Advertisement

Karkala: ಶ್ರೀ ವೆಂಕಟರಮಣ ದೇಗುಲ ಲಕ್ಷ ದೀಪೋತ್ಸವಕ್ಕೆ ಸಜ್ಜು

06:21 PM Dec 01, 2023 | Team Udayavani |

ಕಾರ್ಕಳ: ಐತಿಹಾಸಿಕ ಪಡುತಿರುಪತಿ ಖ್ಯಾತಿಯ ಶ್ರೀ ವೆಂಕಟರಮಣ ದೇವಸ್ಥಾನ ಲಕ್ಷದೀಪೋತ್ಸವಕ್ಕೆ ಸಜ್ಜಾಗಿದೆ. ಡಿ. 2ರಿಂದ 3
ರ ತನಕ ಹಬ್ಬದ ರೀತಿಯಲ್ಲಿ ನಡೆಯುವ ಲಕ್ಷ ದೀಪೋತ್ಸವ ಸಡಗರ- ಸಂಭ್ರಮಕ್ಕೆ ಒಂದು ದಿನವಷ್ಟೆ ಬಾಕಿಯಿದೆ, ಕಾರ್ತಿಕ ಮಾಸದ ಡಿ. 1ರಂದು ಚಕ್ರ ಉತ್ಸವ, ಕೆಂಪು ಗರುಡ ವಾಹನ ಉತ್ಸವ ಕೆರೆದೀಪ ನಡೆಯಲಿದೆ. ಡಿ. 2ರಂದು ಕಾರ್ತಿಕ ಬಹುಳ ಪಂಚಮಿ ದಿನದಂದು ಲಕ್ಷದೀಪೋತ್ಸವ ನಡೆಯಲಿದೆ.

Advertisement

ಅಂದು ಬೆಳಗ್ಗೆ ಪ್ರಾರ್ಥನೆ, 9.30ಕ್ಕೆ ಫ‌ಲಕಾಣಿಕೆ ಸಮರ್ಪಣೆ, ಮಧ್ಯಾಹ್ನ ಪೂಜೆ ಪಾರ್ಥನೆ ನಡೆದು ಶ್ರೀ ದೇವರು ವನಕ್ಕೆ ಹೊರಡುವ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 2ಕ್ಕೆ ವನದಲ್ಲಿ ಶ್ರೀ ದೇವರಿಗೆ ಅಭಿಷೇಕ, ಮಹಾಪೂಜೆ, ಸಮಾರಾಧನೆ, ರಾತ್ರಿ ಗಂಟೆ 8ಕ್ಕೆ ಶ್ರೀ ದೇವರು ವನದಿಂದ ಹೊರಡುವರು.

ಅನಂತಶಯನ ಪದ್ಮಾವತಿ ದೇವಸ್ಥಾನ, ಮಣ್ಣ ಗೋಪುರಕ್ಕೆ ದೇವರು ಆಗಮಿಸಿ, ಅಲ್ಲಲ್ಲಿನ ಗುರ್ಜಿ ರಥದಲ್ಲಿ ದೇವರನ್ನು ಕುಳ್ಳಿರಿಸುವರು. ಬೆಳಗಿನ ಜಾವಕ್ಕೆ ದೇವರು ಒಳ ಪ್ರವೇಶಿಸುವರು. ಡಿ.3ರಂದು ಅಪರಾಹ್ನ 3.30ಕ್ಕೆ ಶ್ರೀ ದೇವರು ರಾಮಸಮುದ್ರಕ್ಕೆ ಅವಭೃಥ ಸ್ನಾನಕ್ಕೆ ಹೊರಡುವುದು. ರಾತ್ರಿ ಮರುದೀಪ, ಸಣ್ಣ ರಥೋತ್ಸವ, ವಸಂತ ಪೂಜೆ ನಡೆಯಲಿದೆ. ಡಿ.4ರಂದು ವಸಂತ ಪೂಜೆ ನೆರವೇರಲಿದೆ.

ಚಾತುರ್ಮಾಸ ವ್ರತದ ಕಾರ್ತಿಕ ಮಾಸದ ಆಚರಣೆಯ ಒಂದು ಅಂಗ ವಿಶ್ವರೂಪ ದರ್ಶನ, ಯೋಗ ನಿದ್ರೆಯಲ್ಲಿರುವ ಪರಮಾತ್ಮನಿಗೆ ನಾನಾ ವಿಧದ ಫ‌ಲಪುಷ್ಪಗಳನ್ನು ಸಮರ್ಪಿಸಿ ಸಹಸ್ರ ಸಂಖ್ಯೆಯಲ್ಲಿ ದೀಪಗಳನ್ನು ಬೆಳಗಿಸಿ ಸ್ತುತಿಸುವ ವಿಶ್ವರೂಪ ದರ್ಶನ ಮುಗಿದ ತರುವಾಯ ಶ್ರೀದೇಗುಲ ಲಕ್ಷ ದೀಪೋತ್ಸವಕ್ಕೆ ಅಣಿಯಾಗುತ್ತದೆ.

