Advertisement

ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮತದಾನಕ್ಕೆ ಸರ್ವ ಸಿದ್ಧತೆ

05:05 AM May 12, 2018 | Karthik A |

ಮಂಗಳೂರು: ‘ಚುನಾವಣೆಗೆ ನಾವು ರೆಡಿ. ಮತ ಚಲಾಯಿಸಲು ನೀವೂ ರೆಡಿಯಾಗಿ ಬನ್ನಿ’ ಎನ್ನುವಂತೆ ದಕ್ಷಿಣ ಕನ್ನಡ ಜಿಲ್ಲೆಯ 13,176 ಚುನಾವಣ ಸಿಬಂದಿ ಮತ್ತು 5,700 ಪೊಲೀಸರು ಸೇರಿದಂತೆ ಒಟ್ಟು 18,876 ಮಂದಿ ಶುಕ್ರವಾರ ಮತಯಂತ್ರಗಳೊಂದಿಗೆ ಜಿಲ್ಲೆಯ 1,858 ಮತಗಟ್ಟೆಗಳಿಗೆ ತೆರಳಿದರು. ಜಿಲ್ಲೆಯ 8 ಕ್ಷೇತ್ರಗಳಲ್ಲಿ 58 ಮಂದಿ ಅಭ್ಯರ್ಥಿಗಳಿದ್ದಾರೆ. ಮತದಾನವು ಶನಿವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯ ತನಕ ನಡೆಯಲಿದೆ. ಜಿಲ್ಲೆಯಲ್ಲಿ 8 ವಿಧಾನಸಭಾ ಕ್ಷೇತ್ರಗಳಿದ್ದು, ಒಟ್ಟು 17,11,878 ಮತದಾರರಿದ್ದಾರೆ. ಅವರಲ್ಲಿ 8,41,073 ಪುರುಷರು ಹಾಗೂ 8,70,675 ಮಹಿಳೆಯರು. ಅಲ್ಲದೇ 100 ಮಂದಿ ಲೈಂಗಿಕ ಅಲ್ಪಸಂಖ್ಯಾಕ ಮತದಾರರಿದ್ದಾರೆ.

Advertisement

8 ಮಸ್ಟರಿಂಗ್‌ ಕೇಂದ್ರಗಳಿಂದ (ಬೆಳ್ತಂಗಡಿ- ಎಸ್‌.ಡಿ.ಎಂ. ಪ.ಪೂ. ಕಾಲೇಜು ಉಜಿರೆ), ಮೂಡಬಿದಿರೆ- ಕೆ.ಪಿ.ಟಿ. ಮಂಗಳೂರು), ಮಂಗಳೂರು ನಗರ ಉತ್ತರ- ರೊಜಾರಿಯೋ ಪ.ಪೂ. ಕಾಲೇಜು), ಮಂಗಳೂರು ದಕ್ಷಿಣ- ಕೆನರಾ ಪ್ರಾ. ಶಾಲೆ, ಉರ್ವ), ಮಂಗಳೂರು- ಶ್ರೀ ರಾಮಕೃಷ್ಣ ಶಿಕ್ಷಣ ಸಂಸ್ಥೆ, ಬಂಟ್ಸ್‌ ಹಾಸ್ಟೆಲ್‌), ಬಂಟ್ವಾಳ- ಇನ್‌ ಫೆಂಟ್‌ ಜೀಸಸ್‌ ಇಂ. ಮೀ. ಸ್ಕೂಲ್‌ ಮೊಡಂಕಾಪು), ಪುತ್ತೂರು- ಸ್ವಾಮಿ ವಿವೇಕಾನಂದ ಇಂ. ಮೀ. ಸ್ಕೂಲ್‌ ತೆಂಕಿಲ), ಸುಳ್ಯ- ನೆಹರು ಮೆಮೋರಿಯಲ್‌ ಕಾಲೇಜು ಸುಳ್ಯ) ಚುನಾ ವಣ ಸಿಬಂದಿ ಮತ್ತು ಪೊಲೀಸರು ಬಸ್ಸುಗ‌ಳಲ್ಲಿ ತಂತಮ್ಮ ಮತಗಟ್ಟೆಗಳಿಗೆ ತೆರಳಿದರು.

ಜಿಲ್ಲೆಯಲ್ಲಿ 20 ಪಿಂಕ್‌ (ಮಹಿಳಾ ಸ್ನೇಹಿ) ಮತ್ತು 5 ಪಾರಂಪರಿಕ ಮತದಾನ ಕೇಂದ್ರಗಳನ್ನು ಸ್ವೀಪ್‌ ಸಮಿತಿ ಗುರುತಿಸಿದೆ. ಪಿಂಕ್‌ ಮತ ಗಟ್ಟೆಗಳನ್ನು ಪಿಂಕ್‌ ಬಣ್ಣದಲ್ಲಿ ಅಲಂಕರಿಸಲಾಗಿದ್ದು, ಪಿಂಕ್‌ ವಸ್ತ್ರಧಾರಿ ಮಹಿಳಾ ಸಿಬಂದಿಯನ್ನು ಮತಗಟ್ಟೆ ಅಧಿಕಾರಿಗಳಾಗಿ ನೇಮಿಸಲಾಗಿದೆ. ಎತ್ನಿಕ್‌ ಮತಗಟ್ಟೆಗಳಲ್ಲಿ ಆಯಾ ಪ್ರದೇಶದ ಪಾರಂಪರಿಕ ಹಿನ್ನೆಲೆಯನ್ನು ಚಿತ್ರೀಕರಿಸಲಾಗಿದೆ.

