Advertisement

ತಮಿಳುನಾಡಿನ ನದಿ ಜೋಡಣೆ ಯೋಜನೆಗೆ ನಮ್ಮ ಒಪ್ಪಿಗೆ ಅಗತ್ಯ

01:05 AM Mar 25, 2022 | Team Udayavani |

ಬೆಂಗಳೂರು: ಕರ್ನಾಟಕದ ಒಪ್ಪಿಗೆ ಇಲ್ಲದೆ ತಮಿಳುನಾಡಿನ ನದಿ ಜೋಡಣೆ ಯೋಜನೆಗೆ ಅನುಮತಿ ನೀಡಲೇಬಾರದು. ಜತೆಗೆ ಮೇಕೆದಾಟು ಯೋಜನೆ ವಿರುದ್ಧದ ತಮಿಳುನಾಡು ವಿಧಾನಸಭೆಯ ನಿರ್ಣಯವನ್ನು ಬಲವಾಗಿ ಖಂಡಿಸುತ್ತೇವೆ ಎಂದು ಗುರುವಾರ ರಾಜ್ಯ ವಿಧಾನ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಅಂಗೀಕರಿಸಲಾಗಿದೆ.

Advertisement

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು  ನಿರ್ಣಯವನ್ನು ಸ್ವಯಂಪ್ರೇರಿತರಾಗಿ ಮಂಡಿಸಿದರು.  ಇದಕ್ಕೆ ವಿಪಕ್ಷಗಳಾದ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ ಬಳಿಕ ಧ್ವನಿಮತದಿಂದ  ಅಂಗೀಕರಿಸಲಾಯಿತು.

ಸಭ್ಯವಲ್ಲದ ಭಾಷೆಗೆ ಆಕ್ಷೇಪ :

ನಿರ್ಣಯ ಮಂಡಿಸಿದ ಬೊಮ್ಮಾಯಿ, ಕರ್ನಾಟಕ ಯೋಜಿಸಿರುವ ಮೇಕೆದಾಟು ಕುಡಿಯುವ ನೀರು ಮತ್ತು ಸಮತೋಲನ ಜಲಾಶಯ ಯೋಜನೆಯನ್ನು ವಿರೋಧಿಸಿ, ಮಾ. 21ರಂದು ತಮಿಳುನಾಡು ವಿಧಾನಸಭೆಯು ಸಭ್ಯ ವಲ್ಲದ ಭಾಷೆಯಲ್ಲಿ ಅಂಗೀಕರಿಸಿದ ಒಕ್ಕೂಟ ವಿರೋಧಿ ಮತ್ತು ಅಸಮರ್ಥನೀಯ ನಿರ್ಣಯವನ್ನು ಮತ್ತು ತಮಿಳು ನಾಡು  ತನ್ನ ಪ್ರಾದೇಶಿಕ ವ್ಯಾಪ್ತಿಯಲ್ಲಿ ಏಕ  ಪಕ್ಷೀಯವಾಗಿ ಯೋಜಿಸಿರುವ ಕಾನೂನುಬಾಹಿರ ಯೋಜನೆಗಳನ್ನೂ ಈ ಸದನವು ಗಣನೆಗೆ ತೆಗೆದುಕೊಂಡಿದೆ ಎಂದರು.

