ಕಾರ್ಕಳ: ಮುಂಗಾರು ಪೂರ್ವ ಮುಂಚಿತವೇ ಸುರಿಯುತ್ತಿರುವ ಮಳೆಗೆ ಕಾರ್ಕಳ ತಾಲೂಕಿನ ಜನತೆ ತೊಂದರೆ ಅನುಭವಿಸುವಂತಾಗಿತ್ತು. ಕಳೆದೆರಡು ದಿನಗಳಿಂದ ಸುರಿದ ಭಾರೀ ಮಳೆಗೆ ಜನ ತತ್ತರಿಸಿದ್ದು, ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ತಾಲೂಕಿನ ವಿವಿಧ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ. ಪುರಸಭೆ ವ್ಯಾಪ್ತಿಯ ಚರಂಡಿಗಳ ಸ್ಥಿತಿ ಕೆಲವೆಡೆ ಸರಿ ಇರಲಿಲ್ಲ. ಮುಖ್ಯ ಪೇಟೆಯಲ್ಲಿ ಈ ಬಾರಿ ಚರಂಡಿ ನಿರ್ಮಿಸಿದ್ದರಿಂದ ಕೊಂಚ ಸುಧಾರಣೆ ಆಗಿದೆ. ಆದರೇ 23 ವಾರ್ಡ್ ಗಳಲ್ಲಿನ ಚರಂಡಿಗಳಲ್ಲಿ ತ್ಯಾಜ್ಯ, ಹೂಳು ತುಂಬಿ, ಹುಲ್ಲು ಬೆಳೆದು ಚರಂಡಿ ಮುಚ್ಚಿ ಸಮಸ್ಯೆಯಾಗಿದೆ. ಚರಂಡಿಯಿಲ್ಲದೆ ತಗ್ಗು ಪ್ರದೇಶಗಳಿಗೆ ಮಳೆ ನೀರು ಹರಿದು ಸಮಸ್ಯೆ ಸೃಷ್ಟಿಯಾಗಿತ್ತು.
ನಗರದ ಉಡುಪಿ ಮಾರ್ಗದಲ್ಲಿ ಸ್ಟೇಟ್ ಬ್ಯಾಂಕ್‌ನಿಂದ ಸಾಲ್ಮರದ ತನಕ ಚರಂಡಿ ವ್ಯವಸ್ಥೆಯೇ ಇಲ್ಲ. ಹೀಗಾಗಿ ಮಳೆಗೆ ಇಲ್ಲಿ ಕೃತಕ ನೆರೆಯುಂಟಾಗಿತ್ತು. ಮುಖ್ಯ ರಸ್ತೆಯ ಆಸುಪಾಸಿನ ನಿವಾಸಿಗಳ ಮನೆಯ ಅಂಗಳಕ್ಕೆ ನೀರು ನುಗ್ಗಿ ಮನೆಯ ಅಂಗಳ ದಲ್ಲಿ ನೀರು ನಿಂತು ಕೆರೆಯಂತಾದ ದೃಶ್ಯ ಕಂಡುಬಂದಿತ್ತು. ಇಲ್ಲಿನ ಅಧೀಶ್ವರ ಟ್ರೆಂಡ್ಸ್ ಮುಂಭಾಗದ ನಿವಾಸಿಯೊಬ್ಬರ ಮನೆ ಅಂಗಳಕ್ಕೆ ನೀರು ಹರಿದಿತ್ತು. ಕಾರು ನಿಲ್ಲಿಸುವ ಸ್ಥಳ ಇತ್ಯಾದಿಗಳನ್ನು ಆವರಿಸಿಕೊಂಡಿತ್ತು. ನೀರು ಒಳಕ್ಕೆ ಪ್ರವೇಶಿಸದಂತೆ ಮಣ್ಣು ಹಾಕಿ ತಡೆಯುವ ಕಾರ್ಯವನ್ನು ನಿವಾಸಿಗಳು ಮಾಡಿಕೊಂಡಿದ್ದರು. ಇಲ್ಲೆ ಪಕ್ಕದಲ್ಲಿ ಮುಖ್ಯ ರಸ್ತೆಯಲ್ಲೇ ನೀರು ನಿಲ್ಲುತ್ತಿದ್ದು, ಮಿನಿ ಹೊಟೇಲಿನವರು ನೀರು ನಿಲ್ಲದಂತೆ ಅಂಗಡಿ ಮುಂದೆಯ ರಸ್ತೆಗೆ ಚರಳು ಕಲ್ಲು ಹಾಕಿ ನೀರು ನಿಲ್ಲದಂತೆ ಎಚ್ಚರ ವಹಿಸಿದ್ದರು. ಈ ಪ್ರದೇಶದ ಸಾಲ್ಮರದವರೆಗೂ ಸಮಸ್ಯೆ ಸೃಷ್ಟಿಯಾಗಿದ್ದು, ಚರಂಡಿಗೆಂದು ಪುರಸಭೆಗೆ 7 ಅಡಿ ಜಾಗ ಬಿಟ್ಟಿದ್ದರೂ ಚರಂಡಿ ಮಾಡದೆ ನಿರ್ಲಕ್ಷ ವಹಿಸಿದ್ದಾರೆ. ನಾಲ್ಕೈದು ವರ್ಷದಿಂದಲೂ ಮಳೆ ಬಂದಾಗ ಇದೇ ಪರಿಸ್ಥಿತಿ ಪುನಾರವರ್ತನೆಯಾಗುತ್ತಿದೆ. ಪುರಸಭೆ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಹಿರಿಯ ನಾಗರಿಕರೊಬ್ಬರು ದೂರಿದರು.
ತುಂಬಿ ಹರಿಯುತ್ತಿವೆ ನದಿಗಳು
ಪುರಸಭೆಯ ವಾರ್ಡ್ ಮಾತ್ರವಲ್ಲ ಹೆದ್ದಾರಿ ಬದಿ ಸೂಕ್ತ ಚರಂಡಿ ವ್ಯವಸ್ಥೆಗಳಿಲ್ಲ. ಮಳೆ ಬಂದಾಗ ಚರಂಡಿಯಲ್ಲಿ ನೀರು ಹರಿಯದೇ ರಸ್ತೆ ಮೇಲೆ ಹರಿಯುವುದು ಇಲ್ಲಿ ಸರ್ವೆ ಸಾಮಾನ್ಯ. ಸ್ವರ್ಣ, ಕಡಾರಿ ಸಹಿತ ತಾಲೂಕಿನ ನದಿಗಳು ಕೂಡ ನೆರೆಯಿಂದ ತುಂಬಿ ಹರಿಯುತ್ತಿವೆ.