7,569 ಮತ ಯಂತ್ರ 
1,858 ಮತಗಟ್ಟೆಗಳಿಗೆ 7,569 ಮತಯಂತ್ರಗಳನ್ನು ಒದಗಿಸಲಾಗಿದೆ. ಶೇ. 20ರಷ್ಟು ಮತ ಯಂತ್ರಗಳು ಮೀಸಲಿರಬೇಕೆಂಬ ನಿಯಮವಿದ್ದು, ಇಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚುವರಿ ಮತ ಯಂತ್ರಗಳನ್ನು ಪೂರೈಕೆ ಮಾಡಲಾಗಿದೆ. ಮತದಾನ ಯಂತ್ರಗಳು ಅಂದಾಜು ತಲಾ 2 ಕೆ.ಜಿ. ತೂಕದ ಬ್ಯಾಲೆಟ್‌ ಯೂನಿಟ್‌ ಮತ್ತು ಕಂಟ್ರೋಲ್‌ ಯೂನಿಟ್‌ ಹಾಗೂ ಸುಮಾರು 5 ಕೆ.ಜಿ. ತೂಕದ ಮತ ಯಂತ್ರ ನಿಯಂತ್ರಣ ಘಟಕವನ್ನು (ವಿವಿ ಪ್ಯಾಟ್‌) ಹೊಂದಿರುತ್ತವೆ.

8 ಜನ ಚುನಾವಣಾಧಿಕಾರಿಗಳು, 13,176 ಸಿಬಂದಿ, 5700 ಪೊಲೀಸರು
ಎಲ್ಲ 8 ಕ್ಷೇತ್ರಗಳಿಗೆ ಒಬ್ಬೊಬ್ಬ ಚುನಾವಣ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಚುನಾವಣ ಕರ್ತವ್ಯಕ್ಕಾಗಿ ಜಿಲ್ಲೆಯಲ್ಲಿ ಒಟ್ಟು 13,176 ಸಿಬಂದಿಯನ್ನು ನೇಮಕ ಮಾಡಲಾಗಿದೆ. ಪ್ರತಿ ಮತಗಟ್ಟೆಗೆ ಒಬ್ಬ ಅಧ್ಯಕ್ಷಾಧಿಕಾರಿ, 4 ಮತಗಟ್ಟೆ ಅಧಿಕಾರಿ ಮತ್ತು ಒಬ್ಬ ಗ್ರೂಪ್‌ ಡಿ ಸಿಬಂದಿ ಹಾಗೂ ಓರ್ವ ಪೊಲೀಸ್‌ ಸಿಬಂದಿಯನ್ನು ನಿಯೋಜಿಸಲಾಗಿದೆ. ಕ್ಲಿಷ್ಟ ಎಂದು ಗುರುತಿಸಲಾದ ಮತಗಟ್ಟೆಗೆ ಓರ್ವ ಮೈಕ್ರೋ ವೀಕ್ಷಕರನ್ನು ನೇಮಿಸಲಾಗಿದೆ.

Advertisement

517 ಕ್ಲಿಷ್ಟ ಮತಗಟ್ಟೆಗಳು
ಜಿಲ್ಲೆಯಲ್ಲಿ ಒಟ್ಟು 517 ಕ್ಲಿಷ್ಟ ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಈ ಪೈಕಿ 97 ಮತಗಟ್ಟೆಗಳಲ್ಲಿ ವೆಬ್‌ ಕಾಸ್ಟಿಂಗ್‌, 221 ಮತಗಟ್ಟೆಗಳಲ್ಲಿ ಮೈಕ್ರೋ ವೀಕ್ಷಕರನ್ನು ನಿಯೋಜಿಸಲಾಗಿದೆ. ಉಳಿದ ಮತಗಟ್ಟೆಗಳಲ್ಲಿ ಸಿ.ಆರ್‌.ಪಿ.ಎಫ್. ಸಿಬಂದಿ/ ವೀಡಿಯೋಗ್ರಾಫರ್‌ ಗಳನ್ನು ನಿಯೋಜಿಸಲಾಗಿದೆ.

