Advertisement

ಮಾಸಾಂತ್ಯದಲ್ಲೂ ಕೈ ಸೇರದ “ಆಶಾ ಕಾರ್ಯಕರ್ತರ’ನಿಧಿ

12:10 AM Jun 13, 2022 | Team Udayavani |

ಬೆಂಗಳೂರು: ಕೊರೊನಾ ಸಂದರ್ಭ ಆಶಾ ಕಾರ್ಯಕರ್ತೆಯರ ಸೇವೆಯನ್ನು ಗಮನಿಸಿ, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂ ಎಚ್‌ಒ) ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಹೆಗ್ಗಳಿಗೆ ಪಾತ್ರರಾಗಿರುವ ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತೆಯರಿಗೆ (ಆಶಾ) ಇನ್ನೂ ಸರಿಯಾದ ಸಂಬಳ, ಗೌರವಧನ ಹಾಗೂ ಸಮವಸ್ತ್ರ ಸಿಗುತ್ತಿಲ್ಲ.

Advertisement

ಕೋವಿಡ್‌-19 ಸಮಯದಲ್ಲಿ ಸರಿಯಾಗಿ ನೀಡುತ್ತಿದ್ದ ಸಂಬಳವನ್ನು ಕೋವಿಡ್‌ ಅನಂತರ ಏಕೆ ನೀಡುತ್ತಿಲ್ಲ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಆಶಾ ಕಾರ್ಯಕರ್ತೆಯರು ಕೊರೊನಾ ಸಮಯದಲ್ಲಿ ಮಾಡುತ್ತಿದ್ದ ಕೆಲಸವನ್ನು ಇಂದಿಗೂ ನೆರವೇರಿಸುತ್ತಿದ್ದಾರೆ.

ದಿನಕ್ಕೆ ಏಳೆಂಟು ಗಂಟೆಗಳ ಕಾಲ ಕಾರ್ಯ ನಿರ್ವಹಿಸುವ ಅವರು, ಕೆಲವೊಮ್ಮೆ ಹಳ್ಳಿಗಳಲ್ಲಿ ತುರ್ತು ಘಟಕಗಳು ಇಲ್ಲದ ಕಾರಣ, ಮಧ್ಯರಾತ್ರಿ ಯಲ್ಲಿಯೂ ಗರ್ಭಿಣಿಯರನ್ನು ಅಥವಾ ಇತರ ತುರ್ತು ಪರಿಸ್ಥಿತಿಯಲ್ಲಿರುವವರನ್ನು ಜಿಲ್ಲಾ ಆಸ್ಪತ್ರೆಗಳಿಗೆ ಕರೆದೊಯ್ಯುತ್ತಾರೆ. ಇನ್ನು ಕರಾವಳಿ, ಗುಡ್ಡಗಾಡು ಪ್ರದೇಶಗಳಲ್ಲಿ ಸರಿಸುಮಾರು 5ರಿಂದ 15 ಕಿ.ಮೀ. ಪ್ರಯಾಣಿಸಬೇಕಾಗುತ್ತದೆ. ಇದರಿಂದಾಗಿ ಅವರು ದಿನದ 24 ಗಂಟೆಯೂ ಕರ್ತವ್ಯ ನಿರ್ವಹಿಸಿದರೂ, ಯಾವುದೇ ವಿಶೇಷ ಭತ್ತೆ ದೊರೆಯುವುದಿಲ್ಲ.

ಕೇಂದ್ರ ಸರಕಾರದಿಂದ ನೀಡುವ ಆಶಾ ನಿಧಿ
ಆಶಾ ಕಾರ್ಯಕರ್ತೆಯರು ನಿರ್ವಹಿಸುವ ವಿವಿಧ 37 ನಿರ್ದಿಷ್ಟ ಕಾರ್ಯಗಳಿಗೆಂದು ನೀಡುವ ವಿಶೇಷ ಭತ್ತೆಯನ್ನು ಕೇಂದ್ರ ಸರಕಾರದಿಂದ ನೀಡಲಾಗುತ್ತದೆ. ಆದರೆ, ಉಪ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಪ್ರಾಥಮಿಕ ಆರೋಗ್ಯ ಅಧಿಕಾರಿಗಳು ಆಶಾ ಕಾರ್ಯಕರ್ತೆಯರು ಮಾಡಿದ ಕೆಲಸಗಳನ್ನು ಆಶಾನಿಧಿಗೆ ಸೇರ್ಪಡಿಸಬೇಕು. ಆಗ ಮಾತ್ರ ಆಶಾ ಕಾರ್ಯಕರ್ತೆಯರಿಗೆ ಆಶಾ ನಿಧಿ ವಿಶೇಷ ಭತ್ತೆ ಸಿಗುತ್ತದೆ.

