ಕಾರ್ಕಳ: ಪರಶುರಾಮ ಥೀಂ ಪಾರ್ಕ್‌ನಲ್ಲಿ ಲೋಪವಾಗಿದ್ದರೆ ಜಿಲ್ಲಾಡಳಿತ, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ತನಿಖೆ ನಡೆಸಲು ಅಧಿಕಾರವಿದೆಯೇ ಹೊರತು ಕಾಂಗ್ರೆಸ್ ಕಾರ್ಯಕರ್ತ ರಿಗಲ್ಲ ಎಂದು ಶಾಸಕ ವಿ. ಸುನಿಲ್ ಕುಮಾರ್ ಹೇಳಿದರು.
ಶನಿವಾರ ತಮ್ಮ ಕಚೇರಿಯಲ್ಲಿ ಮಾತನಾಡಿದ ಅವರು, ಕಾರ್ಕಳದ ಕುರಿತು ಪ್ರೀತಿಯಿದ್ದವರಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದರು.
ನನ್ನ ಮೇಲಿನ ಆರೋಪ ಇಂದು ನಿನ್ನೆಯದಲ್ಲ. ದಿನಕ್ಕೊಂದು ಕಟ್ಟುಕಥೆಗಳನ್ನು ಕಟ್ಟಿ ತೇಜೋವಧೆ ನಡೆಸಲಾಗುತ್ತಿದೆ. ಆದರೂ ಕ್ಷೇತ್ರದ ಘನತೆ ಗೌರವ ಕಾಪಾಡುವುದಕ್ಕಾಗಿ ನಾನು ಮೌನವಹಿಸಿದ್ದೇನೆ ಎಂದ ಅವರು, ಕ್ಷೇತ್ರದ ಕಾಂಗ್ರೆಸ್‌ನ ಪರಾಜಿತ ಅಭ್ಯರ್ಥಿಯವರ ಹೇಳಿಕೆ ಕಾರ್ಕಳದ ಘನತೆ, ಗೌರವಕ್ಕೆ ಧಕ್ಕೆ ತರುತ್ತಿದೆ. ಅವರಿಗೆ ಸಾಮಾಜಿಕ ಬದ್ಧತೆ ಇಲ್ಲ ಎಂದು ಆಪಾದಿಸಿದರು.
ಸರಕಾರ ಕೂಡಲೇ ಅನುದಾನ ನೀಡಿ ಕಾಮಗಾರಿ ಪೂರ್ಣಗೊಳಿಸ ಬೇಕು. ಮೂರ್ತಿ ಬಗ್ಗೆ ಅನುಮಾನ ವಿದ್ದರೆ ತನಿಖೆ ನಡೆಸಲಿ. ಜತೆಗೆ ಮೂರ್ತಿ ಕುರಿತು ಸುಳ್ಳು, ಅಪಪ್ರಚಾರ ನಡೆಸುವವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದರಲ್ಲದೇ, ಒಂದುವೇಳೆ ಅನುದಾನ ನೀಡದಿದ್ದರೆ ಭಿಕ್ಷೆ ಬೇಡಿಯಾದರೂ ಮೂರ್ತಿ ಕಾರ್ಯ ಪೂರ್ಣಗೊಳಿಸುವುದಾಗಿ ಅವರು ಹೇಳಿದರು.
ಕಾಂಗ್ರೆಸ್‌ನ ಎಡಪಂಥಿಯರು, ನಗರ ನಕ್ಸಲರೆಲ್ಲ ಸೇರಿದ ಒಂದು ಸೀಮಿತ ತಂಡದ ಷಡ್ಯಂತ್ರವಿದು. ಜನಹಿತ ಯೋಜನೆಯನ್ನು ತಡೆದು ಕ್ಷೇತ್ರದ ಹೆಸರನ್ನು ಹಾಳು ಮಾಡುವುದೇ ಇದರ ಗುರಿ ಎಂದರು. ಮಣಿರಾಜ್ ಶೆಟ್ಟಿ, ಮಹಾವೀರ ಹೆಗ್ಡೆ ಮತ್ತಿತರರಿದ್ದರು.