Advertisement
ಕೇಂದ್ರದ ಮಾಜಿ ಸಚಿವ ಕಾಂಗ್ರೆಸ್‌ನ ಡಾ| ಎಂ. ವೀರಪ್ಪ ಮೊಯ್ಲಿಯವರು 1972ರಿಂದ 1994ರ ವರೆಗೂ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಸಚಿವರಾಗಿ, ಮುಖ್ಯಮಂತ್ರಿಯೂ ಆದರು. ಬಳಿಕ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದು ಅದೇ ಪಕ್ಷದ ಗೋಪಾಲ ಭಂಡಾರಿಯವರು. 2004ರ ಚುನಾವಣೆಯಲ್ಲಿ ಸುನಿಲ್ ಕುಮಾರ್ ಗೆದ್ದು ಬಿಜೆಪಿಗೆ ಈ ಕ್ಷೇತ್ರವನ್ನು ತಂದುಕೊಟ್ಟರು. ಆದರೆ 2008ರಲ್ಲಿ ಗೋಪಾಲ ಭಂಡಾರಿ ವಿರುದ್ಧ ಸುನಿಲ್ ಸೋತರು. 2013 ಮತ್ತು 2018ರಲ್ಲಿ ಸುನಿಲ್ ಮತ್ತೆ ಗೆದ್ದು ಈಗ ಸಚಿವರಾಗಿದ್ದಾರೆ.
ಉಡುಪಿ ಜಿಲ್ಲೆಯಲ್ಲೇ ಹೆಚ್ಚು ಚರ್ಚಿತವಾಗುತ್ತಿರುವ ಕ್ಷೇತ್ರ ಕಾರ್ಕಳ. ಬಿಜೆಪಿಯಲ್ಲಿ ಸದ್ಯ ಸುನಿಲ್ ಕುಮಾರ್ ಹೊರತು ಪಡಿಸಿ ಬೇರೆಯವರ ಹೆಸರು ಕೇಳಿ ಬರುತ್ತಿಲ್ಲ. ಸಮುದಾಯದ ಬೆಂಬಲದ ಜತೆಗೆ ಹಿಂದೂ ಸಂಘಟನೆಗಳೊಂದಿಗೆ ಸಕ್ರಿಯವಾಗಿದ್ದಾರೆ. ಹಿಂದು ತ್ವದ ಆಧಾರದಲ್ಲೇ ಚುನಾವಣೆ ಎದುರಿಸುವುದಾಗಿ ಹೇಳಿದ್ದಾರೆ. ಕಾರ್ಕಳ ಉತ್ಸವ, ಉಮಿಕ್ಕಲ್ ಬೆಟ್ಟದಲ್ಲಿ ಪರಶುರಾಮನ ಪ್ರತಿಮೆ ಪ್ರತಿಷ್ಠಾಪನೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿ ಗಮನ ಸೆಳೆದಿದ್ದಾರೆ. ಆದರೆ ಇವರ ವಿರುದ್ಧ ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಸ್ಪರ್ಧೆ ಘೋಷಿಸಿರುವುದು ಕುತೂ ಹಲಕ್ಕೆ ಕಾರಣವಾಗಿದೆ. ಈಗಾಗಲೇ ಕ್ಷೇತ್ರದಲ್ಲಿ ಝಾಂಡಾ ಹೂಡಿ, ಪ್ರಚಾರ, ಸುತ್ತಾಟ, ಸಭೆಗಳಲ್ಲಿ ತೊಡಗಿದ್ದಾರೆ. ಇವರಿಬ್ಬರ ಮಧ್ಯೆ ವಾಕ್ಸಮರವೂ ಜೋರಾಗುತ್ತಿದೆ.
Related Articles
Advertisement
ಅಭ್ಯರ್ಥಿ ಹುಡುಕಾಟದಲ್ಲಿ ಕಾಂಗ್ರೆಸ್ಉಳಿದಂತೆ ಕಾಂಗ್ರೆಸ್ ಸಹ ಬಿಜೆಪಿ ಓಟಕ್ಕೆ ಅಡ್ಡಿಯಾಗಲು ಸೂಕ್ತ ಅಭ್ಯರ್ಥಿಯ ಹುಡುಕಾಟದಲ್ಲಿದೆ. ಇಬ್ಬರ ಜಗಳದ ಲಾಭ ಪಡೆಯಲೂ ಎಲ್ಲ ರೀತಿಯ ತಂತ್ರಗಾರಿಕೆಯನ್ನು ಮಾಡುತ್ತಿದೆ. ಮುತಾಲಿಕ್ ಅವರು ಸ್ವಲ್ಪ ಮಟ್ಟಿಗೆ ಬಿಜೆಪಿ ಮತಬುಟ್ಟಿಗೆ ಕೈ ಹಾಕಿದರೆ ತನಗೆ ಎಷ್ಟು ಅನುಕೂಲ ವಾದೀತು? ಅದರ ಲಾಭ ಪಡೆಯಲು ಯಾರನ್ನು, ಯಾವ ಸಮು ದಾಯದವರನ್ನು ಸ್ಪರ್ಧಿಯಾಗಿಸಿದರೆ ಒಳ್ಳೆಯದು ಎಂಬ ಆಲೋಚನೆಯಲ್ಲಿ ಕಾಂಗ್ರೆಸ್ ನಿರತವಾಗಿದೆ.