ಸುಪ್ರೀಂ ಕೋರ್ಟ್‌ ಕಾವೇರಿ ಜಲ ವಿವಾದ ನ್ಯಾಯಾಧಿ ಕರಣದ ತೀರ್ಪನ್ನು ಮಾರ್ಪಡಿಸಿ ಸಾಮಾನ್ಯ ಜಲ ವರ್ಷದಲ್ಲಿ ಬಿಳಿಗುಂಡ್ಲುವಿನಲ್ಲಿ 177.25 ಟಿಎಂಸಿ ನೀರಿನ ಪ್ರಮಾಣವನ್ನು ಖಚಿತಪಡಿಸುವಂತೆ ನಿಗದಿಪಡಿಸಿದೆ. ಸುಪ್ರೀಂ ಕೋರ್ಟ್‌ ಹಂಚಿಕೆ ಮಾಡಿರುವಂತೆ ಬೆಂಗಳೂರು ಮಹಾನಗರದ ಕುಡಿಯುವ ನೀರಿನ ಅಗತ್ಯತೆಗೆ 24 ಟಿಎಂಸಿ (4.75 ಕಂಜಪ್ಟಿವ್‌) ನೀರನ್ನು ಸುಸ್ಥಿರಗೊಳಿಸಲು ಹಾಗೂ ತತ್ಪರಿಮಾಣವಾಗಿ ಜಲ ವಿದ್ಯುತ್‌ ಉತ್ಪಾದನೆಗೆ ಅಂತರ್‌ರಾಜ್ಯ ನದಿ ಕಾವೇರಿಗೆ ಅಡ್ಡಲಾಗಿ ಮೇಕೆದಾಟು ಕುಡಿಯುವ ನೀರು ಮತ್ತು ಸಮತೋಲನ ಜಲಾಶಯ ಯೋಜನೆಯನ್ನು ಯೋಜಿಸ ಲಾಗಿದೆ. ಇದರಿಂದ ತಮಿಳುನಾಡಿಗೆ ಯಾವುದೇ ಬಾಧಕ ಅಥವಾ ಹಾನಿಯಿಲ್ಲ ಎಂದು ಹೇಳಿರುವುದನ್ನು ಮುಖ್ಯಮಂತ್ರಿ ಬೊಮ್ಮಾಯಿ ಅವರು ಪ್ರಸ್ತಾವಿಸಿದರು.

Advertisement

ಅನುಮೋದಿಸಬೇಡಿ :

ಪೆನಿನ್ಸುಲರ್‌ ರಿವಲ್‌ ಡೆವಲಪ್‌ಮೆಂಟ್‌ ಯೋಜನೆಯಡಿಯಲ್ಲಿ ಗೋದಾವರಿ ಹೆಚ್ಚುವರಿ ನೀರನ್ನು ಕೃಷ್ಣಾ ನನ್ನಾ-ಕಾವೇರಿ-ಮೈಗೆ ಗುಂಡಾರ್‌ ಯೋಜನೆಗೆ ತಿರುವುಗೊಳಿಸುವ ವಿಕೃತ ಯೋಜನಾ ವರದಿಯನ್ನು ಕರ್ನಾಟಕ ರಾಜ್ಯವು ಸಹಿತ ಕಣಿವ ರಾಜ್ಯಗಳ ನೀರಿನ ಪಾಲನ್ನು ನಿರ್ಧರಿಸುವವರೆಗೆ ಅನುಮೋದಿಸ ಕೂಡದು ಎಂದು ಮುಖ್ಯಮಂತ್ರಿ ಕೇಂದ್ರ ಸರಕಾರವನ್ನು ಆಗ್ರಹಿಸಿದರು.

ದ್ವಂದ್ವ ನಿಲುವಿಗೆ ಖಂಡನೆ :

ಕರ್ನಾಟಕದ ಮೇಕೆದಾಟು ಯೋಜನೆಗೆ ತಮಿಳುನಾಡು ತನ್ನ ಒಪ್ಪಿಗೆ ಪಡೆಯಬೇಕೆಂದು ಕೋರಿದೆ. ಅದರೆ ಅದೇ ಸಮಯ ದಲ್ಲಿ  ಕರ್ನಾಟಕದ ರಾಜ್ಯದ ಒಪ್ಪಿಗೆ ಕೋರದೆ ಏಕಪಕ್ಷೀಯವಾಗಿ ಕಾನೂನುಬಾಹಿರ ಯೋಜನೆ ಗಳನ್ನು ಕೈಗೆತ್ತಿಕೊಳ್ಳುವ ಮೂಲಕ ತನ್ನ ದ್ವಂದ್ವ ನಿಲುವನ್ನು ಪ್ರದರ್ಶಿಸುತ್ತಿದೆ. ತಮಿಳುನಾಡಿನ ಕಾನೂನುಬಾಹಿರ ಯೋಜನೆಗಳನ್ನು ನಾವು ಬಲವಾಗಿ ಖಂಡಿಸುತ್ತೇವೆ ಎಂದು ಬೊಮ್ಮಾಯಿ ಹೇಳಿದರು.

