Advertisement

71% ಮತದಾನ; ಕೆಲವು ಅಹಿತಕರ ,ಉಳಿದಂತೆ ಶಾಂತಿಯುತ

06:00 AM May 13, 2018 | Team Udayavani |

ಬೆಂಗಳೂರು: 2019ರ ಲೋಕಸಭೆ ಚುನಾವಣೆಗೆ ಸೆಮಿಫೈನಲ್‌ ಎಂದೇ ಹೇಳಲಾಗುತ್ತಿರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಶೇ.71.05ರಷ್ಟು ಮತದಾನವಾಗಿದೆ.

Advertisement

224 ಕ್ಷೇತ್ರಗಳ ಪೈಕಿ 222 ಕ್ಷೇತ್ರಗಳಿಗೆ ಶನಿವಾರ ಬಹುತೇಕ ಶಾಂತಿಯುತ ಮತದಾನ ನಡೆದಿದ್ದು 2,622 ಅಭ್ಯರ್ಥಿಗಳ ಭವಿಷ್ಯ ಬರೆದಿದ್ದಾರೆ. ಮತದಾನ ಹೆಚ್ಚಳಕ್ಕಾಗಿ ಆಯೋಗ ಸಾಕಷ್ಟು ಕ್ರಮ ತೆಗೆದುಕೊಂಡಿದ್ದರೂ ಜನ ಸ್ಪಂದಿಸದ ಕಾರಣ ಶೇ.75ರ ಗುರಿ ತಲುಪಲಾಗಿಲ್ಲ. ಎಲೆಕ್ಟ್ರಾನಿಕ್‌ ಮತಯಂತ್ರದಲ್ಲಿ ಭದ್ರವಾಗಿರುವ ಈ ಭವಿಷ್ಯ ಮೇ 15ರ ಮಂಗಳವಾರ ಹೊರಬೀಳಲಿದೆ.

ಶನಿವಾರ ಬೆಳಗ್ಗೆಯಿಂದ ಸಂಜೆ 6ರವರೆಗೆ ಮತದಾನ ನಡೆದಿದ್ದು, ಒಂದೆರಡು ಕಡೆ ಹೊರತುಪಡಿಸಿ ಬಹುತೇಕ ಎಲ್ಲಾ ಕಡೆ ಯಾವುದೇ ಅಹಿತಕರ ಘಟನೆಗಳಿಲ್ಲದೆ ಜನ ನೆಮ್ಮದಿಯಿಂದ ತಮ್ಮ ಹಕ್ಕು ಚಲಾಯಿಸಿದ್ದಾರೆ. ಹೆಬ್ಟಾಳ ಕ್ಷೇತ್ರದ ಲೊಟ್ಟೆಗೊಲ್ಲಹಳ್ಳಿ ಮತಗಟ್ಟೆಯಲ್ಲಿ ಮತಯಂತ್ರದಲ್ಲಿ ದೋಷ ಕಂಡುಬಂದಿದ್ದರಿಂದ ಅಲ್ಲಿ ಮೇ 14ರಂದು ಮರುಮತದಾನಕ್ಕೆ ಚುನಾವಣಾ ಆಯೋಗ ಆದೇಶಿಸಿದೆ. 

ಉಳಿದಂತೆ ಕೆಲವೆಡೆ ಮತಯಂತ್ರಗಳಲ್ಲಿ ದೋಷ ಕಂಡುಬಂದಿತ್ತಾದರೂ ಅವುಗಳನ್ನು ಸರಿಪಡಿಸಲಾಗಿದ್ದು, ಎಲ್ಲಿಯೂ ಮರುಮತದಾನಕ್ಕೆ ಅವಕಾಶ ಇಲ್ಲದೆ ಮತದಾನ ಪ್ರಕ್ರಿಯೆ ಸುಸೂತ್ರವಾಗಿ ನಡೆದಿದೆ.

ಸಣ್ಣ ಪುಟ್ಟ ಗಲಾಟೆಗಳು: ದಾವಣಗೆರೆಯಲ್ಲಿ ಮತದಾರರನ್ನು ಕರೆತರುವ ಮತ್ತು ಏಜೆಂಟರ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಕಾಂಗ್ರೆಸ್‌ ಕಾರ್ಪೋರೇಟರ್‌ ಜೆ.ಎನ್‌.ಶ್ರೀನಿವಾಸ್‌ ಹಾಗೂ ಅವರ ಇಬ್ಬರು ಸಹೋದರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದ್ದು, ಅವರನ್ನು ಪೊಲೀಸರು ಬಂಧಿಸಿದ್ದಾರೆ. ಹಾಸನ ಜಿಲ್ಲೆ ಹೊಳೇನರಸೀಪುರದ ಪರಸನಹಳ್ಳಿ ಮತಗಟ್ಟೆಯಲ್ಲಿ ಜೆಡಿಎಸ್‌ ಕಾರ್ಯಕರ್ತರು ಕಾಂಗ್ರೆಸ್‌ ಅಭ್ಯರ್ಥಿ ಬಿ.ಪಿ.ಮಂಜೇಗೌಡ ಅವರ ಮೇಲೆ ಕಲ್ಲು ತೂರಾಟ ನಡೆಸಿದ್ದು, ಇದರಿಂದ ಸ್ಥಳದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡು ಕ್ಷಿಪ್ರ ಕಾರ್ಯಾಚರಣೆ ಪಡೆ ಕರೆಸಲಾಯಿತು. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಕೊಕ್ಕರೆಹುಂಡಿ ಮತಗಟ್ಟೆಗೆ ವ್ಯಕ್ತಿಯೊಬ್ಬರನ್ನು ಇನ್ನೊಬ್ಬರು ಮತದಾನಕ್ಕೆ ಕರೆದೊಯ್ಯುತ್ತಿದ್ದ ವೇಳೆ ಎರಡು ಗುಂಪುಗಳ Êಮಧ್ಯೆ ಜಗಳವಾಗಿ ಪರಸ್ಪರ ಕೈ ಮಿಲಾಯಿಸುವ ಹಂತ ತಲುಪಿದ್ದು, ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. 

