Advertisement

ಬೈಂದೂರು: ವಿಶಾಲ ಕ್ಷೇತ್ರದ ಬೇಡಿಕೆಗಳೂ ಸಮೃದ್ಧ

08:45 AM Apr 24, 2018 | Team Udayavani |

ಮಲೆನಾಡು ಹಾಗೂ ಕರಾವಳಿ ಭಾಗವನ್ನು ಒಳಗೊಂಡಿರುವ ಬೈಂದೂರು ಕ್ಷೇತ್ರ ಅತ್ಯಂತ ವಿಶಾಲ ವ್ಯಾಪ್ತಿ ಹೊಂದಿದೆ. ದಕ್ಷಿಣ ಭಾರತದ ಪ್ರಸಿದ್ಧ ಕ್ಷೇತ್ರವಾದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಸೇರಿದಂತೆ ಕಲೆ, ಸಾಹಿತ್ಯ, ಸಂಸ್ಕೃತಿಯಲ್ಲಿ ಪ್ರಸಿದ್ಧಿ ಪಡೆದಿದೆ. ಪ್ರವಾಸೋದ್ಯಮ ಅಭಿವೃದ್ಧಿ, ರಸ್ತೆ ಸುಧಾರಣೆ, ಕೃಷಿ ಪ್ರೋತ್ಸಾಹ, ಉನ್ನತ ಶಿಕ್ಷಣ, ಉದ್ಯೋಗಾವಕಾಶ ಕೇಂದ್ರಗಳ ಸ್ಥಾಪನೆ ಇಲ್ಲಿನ ಪ್ರಮುಖ ಬೇಡಿಕೆ.

Advertisement

1. ಕುಡಿಯುವ ನೀರು
ಕುಡಿಯುವ ನೀರಿನ ಪೂರೈಕೆ ಪ್ರಮುಖ ಆದ್ಯತೆಯಾಗಬೇಕು. ಈಗಾಗಲೇ ಪ್ರಸ್ತಾವನೆಯಲ್ಲಿರುವ ಬಹುಗ್ರಾಮ ನೀರಿನ ಯೋಜನೆ ಸೇರಿದಂತೆ ಪ್ರಮುಖ ಐದು ನದಿಗಳಿಗೆ ಅಣೆಕಟ್ಟು ನಿರ್ಮಿಸುವ ಮೂಲಕ ನೀರಿನ ಸಮಸ್ಯೆ ನೀಗಿಸಬೇಕು.

2. ಪ್ರವಾಸೋದ್ಯಮ
ಕ್ಷೇತ್ರದಲ್ಲಿ ಪ್ರವಾಸೋದ್ಯಮಕ್ಕೆ ವಿಶೇಷ ಅವಕಾಶವಿದೆ. ನೈಸರ್ಗಿಕ ಸಂಪನ್ಮೂಲ, ಧರ್ಮ ಕೇತ್ರಗಳ ಪರಿಸರ ಅಭಿವೃದ್ಧಿ ಹಾಗೂ ಭಕ್ತಿ ಪ್ರವಾಸೋದ್ಯಮದ ಜತೆಗೆ ಕೊಲ್ಲೂರಿಗೆ ಉಪನಗರ ವಾಗಿ ಬೈಂದೂರನ್ನು ಮಾರ್ಪಡಿಸಬೇಕು.

3. ಕೈಗಾರಿಕೆ
ಜನರ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸುವುದು ಪ್ರಮುಖ ಬೇಡಿಕೆ. ಉದ್ಯೋಗಾವಕಾಶ ಹೆಚ್ಚಿಸುವ ನೆಲೆಯಲ್ಲಿ ಕಾರ್ಖಾನೆಗಳು ಹಾಗೂ ದೊಡ್ಡ ಕಂಪೆನಿಗಳು ಬೈಂದೂರಿನಲ್ಲಿ  ಸ್ಥಾಪನೆಯಾಗಬೇಕು.

4. ಆರೋಗ್ಯ
ಬೈಂದೂರಿನಲ್ಲಿ ಸಮುದಾಯ ಆರೋಗ್ಯ ಕೇಂದ್ರ ಹೊರತುಪಡಿಸಿದರೆ ಇತರ ಆಸ್ಪತ್ರೆಗಳಿಲ್ಲ. ಈಗಾಗಲೇ ತಾಲೂಕು ಕೇಂದ್ರವಾಗಿ ಮಾರ್ಪಟ್ಟಿರುವ ಬೈಂದೂರಿನಲ್ಲಿ ತಾಲೂಕು ಆಸ್ಪತ್ರೆ ಶೀಘ್ರ ಸ್ಥಾಪನೆಯಾಗಬೇಕಿದೆ.

Advertisement

5. ಆಡಳಿತ
ತಾಲೂಕು ಕೇಂದ್ರವಾಗಿರುವ ಕಾರಣ ಬಹುತೇಕ ಕಚೇರಿಗಳು ಕಾರ್ಯ ನಿರ್ವಹಿ ಸುತ್ತಿವೆ. ಇನ್ನುಳಿದಂತೆ ನ್ಯಾಯಾಲಯ, ತಾಲೂಕು ಪಂಚಾಯತ್‌ ಹಾಗೂ ಮಿನಿ ವಿಧಾನಸೌಧ ಶೀಘ್ರ ಬೈಂದೂರಿನಲ್ಲಿ ಪ್ರಾರಂಭವಾಗಬೇಕಾಗಿದೆ.

