ಬೆಂಗಳೂರು: ಮಾಸಿಕ ಕನಿಷ್ಠ ಗೌರವಧನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸಾವಿರಾರು ಸಂಖ್ಯೆಯಲ್ಲಿ ಆಶಾ ಕಾರ್ಯಕರ್ತೆಯರು ಶುಕ್ರವಾರ ಉದ್ಯಾನನಗರಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
ಕ್ರಾಂತಿಕಾರಿ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್ ವರೆಗೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಆಶಾ ಕಾರ್ಯಕರ್ತೆಯರು ಫ್ರೀಡಂ ಪಾರ್ಕ್ ವರೆಗೆ ಜಾಥಾ ನಡೆಸಿದರು. ಕಳೆದ ಹದಿನೈದು ತಿಂಗಳ ಪ್ರೋತ್ಸಾಹ ಧನವನ್ನು ಕೂಡಲೇ ಪಾವತಿಸುವಂತೆ ಈ ಸಂದರ್ಭದಲ್ಲಿ ಒತ್ತಾಯಿಸಿದರು.
ಹಾವೇರಿ, ರಾಯಚೂರು, ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ನಸುಗೆಂಪು ಬಣ್ಣದ ಸಮವಸ್ತ್ರದ ಸೀರೆಯನ್ನು ಧರಿಸಿ ಪ್ರತಿಭಟನಾ ಜಾಥಾ ನಡೆಸಿದ್ದು, ಇದು ಇಡೀ ಉದ್ಯಾನನಗರಿ ಪಿಂಕ್ ನಗರಿಯಂತೆ ಕಾಣಿಸುವಂತಾಗಿತ್ತು.
ಅಹೋರಾತ್ರಿ ಪ್ರತಿಭಟನೆಗೆ ನಿರ್ಧಾರ?
ತಮ್ಮ ಬೇಡಿಕೆ ಈಡೇರುವವರೆಗೆ ಅಹೋರಾತ್ರಿ ಧರಣಿ ನಡೆಸಲು ಪ್ರತಿಭಟನೆ ನಡೆಸಲು ಆಶಾ ಕಾರ್ಯಕರ್ತೆಯರು ನಿರ್ಧರಿಸುವ ಸಾಧ್ಯತೆ ಇದೆ ಎಂದು ಟಿವಿ9 ವರದಿ ತಿಳಿಸಿದೆ. ಬೇಡಿಕೆ ಈಡೇರುವವರೆಗೆ ಫ್ರೀಡಂ ಪಾರ್ಕ್ ನಲ್ಲೇ ಮೊಕ್ಕಾಂ ಹೂಡುವುದಾಗಿ ಪಟ್ಟು ಹಿಡಿದಿದ್ದು, ಅಧಿಕಾರಿಗಳ ಮನವೊಲಿಕೆಗೂ ಆಶಾ ಕಾರ್ಯಕರ್ತೆಯರು ಬಗ್ಗಲಿಲ್ಲ. ಸ್ಥಳಕ್ಕೆ ಸಚಿವ ಶ್ರೀರಾಮುಲು ಭೇಟಿ ನೀಡುವಂತೆ ಪಟ್ಟು ಹಿಡಿದಿದ್ದಾರೆ.
ಏತನ್ಮಧ್ಯೆ ಸರ್ಕಾರದ ಪರವಾಗಿ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದು, ಆಶಾ ಕಾರ್ಯಕರ್ತೆಯರು ಬೇಡಿಕೆಗಳನ್ನು ಅಧಿಕಾರಿಗಳ ಮುಂದಿಟ್ಟು ಅಹವಾಲು ಹೇಳಿಕೊಂಡಿದ್ದಾರೆ.