Advertisement
ವ್ಹಾ ! ಕಾರಿಂಜಸಾಗುವ ದಾರಿಯುದ್ದಕ್ಕೂ ಹಸಿರ ಐಸಿರಿಯನ್ನು ಕಣ್ತುಂಬಿಕೊಂಡು ರಿಕ್ಷಾದಲ್ಲಿ ದೇವಾಲಯದ ಕಡೆ ತೆರಳುತ್ತಿದ್ದರೆ ದೇಗುಲ ಹತ್ತಿರವಾಗುತ್ತಿದ್ದಂತೆ ಮನಸ್ಸು ದೇವರ ದರ್ಶನಕ್ಕಾಗಿ ಹಾತೊರೆಯುತ್ತಿತ್ತು. ರಿಕ್ಷಾದಿಂದ ಇಳಿದ ನಾವು ಹೆಬ್ಬಂಡೆಯ ಕೆಳಗಿದ್ದ ಪವಿತ್ರ ಕಲ್ಯಾಣಿಯ ನೀರನ್ನ ಸಂಪ್ರೋಕ್ಷಿಸಿದೆವು. ಅನಂತರ ಒಂದು ಹಂತದ ಫೋಟೋಶೂಟ್ ಕೂಡ ನಡೆಯಿತು. ಅಲ್ಲಿಂದ ಮೆಟ್ಟಿಲು ಹತ್ತುವ ಸ್ಪರ್ಧೆ ಏರ್ಪಟ್ಟಿತು. ಕೆಲವರಂತೂ ಹತ್ತು ಹೆಜ್ಜೆಯಲ್ಲಿ ಆಯಾಸಪಟ್ಟರು. ಮತ್ತೆ ಅವರನ್ನು ಎಬ್ಬಿಸಿ ಮೇಲೇರತೊಡಗಿದೆವು.
Related Articles
Advertisement
ಅಷ್ಟೋತ್ತಿಗಾಗಲೇ ಆಗಸದಾದ್ಯಂತ ಕರಿಮೋಡಗಳು ತುಂಬಿ, ಮಳೆಯ ಸೂಚನೆ ಕೊಟ್ಟಿದ್ದರಿಂದ ಹೆಚ್ಚು ಹೊತ್ತು ಅಲ್ಲಿ ನಿಲ್ಲದೆ ಕೆಳಗಿಳಿದು ಬಂದೆವು. ಆದರೆ ಗಾಳಿ-ಮಳೆಗೆ ಬಿಡಿಸಿದ ಛತ್ರಿಯೂ ನಿಲ್ಲಲಿಲ್ಲ . ಅಲ್ಲೇ ಒಂದು ಕಡೆ ನಿಂತು ಕಟ್ಟಿಕೊಂಡು ಬಂದಿದ್ದ ತಿಂಡಿಗಳನ್ನು ತಿನ್ನತೊಡಗಿದೆವು. ಮನೆಯಿಂದ ತಯಾರಿಸಿ ತಂದಿದ್ದ ಪುಳಿಯೋಗರೆ, ತಂಬಿಟ್ಟು ತಾಳ ಹಾಕುತ್ತಿದ್ದ ಹೊಟ್ಟೆಗೆ ತಂಪೆರೆದವು.
ಕಾರಿಂಜದ ಸೊಗಸು ,ರಮ್ಯ ನೋಟ ಮೆಲುಕು ಹಾಕುತ್ತಾ ನರಹರಿ ಪರ್ವತದ ಕಡೆ ಹೆಜ್ಜೆ ಹಾಕಿದೆವು. ಅದಾಗಲೇ ಹೊಟ್ಟೆತುಂಬಾ ಕುರುಕಲು ತಿಂಡಿ ತಿಂದಿದ್ದರಿಂದ ಹಸಿವು ನೀಗಿತ್ತು. ನಮೋ ನರಹರಿ ಕಾರಿಂಜದ ಸವಿನೆನಪುಗಳನ್ನು ಹೊತ್ತುಕೊಂಡು ನಮ್ಮ ತಂಡ ನರಹರಿ ಪರ್ವತದಲ್ಲಿ ವಾಸವಿರುವ ಸದಾಶಿವ ದರ್ಶನಕ್ಕೆ ಬಂತು. ಕಾರಿಂಜದಂತೆಯೇ ಇಲ್ಲಿಯೂ ಮೆಟ್ಟಿಲುಗಳಿದ್ದರೂ ರಸ್ತೆಯೂ ಸಮಾನಾಂತರದಲ್ಲಿ ನಿರ್ಮಾಣಗೊಂಡಿತ್ತು. ಇಲ್ಲಿಯೂ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದೆವು. ಕಣ್ಣರಳಿಸಿ, ಬೆಡಗು ಬಿನ್ನಾಣ ವ್ಯಕ್ತಪಡಿಸುತ್ತಾ ಎಲ್ಲರೂ ಸಮಯದ ಪರಿವಿನ ಅರಿವಿಲ್ಲದಂತಿದ್ದರು.
ಮೆಟ್ಟಿಲೇರುತ್ತಾ ಹೋದಾಗ ದೇವಸ್ಥಾನದ ಶ್ರಮದಾನ ಮಾಡುತ್ತಿದ್ದ ತಂಡ ಎದುರಾಯಿತು. ಅಲ್ಲಿ ಬಂಡೆಕಲ್ಲಿನ ಚೂರುಗಳನ್ನು ಎತ್ತಿಕೊಂಡು ದೇವಾಲಯದ ಪ್ರಾಂಗಣಕ್ಕೆ ಹಾಕುವ ಕೆಲಸ ನಮಗೂ ಸಿಕ್ಕಿತು. ಪುಣ್ಯಕ್ಷೇತ್ರದಲ್ಲಿ ಪುಣ್ಯ ಕೈಂಕರ್ಯ ಕೈಗೊಂಡ ತೃಪ್ತಿಯೂ ನಮ್ಮದಾಗಿತ್ತು.
