Advertisement

ತಗ್ಗಿದ ಬಂಡಾಯದ ಬಿಸಿ; ನಾಮಪತ್ರ ವಾಪಸ್‌ ಪ್ರಕ್ರಿಯೆ ಅಂತ್ಯ

06:00 AM Apr 28, 2018 | Team Udayavani |

ಬೆಂಗಳೂರು: ರಾಜ್ಯ ವಿಧಾನಸಭೆಗೆ ಮೇ 12ರಂದು ನಡೆಯಲಿರುವ ಚುನಾವಣೆಗೆ ನಾಮಪತ್ರ ವಾಪಸ್‌ ಪಡೆಯುವ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಅಂತಿಮ ಅಖಾಡ ಸಿದ್ಧವಾಗಿದೆ.

Advertisement

ಒಟ್ಟು 224 ಕ್ಷೇತ್ರಗಳಲ್ಲಿ (–) ಅಭ್ಯರ್ಥಿಗಳು ಕಣದಲ್ಲಿದ್ದು, ಬಿಜೆಪಿ ಎಲ್ಲಾ 224 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಆಡಳಿತಾರೂಢ ಕಾಂಗ್ರೆಸ್‌ 222 ಕ್ಷೇತ್ರಗಳಲ್ಲಿ, ಬಿಎಸ್‌ಪಿ ಜತೆ ಹೊಂದಾಣಿಕೆ ಮಾಡಿಕೊಂಡಿರುವ ಜೆಡಿಎಸ್‌ 204 ಕ್ಷೇತ್ರಗಳಲ್ಲಿ ಮತ್ತು ಬಿಎಸ್‌ಪಿ 17 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಹಾಕಿದೆ.

ಕೋಲಾರ ಜಿಲ್ಲೆ ಮುಳಬಾಗಿಲು ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಕೊತ್ತೂರು ಮಂಜು ಅವರ ನಾಮಪತ್ರ ನಕಲಿ ಜಾತಿ ಪ್ರಮಾಣ ಪತ್ರ ವಿವಾದದ ಹಿನ್ನೆಲೆಯಲ್ಲಿ ತಿರಸ್ಕೃತಗೊಂಡರೆ, ಮೇಲುಕೋಟೆ ಕ್ಷೇತ್ರದಲ್ಲಿ ಮಾಜಿ ಶಾಸಕ ದಿವಂಗತ ಪುಟ್ಟಣ್ಣಯ್ಯ ಪುತ್ರ ದರ್ಶನ್‌ ಪುಟ್ಟಣ್ಣಯ್ಯ ಅವರನ್ನು ಬೆಂಬಲಿಸಿದೆ. ಜೆಡಿಎಸ್‌ ಹುನಗುಂದ, ಮಂಗಳೂರು ನಗರ ಉತ್ತರ ಮತ್ತು ಬಂಟ್ವಾಳ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ.

ನಾಮಪತ್ರ ಹಿಂತೆಗೆಯಲು ಕಡೇ ದಿನವಾದ ಶುಕ್ರವಾರ ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ನಿಂದ ಬಂಡಾಯವಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದ ಬಹುತೇಕರನ್ನು ಸಮಾಧಾನ ಮಾಡಲಾಗಿದ್ದು, ಬಂಡಾಯದ ಭೀತಿ ಬಹುತೇಕ ಕಡಿಮೆಯಾದಂತಾಗಿದೆ. ಪಕ್ಷ ತೊರೆದು ಇತರೆ ಪಕ್ಷಗಳಿಂದ ಸ್ಪರ್ಧಿಸಿರುವವರನ್ನು ಹೊತುಪಡಿಸಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ಗೆ ತಲಾ ಐದು ಕ್ಷೇತ್ರಗಳು ಮತ್ತು ಬಿಜೆಪಿಗೆ ಎರಡು ಕ್ಷೇತ್ರಗಳಲ್ಲಿ ಟಿಕೆಟ್‌ ವಂಚಿತರು ಬಂಡಾಯದ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ.

ಕಾಂಗ್ರೆಸ್‌ನಲ್ಲಿ ಟಿಕೆಟ್‌ ಸಿಗದೆ ನಿರಾಶರಾಗಿರುವ ಕೂಡ್ಲಿಗಿ ಕ್ಷೇತ್ರದ ಲೋಕೇಶ್‌ ನಾಯಕ್‌, ಮಹದೇವಪುರದ ನಲ್ಲೂರು ನಾಗೇಶ್‌, ರಾಣೆಬೆನ್ನೂರಿನ ರುಕ್ಮಿಣಿ ಸಾಹುಕಾರ್‌, ಜಗಳೂರು ಕ್ಷೇತ್ರದಿಂದ ಪುಷ್ಪಾ, ತಿಪಟೂರಿನಿಂದ ನಂಜಾಮರಿ ಮತ್ತು ನಾರಾಯಣ ಪಕ್ಷೇತರರಾಗಿ ಕಣದಲ್ಲಿದ್ದಾರೆ.