648 ವಾಹನಗಳು 
ಮತಗಟ್ಟೆ ಅಧಿಕಾರಿಗಳನ್ನು ಮತಗಟ್ಟೆಗಳಿಗೆ ತಲುಪಿಸಿ ಚುನಾವಣ ಕರ್ತವ್ಯ ಮುಕ್ತಾಯವಾದ ಬಳಿಕ ಡಿ- ಮಸ್ಟರಿಂಗ್‌ ಕೇಂದ್ರಕ್ಕೆ ಕರೆದೊಯ್ಯುವ ಬಗ್ಗೆ 335 ಬಸ್ಸು, 163 ವ್ಯಾನ್‌, 150 ಜೀಪ್‌ ಸೇರಿದಂತೆ ಒಟ್ಟು 648 ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಮಂಗಳೂರು ಪೊಲೀಸ್‌ ಕಮಿಷನರೆಟ್‌ನಲ್ಲಿ 2,700 ಪೊಲೀಸ್‌ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮಾಂತರ ಜಿಲ್ಲೆಗಲ್ಲಿ 3,000 ಪೊಲೀಸ್‌ ಸಹಿತ ಒಟ್ಟು 5,700 ಪೊಲೀಸ್‌ (ಸಿವಿಲ್‌ ಪೊಲೀಸ್‌/ ಕೇಂದ್ರೀಯ ಅರೆ ಸೈನಿಕ ಪಡೆ/ ಸಶಸ್ತ್ರ ಪೊಲೀಸ್‌/ ಗೃಹ ರಕ್ಷಕ ದಳ) ಅಧಿಕಾರಿ/ ಸಿಬಂದಿಯನ್ನು ಬಂದೋಬಸ್ತು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

ಸೆಕ್ಷನ್‌ 144 ಜಾರಿ 
ಮುಕ್ತ ಹಾಗೂ ಶಾಂತಿಯುತ ಮತದಾನ ನಡೆಸುವ ದೃಷ್ಟಿಯಿಂದ ಗುರುವಾರ (ಮೇ 10) ಸಂಜೆ 6 ಗಂಟೆಯಿಂದಲೇ ದಕ್ಷಿಣ ಕನ್ನಡ ಜಿಲ್ಲಾದ್ಯಂತ ಸಿ.ಆರ್‌.ಪಿ.ಸಿ. ಸೆಕ್ಷನ್‌ 144 ಅನ್ವಯ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದ್ದು, ಮೇ 12 ರ ಸಂಜೆ 6 ಗಂಟೆ ತನಕ ಅದು ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ತಿಳಿಸಿದ್ದಾರೆ. 

ಉಡುಪಿ: ಶನಿವಾರ ನಡೆಯುವ ವಿಧಾನಸಭಾ ಚುನಾವಣೆಗೆ ಜಿಲ್ಲಾಡಳಿತ ಸರ್ವಸನ್ನದ್ಧವಾಗಿದೆ. ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಒಟ್ಟು 34 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಪ್ರಧಾನ ಸ್ಪರ್ಧೆ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಇದೆ. ಉಡುಪಿ ಕ್ಷೇತ್ರದಲ್ಲಿ 8, ಕುಂದಾಪುರದಲ್ಲಿ 5, ಬೈಂದೂರಿನಲ್ಲಿ 9, ಕಾಪುವಿನಲ್ಲಿ 5, ಕಾರ್ಕಳದಲ್ಲಿ 7 ಅಭ್ಯರ್ಥಿಗಳಿದ್ದಾರೆ.

ಜಿಲ್ಲೆಯಲ್ಲಿ 1,103 ಮತಗಟ್ಟೆಗಳಿಗೆ ಶುಕ್ರವಾರ ಮಸ್ಟರಿಂಗ್‌ ಕೇಂದ್ರಗಳಾದ ಉಡುಪಿಯ ಸೈಂಟ್‌ ಸಿಸಿಲೀಸ್‌ ಪ.ಪೂ. ಕಾಲೇಜು, ಕುಂದಾಪುರದ ಭಂಡಾರ್‌ ಕಾರ್ ಕಾಲೇಜು, ಕಾರ್ಕಳದ ಮಂಜುನಾಥ ಪೈ ಸರಕಾರಿ ಕಾಲೇಜಿನಿಂದ ಅಧಿಕಾರಿಗಳು, ಸಿಬಂದಿ ತೆರಳಿ ಮತಗಟ್ಟೆಗಳಲ್ಲಿ ಶನಿವಾರ ಮತದಾನ ಮಾಡಲು ಬೇಕಾದ ಎಲ್ಲ ಸಿದ್ಧತೆಗಳನ್ನು ನಡೆಸಿದರು. ಚುನಾವಣಾ ಆಯೋಗವು ವಿಶೇಷ ಮುತುವರ್ಜಿ ವಹಿಸಿ ಸಿಬಂದಿಗಳಿಗೆ ಊಟೋಪಚಾರವನ್ನು ಅಕ್ಷರ ದಾಸೋಹ ಸಿಬಂದಿಗಳಿಂದ ವ್ಯವಸ್ಥೆ ಮಾಡಿದೆ.

