Advertisement

10 ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವರ್ಣರಂಜಿತ ತೆರೆ : ಕಿಕ್ಕಿರಿದ ಪ್ರೇಕ್ಷಕರು

03:24 PM Mar 21, 2022 | Team Udayavani |

ಕಾರ್ಕಳ : ಕಾರ್ಕಳ ಉತ್ಸವದ ಪ್ರಯುಕ್ತ ಗಾಂಧಿ ಮೈದಾನ, ಸ್ವರಾಜ್‌ ಮೈದಾನ ಹಾಗೂ ನಗರದ ನಾಲ್ಕು ಉಪ ವೇದಿಕೆಗಳಲ್ಲಿ ಕಳೆದ 10 ದಿನಗಳಿಂದ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಾ.20ರಂದು ರಾತ್ರಿ ವರ್ಣರಂಜಿತ ತೆರೆ ಬಿದ್ದಿದೆ.

Advertisement

ಗಾಂಧಿ ಮೈದಾನದ ವೇದಿಕೆಯಲ್ಲಿ ಮಾ.10ರಂದು ಯಕ್ಷರಂಗಾಯಣ ದೂತ ವಾಕ್ಯ ನಾಟಕ ಪ್ರದರ್ಶನದ ಮೂಲಕ ಆರಂಭಗೊಂಡ ಸಾಂಸ್ಕೃತಿಕ ಕಾರ್ಯಕ್ರಮ ನಿರಂತರ ಹತ್ತು ದಿನಗಳ ಕಾಲ ನಡೆದು ಸಾಂಸ್ಕೃತಿಕ ಲೋಕವನ್ನೆ ಸೃಷ್ಟಿಸಿತ್ತು. ಸ್ಥಳೀಯ ಕಲಾವಿದರಷ್ಟೇ ಅಲ್ಲದೆ ನಾದಸ್ವರ, ತುಳು ನೃತ್ಯ ರೂಪಕ, ಜನಪದ ವೈಭವ, ಮಕ್ಕಳ ಮಾಯಲೋಕ, ಬೊಂಬೆಯಾಟ, ಕೊಂಕಣಿ ಭಾವಗೀತೆ, ದೇಶಭಕ್ತಿ ಗೀತೆ, ತುಳುನಾಡ ಜನಪದ ವೈಭವ, ಕನ್ನಡ ಹಾಸ್ಯ, ಗುಜರಾತ್‌, ಮಧ್ಯಪ್ರದೇಶ, ಒಡಿಶಾ ರಾಜ್ಯಗಳ ಕಲಾವಿದರ ಜಾನಪದ ನೃತ್ಯಗಳು, ನಿನಾದ್‌ ಕೊಲ್ಹಾಪುರ ಮಹಾರಾಷ್ಟ್ರ ತಂಡದ ಜಾಗೋ ಹಿಂದೂಸ್ಥಾನಿ, ದೇಶಭಕ್ತಿಗೀತೆ ಗಮನ ಸೆಳೆದವು. ಯಕ್ಷ ವೈಭವ, ಗಾನ ನಾಟ್ಯ ಹಾಸ್ಯ ತಾಳಮದ್ದಲೆ, ಪ್ರಾಣೇಶ್‌ ಸಹಿತ ನಾಡಿನ ಪ್ರಸಿದ್ಧ ಹಾಸ್ಯ ಕಲಾವಿದರ ಹಾಸ್ಯ ಕಾರ್ಯಕ್ರಮ, ರಾಜಸ್ಥಾನದ ಚಡಯ್‌ ನೃತ್ಯ, ತೇರತಾಲಿ, ಕಾಶ್ಮೀರದ ರೌಫ್, ವಚನಾಗಿಯ, ಮಹಾರಾಷ್ಟ್ರದ ತರ್ಪಾ ನೃತ್ಯ, ತುಳು ನಾಟಕ, ಬಲೆ ತೆಲಿಪಾಲೆ, ಮಸ್ಕಿರಿ ಕುಡ್ಲದ -ತುಳು ಹಾಸ್ಯಗಳು, ಗಾಂಧಿ ಮೈದಾನದ ದಿ| ಗೋಪಾಲ ಭಂಡಾರಿ ವೇದಿಕೆಯಲ್ಲಿ ನಡೆದು ಕಲಾಸಕ್ತರನ್ನು ಮುದಗೊಳಿಸಿತು.

