Advertisement

Karkala: ಪ್ರವಾಸಿಗರ ಕೊರತೆ, ಚುನಾವಣೆ- ಪ್ರವಾಸಿ ತಾಣ ನಿರ್ಜನ!

03:15 PM Apr 26, 2023 | Team Udayavani |

ಕಾರ್ಕಳ: ಬೇಸಗೆ ರಜೆ ಎಂದರೆ ಸಾಕು, ಶಿಲ್ಪ ಕಲೆಗಳ ತವರೂರು ಕಾರ್ಕಳಕ್ಕೆ ಪ್ರವಾಸಿಗರು ಲಗ್ಗೆ ಇಡುತ್ತಿದ್ದರು. ಆದರೆ ಈ ಬಾರಿ ಚುನಾವಣೆಯ ಕಾವಿನ ಜತೆಗೆ ಸುಡುಬಿಸಿಲು ಕೂಡ ಇರುವುದರಿಂದ ಪ್ರವಾಸಿಗರ ಕೊರತೆ ಕಂಡುಬಂದಿದೆ. ಇದರಿಂದ ಪ್ರವಾಸೋಧ್ಯಮಕ್ಕೆ ಜತೆಗೆ ಸ್ಥಳೀಯ ವ್ಯಾಪಾರಿಗಳ ಆದಾಯಕ್ಕೂ ಕತ್ತರಿ ಬಿದ್ದಿದೆ.

Advertisement

ರಾಜ್ಯದ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಕಾರ್ಕಳವೂ ಆದ್ಯತೆ ಪಡೆದುಕೊಂಡಿದೆ. ಇತ್ತೀಚೆಗಷ್ಟೆ ಪರಶುರಾಮನ ಥೀಂ ಪಾರ್ಕ್‌
ನಿರ್ಮಾಣಗೊಂಡ ಬಳಿಕವಂತೂ ಇನ್ನಷ್ಟು ಆಕರ್ಷಣೆ ಪಡೆದುಕೊಂಡಿದೆ. ಇಲ್ಲಿನ ಭಗವಾನ್‌ ಶ್ರೀ ಬಾಹುಬಲಿ ಬೆಟ್ಟ, ಚತುರ್ಮುಖ ಬಸದಿ, ಕೋಟಿಚೆನ್ನಯ ಥೀಂ ಪಾರ್ಕ್‌, ವರಂಗ ಬಸದಿ, ಆನೆಕೆರೆ ಇತ್ಯಾದಿಗಳನ್ನು ಕಣ್ತುಂಬಿ ಕೊಳ್ಳಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರು. ಆದರೆ ಈ ಸಲ ಈ ಪರಿಸರವೆಲ್ಲ ಈಗ ನಿರ್ಜನವಾಗಿವೆ.

ಕಾರ್ಕಳ ಕರಿಯ ಕಲ್ಲುಗಳಿಂದ ಆವೃತ ಪ್ರದೇಶ. ಉರಿ ಬಿಸಿಲಿನಿಂದಾಗಿ ಬಂಡೆಗಲ್ಲು ಗಳು ಕಾದು ಹೆಂಚಿನಂತಾಗಿವೆ. ಸದಾ ಬಿಸಿ
ಗಾಳಿ ಇಲ್ಲಿ ಬೀಸುತ್ತಿರುತ್ತದೆ. ಸಹಸ್ರಾರು ಇದ್ದ ಪ್ರವಾಸಿಗರ ಸಂಖ್ಯೆ ನೂರಾರು ಆಸುಪಾಸಿಗೆ ಇಳಿದಿದೆ. ಬಂದ ಪ್ರವಾಸಿಗರು ಕೂಡ ಬಿಸಿಲ ತಾಪಕ್ಕೆ ಬಳಲಿ ಸಿಕ್ಕಲ್ಲೆಲ್ಲ ನೀರು ಕುಡಿದು ದಣಿವಾರಿಸಿ ಕೊಳ್ಳುತ್ತಿದ್ದಾರೆ.