ಒಟ್ಟು 4,78,350 ಪುರುಷರು, 5,15,041 ಮಹಿಳೆಯರು, 24 ಇತರರು ಸೇರಿ 9,93,415 ಮತದಾರರು ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ. 6,342 ಸಿಬಂದಿ, 2,500 ಭದ್ರತಾ ಸಿಬಂದಿ ನೇಮಕ ಮಾಡಲಾಗಿದೆ. 25 ಮಂದಿ ಸಹಸ್ರಮಾನದ ಮತದಾರರಿದ್ದಾರೆ. ಅಶಕ್ತರಿಗಾಗಿ ಒಟ್ಟು 555 ಗಾಲಿ ಕುರ್ಚಿ ಸಿದ್ಧಪಡಿಸಲಾಗಿದೆ. ಮಂದ ದೃಷ್ಟಿಯವರಿಗೆ ಮತದಾನ ಮಾಡಲು 328 ಬೂತ್‌ಗಳಲ್ಲಿ ಭೂತಗನ್ನಡಿ ಸಿದ್ಧಪಡಿಸಲಾಗಿದೆ. ಕುಂದಾಪುರ ತೆಕ್ಕಟ್ಟೆಯ ಸರಕಾರಿ ಮಾ.ಹಿ.ಪ್ರಾಥಮಿಕ ಶಾಲೆ ಅಂಗವಿಕಲರ ಮತಗಟ್ಟೆ ಎಂದು ಪರಿಗಣಿಸಲಾಗಿದೆ. 10 ಪಿಂಕ್‌ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಬೈಂದೂರು ಕ್ಷೇತ್ರದ ಹೇರೂರು ರಾಗಿಹಕ್ಲು ಸ.ಹಿ.ಪ್ರಾ. ಶಾಲೆ, ಹೆಬ್ರಿ ಬಡಾಗುಡ್ಡೆ ಸಮಾಜಮಂದಿರ, ಜಡ್ಕಲ್‌ ಮುದೂರು ಶ್ರೀಮಾತಾ ಪ್ರೌಢಶಾಲೆಯನ್ನು ಬುಡಕಟ್ಟು ಮತಗಟ್ಟೆ ಎಂದು ಗುರುತಿಸಲಾಗಿದೆ.

ಕುಂದಾಪುರ ತಾಲೂಕಿನ ಹಳ್ಳಿಹೊಳೆ, ಕೆರಾಡಿ, ಹೆಂಗವಳ್ಳಿ, ಅಮಾಸೆಬೈಲು, ಹೊಸಂಗಡಿ, ಎಡಮೊಗೆ, ಸಿದ್ದಾಪುರ, ಜಡ್ಕಲ್‌, ಕೊಲ್ಲೂರು, ಕಾಲ್ತೊಡು, ಶಂಕರನಾರಾಯಣ, ಮಡಾಮಕ್ಕಿ, ಬೆಳ್ವೆ, ಹಾಲಾಡಿ, 74ನೇ ಉಳ್ಳೂರು, ಗೋಳಿ ಹೊಳೆ, ಇಡೂರು ಕುಂಞಾಡಿ, ಚಿತ್ತೂರು, ಕಾರ್ಕಳ ತಾಲೂಕಿನ ವರಂಗ, ಕೆರ್ವಾಶೆ, ಶಿರ್ಲಾಲು, ಮಾಳ, ನಾಡ್ಪಾಲು, ಮುದ್ರಾಡಿ, ಈದು ಹಾಗೂ ಉಡುಪಿ ತಾಲೂಕಿನ ನಾಲ್ಕೂರು ಮತ್ತು ಆವರ್ಸೆ ಗ್ರಾ.ಪಂ.ಗಳನ್ನು ದುರ್ಗಮ ಪ್ರದೇಶಗಳ ಮತಗಟ್ಟೆಗಳೆಂದು ಗುರುತಿಸಲಾಗಿದೆ.

ಅನ್ಯ ಕ್ಷೇತ್ರದ ಮತದಾರರು
ಉಡುಪಿ:
ಕಾಪು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ವಿನಯಕುಮಾರ ಸೊರಕೆಯವರ ಮತ ಉಡುಪಿ ಕ್ಷೇತ್ರದಲ್ಲಿ ಇದೆ. ಬೈಂದೂರು ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ರವಿ ಶೆಟ್ಟಿಯವರ ಮತ ಇರುವುದು ಕಾಪು ಕ್ಷೇತ್ರದಲ್ಲಿ, ಕಾಪುವಿನ ಜೆಡಿಎಸ್‌ ಅಭ್ಯರ್ಥಿ ಮನ್ಸೂರ್‌ ಇಬ್ರಾಹಿಂ ಅವರ ಮತ ಇರುವುದು ಬೈಂದೂರಿನಲ್ಲಿ.

ಕಾಪು, ಕುಂದಾಪುರ ಕ್ಷೇತ್ರ: ಎಡಗೈ ನಡುಬೆರಳಿಗೆ ಶಾಯಿ
ಉಡುಪಿ:
ಕಾಪು, ಕುಂದಾಪುರ ಕ್ಷೇತ್ರದಲ್ಲಿ 4 ತಿಂಗಳ ಹಿಂದೆ ಗ್ರಾ.ಪಂ. ಉಪಚುನಾವಣೆ ನಡೆದ ಕಾರಣ ಇಲ್ಲಿ ಮಾತ್ರ ಎಡಗೈ ನಡು ಬೆರಳಿಗೆ ಶಾಯಿ ಹಾಕಲಾಗುತ್ತದೆ.

