ಶಿವಮೊಗ್ಗ: ರಣಜಿ ಕ್ರಿಕೆಟ್ ಲೀಗ್ ಎಲೈಟ್ ಎ ಮತ್ತು ಬಿ ಗುಂಪಿನಲ್ಲಿ ಮಂಗಳವಾರದಿಂದ ಆರಂಭವಾಗಲಿರುವ ಹಣಾಹಣಿಯಲ್ಲಿ ಆತಿಥೇಯ ಕರ್ನಾಟಕ ತಂಡವು ದುರ್ಬಲ ಮಧ್ಯಪ್ರದೇಶವನ್ನು ಎದುರಿಸಲಿದೆ.
ಶಿವಮೊಗ್ಗದ ಜೆಎನ್‌ಎನ್ (ಜವಾಹರ್‌ಲಾಲ್ ನೆಹರೂ ನ್ಯಾಷನಲ್ ಕಾಲೇಜು) ಕ್ರೀಡಾಂಗಣದ ಆತಿಥ್ಯದಲ್ಲಿ ನಡೆಯಲಿರುವ ಈ ಪಂದ್ಯವು ರಾಜ್ಯ ತಂಡಕ್ಕೆ ಕ್ವಾರ್ಟರ್ ಫೈನಲ್ ಪ್ರವೇಶಿಸುವ ನಿಟ್ಟಿನಲ್ಲಿ ಹೆಚ್ಚು ಮಹತ್ವ ಪಡೆದುಕೊಂಡಿದೆ.
ಸದ್ಯ ತನ್ನ ಗುಂಪಿನಲ್ಲಿ ಒಟ್ಟು 6 ಪಂದ್ಯವನ್ನು ಆಡಿರುವ ಕರ್ನಾಟಕ ತಂಡವು ಮೂರು ಪಂದ್ಯದಲ್ಲಿ ಜಯಗಳಿಸಿದೆ, ಮೂರು ಪಂದ್ಯದಲ್ಲಿ ಡ್ರಾ ಅನುಭವಿಸಿದೆ. ಒಟ್ಟು 24 ಅಂಕವನ್ನು ಸಂಪಾದಿಸಿ ಗುಂಪಿನಲ್ಲಿ ನಾಲ್ಕನೇ ಸ್ಥಾನ ದಲ್ಲಿದೆ. ಮಧ್ಯ ಪ್ರದೇಶ ಬಹುತೇಕ ಕೂಟದಿಂದ ಹೊರಬಿದ್ದಿದೆ. ಒಟ್ಟಾರೆ 6 ಪಂದ್ಯ ಆಡಿರುವ ಮಧ್ಯಪ್ರದೇಶ ತಂಡವು ಇದುವರೆಗೆ ಗೆಲುವಿನ ಖಾತೆಯನ್ನೇ ತೆರೆದಿಲ್ಲ. 2 ಪಂದ್ಯದಲ್ಲಿ ಸೋಲು ಅನುಭವಿಸಿ 4 ಪಂದ್ಯದಲ್ಲಿ ಡ್ರಾ ಅನುಭವಿಸಿದೆ. ಒಟ್ಟಾರೆ 8 ಅಂಕವನ್ನು ಪಡೆದು ಅಂಕಪಟ್ಟಿಯಲ್ಲಿ ಕೊನೆಯಲ್ಲಿ 2ನೇ ಸ್ಥಾನ ಪಡೆದು ಕೊಂಡಿದೆ. ಆಂಧ್ರಪ್ರದೇಶ, ಗುಜರಾತ್, ಸೌರಾಷ್ಟ್ರ ಗುಂಪಿನ ಮೊದಲ ಮೂರು ಸ್ಥಾನಗಳಲ್ಲಿವೆ.
ಕರ್ನಾಟಕ ಬಲಿಷ್ಠ ತಂಡ: ರೈಲ್ವೇಸ್ ವಿರುದ್ಧದ ಹಿಂದಿನ ಪಂದ್ಯದಲ್ಲಿ 10 ವಿಕೆಟ್‌ಗಳಿಂದ ಭರ್ಜರಿಯಾಗಿ ಗೆದ್ದಿರುವ ಕರ್ನಾಟಕ ತಂಡ ಮಧ್ಯಪ್ರದೇಶವನ್ನು ಸುಲಭವಾಗಿ ಸೋಲಿಸುವ ತಂತ್ರ ರೂಪಿಸಿದೆ. ಆರಂಭಿಕ ಬ್ಯಾಟ್ಸ್‌ಮನ್ ಆರ್. ಸಮರ್ಥ್ ಹಾಗೂ ದೇವದತ್ತ ಪಡಿಕ್ಕಲ್ ರಾಜ್ಯ ತಂಡಕ್ಕೆ ಒಂದೊಳ್ಳೆ ಇನಿಂಗ್ಸ್ ಕಟ್ಟಿ ಕೊಡುವ ಭರವಸೆ ಮೂಡಿಸಿದ್ದಾರೆ.