350 ವರ್ಷಗಳ ಇತಿಹಾಸ: ಶ್ರೀ ವೆಂಕಟರಮಣ ದೇವಸ್ಥಾನವು ಸುಮಾರು 350 ವರ್ಷಗಳ ಇತಿಹಾಸವಿರುವ ದೇವಸ್ಥಾನವಾಗಿದ್ದು, ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಉನ್ನತಿ ಸಾಧನೆಗಾಗಿ ಭಕ್ತರ ನಂಬಿಕೆಯ ಪ್ರತೀಕವಾಗಿರುವ ಶ್ರೀ ವೆಂಕಟರಮಣ, ಶ್ರೀನಿವಾಸ ದೇವರ ಸನ್ನಿಧಿಯಲ್ಲಿ ನಡೆಯುವ ಲಕ್ಷದೀಪೋತ್ಸವವು ಪ್ರಸಿದ್ಧವಾದುದು.

Advertisement

ರಾಜಬೀದಿಯಲ್ಲಿ ದೇವರ ನಡೆ
ಶ್ರೀ ವೆಂಕಟರಮಣ ದೇವಸ್ಥಾನದಿಂದ ಶ್ರೀ ವೆಂಕಟರಮಣ ಮತ್ತು ಶ್ರೀನಿವಾಸ ಅವಳಿ ದೇವರು ರಥಬೀದಿ ಮೂಲಕ ರಾಜಗಾಂಭಿರ್ಯದಿಂದ ಸಾಗುವುದು. ನಾಗಸ್ವರ, ವಾದ್ಯ, ಬ್ಯಾಂಡ್‌, ಶಂಖ ವಾದ್ಯದೊಂದಿಗೆ ಸಾಲಂಕೃತವಾಗಿ ದೇವರು ಸಾಗುವ ವೇಳೆ ದಾರಿಯುದ್ದಕ್ಕೂ ಭಕ್ತರು ಆರಿತಿ ಬೆಳಗಿ, ಹಣ್ಣು ಕಾಯಿ ಸಮರ್ಪಿಸುತ್ತಾರೆ. ರಸ್ತೆಯ ಇಕ್ಕೆಲಗಳಲ್ಲಿ ನಿಂತ ಭಕ್ತರು ಅವಳಿ ದೇವರ ಉತ್ಸವ ಸಾಗಿಬರುತ್ತಿದ್ದಂತೆ ಭಕ್ತರು ಬಣ್ಣದ ಓಕುಳಿಯಲ್ಲಿ ಮಿಂದೆದ್ದು ಭಕ್ತಿ ಭಾವ ಪರವಶರಾಗುವುದೆಲ್ಲವನ್ನು ದೀಪೋತ್ಸವದಲ್ಲಿ ಕಾಣಬಹುದಾಗಿದೆ.

ಸಾಲಾಂಕೃತ ಸಾಂಪ್ರದಾಯಿಕ ಗುರ್ಜಿ ರಥ
ಲಕ್ಷದೀಪೋತ್ಸವದ ಅಪೂರ್ವ ಸಂದರ್ಭ ದೇವರು ಹೊರಟು ಬರುವ ಹೊತ್ತಿಗೆ ದಾರಿಯಲ್ಲಿ ಅಲ್ಲಲ್ಲಿ ಗುರ್ಜಿ ರಥಗಳನ್ನು ನಿರ್ಮಿಸಲಾಗುತಿದ್ದು ದೇವಸ್ಥಾನದಿಂದ ಅನಂತಶಯನದವರೆಗೆ ಗುರ್ಜಿಗಳ ನಿರ್ಮಾಣ ಕಾರ್ಯಗಳು ಭರದಿಂದ ನಡೆಯುತ್ತಿದೆ. ಹಗ್ಗಗಳ ಸಹಾಯದಿಂದ ಸಾಂಪ್ರದಾಯಿಕವಾಗಿ ಗುರ್ಜಿಗಳನ್ನು ರಚಿಸಲಾಗುತ್ತದೆ. ಗುರ್ಜಿಗಳಲ್ಲಿ ಬಾವುಟಗಳನ್ನು ನೆಡಲಾಗುತ್ತಿದೆ.

ವ್ಯಾಪಾರಿಗಳ ಆಗಮನ
ದೀಪೋತ್ಸವದ ದಿನಗಳಲ್ಲಿ ಇಲ್ಲಿನ ರಸ್ತೆಗಳ ಅಂಚಿನಲ್ಲಿ ಸಂತೆ ವ್ಯಾಪಾರ ಜೋರಾಗಿ ನಡೆಯುವುದು ಹಿಂದಿನಿಂದಲೂ
ನಡೆದುಕೊಂಡು ಬಂದ ಪದ್ಧತಿ. ಈ ಬಾರಿಯೂ ಸಂತೆ ಮಾರುಕಟ್ಟೆಗಳು ತೆರೆದುಕೊಂಡಿವೆ. ಈಗಾಗಲೆ ವಿವಿಧೆಡೆಯಿಂದ ವ್ಯಾಪಾರಿಗಳು ನಗರಕ್ಕೆ ಆಗಮಿಸಿದ್ದು ಅಂಗಡಿ ಮಳಿಗೆಗಳನ್ನು ತೆರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next