ಮೇ 15: ಮತ ಎಣಿಕೆ
ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ 8 ಕ್ಷೇತ್ರಗಳ ಮತಗಳ ಎಣಿಕೆ ಬೊಂದೇಲ್‌ ಮಹಾತ್ಮಾ ಗಾಂಧಿ ಶತಾಬ್ಧಿ ಹಿ. ಪ್ರಾ. ಶಾಲೆಯಲ್ಲಿ ನಡೆಯಲಿದೆ. ಉಡುಪಿ ಕುಂಜಿಬೆಟ್ಟು ಟಿಎ ಪೈ ಇಂಗ್ಲಿಷ್‌ ಮೀಡಿಯಂ ಸ್ಕೂಲ್‌ನಲ್ಲಿ ಜಿಲ್ಲೆಯ ಐದೂ ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ.

ನಕ್ಸಲ್‌ ಬಾಧಿತ ಪ್ರದೇಶಗಳಿಗೆ ವಿಶೇಷ ಬಂದೋಬಸ್ತ್
ಉಡುಪಿ: ಹೆ
ಬ್ರಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ 39 ಮತಗಟ್ಟೆ ಬೂತ್‌ ಗಳಿದ್ದು, ಅದರಲ್ಲಿ ಕಾರ್ಕಳ ಕ್ಷೇತ್ರ 33 ಬೂತ್‌ ಗಳು ಹಾಗೂ ಉಡುಪಿ ಕ್ಷೇತ್ರದ ವ್ಯಾಪ್ತಿಗೆ ಬರುವ 6 ಬೂತ್‌ ಗಳು ಒಳಗೊಂಡಿವೆ.

ಅತಿ ಸೂಕ್ಷ್ಮ ಮತಗಟ್ಟೆ
ಹೆಬ್ರಿ ಠಾಣಾ ಸರಹದ್ದಿಗೆ ಬರುವ ಕಾರ್ಕಳ ಕ್ಷೇತ್ರ ವ್ಯಾಪ್ತಿಯ 33 ಬೂತ್‌ ಗಳಲ್ಲಿ ನಾಡ್ಪಾಲು ಗ್ರಾ.ಪಂ. ವ್ಯಾಪ್ತಿಯ ಸೀತಾನದಿ, ನೆಲ್ಲಿಕಟ್ಟೆ, ಸೋಮೇಶ್ವರ ಪೇಟೆ ಹಾಗೂ ಕಾಸನಮಕ್ಕಿ ಹಾಗೂ ಮುದ್ರಾಡಿ ಗ್ರಾ.ಪಂ. ವ್ಯಾಪ್ತಿಯ ಕೊಂಕಣಾರಬೆಟ್ಟು ಹಾಗೂ ಮೇಲ್ಮಟ ಸೇರಿದಂತೆ ಒಟ್ಟು 6 ಬೂತ್‌ಗಳು ಅತೀ ಸೂಕ್ಷ್ಮ ಮತಗಟ್ಟೆಗಳನ್ನಾಗಿ ಗುರುತಿಸಲಾಗಿದ್ದು 6 ಬಂಕರ್‌ಗಳ ಅಳವಡಿಕೆಯೊಂದಿಗೆ ವಿಶೇಷ ಭದ್ರತೆಯನ್ನು ಒದಗಿಸಲಾಗಿದೆ.

ಲೈಂಗಿಕ ಅಲ್ಪಸಂಖ್ಯಾಕರಿಗೆ ಮೊದಲ ಬಾರಿಗೆ ಮತದಾನ ಹಕ್ಕು
ಮಂಗಳೂರು:
ಇದೇ ಮೊದಲ ಬಾರಿಗೆ ಭಾರತೀಯ ಚುನಾವಣಾ ಆಯೋಗವು ರಾಜ್ಯದಲ್ಲಿ ಲೈಂಗಿಕ ಅಲ್ಪಸಂಖ್ಯಾಕರಿಗೆ ಮತದಾನದ ಹಕ್ಕು ನೀಡಿದೆ. ಅದರಂತೆ ಈ ಬಾರಿ ಮಂಗಳೂರು ಉತ್ತರದಲ್ಲಿ 8 ಮಂದಿ ಹಾಗೂ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 56 ಹಾಗೂ ಮಂಗಳೂರು ಕ್ಷೇತ್ರದಲ್ಲಿ 13 ಮಂದಿ ಸೇರಿದಂತೆ ಒಟ್ಟು 77 ಮಂದಿ ಲೈಂಗಿಕ ಅಲ್ಪಸಂಖ್ಯಾಕರು ಶನಿವಾರ ತಮ್ಮ ಮತ ಚಲಾಯಿಸುವುದಕ್ಕೆ ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಂಡಿದ್ದಾರೆ.

