Advertisement

Karkala: ಎಲ್ಲಿ ಹೋಯಿತು ಬಂಗ್ಲೆಗುಡ್ಡೆ ವೃತ್ತದ ಸಿಸಿ ಕೆಮರಾ?

05:51 PM Sep 29, 2024 | Team Udayavani |

ಕಾರ್ಕಳ: ಸುರಕ್ಷತೆ ದೃಷ್ಟಿಯಿಂದ ಅತ್ಯಂತ ಆವಶ್ಯಕವಾಗಿ ಕಾರ್ಯಾಚರಿಸಿ, ಕಣ್ಗಾವಲು ಇರಿಸುತ್ತಿದ್ದ ಬಂಗ್ಲೆಗುಡ್ಡೆ ಜಂಕ್ಷನ್‌ನಲ್ಲಿ ಅಳವಡಿಸಿದ್ದ ಸಿಸಿ ಕೆಮರಾ ಇದ್ದಕ್ಕಿದ್ದಂತೆ ಕಾಣೆಯಾಗಿದೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಅಕ್ರಮ ಮುಚ್ಚಿ ಹಾಕಲು ಸಿಸಿ ಕೆಮೆರಾ ತೆರವುಗೊಳಿಸಲಾಯಿತೇ ಎನ್ನುವ ಶಂಕೆ ಸ್ಥಳೀಯರದ್ದಾಗಿದ್ದು, ಕೆಮರಾ ಕೆಟ್ಟಿದೆ, ದುರಸ್ತಿಗೆ ಕೊಂಡೊಯ್ಯಲಾಗಿದೆ ಎನ್ನುತ್ತಿದೆ ಪೊಲೀಸ್‌ ಇಲಾಖೆ.

Advertisement

ಇಲ್ಲಿ ಸಿಸಿ ಕೆಮರಾ ಇಲ್ಲದಿರುವುದು ಕಳ್ಳ- ಖದೀಮರಿಗೆ, ಪುಂಡುಪೋಕರಿಗಳಿಗೆ ಈಗ ವರದಾನವಾಗಿದೆ. ಚಟುವಟಿಕೆಗಳಿಗೆ ಮೇಲೆ ಕಣ್ಗಾವಲು ಇಡುವುದಕ್ಕೆ ಸಾರ್ವಜನಿಕ ಪ್ರಮುಖ ಕೇಂದ್ರವಾದ ಈ ವೃತ್ತದ ಸಿಸಿ ಕೆಮರಾ ಸಹಕಾರಿಯಾಗುತ್ತಿತ್ತು. ಕಾರ್ಕಳ-ಉಡುಪಿ ಹೆದ್ದಾರಿಯಲ್ಲಿ ವೃತ್ತವಿದ್ದು, ಬೈಪಾಸ್‌ ಮೂಲಕ, ಬಂಡಿಮಠ ಒಳಭಾಗದಿಂದ ಬಂದು ಸೇರುವ ಮುಖ್ಯ ಜಂಕ್ಷನ್‌ ಇದಾಗಿದೆ. ನಗರದೊಳಗೆ ಸಹಿತ ಕಾರ್ಕಳದ ಎಲ್ಲೇ ಏನೇ ಕೃತ್ಯ ನಡೆದರೂ, ಅಕ್ರಮ ಚಟುವಟಿಕೆ ನಡೆದರೂ ಪರಾರಿಯಾಗಲು ಇದೇ ದಾರಿ ಬಳಸಲ್ಪಡುತ್ತಿದೆ. ಎಲ್ಲೆ ಅಹಿತಕರ ಘಟನೆ ನಡೆದರೂ ತಪ್ಪಿಸಿ ಪರಾರಿಯಾಗಲು ಈ ದಾರಿಯೇ ಪ್ರಮುಖ ಹಾದಿಯಾಗಿದೆ. ಇದರಿಂದಾಗಿ ಇಲ್ಲಿನ ಸಿಸಿ ಕೆಮರಾ ಅಕ್ರಮ ತಡೆ ಹಾಗೂ ಪತ್ತೆಗೆ ಪೊಲೀಸರಿಗೆ ಪ್ರಮುಖ ಸಾಧನವಾಗಿದೆ.