ಇದನ್ನೂ ಓದಿ :ಆಧುನಿಕತೆ ಭರಾಟೆಯಲ್ಲಿ ಸ್ವಂತಿಕೆ ಮಸುಕಾಗದಿರಲಿ: ಅಪ್ಪಣ್ಣ ಹೆಗ್ಡೆ

ಮಾ.18ರಿಂದ ಸ್ವರಾಜ್‌ ಮೈದಾನದಲ್ಲಿ ಸ್ವಾಂತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಅಜಯ್‌ ವಾರಿಯರ್‌ ಒಳಗೊಂಡ‌ ನಾಡಿನ ಹೆಸರಾಂತ ಹಿನ್ನೆಲೆ ಗಾಯಕರ ದೇಶಭಕ್ತಿಗೀತೆ ನೃತ್ಯ ವೈವಿಧ್ಯಗಳು ನಡೆದರೆ, ಮಾ.19ರಂದು ಪ್ರಸಿದ್ಧ ಕಲಾವಿದರಿಂದ ಸಂಗೀತ ರಸಸಂಜೆ ಮತ್ತು ನೃತ್ಯ ವೈವಿಧ್ಯಗಳು ಜರಗಿದವು. ಮಾ. 20ರಂದು ರಾತ್ರಿ ಆಳ್ವಾಸ್‌ ಸಾಂಸ್ಕೃತಿಕ ವೈಭವ ಮೂಡುಬಿದಿರೆ ಆಳ್ವಾಸ್‌ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಂದ, ಬೆಂಗಳೂರಿನ ಪ್ರಭಾತ್‌ ಕಲಾವಿದರಿಂದ ಕರುನಾಡ ವೈಭವ ನೆರವೇರಿತು. ಬಳಿಕ ಆಕರ್ಷಕ ಸುಡುಮದ್ದು ಪ್ರದರ್ಶನದ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮ ಸಂಪನ್ನಗೊಂಡಿತು.

ಉಪವೇದಿಕೆಗಳಲ್ಲೂ ರಸದೌತಣ
ಮಾ.10ರಿಂದ 17ರ ತನಕ ಗಾಂಧಿ ಮೈದಾನ, ಮಾ.18ರಿಂದ 20ರ ತನಕ ಸ್ವರಾಜ್‌ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದರೆ, ಬಸ್‌ಸ್ಟಾಂಡ್‌, ಜೋಡುರಸ್ತೆ, ಗೊಮ್ಮಟಬೆಟ್ಟ, ಕೋಟಿ ಚೆನ್ನಯ ಥೀಂ ಪಾರ್ಕ್‌ ಇಲ್ಲಿನ ಉಪವೇದಿಕೆಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಕಲಾತಂಡಗಳ ಕಲಾವಿದರಿಂದ ಸಾಂಸ್ಕೃತಿಕ ವೈವಿಧ್ಯಗಳು ನಡೆದವು.

Advertisement

ಜನ ಪ್ರವಾಹ
ಸ್ವರಾಜ್‌ ಮೈದಾನದ ದಿ| ಜಸ್ಟೀಸ್‌ ಕೆ.ಎಸ್‌. ಹೆಗ್ಡೆ ವೇದಿಕೆಯಲ್ಲಿ ಮಾ.19ರಂದು ರಾತ್ರಿ ನಡೆದ ಸಂಗೀತ ರಸ ಸಂಜೆ, ಮತ್ತು ನೃತ್ಯ ವೈವಿಧ್ಯ ವೀಕ್ಷಿಸಲು ಎಲ್ಲೆಡೆಯಿಂದ ಲಕ್ಷಾಂತರ ಮಂದಿ ಆಗಮಿಸಿದ್ದರು, ಖ್ಯಾತ ಗಾಯಕರಾದ ಗುರುಕಿರಣ್‌, ವಿಜಯಪ್ರಕಾಶ್‌, ಹೇಮಂತ್‌, ಅನುರಾಧಾ ಭಟ್‌, ಶಮಿತಾ ಮಲಾ°ಡ್‌, ನಿಹಾಲ್‌ ತಾವ್ರೋ, ದೀಪಿಕಾ ಶ್ರೀಕಾಂತ್‌, ಹರ್ಷ, ಅಂಕಿತಾ ಚಂದು ಅವರ ಗಾಯನಕ್ಕೆ ಜನ ಮರುಳಾಗಿ ಹುಚ್ಚೆದ್ದು ಕುಣಿದರು. ಮೈದಾನ ತುಂಬಿ ತುಳುಕುತ್ತಿತ್ತು. ಪೊಲೀಸರು, ಸ್ವಯಂ ಸೇವಕರು ಕಿಕ್ಕಿರಿದ ಜನಸಂದಣಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಹರಸಾಹಸ ಪಡಬೇಕಾಯಿತು.

Advertisement

Udayavani is now on Telegram. Click here to join our channel and stay updated with the latest news.

Next