ದಕ್ಷಿಣ ಕ್ಷೇತ್ರದಲ್ಲಿ 39 ಮಂದಿಯಿಂದ ಮತದಾನ
ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಈವರೆಗೆ ನಡೆದ ಯಾವುದೇ ಚುನಾವಣೆಯಲ್ಲಿಯೂ ಲೈಂಗಿಕ ಅಲ್ಪಸಂಖ್ಯಾಕರಿಗೆ ಮತ ಚಲಾಯಿಸುವ ಅವಕಾಶ ಇರಲಿಲ್ಲ. ಇದರಿಂದ ಅವರು ಮತದಾನದಿಂದ ವಂಚಿತರಾಗಿದ್ದರು. ಆದರೆ ಇತ್ತೀಚಿನ ಸಮಾಜದಲ್ಲಿ ಲೈಂಗಿಕ ಅಲ್ಪಸಂಖ್ಯಾಕರ ಬದುಕಿಗೆ ಸಂಬಂಧಿಸಿದಂತೆ ಬಹಳಷ್ಟು ಸುಧಾರಣೆಗಳಾಗಿವೆ. ಶೈಕ್ಷಣಿಕ, ಔದ್ಯೋಗಿಕ ರಂಗಗಳಲ್ಲಿ ಇತರರಂತೆ ಅವರೂ ತೊಡಗಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ಮತದಾನ ಮಾಡುವುದಕ್ಕೂ ಒಲವು ವ್ಯಕ್ತಪಡಿಸಿದ್ದರು. ಅದರಂತೆ ಕರ್ನಾಟಕ ವಿಧಾನಸಭೆಗೆ ನಡೆಯುವ 2018ನೇ ಸಾಲಿನ ಚುನಾವಣೆಯಲ್ಲಿ ಚುನಾವಣಾ ಆಯೋಗವು ಲೈಂಗಿಕ ಅಲ್ಪಸಂಖ್ಯಾಕರಿಗೂ ಮತದಾನಕ್ಕೆ ಅವಕಾಶ ಕಲ್ಪಿಸಿದ ಹಿನ್ನೆಲೆಯಲ್ಲಿ ಅವರು ತಮ್ಮ ಮೊದಲ ಹಕ್ಕನ್ನು ಶನಿವಾರ ಚಲಾಯಿಸುತ್ತಿದ್ದಾರೆ. ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 39 ಮಂದಿ ಲೈಂಗಿಕ ಅಲ್ಪಸಂಖ್ಯಾಕರು ಶನಿವಾರ ಬೆಳಗ್ಗೆ 10.15ಕ್ಕೆ ಮಿಲಾಗ್ರಿಸ್‌ ಶಾಲೆಯಲ್ಲಿ ಮತದಾನ ಮಾಡುತ್ತಾರೆ.

EVM ಸರಿಯಿಲ್ಲವೆಂಬ ಆಪಾದನೆಗೆ ಜೈಲು !
ಪುತ್ತೂರು:
ಮತಯಂತ್ರ ಸರಿಯಿಲ್ಲ ಎಂಬ ಆರೋಪ ಮಾಡಿದ ಮತದಾರನಿಗೆ ಮರುಮತದಾನದ ಅವಕಾಶ ನೀಡಲಾಗಿದೆ. ಪರಿಶೀಲನೆ ವೇಳೆ ಆತನ ಆರೋಪ ಸುಳ್ಳೆಂಬುದು ಖಾತ್ರಿಯಾದರೆ, 6 ತಿಂಗಳು ಜೈಲು ಹಾಗೂ 1,000 ರೂ. ದಂಡ ನಿಶ್ಚಿತ.

ಮತ ಚಲಾವಣೆ ವೇಳೆ ತನ್ನ ಆಯ್ಕೆಯ ಅಭ್ಯರ್ಥಿ ಅಥವಾ ಪಕ್ಷಕ್ಕೆ ಮತ ಬೀಳದೇ, ಬೇರೊಂದು ಪಕ್ಷಕ್ಕೆ ಅಥವಾ 
ಅಭ್ಯರ್ಥಿಗೆ ಮತ ಚಲಾವಣೆ ಆಗಿದೆ ಎಂದು ಮತದಾರ ಆರೋಪಿಸುವ ಪ್ರಸಂಗವನ್ನು ಈ ಬಾರಿ ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿದೆ. ತತ್‌ ಕ್ಷಣ ಚುನಾವಣಾಧಿಕಾರಿ ನಿರ್ದೇಶನದಂತೆ ಬೂತ್‌ ಮಟ್ಟದ ಅಧಿಕಾರಿ, ಅಧ್ಯಕ್ಷಾಧಿಕಾರಿ ಅವರು ಮತದಾರನನ್ನು ವಿಚಾರಣೆಗೆ ಒಳಪಡಿಸುತ್ತಾರೆ. ಮತ ಚಲಾವಣೆಗೆ ಮತ್ತೂಂದು ಅವಕಾಶ ನೀಡುತ್ತಾರೆ ಮತ್ತು ಮತಯಂತ್ರವನ್ನು ಪರಿಶೀಲನೆ ನಡೆಸಲಾಗುತ್ತದೆ. ಒಂದು ವೇಳೆ ಮತದಾರನ ಆರೋಪ ಸರಿಯಾಗಿಯೇ ಇದ್ದರೆ, ಮತ ಚಲಾವಣೆ ಆಗುತ್ತದೆ. ಆರೋಪ ಸುಳ್ಳಾಗಿದ್ದರೆ ಸೆಕ್ಷನ್‌ 177-6ರ ಅಡಿಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ. ಕೂಡಲೆ ಬಂಧಿಸಿ, 6 ತಿಂಗಳ ಜೈಲು ಶಿಕ್ಷೆ ಮತ್ತು 1,000 ರೂ. ದಂಡ ವಿಧಿಸಲಾಗುತ್ತದೆ.

