Advertisement

Karkala: ವಿಶೇಷ ಚೇತನ ಮಕ್ಕಳಿಂದ 24 ಸಾವಿರ ಹಣತೆ!

01:37 PM Oct 30, 2024 | Team Udayavani |

ಕಾರ್ಕಳ: ದೀಪಾವಳಿ ಎಲ್ಲರ ಮನೆಗಳನ್ನೂ ಬೆಳಗಲು ಸಜ್ಜಾಗಿದೆ. ಈ ಹಬ್ಬದ ಕಾಂತಿ ಕಾರ್ಕಳದ ವಿಶೇಷ ಚೇತನ ಮಕ್ಕಳ ಬದುಕಿನಲ್ಲೂ ಹೊಸ ರಂಗು ತುಂಬುತ್ತಿರುವುದು ವಿಶೇಷ. ಕರಕುಶಲ ವಸ್ತುಗಳ ತಯಾರಿಕೆಯಲ್ಲಿ ಸೈ ಎನಿಸಿಕೊಂಡ ಕಾರ್ಕಳದ ವಿಜೇತ ವಿಶೇಷ ಶಾಲೆಯ ವಿದ್ಯಾರ್ಥಿಗಳು ಈ ವರ್ಷ ಸುಮಾರು 24,000 ಹಣತೆಗಳನ್ನು ಸಿದ್ಧಪಡಿಸಿದ್ದಾರೆ.

Advertisement

ಕುಕ್ಕುಂದೂರಿನ ಅಯ್ಯಪ್ಪ ನಗರದಲ್ಲಿರುವ ಶ್ರೀ ಗುರುರಾಘವೇಂದ್ರ ಸೇವಾ ಟ್ರಸ್ಟ್‌ ವತಿಯಿಂದ ನಡೆಯುತ್ತಿರುವ ವಿಜೇತ ವಿಶೇಷ ವಸತಿ ಶಾಲೆಯ ಮಕ್ಕಳು ಸ್ವದೇಶಿ ವಸ್ತುಗಳ ಬಳಕೆಯ ಪರಿಕಲ್ಪನೆಯೊಂದಿಗೆ ಕಳೆದ 8 ವರ್ಷಗಳಿಂದ ಹಣತೆಗಳನ್ನು ರೂಪಿಸುತ್ತಿದ್ದಾರೆ.

ದೈಹಿಕವಾಗಿ, ಮಾನಸಿಕವಾಗಿ ಅಶಕ್ತವಾಗಿರುವ ಈ ಮಕ್ಕಳ ಸುಪ್ತ ಪ್ರತಿಭೆಯನ್ನು ಗುರುತಿಸಿ ಅವರಿಗೆ ಸ್ವಾವಲಂಬಿ ಜೀವನದ ಪಾಠವನ್ನು ಕಲಿಸುತ್ತಿದ್ದಾರೆ ಸಂಸ್ಥೆಯ ಮುಖ್ಯಸ್ಥೆ ಡಾ| ಕಾಂತಿ ಹರೀಶ್‌ ಪ್ರಸ್ತುತ ಶಾಲೆಯಲ್ಲಿ 130 ವಿಶೇಷ ಸಾಮರ್ಥ್ಯದ ಮಕ್ಕಳು ಕೌಶಲ ಶಿಕ್ಷಣದ ತರಬೇತಿ ವಿವಿಧ ಹಂತಗಳಲ್ಲಿ ಕಲಿತಿದ್ದಾರೆ. ಇದರಲ್ಲಿ 38 ಮಂದಿ ತಂದೆ ತಾಯಿ ಇಲ್ಲದ ಅನಾಥ ಮಕ್ಕಳು ಇದ್ದಾರೆ. 32 ಮಂದಿ ಸಿಬಂದಿ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ವಿವಿಧ ವಯೋಮಾನದ ಆಧಾರದಲ್ಲಿ ಇವರಿಗೆ ಬೇರೆಬೇರೆ ಬಗೆಯ ಕೌಶಲ ಶಿಕ್ಷಣಗಳನ್ನು ಕಾಲಕಾಲಕ್ಕೆ ಇಲ್ಲಿ ನೀಡಲಾಗುತ್ತದೆ. ವೈವಿಧ್ಯಮಯ ಕರಕುಶಲ ತರಬೇತಿ ಪಡೆಯುತ್ತಿರುವ ಮಕ್ಕಳು ದೀಪಾವಳಿಗೆ 3 ತಿಂಗಳು ಮೊದಲೇ ಹಣತೆ ಸಿದ್ಧಪಡಿಸಲು ಶುರು ಮಾಡುತ್ತಾರೆ. ಇದರಿಂದ ಇವರ ಪ್ರತಿಭೆಗೆ ಪ್ರೋತ್ಸಾಹ, ಸ್ವದೇಶಿ ಪರಿಕಲ್ಪನೆಗೆ ಬೆಂಬಲ ನೀಡಿದಂತಾಗುತ್ತದೆ. ಸಂಸ್ಥೆಗೆ ಸ್ವಲ್ಪ ಆರ್ಥಿಕ ಸಹಾಯ ದೊರಕುತ್ತದೆ. ಇವರಿಂದ ಹಣತೆ ಖರೀದಿ ಮಾಡಿದವರಿಗೂ ದೀಪಾವಳಿ ಅರ್ಥಪೂರ್ಣವಾಗುತ್ತದೆ.