ರೋಹನ್ ಕದಮ್, ಕರುಣ್ ನಾಯರ್, ಕೆ. ಸಿದ್ಧಾರ್ಥ್, ಎಸ್.ಶರತ್, ಆಲ್‌ರೌಂಡರ್ ಕೆ. ಗೌತಮ್ ತಂಡದ ತಾರಾ ಆಟಗಾರರಾಗಿದ್ದಾರೆ. ಬೌಲಿಂಗ್‌ನಲ್ಲಿ ಅನುಭವಿ ವೇಗಿ ಅಭಿಮನ್ಯು ಮಿಥುನ್, ಪ್ರತೀಕ್ ಜೈನ್, ರೋನಿತ್ ಮೋರೆ, ಶ್ರೇಯಸ್ ಗೋಪಾಲ್ ಎದುರಾಳಿಗೆ ಆತಂಕ ಹುಟ್ಟಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಕರ್ನಾಟಕ ತಂಡವು ತಮಿಳು ನಾಡು, ಮುಂಬೈ, ರೈಲ್ವೇಸ್ ವಿರುದ್ಧ ಕ್ರಮವಾಗಿ ಜಯಿಸಿದೆ. ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಸೌರಾಷ್ಟ್ರ ವಿರುದ್ಧದ ಪಂದ್ಯವನ್ನು ಕ್ರಮವಾಗಿ ಡ್ರಾ ಮಾಡಿಕೊಂಡಿದೆ.
ಮಧ್ಯಪ್ರದೇಶ ತಂಡದ ದಾರಿ ಬಂದ್: ಮಧ್ಯ ಪ್ರದೇಶ ತಂಡದ ಕ್ವಾರ್ಟರ್‌ಫೈನಲ್ ಹಾದಿ ಮುಗಿದಿದೆ. ಹಾಗಿದ್ದರೂ ಅದು ಗೆಲುವಿನೊಂದಿಗೆ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುವ ತವಕ ದಲ್ಲಿದೆ. ಮಧ್ಯಪ್ರದೇಶ ತಂಡ ದಲ್ಲಿ ಅಜಯ್ ರೊಹೆರಾ, ಯಶ್ ದುಬೆ, ನಮಾನ್ ಓಜಾರಂತಹ ಬ್ಯಾಟ್ಸ್ ಮನ್ ಗಳಿದ್ದಾರೆ. ಇವರು ಸರಿಯಾದ ಸಮಯದಲ್ಲಿ ಸ್ಫೋಟಿಸದಿರುವುದು ತಂಡಕ್ಕೆ ದುಭಾರಿಯಾಗಿ ಪರಿಣಮಿಸಿದೆ
ಸಂಭಾವ್ಯ ತಂಡ
ಕರ್ನಾಟಕ: ಆರ್.ಸಮರ್ಥ್, ದೇವದತ್ತ ಪಡಿಕ್ಕಲ್, ರೋಹನ್ ಕದಮ್, ಕರುಣ್ ನಾಯರ್ (ನಾಯಕ), ಕೆ.ಸಿದ್ಧಾರ್ಥ್, ಎಸ್.ಶರತ್, ಶ್ರೇಯಸ್ ಗೋಪಾಲ್, ಕೆ.ಗೌತಮ್. ಅಭಿಮನ್ಯು ಮಿಥುನ್, ರೋನಿತ್ ಮೋರೆ, ಪ್ರತೀಕ್ ಜೈನ್.
ಮಧ್ಯಪ್ರದೇಶ: ರಮೀಜ್ ಖಾನ್, ಅಜಯ್ ರೊಹೆರಾ, ರಜತ್ ಪಾಟೀದಾರ್, ನಮಾನ್ ಓಜಾ (ನಾಯ ಕ), ಯಶ್ ದುಬೆ, ವೆಂಕಟೇಶ್ ಐಯ್ಯರ್, ಗೌತಮ್ ರಘುವಂಶಿ, ಕುಮಾರ್ ಕಾರ್ತಿ ಕೇಯ, ಈಶ್ವರ್ ಪಾಂಡೆ, ಗೌರವ್ ಯಾದವ್, ರವಿ ಯಾದವ್.