ಮತದಾನ ಆರಂಭಿಸುವ ಮೊದಲು ಅಣಕು ಮತದಾನ ನಡೆಯುತ್ತದೆ. ಈ ಹೊತ್ತಲ್ಲಿ ವಿವಿಧ ಪಕ್ಷಗಳ 12 ಏಜೆಂಟರ ಸಮಕ್ಷಮದಲ್ಲಿ ಮತಯಂತ್ರದ ಗುಣಮಟ್ಟ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಆದ್ದರಿಂದ ಇಲ್ಲಿ ಮತಯಂತ್ರ ಕೈಕೊಡುವ ಪ್ರಮೇಯವೇ ಇರುವುದಿಲ್ಲ. ಇದರ ಹೊರತಾಗಿಯೂ ಸುಳ್ಳು ಆರೋಪ ಮಾಡಿದರೆ, ಜೈಲು ಶಿಕ್ಷೆ ಖಚಿತ.

ಮತದಾರರಿಗೆ ಮತದಾನ ಕೇಂದ್ರದ ಬಗ್ಗೆ  ಗೊಂದಲ
ಪಡುಬಿದ್ರಿ:
ನಡ್ಪಾಲು ಗ್ರಾಮದ ವಾರ್ಡ್‌ ನಂಬರ್‌ 3, ವಿಭಾಗ ಸಂಖ್ಯೆ 185ರಲ್ಲಿನ ಮತದಾರರು ಶನಿವಾರ ನಡೆಯಲಿರುವ ಮತದಾನಕ್ಕಾಗಿ ತಾವು ತೆರಳುವ ಮತದಾನ ಕೇಂದ್ರದ ಬಗ್ಗೆ ಗೊಂದಲಕ್ಕೀಡಾಗುವ ಸಾಧ್ಯತೆಯಿದೆ. ಯಾಕೆಂದರೆ, ಚುನಾವಣಾ ಆಯೋಗದ ಮೂಲಕ ಭಾವಚಿತ್ರವಿರುವ ಗುರುತಿನ ಚೀಟಿ ನೀಡುವ ವೇಳೆ ಮತದಾರರಿಗೆ ಪಡುಬಿದ್ರಿ ಗಣಪತಿ ಪ್ರೌಢಶಾಲೆ ಇವರ ಮತದಾನ ಕೇಂದ್ರವೆಂದು ತಿಳಿಸ‌ಲಾಗಿದೆ. ಆದರೆ ಕೇಂದ್ರಕ್ಕಿರುವ ನಕ್ಷೆಯಲ್ಲಿ ಸದ್ಯ ಮತದಾನ ಕೇಂದ್ರವೇ ಆಗಿರದ ಗ್ರಾ. ಪಂ. ಸಭಾಭವನದ ವಿಭಾಗ ಸಂಖ್ಯೆ 185ಕ್ಕೆ ತೆರಳುವಂತೆ ಸೂಚಿಸಲಾಗಿದೆ. ಈ ಕಾರಣದಿಂದ ಮತದಾರ ಕಸಿವಿಸಿಗೊಳ್ಳುವುದು ಸಹಜವಾಗಿದೆ. ಪಿಡಿಒ ಆಗಲೀ, ಬಿ.ಎಲ್‌.ಒ.ಗಳಾಗಲೀ ಈ ಗೊಂದಲಕ್ಕೆ ಉತ್ತರಿಸಲು ಹಿಂದೇಟು ಹಾಕುತ್ತಿದ್ದಾರೆ.

ಈ ಹಿಂದೆ ಬೀಡು ಶಾಲೆ ಇವರ ಮತದಾನ ಕೇಂದ್ರವಾಗಿತ್ತು. ಈ ಶಾಲೆ ಮುಚ್ಚಿದ ಅನಂತರದಲ್ಲಿ ಗ್ರಾ.ಪಂ. ಸಭಾಭವನ ಮತದಾನ ಕೇಂದ್ರವಾಗಿತ್ತು. ಆದರೆ ಗ್ರಾ.ಪಂ. ನೂತನ ಕಟ್ಟಡದ ಕಾಮಗಾರಿ ಕೆಲಸವು ನಡೆಯುತ್ತಿರುವುದರಿಂದ ಗಣಪತಿ ಪ್ರೌಢಶಾಲೆಗೆ ಈ ಮತದಾನ ಕೇಂದ್ರವನ್ನು ವರ್ಗಾವಣೆಗೊಳಿಸಲಾಗಿತ್ತು. ಆದರೆ ಭಾವಚಿತ್ರವಿರುವ ಚೀಟಿ ನೀಡುವಾಗ ಗಣಪತಿ ಪ್ರೌಢಶಾಲೆ ಕೇಂದ್ರವೆನ್ನಲಾಗಿದ್ದರೂ ಮತದಾರರಿಗೆ ನೀಡುವ ಸ್ಲಿಪ್‌ ನಲ್ಲಿ ಜಿ.ಪಂ. ಬೋರ್ಡ್‌ ಶಾಲೆಗೆ ಹೋಗುವಂತೆ ನಮೂದಿಸಲಾಗಿದೆ.