ಪ್ರಸ್ತುತ ಡಿ.ಆರ್. ರಾಜು, ಸುರೇಂದ್ರ ಶೆಟ್ಟಿ, ಮಂಜುನಾಥ ಪೂಜಾರಿ ಹಾಗೂ ನೀರೆ ಕೃಷ್ಣ ಶೆಟ್ಟಿಯವರು ಟಿಕೆಟ್ ಕೋರಿ ಕೆಪಿಸಿಸಿಯಲ್ಲಿ ನಿರ್ದಿಷ್ಟ ಠೇವಣಿಯಿಟ್ಟು ಬಂದಿದ್ದಾರೆ. ಇದರ ಮಧ್ಯೆ ಗುತ್ತಿಗೆದಾರರಾದ ಮುನಿಯಾಲು ಉದಯ ಕುಮಾರ್ ಶೆಟ್ಟಿಯವರ ಹೆಸರು ಚಾಲ್ತಿಯಲ್ಲಿದೆ. ಆದರೆ ಮುನಿಯಾಲು ಅವರ ವಿರುದ್ಧವೇ ಪಕ್ಷದ ಕೆಲವರು ಆಕ್ಷೇಪವೆತ್ತಿ ಬಹಿರಂಗ ಹೇಳಿಕೆ ನೀಡಿದ್ದಾರೆ. ಕ್ಷೇತ್ರದಲ್ಲಿ ಈಗಲೂ ವೀರಪ್ಪ ಮೊಲಿಯವರು ಪ್ರಭಾವ ಹೊಂದಿದ್ದು, ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸಲೂ ಪ್ರಯತ್ನಿಸಬಹುದು. ಹೀಗಾಗಿ ಕಾಂಗ್ರೆಸ್‌ನಲ್ಲಿ ಅಭ್ಯರ್ಥಿ ಆಯ್ಕೆಯೇ ಕೊಂಚ ಕಗ್ಗಂಟು. ಆಕಸ್ಮಾತ್ ಕಾಂಗ್ರೆಸ್‌ಗೆ ಸಮರ್ಥ ಅಭ್ಯರ್ಥಿ ಸಿಕ್ಕು, ಪ್ರಮೋದ್ ಮುತಾಲಿಕ್ ಸಹ ಪ್ರಬಲ ಪೈಪೋಟಿ ಕೊಟ್ಟರೆ ಸುನಿಲ್ ಕುಮಾರ್ ಗೆಲುವಿಗೆ ಸ್ವಲ್ಪ ಹೆಚ್ಚು ಬೆವರು ಸುರಿಸಬೇಕಾದೀತು. ಜಯಪ್ರಕಾಶ್ ಹೆಗ್ಡೆ ಸೆಳೆಯುವ ಯತ್ನ
ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದ, ಪ್ರಸ್ತುತ ಬಿಜೆಪಿಯಲ್ಲಿರುವ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಅವರನ್ನು ಸೆಳೆಯುವ ಪ್ರಯತ್ನದಲ್ಲಿ ಕಾಂಗ್ರೆಸ್ ಇದೆ. ಈ ಮೂಲಕ ಕಾರ್ಕಳ ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವ, ಜಿದ್ದಾಜಿದ್ದಿನ ಹೋರಾಟಕ್ಕೆ ಅಣಿಯಾಗುವ ತಯಾರಿಯಲ್ಲಿದೆ. ಆದರೆ ಜಯಪ್ರಕಾಶ್ ಹೆಗ್ಡೆ ಅವರು ಮತ್ತೆ ಕಾಂಗ್ರೆಸ್ ಪಕ್ಷದತ್ತ ವಾಲುವ ಸಾಧ್ಯತೆಗಳ ಬಗ್ಗೆ ಇನ್ನೂ ಸ್ಪಷ್ಟತೆ ಮೂಡಿಲ್ಲ. ಇದೇ ಸಂದರ್ಭದಲ್ಲಿ ವಿಧಾನಸಭೆಯ ಚುನಾವಣೆಗಿಂತ ಹೆಚ್ಚಾಗಿ ಲೋಕಸಭೆಯ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತಂತೆ ಜಯಪ್ರಕಾಶ್ ಹೆಗ್ಡೆ ಅವರ ಒಲವು ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. -ಬಾಲಕೃಷ್ಣ ಭೀಮಗುಳಿ