Advertisement

ವಿದ್ಯುತ್‌ ಅಳವಡಿಸಲು ಕ್ರಮ ಕೈಗೊಳ್ಳಿ: ಸುನಿಲ್‌ 

01:35 AM Dec 06, 2018 | Karthik A |

ಕಾರ್ಕಳ: ತಾಲೂಕಿನಲ್ಲಿರುವ ವಿದ್ಯುತ್‌ ರಹಿತ ಮನೆಗಳನ್ನು ಗುರುತಿಸಿ ಒಂದು ವಾರದೊಳಗೆ ಪಟ್ಟಿ ಮಾಡಿ ಮೆಸ್ಕಾಂಗೆ ನೀಡಬೇಕು. ಸೌಭಾಗ್ಯ ಯೋಜನೆಯಲ್ಲಿ ಪ್ರತೀ ಮನೆಗೂ ವಿದ್ಯುತ್‌ ಅಳವಡಿಸಲು ಅವಕಾಶವಿದ್ದು, ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಬೇಕು ಎಂದು ಶಾಸಕ ವಿ. ಸುನಿಲ್‌ ಕುಮಾರ್‌ ಹೇಳಿದರು. ತಾ.ಪಂ. ಸಭಾಂಗಣದಲ್ಲಿ ಡಿ. 5ರಂದು ನಡೆದ ತ್ತೈಮಾಸಿಕ ಕೆಡಿಪಿ ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಪ್ರಗತಿ ಬಗ್ಗೆ ಮಾಹಿತಿ ಪಡೆದು, ಚರ್ಚಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಈ ಹಿಂದೆ ಪಂಡಿತ್‌ ದೀನ್‌ ದಯಾಳ್‌ ಯೋಜನೆಯಡಿ ಎಲ್ಲ ಮನೆಗಳಿಗೆ ವಿದ್ಯುತ್‌ ಅಳವಡಿಸಲು ನಿರ್ಧರಿಸಲಾಗಿತ್ತು. ಆದರೆ ಹಲವು ಕಾರಣಗಳಿಂದ ಸದ್ಯ 900 ಮನೆಗಳು ಬಾಕಿ ಇದೆ ಎನ್ನಲಾಗುತ್ತಿದೆ. ಹೀಗಾಗಿ ಆಯಾ ಭಾಗದ ಪಂಚಾಯತ್‌ ಪಿಡಿಒಗಳು ತಮ್ಮ ವ್ಯಾಪ್ತಿಯಲ್ಲಿ ಎಷ್ಟು ಮನೆಗಳು ಬಾಕಿ ಇವೆ ಎನ್ನುವುದನ್ನು ಗುರುತಿಸಬೇಕು. ಇತರ ಯಾವುದೇ ಕಾರಣಗಳನ್ನು ನೀಡಿ ವಿದ್ಯುತ್‌ ಸಂಪರ್ಕ ಅಳವಡಿಕೆ ಬಾಕಿ ಆಗಬಾರದು ಎಂದರು.

ಕೃಷಿ ಹಾಗೂ ತೋಟಗಾರಿಕಾ ಇಲಾಖೆ ಜಂಟಿಯಾಗಿ ಇಸ್ರೇಲ್‌ ಮಾದರಿ ಕೃಷಿ ನಡೆಸಲು ಕೆಲವು ಪ್ರದೇಶಗಳನ್ನು ಗುರುತಿಸಬೇಕು. ಕೊಳೆರೋಗ ಹಾಗೂ ಮಳೆಹಾನಿಯಿಂದ ಉಂಟಾಗಿರುವ ಕೃಷಿಗೆ ಪರಿಹಾರ ಅರ್ಜಿಯನ್ನು ಕೂಡಲೇ ಸರಕಾರಕ್ಕೆ ಸಲ್ಲಿಸುವಂತೆ ಸೂಚಿಸಿದರು. ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಹಾಕಲು ಬಾಕಿ ಇರುವಲ್ಲಿ ತತ್‌ಕ್ಷಣ ಹಲಗೆ ಹಾಕುವ ಕ್ರಮಕೈಗೊಳ್ಳಬೇಕು. ಮತ್ತಷ್ಟು  ತಡಮಾಡಿದರೆ ನೀರು ಕಡಿಮೆಯಾಗಲಿದೆ. ಅದಕ್ಕೆ ಸಣ್ಣ ನೀರಾವರಿ ಇಲಾಖೆಯ ಸಹಕಾರ ಪಡೆದು ಯಾವುದೇ ಕಾರಣ ಹೇಳದೆ ತಕ್ಷಣ ಮುಂದುವರಿಯಬೇಕು ಎಂದರು.
ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ಆಯಷ್ಮಾನ್‌ ಭಾರತ್‌ ಯೋಜನೆ ಬಗ್ಗೆ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಈಗಾಗಲೇ ರಾಜ್ಯ ಮಟ್ಟದಲ್ಲಿ ಸಭೆ ನಡೆದಿದೆ. ತಾಲೂಕು ಮಟ್ಟದ ಅಧಿಕಾರಿಗಳಿಗೆ ಸಭೆ ಜಿಲ್ಲೆಯಲ್ಲಿ ನಡೆಯಲಿದೆ. ತಾಲೂಕಿನ ಎರಡು ಕಡೆ ಆರೋಗ್ಯ ಕೇಂದ್ರದ ಕಟ್ಟಡಗಳು ನಿರ್ಮಾಣವಾಗುತ್ತಿವೆ. 108 ಆ್ಯಂಬುಲೆನ್ಸ್‌ಗಳು ಇವೆ. ಕೆಲವು ಭಾಗದಲ್ಲಿ ಸಿಬಂದಿ ಕೊರತೆ ಇದೆ ಇಲಾಖೆಯ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.