ಕೇಂದ್ರ ಜಲ ಆಯೋಗವು  ಮೇಕೆದಾಟು ಯೋಜನೆಯ ವಿಸ್ತೃತ ಯೋಜನಾ ವರದಿಯನ್ನು ಅನುಮೋದಿಸುವಂತೆ ಹಾಗೂ ಪರಿಸರ ಮತ್ತು ಅರಣ್ಯ ಮಂತ್ರಾಲಯವು ಯೋಜನೆಗೆ ಪರಿಸರ ಅನುಮತಿಯನ್ನು ಪಡೆಯಲು ಟಿಒಆರ್‌ ಅನ್ನು ಅನುಮೋದಿಸುವಂತೆ ಈ ಸದನವು ಸರ್ವಾನುಮತದಿಂದ ಒತ್ತಾಯಿಸುತ್ತದೆ ಎಂದರು.

ಒಗ್ಗಟ್ಟು ಪ್ರದರ್ಶನ :

ರಾಜ್ಯದ ನೆಲ ಜಲ ವಿಚಾರದಲ್ಲಿ  ನಮ್ಮ ಪಕ್ಷ ಯಾವಾಗಲೂ ಬೆಂಬಲ ಸೂಚಿಸುತ್ತದೆ. ಈ ಸಂದರ್ಭದಲ್ಲಿ  ನಮ್ಮ ಎಲ್ಲ ಪಕ್ಷಗಳ ಒಗ್ಗಟ್ಟು ಪ್ರದರ್ಶನ ಆಗಬೇಕು. ಸರಕಾರ ಮಂಡಿಸಿದ ನಿರ್ಣಯಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಜೆಡಿಎಸ್‌ ಪಕ್ಷದ ಉಪ ನಾಯಕ ಬಂಡೆಪ್ಪ ಕಾಂಶಪೂರ್‌ ಅವರು ಹೇಳಿದರು.

ತಿದ್ದುಪಡಿಯೊಂದಿಗೆ ನಿರ್ಣಯ ಅಂಗೀಕಾರ :

ತಮಿಳುನಾಡು ಸರಕಾರ ನೆರೆ ರಾಜ್ಯಗಳ ಒಪ್ಪಿಗೆ ಇಲ್ಲದೆ ಕೈಗೆತ್ತಿಕೊಳ್ಳುವ ಗೋದಾವರಿ ಕೃಷ್ಣಾ-ಪೆನ್ನಾರ್‌-ಕಾವೇರಿ-ವೈಗೆ-ಗುಂಡಾರ್‌ ಜೋಡಣೆ ಯೋಜನೆಯ ಅನ್ನು ಅಂತಿಮಗೊಳಿಸದಂತೆ ಹಾಗೂ ತಮಿಳುನಾಡಿನ ಕಾನೂನುಬಾಹಿರ ಯೋಜನೆಗಳಿಗೆ ಅನುಮೋದನೆ ನೀಡದಂತೆ ಮತ್ತು ಆ ಯೋಜನೆಗಳನ್ನು ಮುಂದುವರಿಸದಂತೆ ನಿರ್ದೇಶಿಸಲು ಸಂಬಂಧಪಟ್ಟ ಕೇಂದ್ರದ ಸಂಸ್ಥೆಗಳನ್ನು ಒತ್ತಾಯಿಸುವ ನಿರ್ಣಯಕ್ಕೆ ಕಾಂಗ್ರೆಸ್‌ ಶಾಸಕ ಎಚ್‌.ಕೆ. ಪಾಟೀಲ್‌ ಆಕ್ಷೇಪ ವ್ಯಕ್ತಪಡಿಸಿದರು. ಕರ್ನಾಟಕ ಸರಕಾರದ ಒಪ್ಪಿಗೆ ಇಲ್ಲದೆ ಹಾಗೂ ನಮ್ಮ ಪಾಲಿನ ನೀರಿನ ಪ್ರಮಾಣ ನಿಗದಿಯಾಗದೆ ಕೈಗೆತ್ತಿಕೊಳ್ಳುವ ಯಾವುದೇ ಯೋಜನೆಗಳಿಗೆ ಅನುಮತಿ ನೀಡದಂತೆ ಎಂದು ನಿರ್ಣಯದಲ್ಲಿ ಸೇರಿಸುವಂತೆ ಸಲಹೆ ನೀಡಿದರು. ಅದನ್ನು ಒಪ್ಪಿಕೊಂಡು ಸಣ್ಣ ತಿದ್ದುಪಡಿಯೊಂದಿಗೆ ನಿರ್ಣಯವನ್ನು ಅಂಗೀಕರಿಸಲಾಯಿತು.