Advertisement

ಅದೇ ರೀತಿ ಜೆಡಿಎಸ್‌ನಲ್ಲಿ ಶಿವಮೊಗ್ಗದ ಬಾಬಣ್ಣ, ಶಿಡ್ಲಘಟ್ಟದ ರಾಜಣ್ಣ, ಬಾಗೇಪಲ್ಲಿಯ ಗಂಜೂರು ಗಂಜೂರು ಶ್ರೀನಿವಾಸ ರೆಡ್ಡಿ, ಕುಣಿಗಲ್‌ನ ಜಯರಾಂ, ಮೂಡಬಿದರೆಯ ಅಶ್ವಿ‌ನ್‌ ಜೊಸ್ಸಿ ಪೆರೇರಾ ಹಾಗೂ ಬಿಜೆಪಿಗೆ ಸೋಮಣ್ಣ ಬೇವಿನಮರದ -ಶಿಗ್ಗಾಂವ್‌ ಮತ್ತು ಶ್ರೀಕರ ಪ್ರಭು- ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಂಡಾಯದ ಬಿಸಿ ಮುಟ್ಟಿಸಲಿದ್ದಾರೆ.

ಈ ಮಧ್ಯೆ ಕೋಲಾರ ಜಿಲ್ಲೆ ಬಂಗಾರಪೇಟೆ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಎಂ. ನಾರಾಯಣಸ್ವಾಮಿ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದರೂ ಕೊನೇ ಕ್ಷಣದಲ್ಲಿ ಜೆಡಿಎಸ್‌ ಅಭ್ಯರ್ಥಿಗೆ ಬೆಂಬಲ ಸೂಚಿಸಿ ತಮ್ಮ ನಾಮಪತ್ರ ವಾಪಸ್‌ ಪಡೆದಿದ್ದಾರೆ ಎಂದು ಹೇಳಲಾಗಿದೆ. ಹೀಗಾಗಿ ಕ್ಷೇತ್ರದಲ್ಲಿ ಬಿಜೆಪಿಗೆ ಕೊಂಚ ಮಟ್ಟಿನ ಹಿನ್ನಡೆಯಾಗುವ ಆತಂಕ ಕಾಣಿಸಿಕೊಂಡಿದೆ.

ನಾಮಪತ್ರ ವಾಪಸ್‌ ಪಡೆದ ಸಂಸದರ ಪುತ್ರಿ:
ಕೋಲಾರ ಜಿಲ್ಲೆ ಮುಳಬಾಗಿಲು ಮೀಸಲು ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಸಂಸದ ಹಾಗೂ ಕೇಂದ್ರದ ಮಾಜಿ ಸಚಿವ ಕೆ.ಎಚ್‌.ಮುನಿಯಪ್ಪ ಅವರ ಪುತ್ರಿ ನಂದಿನಿ ಶುಕ್ರವಾರ ನಾಮಪತ್ರ ಹಿಂಪಡೆದಿದ್ದಾರೆ. ನಕಲಿ ಜಾತಿ ಪ್ರಮಾಣಪತ್ರದ ಕಾರಣಕ್ಕಾಗಿ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಕೊತ್ತೂರು ಮಂಜುನಾಥ್‌ ಅವರ ನಾಮಪತ್ರ ತಿರಸ್ಕೃತಗೊಂಡಿತ್ತು. ಈ ಮೂನ್ಸೂಚನೆ ಅರಿತಿದ್ದ ಕೆ.ಎಚ್‌.ಮುನಿಯಪ್ಪ ತಮ್ಮ ಪುತ್ರಿಯನ್ನು ಪಕ್ಷೇತರರಾಗಿ ಕಣಕ್ಕಿಳಿಸಿದ್ದರು. ಆದರೆ, ನಂದಿನಿ ಅವರನ್ನು ಬೆಂಬಲಿಸಲು ಕೊತ್ತೂರು ಮಂಜುನಾಥ್‌ ನಿರಾಕರಿಸಿದ್ದರಿಂದ ಅವರು ತಮ್ಮ ನಾಮಪತ್ರ ಹಿಂಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಇನ್ನೊಂದೆಡೆ ಮುಳಬಾಗಿಲಿನಲ್ಲಿ ತಮ್ಮ ನಾಮಪತ್ರ ತಿರಸ್ಕೃತಗೊಳ್ಳುವ ಸೂಚನೆ ಸಿಗುತ್ತಿದ್ದಂತೆ ಕೊತ್ತೂರು ಮಂಜುನಾಥ್‌ ಪಕ್ಕದ ಕೋಲಾರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಆದರೆ ಇದೀಗ ಅಲ್ಲಿಯೂ ತಮ್ಮ ನಾಮಪತ್ರ ವಾಪಸ್‌ ಪಡೆದಿದ್ದಾರೆ.