ಪೊಲೀಸರ ತನಿಖೆಗೂ ಇಲ್ಲಿನ ಸಿಸಿ ಕೆಮರಾ ಮಹತ್ವ ಸುಳಿವನ್ನು ನೀಡುತ್ತಿತ್ತು. ಇಲ್ಲಿರುವ ಸಿಸಿ ಕೆಮರಾ ತೆರವಾಗಿರುವುದು ಕಳ್ಳಕಾಕರಿಗೆ, ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವವರಿಗೆ, ಅಕ್ರಮ ಗೋ ಸಾಗಾಟ ನಡೆಸುವವರಿಗೆ ವರದಾನವಾಗಿದೆ. ಸಿಸಿ ಕೆಮರಾ ಇಲ್ಲದೆ ಇರುವುದರಿಂದ ಅಕ್ರಮಕ್ಕೆ ಸುಗಮ ಹಾದಿ ನಗರದಲ್ಲಿ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಡಬೇಕಿದ್ದ ಸಿಸಿ ಕೆಮರಾಗಳು ಇಲ್ಲದೇ ಕಾನೂನು ಸುವ್ಯವಸ್ಥೆ ಸುಭದ್ರವಾಗಿಲ್ಲ ಎನ್ನುವ ಆರೋಪಗಳು ಹಿಂದಿನಿಂದಲೂ ಕೇಳಿ ಬಂದಿತ್ತು. ನಗರದ ಬಹುತೇಕ ಕಡೆಗಳಲ್ಲಿ ಸಿಸಿ ಕೆಮರಾಗಳೇ ಇಲ್ಲ. ಪ್ರಮುಖ ಜಂಕ್ಷನ್‌ನಲ್ಲಿ ಇರುವ ಸಿಸಿ ಕೆಮರಾವನ್ನು ತೆರವುಗೊಳಿಸಿದ್ದರಿಂದ ಭದ್ರತೆ ಸವಾಲು ಜತೆಗೆ ಅಕ್ರಮಕ್ಕೆ ರತ್ನ ಕಂಬಳಿ ಹಾಸಿದಂತಾಗಿದೆ.

ಪುರಸಭೆ ವ್ಯಾಪ್ತಿಯಲ್ಲಿ ಸುಮಾರು 3ರಿಂದ 4 ಸಿಸಿ ಕೆಮರಾ ಗಳಷ್ಟೇ ಇರುವುದು. ಡಿವೈಎಸ್ಪಿ ವಿಭಾಗದಲ್ಲಿ ಏಳೆಂಟು ಸಿಸಿ ಕೆಮರಾ ಅಳವಡಿಸಿಕೊಳ್ಳಲಾಗಿದೆ. 100ರಿಂದ 500 ಜನ ಸೇರುವ ಸಾರ್ವಜನಿಕ ಪ್ರದೇಶಗಳಲ್ಲಿ ಸಿಸಿ ಕೆಮರಾ ಕಡ್ಡಾಯವಾಗಿ ಅಳವಡಿಕೆಯಾಗಬೇಕು ಎನ್ನುವ ಕಾನೂನನ್ನು ಈ ಹಿಂದೆ ರಾಜ್ಯ ಸರಕಾರ ತಂದಿತ್ತು. ಬಂಡಿಮಠ ಸಹಿತ ಇಲ್ಲಿನ ಕೆಲವು ಜಂಕ್ಷನ್‌ಗಳಲ್ಲಿ ಸಹಸ್ರಾರು ಮಂದಿ ಓಡಾಡುವ ಸ್ಥಳವಾಗಿದ್ದರೂ ಇಂತಹ ಸ್ಥಳಗಳಲ್ಲಿ ಸಿಸಿ ಕೆಮರಾವೂ ಇಲ್ಲ, ಇದ್ದ ಜಾಗಗಳಿಂದಲೂ ತೆರವುಗೊಳಿಸುತ್ತಿರುವುದು ನಾಗರಿಕರಲ್ಲಿ ಆತಂಕ ಉಂಟು ಮಾಡುತ್ತಿದೆ.

