Advertisement

Karkala ಅತ್ಯಾಚಾರ ಪ್ರಕರಣ: ಸಿಒಡಿ ತನಿಖೆಗೆ ಆಗ್ರಹ

11:46 PM Aug 25, 2024 | Team Udayavani |

ಉಡುಪಿ: ಕಾರ್ಕಳದಲ್ಲಿ ಬೋವಿ ಸಮುದಾಯದ ಯುವತಿಯ ಅಪಹರಣ ಹಾಗೂ ಅತ್ಯಾಚಾರ ಪ್ರಕರಣವನ್ನು ಸಿಒಡಿ ತನಿಖೆಗೆ ಒಪ್ಪಿಸಬೇಕು ಎಂದು ಕರ್ನಾಟಕ ಬೋವಿ ವಡ್ಡರ ಜಿಲ್ಲಾ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ದಲಿತ ಸಂಘರ್ಷ ಸಮಿತಿ, ದಸಂಸ ಭೀಮವಾದ, ಅಂಬೇಡ್ಕರ್‌ ಯುವಸೇನೆ, ಎಸ್ಸಿಎಸ್ಟಿ ಗುತ್ತಿಗೆದಾರರ ಸಂಘ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿವೆ.

Advertisement

ಬೋವಿ ಸಂಘದ ಜಿಲ್ಲಾಧ್ಯಕ್ಷ ಆನಂದ ಮಾತನಾಡಿ, ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಿದ್ದು, ಇದರ ಹಿಂದೆ ಇನ್ನಷ್ಟು ಮಂದಿ ಇರುವ ಶಂಕೆ ಇದೆ. ಪೊಲೀಸರು ಕೆಲವರನ್ನು ರಕ್ಷಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಕೃತ್ಯವನ್ನು ಖಂಡಿಸಿ ಸಂಘದ ನೇತೃತ್ವದಲ್ಲಿ ಇತರ ಸಮಾನ ಮನಸ್ಕ ಸಂಘಟನೆಗಳ ಸಹಯೋಗದೊಂದಿಗೆ ಆ.26ರಂದು ಬೆಳಗ್ಗೆ 9.30ಕ್ಕೆ ಕಾರ್ಕಳದಲ್ಲಿ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗಿದೆ ಎಂದರು.

ಜಯನ್‌ ಮಲ್ಪೆ ಮಾತನಾಡಿ, ನಾಗರಿಕ ಸಮಾಜ ತಲೆ ತಗ್ಗಿಸುವ ಪ್ರಕರಣ ಇದಾಗಿದೆ. ಬಡ ಕುಟುಂಬದ ಸಂತ್ರಸ್ತ ಯುವತಿಗೆ ಸರಕಾರ ಪರಿಹಾರ ನೀಡಿ ರಕ್ಷಣೆ ಒದಗಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ದೌರ್ಜನ್ಯತಡೆ ಜಾಗೃತಿ ಉಸ್ತುವಾರಿ ಸಮಿತಿ ಸದಸ್ಯ ವಾಸುದೇವ ಉಪ್ಪೂರು, ದಸಂಸ ಭೀಮವಾದ ಮೈಸೂರು ವಿಭಾಗೀಯ ಸಂಚಾಲಕ ವಿಶ್ವನಾಥ ಬೆಳ್ಳಂಪಳ್ಳಿ, ಅಂಬೇಡ್ಕರ್‌ ಯುವಸೇನೆ ಅಧ್ಯಕ್ಷ ಗಣೇಶ್‌ ನೆರ್ಗಿ, ಭೋವಿ ಸಂಘದ ಸ್ಥಾಪಕಾಧ್ಯಕ್ಷ ಶಿವ ಬೋವಿ, ಕಾರ್ಕಳ ತಾಲೂಕು ಅಧ್ಯಕ್ಷ ನಾರಾಯಣ ಬೋವಿ ಹಾಗೂ ಇತರರು ಉಪಸ್ಥಿತರಿದ್ದರು.

ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ: ದುರ್ಗಾವಾಹಿನಿ ಆಗ್ರಹ
ಮಂಗಳೂರು: ಕಾರ್ಕಳದಲ್ಲಿ ಯುವತಿಯನ್ನು ಅಪಹರಿಸಿ ಬಲವಂತವಾಗಿ ಡ್ರಗ್ಸ್‌ ನೀಡಿ ಅತ್ಯಾಚಾರ ಎಸಗಿರುವ ಘಟನೆ ಇಡೀ ಸಮಾಜವೇ ತಲೆತಗ್ಗಿಸುವ, ಹಿಂದೂ ಯುವತಿಯರನ್ನು ಗುರಿಯಾಗಿಟ್ಟುಕೊಂಡು ಇಂತಹ ಕೃತ್ಯ ನಡೆಸುವ ವ್ಯವಸ್ಥಿತ ತಂಡ ಕಾರ್ಯಾಚರಿಸುವ ಬಗ್ಗೆ ಸಂಶಯ ವ್ಯಕ್ತವಾಗುತ್ತಿದೆ. ಕರಾವಳಿಯಲ್ಲಿ ಡ್ರಗ್ಸ್‌ ಜಾಲ ವ್ಯಾಪಕವಾಗಿ ಹರಡಿರುವುದಕ್ಕೆ ಇದೊಂದು ಉದಾಹರಣೆ ಎಂದು ದುರ್ಗಾವಾಹಿನಿ ಹೇಳಿದೆ.

Advertisement

ಪೊಲೀಸ್‌ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸಿ ಆರೋಪಿಗಳನ್ನು ಗಲ್ಲಿಗೇರಿಸಲು ಪೂರಕವಾಗಿ ಬಲವಾದ ಸೆಕ್ಷನ್‌ ಹಾಕಬೇಕು. ಅಲ್ಲದೆ ಕರಾವಳಿಯಲ್ಲಿ ಅವ್ಯಾಹತವಾಗಿ ನಡೆಯುವ ಡ್ರಗ್ಸ್‌ ಜಾಲವನ್ನು ಮಟ್ಟಹಾಕಲು ತಂಡ ರಚಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಹೆಣ್ಣು ಮಕ್ಕಳಿಗೆ ಸೂಕ್ತರಕ್ಷಣೆ ನೀಡುವುದರೊಂದಿಗೆ ಇಂತಹ ಘಟನೆ ಮರುಕಳಿಸದಂತೆ ಎಚ್ಚರ ವಹಿಸಬೇಕು. ಸಾಮಾಜಿಕ ಜಾಲತಾಣವನ್ನು ಉಪಯೋಗಿಸಿ ಇಂತಹ ಕೃತ್ಯ ನಡೆಸುವ ವ್ಯವಸ್ಥಿತ ತಂಡ ಇರುವ ಶಂಕೆ ಬಲವಾಗಿದ್ದು, ಹೆತ್ತವರು ತಮ್ಮ ಮಕ್ಕಳ ಬಗ್ಗೆ ನಿಗಾವಹಿಸಬೇಕು ಎಂದು ದುರ್ಗಾವಾಹಿನಿ ದ.ಕ. ಜಿಲ್ಲಾ ಸಂಯೋಜಕಿ ಶ್ವೇತಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next