ಭಾರೀ ಮಳೆಯಾಗಲಿದೆ ಎಂದು ಹವಾಮಾನ ಮುನ್ಸೂಚನೆ ಇದ್ದರೂ ಉಡುಪಿ ಜಿಲ್ಲೆಯಲ್ಲಿ ಶನಿವಾರದ ಮತದಾನಕ್ಕೆ ತೊಂದರೆಯಾಗದು. ಜಿಲ್ಲೆಯಲ್ಲಿ ಮಳೆಯಿಂದ ಸಂಪರ್ಕ ಕಡಿದು ಹೋಗುವಂತಹ ಸ್ಥಿತಿ ಇಲ್ಲ. ನದಿಗಳು ಇನ್ನೂ ತುಂಬಿಲ್ಲ. ಆದ್ದರಿಂದ ಮತದಾನಕ್ಕೆ ತೊಂದರೆಯಾಗದು.
– ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌, ಉಡುಪಿ ಜಿಲ್ಲಾಧಿಕಾರಿ

ಚುನಾವಣೆಗೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಯಾವುದೇ ಸಮಸ್ಯೆ ಇಲ್ಲ. ಮತದಾರರು ಮುಕ್ತವಾಗಿ ಮತಗಟ್ಟೆಗೆ ತೆರಳಿ ಮತದಾನ ಮಾಡಬಹುದು. ಭಾವಚಿತ್ರವಿರುವ ಮತದಾನ ಚೀಟಿ ಸಿಗದವರು ಅಥವಾ ವೋಟರ್‌ ಐಡಿ ಇಲ್ಲದವರು ತಮಗೆ ಮತದಾನದ ಅವಕಾಶ ಇಲ್ಲ ಎಂದು ಭಾವಿಸುವುದು ಬೇಡ. ಇತರ ಯಾವುದಾದರೂ 12 ದಾಖಲಾತಿಗಳಲ್ಲಿ ಯಾವುದಾದರೂ ಒಂದನ್ನು ಹಾಜರುಪಡಿಸಿ ಮತದಾನ ಮಾಡಬಹುದು.
– ಶಶಿಕಾಂತ್‌ ಸೆಂಥಿಲ್‌, ದ.ಕ. ಜಿಲ್ಲಾಧಿಕಾರಿ

ಮತದಾನವನ್ನು ಶಾಂತಿಯುತವಾಗಿ ನಡೆಸಲು ಸಿದ್ಧತೆಗಳು ನಡೆದಿವೆ. ಎಲ್ಲ 981 ಮತಗಟ್ಟೆಗಳಲ್ಲಿ ಸೂಕ್ತ ಭದ್ರತೆಯನ್ನು ಒದಗಿಸಲಾಗಿದೆ. ಸೆಕ್ಟರ್‌ ಮೊಬೈಲ್‌ಗ‌ಳ ರಾತ್ರಿ ಹಗಲು ಗಸ್ತು ಕಾರ್ಯಾಚರಣೆ ನಡೆಸುತ್ತಿವೆ. ಸೂಕ್ಷ್ಮ ಮತಗಟ್ಟೆಗಳಿಗೆ ಕೇಂದ್ರೀಯ ಅರೆ ಸೈನಿಕ ಪಡೆಯ ಭದ್ರತೆಯನ್ನು ಒದಗಿಸಲಾಗಿದೆ. ಒಟ್ಟು 3,000 ಪೊಲೀಸ್‌ ಸಿಬಂದಿಯನ್ನು ನೇಮಿಸಲಾಗಿದೆ. ನಿರ್ಭೀತಿಯ ವಾತಾವರಣದಲ್ಲಿ ಮತದಾನಕ್ಕೆ ಸರ್ವ ಸಿದ್ಧತೆಗಳು ಪೂರ್ಣಗೊಂಡಿವೆ.
– ಡಾ| ರವಿಕಾಂತೇ ಗೌಡ, ದ.ಕ. ಜಿಲ್ಲಾ  ಪೊಲೀಸ್‌ ವರಿಷ್ಠಾಧಿಕಾರಿ

ಮತದಾನಕ್ಕೆ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ. ಎಲ್ಲ 914 ಬೂತ್‌ ಮಟ್ಟದಲ್ಲಿ ಪೊಲೀಸ್‌ ಸಿಬಂದಿ ತಲುಪಿದ್ದು, ಒಟ್ಟು 2,700 ಪೊಲೀಸರು ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ. ಸೆಕ್ಟರ್‌ ಮೊಬೈಲ್‌ ಮತ್ತು ಪ್ರಹಾರ ದಳ (ಸ್ಟ್ರೈಕಿಂಗ್‌ ಫೋರ್ಸ್‌) ಹಗಲು ರಾತ್ರಿ ಗಸ್ತು ಕಾರ್ಯಾಚರಣೆ ನಡೆಸುತ್ತಿವೆ. ಶನಿವಾರ ಕ್ಷಿಪ್ರ ಕಾರ್ಯಾಚರಣೆ ಪಡೆ ಆಗಮಿಸಲಿದೆ. 
– ವಿಪುಲ್‌ ಕುಮಾರ್‌, ಮಂಗಳೂರು ಪೊಲೀಸ್‌ ಕಮಿಷನರ್‌

Advertisement

Udayavani is now on Telegram. Click here to join our channel and stay updated with the latest news.

Next