Advertisement

ಕುಲಶೇಖರ-ಕಾರ್ಕಳ ಚತುಷ್ಪಥ: ಮರು ಭೂಸ್ವಾಧೀನಕ್ಕೆ ಸಿದ್ಧತೆ

12:42 PM Jul 15, 2018 | Team Udayavani |

ಮಂಗಳೂರು: ಕುಲಶೇಖರ- ಮೂಡಬಿದಿರೆ-ಕಾರ್ಕಳ ನಡುವಿನ ಚತುಷ್ಪಥ ರಾ.ಹೆ. ನಿರ್ಮಾಣಕ್ಕೆ  ಪ್ರಕ್ರಿಯೆಗಳು ಅಂತಿಮ ಹಂತಕ್ಕೆ ತಲುಪುತ್ತಿದ್ದು, ರಸ್ತೆಗಾಗಿ 45 ಮೀ. ಭೂಸ್ವಾಧೀನಕ್ಕೆ ನಿರ್ಧರಿಸಲಾಗಿದೆ. ಈ ಸಂಬಂಧ ಸೆಪ್ಟೆಂಬರ್‌ನಲ್ಲಿ “3ಎ’ ಅಧಿಸೂಚನೆ ಹೊರಡಿಸಲು ಸಿದ್ಧತೆ ನಡೆಯುತ್ತಿದೆ.
 
30 ಮೀ. ಬದಲು 45 ಮೀ. 
ವರ್ಷಗಳ ಹಿಂದೆ ಯೋಜನೆ ಹಾದು ಹೋಗುವ 33 ಎಕರೆ ವ್ಯಾಪ್ತಿಗೆ 3 ಎ ಅಧಿಸೂಚನೆ ಆಗಿತ್ತು. ಆಗ 30 ಮೀ. ಮಾತ್ರ ಭೂಸ್ವಾಧೀನ ಪಡಿಸುವಂತೆ ಸ್ಥಳೀಯರು ಪ್ರತಿಭಟನೆ ನಡೆಸಿದ್ದರಿಂದ ಪ್ರಕ್ರಿಯೆಗೆ ಬ್ರೇಕ್‌ ಬಿದ್ದಿತ್ತು. ಈಗ 45 ಮೀ. ಭೂಸ್ವಾಧೀನಕ್ಕೆ ಹೆದ್ದಾರಿ ಇಲಾಖೆ ನಿರ್ಧರಿಸಿದ್ದು, ಪ್ರಕ್ರಿಯೆ ಮತ್ತೆ ಶುರುವಾಗಿದೆ.  

Advertisement

ಆಕ್ಷೇಪಣೆಗೆ 21 ದಿನ ಕಾಲಾವಕಾಶ 
2ನೇ ಹಂತದಲ್ಲಿ ಭೂಸ್ವಾಧೀನಕ್ಕೆ ಸರ್ವೆ ಆರಂಭಿಸಲಾಗಿದೆ.  ಎಲ್ಲ ದಾಖಲೆಗಳನ್ನು ತಾಲೂಕು ಕಚೇರಿಯಿಂದ ಹೆದ್ದಾರಿ ಇಲಾಖೆ ಪಡೆಯುತ್ತಿದೆ. ಬಳಿಕ “3ಡಿ’ ಅಂತಿಮ ಅಧಿಸೂಚನೆ ಸಿದ್ಧಪಡಿಸಲಾಗುತ್ತದೆ. ಬಳಿಕ ಯೋಜನೆ ಒಪ್ಪಿಗೆ, ಸಾಧ್ಯತಾ ವರದಿ, ವಿಸ್ತೃತ ಯೋಜನಾ ವರದಿಯನ್ನು (ಡಿಪಿಆರ್‌)ಕನ್ಸಲ್ಟೆಂಟ್‌ ಸಿದ್ದ ಪಡಿಸಲಿದ್ದಾರೆ. 3ಎ ಅಧಿಸೂಚನೆಯು ರಾಜ್ಯ ಪತ್ರದಲ್ಲಿ ಪ್ರಕಟವಾದ ಬಳಿಕ ರಸ್ತೆ ಎಲ್ಲಿ ಹಾದುಹೋಗಲಿದೆ ಮತ್ತು ಯಾರೆಲ್ಲ ಭೂಮಿ ನೀಡಬೇಕಿದೆ ಎಂದು ಮಾಲೀಕರ ಹೆಸರು ಮತ್ತು ಸರ್ವೆ ನಂಬರ್‌ ಪತ್ರಿಕೆಗಳಲ್ಲಿ ಪ್ರಕಟಿಸಲಾಗುತ್ತದೆ. ಇದಕ್ಕೆ  21 ದಿನಗಳವರೆಗೆ ಸಾರ್ವಜನಿಕರ ಆಕ್ಷೇಪ ಸಲ್ಲಿಕೆಗೆ ಅವಕಾಶವಿರುತ್ತದೆ.  
ಹಿಂದಿನ ಅಧಿಸೂಚನೆ ಬಾಕಿ! ಇದೇ ರಸ್ತೆಯ ಚತುಷ್ಪಥಕ್ಕಾಗಿ ಈ ಮೊದಲು 2017 ಮಾ.15ರಂದು 3ಡಿ ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ ಪತ್ರಿಕಾ ಪ್ರಕಟನೆ ಆಗಿರಲಿಲ್ಲ ಎಂಬ ಆರೋಪವಿತ್ತು. ಈ ಮಧ್ಯೆ, 2017ರ ಜು.18ರಂದು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆದು ಕೆಲವು ಮಾರ್ಪಾಡುಗಳೊಂದಿಗೆ ಹೊಸ ನಕ್ಷೆ ಮಾಡಲಾಗಿತ್ತು. ಬಳಿಕ ಹೆದ್ದಾರಿ ಪ್ರಾಧಿ ಕಾರದಿಂದ ಡಿಪಿಆರ್‌ ತಯಾರಿಸಿ 169 ವಿಶೇಷ ಭೂಸ್ವಾಧೀನ ಅಧಿಕಾರಿಯವರಿಗೆ ನೀಡಲಾಗಿದೆ. 

ಗುರುಪುರ-ಮೂಡಬಿದಿರೆಯಲ್ಲಿ ಬೈಪಾಸ್‌
ಸಂಸದ ನಳಿನ್‌ ಕುಮಾರ್‌ ಕಟೀಲು ಅವರು ಇತ್ತೀಚೆಗೆ ಮಂಗಳೂರಿನಲ್ಲಿ ರಾ.ಹೆ.ಇಲಾಖೆ ಅಧಿಕಾರಿಗಳ ಜತೆಗೆ ಸಭೆ ನಡೆಸಿದಾಗ, ಕುಲ ಶೇಖರ-ಕಾರ್ಕಳ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಯೋಜನೆಗೆ ಭೂಸ್ವಾಧೀನ ಸಂಬಂಧ ಎಲ್ಲಾ ಪ್ರಕ್ರಿಯೆಗಳು ಸೆಪ್ಟಂಬರ್‌ನಲ್ಲಿ ಪೂರ್ಣ ಗೊಳ್ಳಲಿದೆ. ಡಿಸೆಂಬರ್‌ನಲ್ಲಿ ಟೆಂಡರ್‌ ಕರೆಯಲಾಗುತ್ತದೆ. 45 ಮೀ. ಅಗಲಕ್ಕೆ ವಿಸ್ತರಿಸುವ ಈ ಯೋಜನೆಗೆ ಗುರುಪುರ ಹಾಗೂ ಮೂಡಬಿದಿರೆಯಲ್ಲಿ 2 ಬೈಪಾಸ್‌ ಬರಲಿವೆ ಎಂದು ತಿಳಿಸಿದ್ದರು. 

“ಪ್ರಾರಂಭಿಕ ಸಿದ್ಧತೆ’
ಮಂಗಳೂರು-ಮೂಡಬಿದಿರೆ-ಕಾರ್ಕಳ ರಸ್ತೆ ಚತುಷ್ಪಥ ಹಿನ್ನೆಲೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ಈಗ ಪ್ರಾರಂಭಿಕ ಹಂತದಲ್ಲಿದೆ. ಕೇಂದ್ರದ ಒಪ್ಪಿಗೆ ದೊರೆತ ಕೂಡಲೇ ಮುಂದಿನ ಕ್ರಮ ಕೈಗೊಳ್ಳಲಾಗುವುದು. 
-ಶಶಿಕಾಂತ್‌ ಸೆಂಥಿಲ್‌, 
ದ.ಕ. ಜಿಲ್ಲಾಧಿಕಾರಿ

ದಿನೇಶ್‌ ಇರಾ

Advertisement
Advertisement

Udayavani is now on Telegram. Click here to join our channel and stay updated with the latest news.

Next