ಕಾರ್ಕಳ: ಕಾರ್ಕಳದಲ್ಲಿ ಮಾರುಕಟ್ಟೆ ಇಲ್ಲವೆಂದಲ್ಲ. ಆದರೆ, ವಿವಿಧ ಮಾರುಕಟ್ಟೆಗೆಂದು ನಿರ್ಮಿಸಿದ ಕಟ್ಟಡವನ್ನು ಕೋಳಿ, ಮೀನು ಮಾರಾಟವೇ ಆಕ್ರಮಿಸಿಕೊಂಡಿದೆ. ಹೀಗಾಗಿ ವ್ಯವಸ್ಥಿತ ತರಕಾರಿ ಮಾರುಕಟ್ಟೆ ಇಲ್ಲ. ಶನಿವಾರ ನಡೆಯುವ ವಾರದ ಸಂತೆಯಂತೂ ರಸ್ತೆಯ ಬದಿಗಳಲ್ಲೇ ನಡೆಯುತ್ತಿದೆ. ಹೀಗಾಗಿ ವಾರದ ಸಂತೆಗೆ ಸೂಕ್ತ ಜಾಗ ಗುರುತಿಸಿ ವ್ಯವಸ್ಥೆ ಕಲ್ಪಿಸುವುದು ಅವಶ್ಯಕವೆನಿಸಿದೆ, ಸವಾಲೆನಿಸಿದೆ.
2012ರಲ್ಲಿ ಇಂದಿರಗಾಂಧಿ ವಾಣಿಜ್ಯ ಸಂಕೀರ್ಣದ ಹೆಸರಲ್ಲಿ ವಿಸ್ತೃತ ಕಟ್ಟಡ ನಿರ್ಮಾಣವಾಗಿದೆ. ಅದರಲ್ಲಿ ಹಸಿಮೀನು, ಒಣಮೀನು, ತರಕಾರಿ ಮಾರಾಟಕ್ಕೆ ಅವಕಾಶವಿದ್ದರೂ ಅಲ್ಲೀಗ ಮೀನು ಮಾರುಕಟ್ಟೆ ಮಾತ್ರ ಉಳಿದುಕೊಂಡಿದೆ. ಇದರಿಂದ ವಾರದ ಸಂತೆ ನಡೆಯುವ ವೇಳೆ ಸಂತೆಯಲ್ಲಿ ಆಗುತ್ತಿರುವ ಸಮಸ್ಯೆಗಳಿಗೆ ದಶಕಗಳಿಂದಲೂ ಮುಕ್ತಿ ಸಿಕ್ಕಿಲ್ಲ.
ಕೋಳಿ, ಮೀನು ಮಾರುಕಟ್ಟೆ ಪರಿಸರ ಗಬ್ಬೆದ್ದು ನಾರುತ್ತಿದೆ. ಮೀನು ಖರೀದಿಸಲಷ್ಟೆ ತೆರಳುವ ಗ್ರಾಹಕರು ಮೀನು ಖರೀದಿಸಿ ಹೊರಬರುತ್ತಿದ್ದಾರೆ. ಕಟ್ಟಡದೊಳಗೆ ಸಂತೆ ನಡೆಸಲು ಅವಕಾಶವಿದ್ದರೂ ಮೀನಿನ ವಾಸನೆ ಮಧ್ಯೆ ತರಕಾರಿ ಮಾರಾಟ ಅಸಾಧ್ಯ ಎಂಬ ಪರಿಸ್ಥಿತಿ ಇದೆ.. ಇದರಿಂದಾಗಿ ತರಕಾರಿ ಮಾರಾಟಗಾರರು ಕಟ್ಟಡದ ಹೊರಗೆ ಆಸುಪಾಸಿನ ಸ್ಥಳಗಳಲ್ಲಿ ಕುಳಿತುಕೊಳ್ಳುತ್ತಿದ್ದಾರೆ.
ಸಂತೆ ಮಾರುಕಟ್ಟೆ ಮಾರ್ಗ ಇಕ್ಕಟ್ಟಾಗಿದ್ದು, ಇಲ್ಲೇ ಖಾಸಗಿ ಬಸ್ ಸಹಿತ ಇತರೆ ವಾಹನಗಳು ಓಡಾಟ ನಡೆಸುತ್ತವೆ. ಇದರಿಂದಾಗಿ ಇಲ್ಲಿ ಟ್ರಾಫಿಕ್ ಸಮಸ್ಯೆ ದಟ್ಟಣೆ ಉಂಟಾಗುತ್ತಿದೆ. ವಾಹನಗಳು ರಸ್ತೆಯಲ್ಲಿ ಸಿಕ್ಕಿಹಾಕಿಕೊಂಡು ಸಣ್ಣಪುಟ್ಟ ಅಪಘಾತ, ಮಾತಿನ ಚಕಮಕಿಗಳು ನಡೆಯುತ್ತಿರುತ್ತವೆ.
ಇನ್ನು ಮೂರು ಮಾರ್ಗ ಜಂಕ್ಷನ್‌ನಿಂದ ಮಾರುಕಟ್ಟೆ ಕಡೆಗೆ ಸಂಪರ್ಕಿಸುವ ರಸ್ತೆ ಬದಿಯಲ್ಲಿ ಶನಿವಾರದ ಸಂತೆ ನಡೆಯುತ್ತದೆ. ಹೀಗಾಗಿ ಇಲ್ಲಿ ವಾಹನ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಶನಿವಾರವಾದರೂ ವಾಹನ ಓಡಾಟ ನಿಷೇದಿಸಿದರೆ ಸಂತೆಗೆ ಬರುವವರಿಗೆ ಕೊಂಚವಾದರೂ ಅನುಕೂಲವಾಗಬಹುದು.
ಏನು ಸಮಸ್ಯೆ? ಬೇಡಿಕೆಗಳೇನು?
- ವಿಶಾಲ ಪಾರ್ಕಿಂಗ್ ವ್ಯವಸ್ಥೆಯಿದ್ದರೂ ಮಳೆಗಾಲದಲ್ಲಿ ನೀರು ತುಂಬುವ ಸಮಸ್ಯೆ.
- ಮೀನು ಮಾರುಕಟ್ಟೆ ಪ್ರಥಮ ಅಂತಸ್ತಿನಲ್ಲಿದ್ದು, ತರಕಾರಿಗೆ ವಾರಕ್ಕೊಮ್ಮೆ ಮಾತ್ರ ವ್ಯಾಪಾರ
- ಕೋಳಿಯಂಗಡಿ ದುರ್ವಾಸನೆಯಿಂದ ತರಕಾರಿ ಗ್ರಾಹಕರು ಅತ್ತ ಸುಳಿಯುತ್ತಿಲ್ಲ.
- ಸ್ವತ್ಛತೆ ಬಗ್ಗೆ ಪುರಸಭೆ ಕಟ್ಟು ನಿಟ್ಟಿಲ್ಲ. ವ್ಯಾಪಾರಿಗಳ ಸ್ಪಂದನೆಗೆ ಇರುವ ಅಡ್ಡಿ ನಿವಾರಿಸಬೇಕು.
- ವಾರದ ಸಂತೆ ಉತ್ತಮ ರೀತಿಯಲ್ಲಿ ನಡೆ ಯಲು ಸಮರ್ಪಕ ವ್ಯವಸ್ಥೆ ಬೇಕಾಗಿದೆ.
-ಬಾಲಕೃಷ್ಣ ಭೀಮಗುಳಿ