ಮೈಸೂರು: ಕಾಂಗ್ರೆಸ್, ಬಿಜೆಪಿಗಿಂತ ಜೆಡಿಎಸ್ ಸ್ಥಾನ ದೊಡ್ಡದಿದೆ. ಅಮಿತ್ ಶಾ, ಪ್ರಿಯಾಂಕಾ ಆಟ ರಾಜ್ಯದಲ್ಲಿ ನಡೆಯುವುದಿಲ್ಲ. ಕನ್ನಡ ನಾಡಿಗೆ ಅವರ ಕೊಡುಗೆ ಏನೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಚಾಮುಂಡಿ ಬೆಟ್ಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮಿತ್ ಶಾಗೆ ರಾಜ್ಯದಲ್ಲಿ ಜನಬೆಂಬಲ ವ್ಯಕ್ತವಾಗುತ್ತಿಲ್ಲ. ಅವರ ರ್ಯಾಲಿಗೆ ಹೆಚ್ಚಿನ ಜನರು ಬರುತ್ತಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಜನಬೆಂಬಲ ಕಳೆದುಕೊಂಡಿದ್ದಾರೆ. ಜೆಡಿಎಸ್ ಯಾರೊಂದಿಗೂ ಒಳಒಪ್ಪಂದ ಮಾಡಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.
ಅಮಿತ್ ಶಾ ಮೈಸೂರು ಭಾಗಕ್ಕೆ ಬಂದಾಕ್ಷಣ ಏನಾಗುತ್ತದೆ? ಅದೆಲ್ಲ ಮತವಾಗಿ ಬದಲಾಗಬೇಕಲ್ಲ. ಅಮಿತ್ ಶಾ ಅವರ ಕಾರ್ಯಕ್ರಮ ನೋಡಿದ್ದೇನೆ. ನನಗೆ ಬಂದಿದ್ದಷ್ಟು ಜನ ಅವರಿಗೆ ಬಂದಿಲ್ಲ. ಅವರು ರೋಡ್ ಶೋ ಮಾಡಿದಾಕ್ಷಣ ಜೆಡಿಎಸ್ ಭದ್ರಕೋಟೆಗೆ ಲಗ್ಗೆ ಹಾಕಿದ್ರು ಅನ್ನೋ ಭ್ರಮೆ ಬೇಡ. ನಮಗೆ ಸಿಕ್ಕಿರುವ ಸ್ಪಂದನೆ ಬಿಜೆಪಿ ಕಾಂಗ್ರೆಸ್‌ಗೆ ಸಿಕ್ಕಿಲ್ಲ. ಮುಂದಿನ 15 ದಿನಗಳ ಪ್ರಚಾರದಲ್ಲಿ ನಮ್ಮನ್ನು ಕುಗ್ಗಿಸಲು ಆಗುವುದಿಲ್ಲ. 123ರ ಗುರಿಯನ್ನು ತಾಯಿ ಚಾಮುಂಡೇಶ್ವರಿ ಮುಟ್ಟಿಸುತ್ತಾಳೆ ಎಂದರು.
ಲಿಂಗಾಯತ ಸಮುದಾಯದ ಸಿಎಂಗಳು ಭ್ರಷ್ಟರು ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರ ಮಾತನಾಡಿದ ಅವರು, ಸಿದ್ದರಾಮಯ್ಯನವರು ಅನುಭವಿ ರಾಜಕಾರಣಿ. ಅಂತಹವರ ಬಾಯಿಯಲ್ಲಿ ಆ ಮಾತು ಯಾಕೆ ಬಂತು ಅಂತ ಗೊತ್ತಿಲ್ಲ. ಯಾವ ಅರ್ಥದಲ್ಲಿ ಆ ಮಾತು ಹೇಳಿ¨ªಾರೋ ಗೊತ್ತಿಲ್ಲ. ಭ್ರಷ್ಟಾಚಾರ ಎಂಬುದು ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಸಿದ್ದರಾಮಯ್ಯರ ಹೇಳಿಕೆ ಚುನಾವಣೆ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನು ಕಾಯ್ದು ನೋಡಬೇಕಿದೆ ಎಂದು ತಿಳಿಸಿದರು.
ನಿರಂತರ ಚುನಾವಣಾ ಪ್ರಚಾರದಿಂದ ಬಳಲಿಕೆಯಾಗಿತ್ತು. ಜ್ವರದಿಂದ ಚೇತರಿಸಿಕೊಂಡಿದ್ದೇನೆ. ವಿಶ್ರಾಂತಿ ಇಲ್ಲದೇ ಜ್ವರ, ಮೈ ಕೈ ನೋವು ಬಂದಿತ್ತು. ಈಗ ಚೇತರಿಸಿಕೊಂಡು ಮತ್ತೆ ಪ್ರಚಾರಕ್ಕೆ ಬಂದಿದ್ದೇನೆ. ಈಗಾಗಲೇ ನಾನು ಕನ್ನಡಿಗರ ಹೃದಯ ಮುಟ್ಟಿದ್ದೇನೆ. ಮುಂದಿನ 10 ದಿನಗಳ ಕಾಲ ನಿರಂತರ ಪ್ರಚಾರ ಕಾರ್ಯದಲ್ಲಿ ಭಾಗಿಯಾಗುತ್ತೇನೆ.
– ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಿಎಂ