Advertisement
ಚಿತ್ರದ ಶೀರ್ಷಿಕೆಯಲ್ಲೇ ಒಂದು ಮಜ ಇದೆ. ಆ ಮಜ ಚಿತ್ರದ ಕಥೆ ಮತ್ತು ನಿರೂಪಣೆಯಲ್ಲೂ ಇದೆ. ಇದೊಂದು ಹಾಸ್ಯಮಯ ಚಿತ್ರವೆನಿಸಿದರೂ, ಇಲ್ಲೊಂದು ಗಂಭೀರ ವಿಷಯವಿದೆ. ಗಂಭೀರ ವಿಷಯ ಇಟ್ಟುಕೊಂಡೇ ಚಿತ್ರದುದ್ದಕ್ಕೂ ಹಾಸ್ಯಬೆರೆಸಿ, ಸುಮ್ಮನೆ ನೋಡಿಸಿಕೊಂಡು ಹೋಗುವ ಪ್ರಯತ್ನ ಇಲ್ಲಿ ಸಫಲಗೊಂಡಿದೆ. ಮನರಂಜನೆಗೆ ಇಲ್ಲಿ ಕೊರತೆ ಇಲ್ಲ. ಚಿತ್ರದಲ್ಲಿ ಸಣ್ಣಪುಟ್ಟ ಸಮಸ್ಯೆಗಳನ್ನು ಹೊರತುಪಡಿಸಿದರೆ, ಕರಿಯಪ್ಪನ ಕೆಮಿಸ್ಟ್ರಿ ವರ್ಕೌಟ್‌ಗೆ ಸಮಸ್ಯೆ ಇಲ್ಲ.
Related Articles
Advertisement
ಸಣ್ಣ ಮನೆಯಲ್ಲೇ ಮೂರು ಪ್ರಮುಖ ಪಾತ್ರಗಳ ನಡುವಿನ ಕಿತ್ತಾಟ, ಸಂಕಟ ಮತ್ತು ಒದ್ದಾಟವನ್ನು ಹಾಸ್ಯರೂಪದಲ್ಲಿ ಬಿಂಬಿಸಲಾಗಿದೆ. ಇಡೀ ಚಿತ್ರದ ಮತ್ತೂಂದು ವಿಶೇಷವೆಂದರೆ, ಸಂಭಾಷಣೆ. ಮಾತೇ ಚಿತ್ರದ ಬಂಡವಾಳ ಅಂದರೂ ತಪ್ಪಿಲ್ಲ. ಕೆಲವು ಕಡೆ ಡಬ್ಬಲ್ ಮೀನಿಂಗ್‌ಗೆ ಒತ್ತು ಕೊಡಲಾಗಿದೆ. ಮಿಕ್ಕಂತೆ ಕಥಾನಾಯಕನ ಮದುವೆ ಪ್ರಸಂಗವನ್ನು ತೋರಿಸಿರುವ ರೀತಿ ನೋಡುಗರಿಗೆ ಖುಷಿ ಕೊಡುತ್ತದೆ.
ಕರಿಯಪ್ಪನದು ಚಿಕ್ಕ ಸಂಸಾರ. ಹೆಂಡತಿ, ಮಗ, ಹಳೇ ಬಜಾಜ್ ಸ್ಕೂಟರ್ ಮತ್ತು ಒಂದು ನ್ಯಾನೋ. ಸಣ್ಣ ಮನೆಯಲ್ಲೇ ವಾಸಿಸುವ ಕರಿಯಪ್ಪ ತನ್ನ ಮಗ ಉತ್ತರ ಕುಮಾರನಿಗೆ ಮದುವೆ ಮಾಡಲು ಪಡುವಂತಹ ಕಷ್ಟ ಹೇಳತೀರದು. ನೂರಕ್ಕೂ ಹೆಚ್ಚು ಹೆಣ್ಣು ನೋಡಿದರೂ, ಯಾವೊಂದು ಹುಡುಗಿಯೂ ಮಗನಿಗೆ ಸಿಗಲ್ಲ. ಕಾರಣ ಹತ್ತಾರು. ಆದರೆ, ಉತ್ತರಕುಮಾರನಿಗೊಂದು ಹುಡುಗಿ ಫೋನ್ ಮೂಲಕ ಪರಿಚಯವಾಗಿ, ಅದು ಪ್ರೀತಿಗೆ ತಿರುಗಿ ಮದುವೆಯೂ ಆಗಿಬಿಡುತ್ತೆ.
