ಶುರುವಾಗಿದೆ. ಮೊದಲ ಪಟ್ಟಿಯಲ್ಲಿ ಬಿಜೆಪಿಯ 40 ಹಾಲಿ ಶಾಸಕರ ಪೈಕಿ 35 ಮಂದಿಗೆ ಟಿಕೆಟ್‌ ದೊರೆತಿದ್ದು ಶಿಕಾರಿಪುರದಲ್ಲಿ ರಾಘವೇಂದ್ರ ಬದಲಿಗೆ ಯಡಿಯೂರಪ್ಪಗೆ, ಮೊಳಕಾಲ್ಮೂರಿನ ತಿಪ್ಪಾರೆಡ್ಡಿ ಬದಲು ಶ್ರೀರಾಮುಲು, ಕೆಜಿಎಫ್ನ ರಾಮಕ್ಕ ಬದಲು ಅವರ ಪುತ್ರ ಸಂಪಂಗಿಗೆ ನೀಡಲಾಗಿದೆ.

ಉಳಿದಂತೆ, ವಿರಾಜಪೇಟೆ ಶಾಸಕ ಕೆ.ಜೆ.ಬೋಪಯ್ಯ, ಕುಷ್ಠಗಿಯ ದೊಡ್ಡನಗೌಡ ಹನುಮಗೌಡ ಪಾಟೀಲ್‌ ಟಿಕೆಟ್‌ ಇನ್ನೂ ಘೋಷಿಸಿಲ್ಲ. ಕೆ.ಜೆ.ಬೋಪಯ್ಯ ಬೆಂಬಲಿಗರು, ಜಿಲ್ಲಾ ಮತ್ತು ತಾಲೂಕು ಪಂಚಾಯತ್‌ ಸದಸ್ಯರು ಬೆಂಗಳೂರಿಗೆ ಆಗಮಿಸಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚಿಸಿದರು.

ಅದೇ ರೀತಿ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಕಳೆದ ಬಾರಿ ಸ್ಪರ್ಧಿಸಿ ಸೋತಿದ್ದ  ಸಿದ್ದುಸವದಿ, ನಂದೀಶ್‌ರೆಡ್ಡಿ,  ರವಿ, ನೆಹರು ಓಲೆಕಾರ್‌, ಹಾಲಪ್ಪ, ಬೇಳೂರು ಗೋಪಾಲಕೃಷ್ಣ, , ಎಂ.ಚಂದ್ರಪ್ಪ ಅವರ ಹೆಸರು ಮೊದಲ ಪಟ್ಟಿಯಲ್ಲಿ ಇಲ್ಲ.   ಈ ಮಧ್ಯೆ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ತರೀಕೆರೆ ಸುರೇಶ್‌ ಹಾಗೂ ಮೊಳಕಾಳೂ¾ರು ಶಾಸಕ ತಿಪ್ಪೇಸ್ವಾಮಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚಿಸಿದರು.

– ಎಸ್‌.ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next