ತಾಂತ್ರಿಕ ಸಮಸ್ಯೆ-ವಿಳಂಬ
5,000 ಜನಸಂಖ್ಯೆಗೆ ಒಂದು ಉಪ ಪ್ರಾಥಮಿಕ ಆರೋಗ್ಯ ಕೇಂದ್ರ ಇರುತ್ತದೆ. ಇದರಲ್ಲಿ ಒಬ್ಬ ಪಿಸಿಎಚ್‌ಒ ಕಾರ್ಯನಿರ್ವಹಿಸುತ್ತಿರುತ್ತಾರೆ. ಇವರಡಿ ಐದಾರು ಜನ ಆಶಾ ಕಾರ್ಯಕರ್ತೆಯರು ಕಾರ್ಯನಿರ್ವಹಿಸುತ್ತಿರುತ್ತಾರೆ. ಆದರೆ, ರಾಜ್ಯದಲ್ಲಿ ಸುಮಾರು 2,500 ಪಿಸಿಎಚ್‌ಒ ಹುದ್ದೆಗಳು ಖಾಲಿಯಿವೆ. ಇದರಿಂದಾಗಿ ಆಶಾ ಕಾರ್ಯಕರ್ತೆಯರ ಕೆಲಸಗಳ ಡಾಟಾ ಎಂಟ್ರಿ ಸಮಸ್ಯೆ ಉಂಟಾಗಿದೆ. ಒಂದು ಕಡೆ ಪಿಸಿಎಚ್‌ಒಗಳು ಇಲ್ಲದಿರುವುದು ಮತ್ತೂಂದೆಡೆ ತಂತ್ರಜ್ಞಾನದ ತಿಳಿವಳಿಕೆ ಇಲ್ಲದ ಪಿಸಿಎಚ್‌ಒಗಳ ಕಾರಣ ಆಶಾ ಕಾರ್ಯಕರ್ತೆಯರ ಆಶಾ ನಿಧಿ ವಿಳಂಬವಾಗುತ್ತಿದೆ.

Advertisement

ನಮ್ಮ ಅಳಲು ಕೇಳ್ಳೋರ್ಯಾರು?
ಆಶಾ ಕಾರ್ಯಕರ್ತೆಯರು ದಿನಪೂರ್ತಿ ಕಾರ್ಯನಿರ್ವಹಿಸಿದರೂ, ಡಾಟಾ ಎಂಟ್ರಿ ಸಮಸ್ಯೆಯಿಂದಾಗಿ ಮಾಸಾಂತ್ಯ ದಲ್ಲಿ ಆಶಾ ನಿಧಿ ಕೈಸೇರುತ್ತಿಲ್ಲ. ಸಂಬಳವನ್ನೇ ನೆಚ್ಚಿಕೊಂಡು ಸಾಕಷ್ಟು ಕುಟುಂಬಗಳು ಜೀವನ ಸಾಗಿಸಬೇಕಾಗಿದೆ. ಆದರೆ, ಪ್ರತೀ ತಿಂಗಳೂ ಆಯಾ ತಿಂಗಳ ಸಂಬಳ ಮತ್ತು ವಿಶೇಷ ಭತ್ತೆ ಸಿಗುತ್ತಿಲ್ಲ ಎಂದು ಆಶಾ ಕಾರ್ಯಕರ್ತೆಯೊಬ್ಬರು ಅಳಲು ತೋಡಿ ಕೊಂಡಿದ್ದಾರೆ.