ಪ್ರತಿಷ್ಠಿತ ಕಣಗಳು
ಚಾಮುಂಡೇಶ್ವರಿ

ಕಾಂಗ್ರೆಸ್‌- ಸಿದ್ದರಾಮಯ್ಯ
ಜೆಡಿಎಸ್‌- ಜಿ.ಟಿ.ದೇವೇಗೌಡ
ಬಿಜೆಪಿ- ಎಸ್‌.ಆರ್‌.ಗೋಪಾಲ್‌ ರಾವ್‌
ಬಾದಾಮಿ
ಕಾಂಗ್ರೆಸ್‌- ಸಿದ್ದರಾಮಯ್ಯ
ಬಿಜೆಪಿ- ಬಿ.ಶ್ರೀರಾಮುಲು
ಜೆಡಿಎಸ್‌- ಹನುಮಂತ ಮಾವಿನಮರದ್‌
ಶಿಕಾರಿಪುರ
ಬಿಜೆಪಿ- ಬಿ.ಎಸ್‌.ಯಡಿಯೂರಪ್ಪ
ಕಾಂಗ್ರೆಸ್‌- ಜಿ.ಬಿ.ಮಾಲತೇಶ್‌
ಜೆಡಿಎಸ್‌- ಹೊಳೆಬಸಪ್ಪ ಬಾಳೆಗಾರ್‌
ಚನ್ನಪಟ್ಟಣ
ಜೆಡಿಎಸ್‌- ಎಚ್‌.ಡಿ.ಕುಮಾರಸ್ವಾಮಿ
ಬಿಜೆಪಿ- ಸಿ.ಪಿ.ಯೋಗೇಶ್ವರ್‌
ಕಾಂಗ್ರೆಸ್‌- ಎಚ್‌.ಎಂ.ರೇವಣ್ಣ
ರಾಮನಗರ
ಜೆಡಿಎಸ್‌- ಎಚ್‌.ಡಿ.ಕುಮಾರಸ್ವಾಮಿ
ಕಾಂಗ್ರೆಸ್‌- ಎಚ್‌.ಎ.ಇಕ್ಬಾಲ್‌ ಹುಸೇನ್‌
ಬಿಜೆಪಿ- ಲೀಲಾ

ಆಸಕ್ತಿ ಕಳೆದುಕೊಂಡ ಕ್ಷೇತ್ರ ವರುಣಾ
ಆರಂಭದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಕಣಕ್ಕಿಳಿದಿರುವ ವರುಣಾ ವಿಧಾನಸಭಾ ಕ್ಷೇತ್ರ ಇದೀಗ ಆಸಕ್ತಿ ಕಳೆದುಕೊಂಡಿದೆ. ಬಿಎಸ್‌ವೈ ಪುತ್ರ ವಿಜಯೇಂದ್ರ ಕಣಕ್ಕಿಳಿಯದ ಕಾರಣದಿಂದಾಗಿ ಈ ಕ್ಷೇತ್ರದ ಕುತೂಹಲ ಕಡಿಮೆಯಾಗಿದೆ. ಈ ಕ್ಷೇತ್ರ ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳ ಪುತ್ರರ ರಾಜಕೀಯ ಪ್ರವೇಶಕ್ಕೆ ವೇದಿಕೆ ಕಲ್ಪಿಸುವ ಕ್ಷೇತ್ರವಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ವಿಜಯೇಂದ್ರ ಅವರಿಗೆ ಟಿಕೆಟ್‌ ನೀಡಲು ನಿರಾಕರಿಸಿದ ಬಿಜೆಪಿ ಅಲ್ಲಿ ಬಸವರಾಜು ಅವರನ್ನು ಕಣಕ್ಕಿಳಿಸಿದೆ. ಈ ಮಧ್ಯೆ ವಿಜಯೇಂದ್ರ ಕಣಕ್ಕಿಳಿಯಲಿದ್ದಾರೆ ಎಂಬ ಕಾರಣಕ್ಕೆ ಜೆಡಿಎಸ್‌ ಅಭ್ಯರ್ಥಿ ಅಭಿಷೇಕ್‌ ಕೂಡ ಇದುವರೆಗೆ ಸುಮ್ಮನಿದ್ದು, ಈಗ ಕೆಲಸ ಆರಂಭಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next