ಇನ್ನೇನು ಮೊದಲ ರಾತ್ರಿ ಆಗಬೇಕು ಅನ್ನುವಷ್ಟರಲ್ಲಿ ಆಕೆ, ವಿಚ್ಛೇದನ ನೋಟೀಸ್ ಕಳಿಸಿಬಿಡುತ್ತಾಳೆ. ಅವಳು ಯಾಕೆ ಡೈವೋರ್ಸ್‌ಗೆ ಅಪ್ಲೆ ಮಾಡ್ತಾಳೆ, ಆಮೇಲೆ ಏನೆಲ್ಲಾ ಆಗುತ್ತೆ ಅನ್ನೋದೇ ಮಜವಾದ ಕಥೆ. ಆ ಮಜ ಅನುಭವಿಸುವ ಆಸೆ ಇದ್ದರೆ, ಕರಿಯಪ್ಪನ ಕೆಮಿಸ್ಟ್ರಿ ಹೇಗಿದೆ ಅನ್ನೋದನ್ನು ತಿಳಿಯಬಹುದು. ಇಡೀ ಚಿತ್ರದ ಆಕರ್ಷಣೆ ತಬಲನಾಣಿ. ಅವರೇ ಇಲ್ಲಿ ಹೀರೋ ಅಂದರೆ ತಪ್ಪಿಲ್ಲ. ಅವರ ಅಭಿನಯ ಮತ್ತು ಮಾತುಗಳು ಚಿತ್ರದ ವೇಗವನ್ನು ಹೆಚ್ಚಿಸಿವೆ. ಇಡೀ ಚಿತ್ರವನ್ನು ಆವರಿಸಿಕೊಂಡಿರುವ ತಬಲನಾಣಿ, ಪ್ರತಿ ದೃಶ್ಯದಲ್ಲೂ ನಗಿಸುತ್ತಲೇ ಸೂಕ್ಷ್ಮ ವಿಷಯದ ಬಗ್ಗೆ ಬೆಳಕು ಚೆಲ್ಲುತ್ತಾರೆ.
ಚಂದನ್‌ಗೆ ಇಲ್ಲಿ ಹೇಳಿ ಮಾಡಿಸಿದಂತಹ ಪಾತ್ರವಿದೆ. ನಟನೆ ಪರವಾಗಿಲ್ಲ. ಡ್ಯಾನ್ಸ್ ಬಗ್ಗೆ ಹೇಳುವಂಥದ್ದೇನೂ ಇಲ್ಲ. ಸಂಜನಾ ನಟನೆಯಲ್ಲಿ ಲವಲವಿಕೆ ತುಂಬಿದೆ. ಉಳಿದಂತೆ ಅಪೂರ್ವ ಅಮ್ಮನಾಗಿ ಗಮನಸೆಳೆಯುತ್ತಾರೆ. ತೆರೆ ಮೇಲೆ ಬರುವ ಇತರೆ ಪಾತ್ರಗಳಿಗೂ ಆದ್ಯತೆ ಇದೆ. ಆರವ್ ರಿಶಿಕ್ ಸಂಗೀತದಲ್ಲಿ “ಸುಪ್ರಭಾತ ಶುರುವಾಯ್ತು’ ಹಾಡು ಗುನುಗುವಂತಿದೆ. ಸಂಜಯ್‌ಕುಮಾರ್ ಹಿನ್ನೆಲೆ ಸಂಗೀತ ಕೆಲವು ಕಡೆ ಮಾತುಗಳನ್ನೇ ನುಂಗಿಹಾಕಿದೆ. ಶಿವಸೀನ ಛಾಯಾಗ್ರಹಣದಲ್ಲಿ ಕರಿಯಪ್ಪನ ಕೆಮಿಸ್ಟ್ರಿ ವರ್ಕೌಟ್ ಆಗಿದೆ.
ಚಿತ್ರ: ಕೆಮಿಸ್ಟ್ರಿ ಆಫ್ ಕರಿಯಪ್ಪನಿರ್ಮಾಣ: ಡಾ.ಡಿ.ಎಸ್.ಮಂಜುನಾಥ್
ನಿರ್ದೇಶನ: ಕುಮಾರ್
ತಾರಾಗಣ: ತಬಲಾನಾಣಿ, ಚಂದನ್ ಆಚಾರ್, ಸಂಜನಾ, ಅಪೂರ್ವ, ಸುಚೇಂದ್ರಪ್ರಸಾದ್, ಡಾ.ಮಂಜುನಾಥ್, ರಾಕ್‌ಲೈನ್ ಸುಧಾಕರ್, ಮೈಕೋ ನಾಗರಾಜ್ ಇತರರು. * ವಿಜಯ್ ಭರಮಸಾಗರ