ಉತ್ತಮ ಸ್ಪಂದನೆ
ವಿಶೇಷ ಮಕ್ಕಳೆಲ್ಲರೂ ಸೇರಿಕೊಂಡು ತಯಾರಿಸಿದ ಹಣತೆಗಳಿಗೆ ಉತ್ತಮ ಸ್ಪಂದನೆ ಇದೆ. ಸ್ಥಳೀಯವಾಗಿ ತಯಾರಿಸಲಾದ ಹಣತೆಗಳ ಖರೀದಿಯಿಂದ ವಿಶೇಷ ಮಕ್ಕಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಜತೆಗೆ ದೀಪಾವಳಿಯು ಅರ್ಥಪೂರ್ಣವಾಗಿರುತ್ತದೆ.
– ಕಾಂತಿ ಹರೀಶ್‌, ಸಂಸ್ಥಾಪಕಿ, ವಿಜೇತ ವಿಶೇಷ ಶಾಲೆ, ಕಾರ್ಕಳ

Advertisement

1.25 ಲಕ್ಷ ರೂ. ವೆಚ್ಚ
ಈ ಬಾರಿ ಇಲ್ಲಿ 24 ಸಾವಿರ ಹಣತೆಗಳನ್ನು ತಯಾರಿಸಲಾಗಿದ್ದು, 1.25 ಲಕ್ಷ ರೂ. ವ್ಯಯಿಸಲಾಗಿದೆ. ಇಲ್ಲಿ ವ್ಯಾಕ್ಸ್‌ ಮತ್ತು ಬತ್ತಿಯಿಂದ ಹಣತೆ ಮಾಡಲಾಗಿದೆ. ಪರಿಕರಗಳನ್ನು ಬೆಂಗಳೂರಿನಿಂದ ತರಿಸಲಾಗುತ್ತದೆ. ಮಕ್ಕಳೆಲ್ಲ ಸೇರಿ ಅದಕ್ಕೆ ಸುಂದರ ರೂಪ ನೀಡುತ್ತಾರೆ.ಮಕ್ಕಳು ತಯಾರಿಸಿದ ಹಣತೆ ಖರೀದಿಗಾಗಿ ದೂರದ ಊರುಗಳಿಂದಲೂ ಜನರು ಬರುತ್ತಾರೆ. ಈ ಬಾರಿ ಈಗಾಗಲೇ 12 ಸಾವಿರ ಹಣತೆಗಳು ಖರ್ಚಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next