ಪುತ್ತೂರು: ಈ ಕ್ಷೇತ್ರದಲ್ಲಿ ನಿಜ ಹೇಳಬೇಕೆಂದರೆ ಇನ್ನೂ ಚುನಾವಣೆಯ ಬಿರುಗಾಳಿ ಎದ್ದಿಲ್ಲ. ಹೀಗೆ ಮಾತು ಉದಯವಾಣಿಯ ಪ್ರತಿನಿಧಿ ಮತದಾರರೊಂದಿಗೆ ಆರಂಭಿಸಿದರೆ, ‘ಯಾವ ಬಿರುಗಾಳಿ ಸಾರ್? ಎಲ್ಲವನ್ನೂ ಚುನಾವಣಾ ಆಯೋಗ ಹಿಡಿದಿಟ್ಟುಕೊಂಡಿದೆಯಲ್ಲ’ ಎನ್ನುತ್ತಾರೆ ಮತದಾರರೊಬ್ಬರು.
ಆಬ್ಬರದ ಪ್ರಚಾರದ ಗೊಡವೆ ಇಲ್ಲಿಯೂ ಇಲ್ಲ. ಅಭ್ಯರ್ಥಿಗಳು ತಂಡ ಕಟ್ಟಿಕೊಂಡು ಮನೆ ಮನೆ ಪ್ರಚಾರದಲ್ಲಿದ್ದಾರೆ. ಅಂದರೆ ಲೆಗ್ ವರ್ಕ್ (ಕಾಲಿಗೆ ಕೆಲಸ) ಸ್ವಲ್ಪ ಜಾಸ್ತಿಯಾಗಿದೆ. ‘ಒಳ್ಳೆಯದಾಯಿತು. ಈಗಲಾದರೂ ಮತ ಕೇಳ್ಕೊಂಡು ಮನೆ ಬಾಗಿಲಿಗೆ ಬರ್ತಾರೆ. ಇಲ್ಲದಿದ್ದರೆ ಐದು ವರ್ಷಗಳಲ್ಲಿ ಒಮ್ಮೆಯೂ ಬರ್ತಿರಲಿಲ್ಲ’ ಎಂದರು ಹೆಸರು ಬೇಡ ಎಂದ ಮತದಾರರೊಬ್ಬರು. ನಗರದ ಹೊಟೇಲೊಂದರ ಬಳಿ ಮಾತಿಗೆ ಸಿಕ್ಕವರೊಬ್ಬರು, ‘ಅಭ್ಯರ್ಥಿಗಳ ಬಗ್ಗೆ ಮಾಹಿತಿ ಇದೆ. ಯಾರಾದರೂ ಒಬ್ಬರಿಗೆ ಮತ ಹಾಕಬೇಕು. ಅದು ಮಾಡದೇ ಇರಲಾಗದು’ ಎಂದರಷ್ಟೇ ಹೊರತು ಒಲವು ಬಿಟ್ಟುಕೊಡಲಿಲ್ಲ. ಈ ಬಾರಿ ಕ್ಷೇತ್ರ ಸ್ವಲ್ಪ ಬದಲಾಗಿದೆ. ಬಂಡಾಯದ ಗಾಳಿ ಎನ್ನಲಾರದು. ಆದರೆ ಪ್ರಮುಖ ಪಕ್ಷಗಳಲ್ಲಿ ಸಣ್ಣದೊಂದು ಬೇಸರದ ದನಿ ಇದೆ. ಅಭಿವೃದ್ಧಿ ಕುರಿತ ಚರ್ಚೆ ಸಣ್ಣದಾಗಿ ಸಂಚರಿಸುತ್ತಿದೆ.