ಆಶಾ ಕಾರ್ಯಕರ್ತೆರ
ಆಶಾನಿಧಿ ಕಾರ್ಯಗಳು
ಗರ್ಭಿಣಿಯರ ಆರೈಕೆ- 300 ರೂ.
ಸಾಂಸ್ಥಿಕ ಹೆರಿಗೆ ಉತ್ತೇಜಿಸಿದರೆ – 300 ರೂ.
ಗೃಹಾಧಾರಿತ ನವಜಾತ ಶಿಶು ಆರೈಕೆ- 250 ರೂ.
ಗ್ರಾಮ ಆರೋಗ್ಯ ಮತ್ತು ಪೌಷ್ಠಿಕ ಆಹಾರ ದಿನಾಚರಣೆಗಳಲ್ಲಿ ಭಾಗಿಯಾದರೆ – 200 ರೂ.
ಗರ್ಭಿಣಿಯರ ಪಟ್ಟಿ ನಿರ್ವಹಣೆ – 300 ರೂ.
ದಂಪತಿಗಳ ಪಟ್ಟಿ ತಯಾರಿಸುವುದು – 300 ರೂ.
ಮನೆ ಮನೆ ಸಮೀಕ್ಷೆ- 300 ರೂ.
ಆರೋಗ್ಯ ಪುಸ್ತಕದ ನಿರ್ವಹಣೆ – 300 ರೂ.
ಚುಚ್ಚು ಮದ್ದಿಗೆ ಮಕ್ಕಳ ಪಟ್ಟಿಗೆ – 300 ರೂ.
– ಹೀಗೆ ವಿವಿಧ ರೀತಿಯ 37 ಕಾರ್ಯಗಳಿವೆ. ಪ್ರತಿಯೊಂದು ಕೆಲಸಕ್ಕೂ ಇಂತಿಷ್ಟು ಹಣ ಎಂದು ಆಶಾ ಕಾರ್ಯಕರ್ತೆಯರಿಗೆ ನಿಗದಿ ಮಾಡಲಾಗಿದೆ.

ಪಿಸಿಎಚ್‌ಒ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ಬಗ್ಗೆ ಸರಕಾರಕ್ಕೆ ಮಾಹಿತಿ ನೀಡ ಲಾ ಗಿದೆ. ಮೂರು ತಿಂಗಳಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಹಾಗೂ ಆಶಾನಿಧಿ ವಿಳಂಬದ ಬಗ್ಗೆ ಆಶಾ ಕಾರ್ಯಕರ್ತೆಯರ ಸಂಘದೊಂದಿಗೆ ಚರ್ಚಿಸಿ, ಸಮಸ್ಯೆಗೆ ಪರಿಹಾರ ನೀಡುತ್ತೇವೆ.
– ರಂದೀಪ್‌, ಆಯುಕ್ತರು, ಆರೋಗ್ಯ ಇಲಾಖೆ

ಕೊರೊನಾ ಸಮಯದಲ್ಲಿ ಮಾತ್ರ ಸರಿಯಾಗಿ ಸಂಬಳ ಮತ್ತು ಆಶಾನಿಧಿಯನ್ನು ನೀಡಿದ್ದರು. ಅನಂತರ ಸಂಬಳ ಸರಿಯಾಗಿ ಕೊಟ್ಟಿಲ್ಲ ಹಾಗೂ ನಿವೃತ್ತಿ ಹೊಂದುತ್ತಿರುವ ಪಿಸಿಎಚ್‌ಒಗಳಿಗೆ ಡಾಟಾ ಎಂಟ್ರಿ ಸಮಸ್ಯೆ ಅಧಿಕ. ಆಶಾ ನಿಧಿ ಕೈಸೇರಲು ನಿಧಾನವಾಗುತ್ತಿದೆ. ಆದ್ದರಿಂದ ಸರ್ಕಾರ ಇದರ ಬಗ್ಗೆ ಗಮನ ಹರಿಸಬೇಕು.
-ನಾಗಲಕ್ಷ್ಮೀ,
ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ

– ಭಾರತಿ ಸಜ್ಜನ

Advertisement

Udayavani is now on Telegram. Click here to join our channel and stay updated with the latest news.

Next