6. ಚರಂಡಿ ವ್ಯವಸ್ಥೆ
ನಗರ ಪ್ರದೇಶದಲ್ಲಿ ಜನ ಜಂಗುಳಿ ಹಾಗೂ ವಾಹನ ದಟ್ಟಣೆಯಿದೆ. ಚರಂಡಿ ಸಮಸ್ಯೆಯಿಂದ ಮಳೆಗಾಲದಲ್ಲಿ ಜನ-ವಾಹನಗಳ ಸಂಚಾರ ದುಸ್ತರವಾಗುತ್ತದೆ. ಪ್ರಮುಖ ರಸ್ತೆಗಳ ಬದಿಯಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಕಲ್ಪಿಸಬೇಕು.

7. ಸಾರಿಗೆ
ಗ್ರಾಮೀಣ ಪ್ರದೇಶಗಳಿಗೆ ಸಾರಿಗೆ ಸೌಲಭ್ಯದ ಕೊರತೆಯಿದೆ. ಇನ್ನಷ್ಟು ಸರಕಾರಿ ಬಸ್‌ಗಳನ್ನು ಎಲ್ಲ ಪ್ರದೇಶಗಳಿಗೆ ಓಡಿಸುವ ಆವಶ್ಯಕತೆಯಿದೆ. ಸರಕಾರಿ ಬಸ್‌ ನಿಲ್ದಾಣದ ಕಾಮಗಾರಿಯನ್ನು ಶೀಘ್ರ ಪ್ರಾರಂಭಿಸಬೇಕು.

8. ಶಿಕ್ಷಣ
ಬೈಂದೂರಿನಲ್ಲಿ ಪದವಿ ಕಾಲೇಜು ಇದ್ದರೂ ಕೆಲವೊಂದು ಸೌಲಭ್ಯಗಳ ಕೊರತೆಯಿಂದಾಗಿ ಗ್ರಾಮೀಣ ವಿದ್ಯಾರ್ಥಿಗಳು ಪದವಿ ಶಿಕ್ಷಣಕ್ಕೆ ಕುಂದಾಪುರ ಅಥವಾ ಭಟ್ಕಳಕ್ಕೆ ತೆರಳಬೇಕಾಗಿದೆ. ಈಗಿರುವ ಕಾಲೇಜಿನ ಅಭಿವೃದ್ಧಿ ಅಗತ್ಯ.

9. ರಾಷ್ಟ್ರೀಯ ಹೆದ್ದಾರಿ
ಬೈಂದೂರು ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಮಂದಗತಿಯಲ್ಲಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಮಳೆಗಾಲದಲ್ಲಿ ಎದುರಾಗಬಹುದಾದ ಸಮಸ್ಯೆಗಳ ಬಗ್ಗೆ ಗಮನಹರಿಸಬೇಕು.

10. ಕೃಷಿ ಚಟುವಟಿಕೆ
ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಇನ್ನಷ್ಟು ವೆಂಟೆಡ್‌ ಡ್ಯಾಮ್‌ ನಿರ್ಮಾಣ ಹಾಗೂ ಮಲೆನಾಡು ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್‌ನ ಆವಶ್ಯಕತೆಯಿದೆ.ಮೀನುಗಾರಿಕಾ ಬಂದರು ಅಭಿವೃದ್ಧಿ ಕಾಮಗಾರಿ ತ್ವರಿತಗೊಳ್ಳಬೇಕಿದೆ.

11. ತಾಲೂಕು ಕ್ರೀಡಾಂಗಣ
ಕ್ರೀಡಾ ಪ್ರತಿಭೆಗಳನ್ನು ಬೆಳೆಸುವ ದೃಷ್ಟಿ ಯಿಂದ ತಾಲೂಕು ಕೇಂದ್ರವಾಗಿರುವ ಬೈಂದೂರಿನಲ್ಲಿ ತಾಲೂಕು ಕ್ರೀಡಾಂಗಣ, ಒಳಾಂಗಣ ಕ್ರೀಡಾಂಗಣ ನಿರ್ಮಾಣವಾಗಬೇಕು. ಕ್ರೀಡೆಗೆ ಪೂರಕವಾದ ಇತರ ಸೌಲಭ್ಯಗಳನ್ನೂ ಕಲ್ಪಿಸಬೇಕು.

12. ರೈಲು ನಿಲ್ದಾಣ, ವಿಮಾನ ನಿಲ್ದಾಣ 
ಬೈಂದೂರು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಿದ್ದು, ಕೊಲ್ಲೂರು ಕ್ಷೇತ್ರಕ್ಕೆ ಹೊರ ರಾಜ್ಯಗಳಿಂದ ಪ್ರತಿದಿನ ನೂರಾರು ಭಕ್ತರು ಆಗಮಿಸುತ್ತಾರೆ. ರೈಲು ನಿಲ್ದಾಣದ ಪ್ರಗತಿ ಹಾಗೂ ಭವಿಷ್ಯದ ದೃಷ್ಟಿಯಿಂದ ವಿಮಾನ ನಿಲ್ದಾಣದ ಅಗತ್ಯವೂ ಇದೆ.

Advertisement

Udayavani is now on Telegram. Click here to join our channel and stay updated with the latest news.

Next