ಒಂದಷ್ಟು ಪ್ರಚಾರ ಕಾರ್ಯಗಳು ಕಂಡುಬರುತ್ತಿದ್ದರೂ ದೊಡ್ಡ ಮಟ್ಟಿನ ಸದ್ದು ಕಾಣಿಸುತ್ತಿಲ್ಲ. ಸಾಮಾಜಿಕ ಜಾಲತಾಣಗಳ ಪ್ರಚಾರ ಮಾತ್ರ ಎಗ್ಗಿಲ್ಲದೇ ನಡೆಯುತ್ತಿದೆ. ಅಭ್ಯರ್ಥಿ ಘೋಷಣೆಗೆ ಮೊದಲಿದ್ದ ಉತ್ಸಾಹ, ರಂಗು ಈಗ ತೋರುತ್ತಿಲ್ಲ ಎಂಬುದು ಕ್ಷೇತ್ರ ಸಂಚಾರ ಮಾಡಿದಾಗ ಅಪವಾದವಲ್ಲ ಎಂದೆನಿಸಿತು. ಎರಡೂ ಪಕ್ಷಗಳಲ್ಲೂ ಬಂಡಾಯ ಆತಂಕ ಇತ್ತು. ಅದೀಗ ತಣ್ಣಗಾಗಿದೆ. ಬಹುಶಃ ಹೈಕಮಾಂಡ್ ಕಸರತ್ತು ಮಾಡಿರಬೇಕು ಎನ್ನುತ್ತಾರೆ ದರ್ಬೆಯ ಮತದಾರರೊಬ್ಬರು. ಕಾಂಗ್ರೆಸ್‌ನ ಒಂದು ತಂಡದ ಹೊರತು ಯಾರೂ ಮತ ಕೇಳಲು ಬಂದಿಲ್ಲ. ಪುತ್ತೂರು ನಗರ ಅಭಿವೃದ್ಧಿ ಚರಂಡಿ ಶುಚಿತ್ವ, ಬಲ್ಲೆ ತೆರವು ಇಷ್ಟಕ್ಕೆ ಸೀಮಿತ ಎನ್ನುತ್ತಾರೆ ಶ್ರೀಧರ್. ಪೇಟೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ನ ಕೆಲ ಸಭೆಗಳು ನಡೆದಿವೆ. ಆದರೆ ಇವರ್ಯಾರೂ ವೈಯಕ್ತಿಕ ಭೇಟಿ ಮಾಡಿಲ್ಲ. ಅಭ್ಯರ್ಥಿಗಳ ನಿಲುವು ಏನೆಂದು ತಿಳಿವ ಪ್ರಯತ್ನ ಇದುವರೆಗೆ ಸಾಧ್ಯವಾಗಿಲ್ಲ ಎಂಬುದು ಕಾರ್ತಿಕ್ ರ ಅಭಿಪ್ರಾಯ. ಎಲ್ಲ ಮುಖಂಡರು ಗ್ರಾಮಾಂತರದ ಮನೆ ಮನೆ ಭೇಟಿಯಲ್ಲೇ ಇದ್ದಾರೆ. ಅಭ್ಯರ್ಥಿ ಆಯ್ಕೆಗೆ ಮೊದಲು ಇದ್ದ ರಂಗು ಪೇಟೆ ಸುತ್ತಮುತ್ತ ಕಾಣಿಸುತ್ತಿಲ್ಲ ಎನ್ನುತ್ತಾರೆ ಬನ್ನೂರಿನ ಅನಂತ್.
ರಿಂಗ್ ರೋಡ್, ರಸ್ತೆ ಅಗಲೀಕರಣ, ಚರಂಡಿ ವ್ಯವಸ್ಥೆ, ತ್ಯಾಜ್ಯ ವಿಲೇವಾರಿ, ಬನ್ನೂರು ಡಂಪಿಂಗ್ ಯಾರ್ಡ್‌ಗೆ ವ್ಯವಸ್ಥೆ, ಪ್ರವಾಸೋದ್ಯಮ ಅಭಿವೃದ್ಧಿ ಮೊದಲಾದ ಸಂಗತಿಗೆ ಗಮನ ನೀಡಬೇಕಿತ್ತು.
– ಕಿರಣ್, ಬನ್ನೂರು
— ಗಣೇಶ್ ಕಲ್ಲರ್ಪೆ