ಹೊಸದಾಗಿ ನಿರ್ಮಿಸುತ್ತಿರುವ ಕಟ್ಟಡಗಳಿಗೆ ಉದ್ಘಾಟನೆಯಾಗುವ ಮೊದಲೇ ಎಲ್ಲ ರೀತಿಯ ಉಪಕರಣಗಳನ್ನು ಅಳವಸಿಡಿಕೊಳ್ಳಬೇಕು. ಉದ್ಘಾಟನೆ ಆದ ಅನಂತರ ಸಮಸ್ಯೆ ಎದುರಾಗಬಾರದು. ಸಿಬಂದಿ ಕೊರತೆ ಬಗ್ಗೆ ಮಾತುಕತೆ ನಡೆಸುವುದಾಗಿ ಶಾಸಕರು ತಿಳಿಸಿದರು. ಸರಕಾರಿ ಹಾಸ್ಟೆಲ್‌ಗ‌ಳಿಗೆ ನೋಡೆಲ್‌ ಆಫೀಸರ್‌ಗಳನ್ನು ಕೂಡಲೇ ನೇಮಕ ಮಾಡಬೇಕು. ಅಲ್ಲಿರುವ ಮೂಲಭೂತ ಸಮಸ್ಯೆಗಳ ಬಗ್ಗೆ ಪಟ್ಟಿ ಮಾಡಿ ನೀಡಬೇಕು ಎಂದು ಶಾಸಕರು ತಿಳಿಸಿದರು. ಸಭೆಯಲ್ಲಿ ತಹಶೀಲ್ದಾರ್‌ ಮಹಮ್ಮದ್‌ ಇಸಾಕ್‌, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಡಾ| ಹರ್ಷ, ತಾ.ಪಂ. ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ, ಉಪಾಧ್ಯಕ್ಷ ಗೋಪಾಲ ಮೂಲ್ಯ, ಚಂದ್ರಶೇಖರ ಶೆಟ್ಟಿ ಉಪಸ್ಥಿತರಿದ್ದರು.

ಕೃಷಿ ಭೂಮಿ ಹೆಚ್ಚಿಸಲು ಮಾಡಿದ್ದೇನು?
ಕೃಷಿ ಇಲಾಖೆಯ ಅಧಿಕಾರಿ ಅವರು ಸರಕಾರದ ಯೋಜನೆಗಳಾದ ಕೃಷಿ ಹೊಂಡ, ಟ್ರ್ಯಾಕ್ಟರ್‌ ವಿತರಣೆ ಹಾಗೂ ಇತರ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಈ ವೇಳೆ ಮಾತನಾಡಿದ ಶಾಸಕರು, ಕೇವಲ ಸರಕಾರಿ ಯೋಜನೆಗಳನ್ನು ರೈತರಿಗೆ ನೀಡಿದರೆ ಸಾಧನೆಯಾಗದು. ಕೃಷಿ ಭೂಮಿ ಹೆಚ್ಚಿಸಲು ಯಾವ ಕ್ರಮಗಳನ್ನು ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿ? ವರ್ಷದಿಂದ ವರ್ಷಕ್ಕೆ ಕೃಷಿ ಭೂಮಿ ಕಡಿಮೆಯಾಗುತ್ತಿದ್ದು, ಈ ಬಗ್ಗೆ ಕೃಷಿ ಭೂಮಿ ಹೆಚ್ಚಿಸಲು ಸೂಕ್ತ ಕ್ರಮಕೈಗೊಳ್ಳುವುದು ಅನಿವಾರ್ಯ. ಕಳೆದ 5 ವರ್ಷಗಳ ಅವಧಿಯಲ್ಲಿ ಕಡಿಮೆಯಾಗಿರುವ ಒಟ್ಟು ಕೃಷಿ ಭೂಮಿಯ ವರದಿ ನೀಡುವಂತೆ ಸೂಚಿಸಿದರು.

Advertisement

ಪ್ಲಾಸ್ಟಿಕ್‌ ನಿಷೇಧ
ತಾಲೂಕಿನಲ್ಲಿ ಈಗಾಗಲೇ ಪ್ಲಾಸ್ಟಿಕ್‌ ನಿಷೇಧ ಜಾರಿಯಲ್ಲಿದ್ದು, ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗಿದೆ. ಪ್ರತಿಯೊಬ್ಬ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಗ್ರಾಮಮಟ್ಟದ ಅಧಿಕಾರಿಗಳು ಕೂಡ ಪ್ರತಿದಿನ ಒಂದು ಗಂಟೆ ಕಾಲ ಅದಕ್ಕಾಗಿ ಮೀಸಲಿಡಬೇಕು. ಎಲ್ಲಿಯೂ ಪ್ಲಾಸ್ಟಿಕ್‌ ಕಂಡುಬರದಂತೆ ಎಚ್ಚರಿಕೆ ವಹಿಸಬೇಕು.
– ವಿ. ಸುನಿಲ್‌ ಕುಮಾರ್‌, ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next