ಶ್ರೀ ಭಗವಾನ್‌ ಬಾಹುಬಲಿ ಬೆಟ್ಟ ಹಾಗೂ ಅಲ್ಲಿಗೆ ತೆರಳುವ ಮೆಟ್ಟಿಲುಗಳಲ್ಲಿ ಜನವೇ ಕಾಣುತ್ತಿಲ್ಲ. ಚತುರ್ಮುಖ ಬಸದಿ, ಕೋಟಿ
ಚೆನ್ನಯ ಥೀಂ ಪಾರ್ಕ್‌ ಕೂಡ ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿವೆ.

ಹೊರ ಜಿಲ್ಲೆ, ರಾಜ್ಯದಿಂದ ಬರುವ ಪ್ರವಾಸಿ ಗರ ಸಂಖ್ಯೆ ಗಣನೀಯ ಇಳಿಕೆಯಾಗಿದೆ. ಕಾರ್ಕಳ, ಅಕ್ಕಪಕ್ಕದ ಊರುಗಳ ಪ್ರವಾಸಿಗರು ಸಂಜೆ ಈ ತಾಣಗಳಿಗೆ ಮಕ್ಕಳೊಂದಿಗೆ ಆಗಮಿಸುವುದಷ್ಟೇ ಕಾಣುತ್ತಿದೆ. ವಾರಾಂತ್ಯದ ಶನಿವಾರ, ರವಿವಾರ ತುಸು ಹೆಚ್ಚಿರುತ್ತದೆ. ಬಿಟ್ಟರೆ ಉಳಿದ ದಿನಗಳಲ್ಲಿ ಕಡಿಮೆ ಇದ್ದಾರೆ.

Advertisement

ರಾಜ್ಯದಲ್ಲಿ ಚುನಾವಣೆ ಘೋಷಣೆಯಾಗಿದ್ದು, ಅಧಿಕಾರಿಗಳು ಅದರ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ಇನ್ನೊಂದೆಡೆ ಆಯಾ ಕ್ಷೇತ್ರಗಳಲ್ಲಿ ರಾಜಕೀಯ ಪ್ರಚಾರ ಪ್ರಕ್ರಿಯೆ ಚುರುಕುಗೊಂಡಿವೆ. ಈ ಎಲ್ಲ ಕಾರಣಕ್ಕೆ ಮಕ್ಕಳಿಗೆ ರಜೆ ಇದ್ದರೂ ಜನರು ಪ್ರವಾಸ
ಕೈಗೊಳ್ಳುತ್ತಿಲ್ಲ. ಮಕ್ಕಳು ಬೇಸಗೆ ಶಿಬಿರಗಳಲ್ಲಿ ಕಳೆಯುತ್ತಿರುವುದು ಇನ್ನೊಂದು ಕಾರಣ.

ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಹೊರಗಿ ನಿಂದ ಬರುವ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ. ಹಿಂದೆ ದಿನಕ್ಕೆ 500ರ ವರೆಗೆ ಬರುತ್ತಿದ್ದ ಪ್ರವಾಸಿಗರ ಸಂಖ್ಯೆ ಈ ಬಾರಿ 100ರ ಆಸುಪಾಸಿಗೆ ಇಳಿದಿದೆ. ಸ್ಥಳೀಯರು ಮಾತ್ರ ಬೆಳಗ್ಗೆ – ಸಂಜೆ ಹೊತ್ತು ಬರುತ್ತಾರೆ.ಹಗಲು ಬಿಸಿಲಿನ ಝಳ ಹೆಚ್ಚಿರುವ ಕಾರಣ ಪ್ರವಾಸಿಗರೇ ಇರುವುದಿಲ್ಲ. ತಾಪ ಇಳಿದ ಬಳಿಕ, ಮಳೆಗಾಲ ಆರಂಭದ ಹೊತ್ತಲ್ಲಿ ಪ್ರವಾಸಿಗರು ಬರುವ ನಿರೀಕ್ಷೆಯಿದೆ.
ಸುರೇಂದ್ರ ಪೂಜಾರಿ ಗೈಡ್‌, ಕೋಟಿ ಚೆನ್ನಯ ಥೀಂ ಪಾಕ್‌

*ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next