ನಗರ ಸಹಿತ ತಾಲೂಕಿನಲ್ಲಿ ಅಪರಾಧ ಪ್ರಕರಣಗಳು ದಿನ ಕಳೆದಂತೆ ಹೆಚ್ಚುತ್ತಿದೆ. ಅಂತಾರಾಜ್ಯ ಕಳ್ಳತನ, ಗೋಕಳ್ಳತನ, ಮನೆಗಳ್ಳತನ, ಸರಗಳ್ಳತನ, ವಾಹನ ಕಳ್ಳತನ ಇಂತಹ ಪ್ರಕರಣಗಳು ಕಾರ್ಕಳ ನಗರ, ಆಸುಪಾಸು, ತಾಲೂಕಿನ ಎಲ್ಲೆಡೆ ಸಂಭವಿಸುತ್ತಿದ್ದು ಈ ಪ್ರಕರಣಗಳನ್ನು ಅತಿ ಶೀಘ್ರ ಬೇಧಿಸುವಲ್ಲಿ ಪೊಲೀಸರಿಗೆ ಅತೀ ಹೆಚ್ಚು ಸಹಾಯವಾಗುವುದು ಅಲ್ಲಲ್ಲಿ ಅಳವಡಿಸಿಕೊಂಡಿರುವ ಸಿಸಿ ಕೆಮರಾ ಗಳು. ಅಪರಾಧ ನಡೆದಾಗ ಖಾಸಗಿ ಕೆಮರಾ ಮಾಲಕರ ಮೊರೆ ಹೋಗುವುದು ಪೊಲೀಸರಿಗೂ ಮುಜುಗರ ತರಿಸುತ್ತದೆ. ಕಾನೂನು ಉಲ್ಲಂಘನೆ, ಅಪರಾಧ ಕೃತ್ಯಗಳ ಬಗ್ಗೆ ತನಿಖೆ ಕೆಮರಾ ಇಲ್ಲದ್ದರಿಂದ ಸವಾಲಾಗಲಿದೆ.

Advertisement

ಒಂದೇ ಮನೆಯ ನಾಲ್ಕು ದನಗಳು ಗೋಕಳ್ಳರ ಪಾಲು
ನಗರದಲ್ಲಿ ಗೋಕಳ್ಳತನ ಪ್ರಕರಣ ಹೆಚ್ಚಳವಾಗಿದೆ. ಸೆ.20ರಂದು ಕುಕ್ಕುಂದೂರಿನ ಶಶಿಕಲಾ ಅವರಿಗೆ ಸೇರಿದ ಹಾಲು ಕರೆಯುವ ಹಸು, ದನ, ಎರಡು ಕರು ಸಹಿತ 4 ಜಾನುವಾರುಗಳನ್ನು ಗೋಕಳ್ಳರು ಕದ್ದೊಯ್ದ ಘಟನೆ ರಾತ್ರಿ ನಡೆದಿತ್ತು. ಪೊಲೀಸ್‌ ಠಾಣೆಗೂ ದೂರು ನೀಡಲಾಗಿದೆ. ಇಂತಹ ಹಲವು ಪ್ರಕರಣಗಳು ಮರುಕಳಿಸುತಿದ್ದು ಪ್ರಮುಖ ಜಂಕ್ಷನ್‌ಗಳಲ್ಲಿ ಅಗತ್ಯವಾಗಿ ಸಿಸಿ ಕೆಮರ ಕಾರ್ಯನಿರ್ವಹಿಸುವುದು ಅವಶ್ಯಕವಾಗಿದೆ. ಕೆಮರಾ ಇಲ್ಲದಿದ್ದಲ್ಲಿ ಅಕ್ರಮ ದಂಧೆ ನಡೆಸುವವರಿಗೆ ಅನುಕೂಲವಾಗುತ್ತದೆ. ಪೊಲೀಸರಿಗೆ ಪತ್ತೆಗೆ ಸಿಸಿ ಕೆಮರಾ ಸಹಕಾರಿಯಾಗಲಿದೆ.

ದುರಸ್ತಿಗೆ ಕಳಿಸಲಾಗಿದೆೆ
ಬಂಗ್ಲೆಗುಡ್ಡೆ ವೃತ್ತದಲ್ಲಿ ಪೊಲೀಸ್‌ ಇಲಾಖೆಯಿಂದ ಸಿಸಿ ಕೆಮರಾ ಅಳವಡಿಸಲಾಗಿತ್ತು. ಅದರಲ್ಲಿ ದೋಷ ಕಂಡು ಬಂದ ಕಾರಣ ದುರಸ್ತಿಗೆ ಕಳಿಸಲಾಗಿದೆ.
-ಸಂದೀಪ್‌, ಸಬ್‌ ಇನ್‌ಸ್ಪೆಕ್ಟರ್‌, ನಗರ ಠಾಣೆ ಕಾರ್ಕಳ

-ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next