ಪ್ರಮುಖ ನಿರ್ಣಯಗಳು :

  • ರಾಜ್ಯದ ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡು ವಿಧಾನಸಭೆ ಅಂಗೀ ಕರಿ ಸಿದ ನಿರ್ಣಯವನ್ನು ಕರ್ನಾಟಕ ಖಂಡಿಸುತ್ತದೆ.
  • ಮೇಕೆದಾಟು ಯೋಜನೆಗೆ ಕೂಡಲೇ ಅನುಮತಿ ನೀಡುವಂತೆ ಕೇಂದ್ರ ಜಲ ಆಯೋಗ, ಪರಿಸರ ಮತ್ತು ಅರಣ್ಯ ಸಚಿವಾಲಯವನ್ನು ಒತ್ತಾಯಿಸುತ್ತದೆ.
  • ಕರ್ನಾಟಕದ ಒಪ್ಪಿಗೆ ಇಲ್ಲದೆ ಹಾಗೂ ರಾಜ್ಯದ ನೀರಿನ ಪಾಲು ನಿಗದಿ ಯಾಗದೆ ಗೋದಾವರಿ ಕೃಷ್ಣಾ-ಪೆನ್ನಾರ್‌-ಕಾವೇರಿ- ವೈಗೆ- ಗುಂಡಾರ್‌ ನದಿ ಜೋಡಣೆ ಯೋಜನೆಯನ್ನು  ಅಂತಿಮ ಗೊಳಿಸ ಬಾರದು. ತಮಿಳುನಾಡಿನ ಕಾನೂನು ಬಾಹಿರ ಯೋಜನೆ ಗಳಿಗೆ ಅನುಮೋದನೆ ನೀಡ ಬಾರದು.  ಆ ಯೋಜನೆ ಗಳನ್ನು ಮುಂದುವರಿಸದಂತೆ ನಿರ್ದೇಶಿ ಸಲು ಸಂಬಂಧ ಪಟ್ಟ ಕೇಂದ್ರದ ಸಂಸ್ಥೆಗಳಿಗೆ ಒತ್ತಾಯಿಸುವುದು.

ಮೇಕೆದಾಟು ಯೋಜನೆ ಜಾರಿಗೆ ತಮಿಳುನಾಡು ವಿಧಾನಸಭೆಯಲ್ಲಿ  ಕೈಗೊಂಡ ನಿರ್ಣಯದ ವಿರುದ್ಧ ರಾಜ್ಯ ಸರಕಾರ ಮಂಡಿಸಿದ ನಿರ್ಣಯಕ್ಕೆ ನಮ್ಮ ಅನುಮೋದನೆ ಇದೆ. ಈ ಸದನವು ಈ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲು ನಮ್ಮ ಬೆಂಬಲ ಇದೆ.– ಸಿದ್ದರಾಮಯ್ಯ, ವಿಪಕ್ಷದ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next