Advertisement

ವಿಜಯಪುರದಲ್ಲಿ ನಕಲಿ ಮತ ಚಲಾಯಿಸಲು ಮುಂದಾಗಿದ್ದ ಯುವಕನಿಗೆ ಸ್ಥಳೀಯರು ಹಿಗ್ಗಾಮುಗ್ಗ ಥಳಿಸಿದ ಪ್ರಕರಣ ನಡೆದಿದ್ದು , ಕೆಲ ಕಿಡಿಗೇಡಿಗಳನ್ನು ಬಂಧಿಸಲಾಗಿದೆ. ಬೆಂಗಳೂರಿನ ಕೆಲವು ಕಡೆಗಳಲ್ಲೂ ಕಾರ್ಪೊರೇಟರ್‌ಗಳ ಮಧ್ಯೆ ತಿಕ್ಕಾಟ ನಡೆದಿದೆ. ಕೆಲವು ಕಡೆಗಳಲ್ಲಿ ಹಲ್ಲೆಯಾದ ವರದಿಯಾಗಿದೆ.

ನಾಲ್ವರು ಹೃದಯಾಘಾತದಿಂದ ಸಾವು
ಮತದಾನದ ವೇಳೆ ನಾಲ್ವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯ ನಾಯಕನಹಟ್ಟಿಯಲ್ಲಿ ಮತದಾನ ಮಾಡಿ ವಾಪಸಾಗುತ್ತಿದ್ದ ವೃದ್ಧ ವೈ.ಸಿ.ನರಸಿಂಹಮೂರ್ತಿ (68) ಎಂಬುವರು ಸಾವನ್ನಪ್ಪಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಕೊಳ್ನಾಡು ಗ್ರಾಮದಲ್ಲಿ ಮತದಾನಕ್ಕೆ ತೆರಲುತ್ತಿದ್ದ ಕುಳಾಲು ಹರೀಶ್‌ ಮೇರ (40), ಹಾಸನ ಜಿಲ್ಲೆ ಬೇಲೂರು ತಾಲೂಕಿನಲ್ಲಿ ರೇವತಿ (50)  ಹಾಗೂ  ಕೊಪ್ಪಳ ಜಿಲ್ಲೆ ಯಲಬುರ್ಗಾದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮತಗಟ್ಟೆಯಲ್ಲಿ ಇನ್ನೇನು ಇವಿಎಂನಲ್ಲಿ ಮತದಾನ ಮಾಡಬೇಕು ಎನ್ನುವಷ್ಟರಲ್ಲಿ ರುದ್ರಮ್ಮ ಹಡಪದ (88) ಹೃದಯಾಘಾತದಿಂದ ಕುಸಿದು ಮೃತಪಟ್ಟಿದ್ದಾರೆ.

ಅಪಘಾತದಲ್ಲಿ ನಾಲ್ಕು ಮಂದಿ ಸಾವು:
ಹಾಸನದ ರಾಮೇನಹಳ್ಳಿಯ ಮತದಾನಕ್ಕೆಂದು ಒಂದೇ ಅಟೋದಲ್ಲಿ ಸುಮಾರು 12 ಮಂದಿ ಪ್ರಯಾಣಿಸುತ್ತಿದ್ದ ವೇಳೆ ಲಾರಿ ಡಿಕ್ಕಿಯಾಗಿ ಮೂವರು ಮೃತಪಟ್ಟಿದ್ದು, 10 ಮಂದಿ ಗಾಯಗೊಂಡಿದ್ದಾರೆ. ಅದೇ ಜಿಲ್ಲೆಯ ಹೊಳೇನರಸೀಪುರದಲ್ಲಿ ಮತದಾನಕ್ಕೆಂದು ಕಾರಿನಲ್ಲಿ ಹೋಗುತ್ತಿದ್ದಾಗ ಅಡ್ಡಬಂದ ಹಸು ತಪ್ಪಿಸಲು ಹೋಗಿ ಕಾರು ಮರಕ್ಕೆ ಡಿಕ್ಕಿಯಾಗಿ ರಾಜು ಎಂಬುವರು ಸಾವನ್ನಪ್ಪಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next