ಚತುರ್ತೀರ್ಥ ಕೆರೆಗಳುನರಹರಿ ಪರ್ವತದ ವೈಶಿಷ್ಟ್ಯ ಅಲ್ಲಿನ ನಾಲ್ಕು ತೀರ್ಥ ಕೆರೆಗಳು. ಶ್ರೀಮನ್ನಾರಾಯಣನು ಕರದಲ್ಲಿ ಹಿಡಿದ ಶಂಖ ,ಚಕ್ರ,ಗದಾ ,ಪದ್ಮ ಆಕಾರದ ಕೆರೆಗಳಲ್ಲಿ ಬಿರುಬೇಸಗೆಯಲ್ಲೂ ನೀರಿನಿಂದ ತುಂಬಿರುವುದು ಇಲ್ಲಿನ ವಿಶೇಷ. ಮಹಾಭಾರತದ ಕಾಲದಲ್ಲಿ ಕೃಷ್ಣ ತನ್ನ ಆಯುದಾಧಿಗಳನ್ನು ಇಲ್ಲಿ ಇಟ್ಟ ಕಾರಣ ಇಂತಹ ರಚನೆಗಳಾದವು ಎಂಬುದು ಐತಿಹ್ಯ. ಅಲ್ಲಿ ಮಹಾಗಣಪತಿ, ಶಿವನ ದರ್ಶನ ಪಡೆದೆವು. ಅಲ್ಲೇ ಹತ್ತಿರದ ಹೆಬ್ಬಂಡೆಯ ಮೇಲೆ ನಿಂತು ಸುತ್ತಲೂ ಆವರಿಸಿದ್ದ ಹಸಿರ ಸಿರಿಯನ್ನು ಕಂಡೆವು. ದಟ್ಟ ಮರಗಳ ನಡುವೆ ಕಾಣಿಸುತ್ತಿದ್ದ ರೈಲು ಹಳಿ ಹಸುರಿನ ಕೂದಲಿಗೆ ಬೈತಲೆಯಂತೆ ಗೋಚರವಾಗುತ್ತಿತ್ತು. ನಮ್ಮ ಪ್ರವಾಸದ ಅಂತಿಮ ಚರಣದ ಫೋಟೋಶೂಟ್ ಅಲ್ಲೇ ನಡೆಯಿತು. ಅಲ್ಲಿಂದ ಕೆಳಗಿಳಿದು ಬಂದು ಅಂಗಡಿಯೊಂದರಲ್ಲಿ ಸೇವಿಸಿದ ಕಬ್ಬಿನ ಹಾಲಿನ ರುಚಿ ದಣಿದ ದೇಹಕ್ಕೆ ಹಿತವೆನಿಸಿತು. ಅಷ್ಟೋತ್ತಿಗಾಗಲೇ ಸಂಜೆಯಾಗಿದ್ದು ಎಲ್ಲರೂ ಟಾಟಾ ಬೈಬೈ ಹೇಳುವ ತರಾತುರಿಯಲ್ಲಿದ್ದರು. ಸದಾಕಾಲ ಸಿಗದವರು ಬಿಡುವು ಮಾಡಿಕೊಂಡು ಬಂದಿದ್ದು, ಕಾಲೇಜಿನ ದಿನಗಳನ್ನು ನೆನಪಿನಲ್ಲಿ ಉಳಿಯುವಂತೆ ಮಾಡಿತು. ರೂಟ್ ಮ್ಯಾಪ್
· ಬಿ.ಸಿ. ರೋಡ್‌ನಿಂದ ಧರ್ಮಸ್ಥಳಕ್ಕೆ ತೆರಳುವ ರಸ್ತೆಯಲ್ಲಿ ವಗ್ಗ ಎಂಬ ಊರಿನಿಂದ ಸ್ಪಲ್ಪ ದೂರದಲ್ಲಿದೆ ಕಾರಿಂಜೇಶ್ವರ.
· ಮಂಗಳೂರಿನಿಂದ 40 ಕಿ.ಮೀ. ದೂರ.
· ನರಹರಿ ಪರ್ವತ ಮಂಗಳೂರಿನಿಂದ 30 ಕಿ.ಮೀ. ದೂರದಲ್ಲಿದೆ.
· ಕಾರಿಂಜೇಶ್ವರ ದೇವಾಲಯದ ಪಾರ್ವತಿ ದೇವಿಯ ಸನ್ನಿಧಾನದವರೆಗೆ ವಾಹನ ತೆರಳುತ್ತದೆ. ಅಲ್ಲಿಂದ ಮುಂದೆ ಮೆಟ್ಟಿಲುಗಳನ್ನು ಹತ್ತಬೇಕು.
· ನರಹರಿ ದೇವಸ್ಥಾನಕ್ಕೆ ಮೆಟ್ಟಿಲಿನೊಂದಿಗೆ ರಸ್ತೆಯೂ ಇದೆ.
· ಹತ್ತಿರದಲ್ಲಿ ಊಟ, ವಸತಿ ವ್ಯವಸ್ಥೆಯಿಲ್ಲ. ಸುಭಾಷ್ ಮಂಚಿ,
ಹಳೆ ವಿದ್ಯಾರ್ಥಿ, ವಿವಿ ಕಾಲೇಜು, ಮಂಗಳೂರು.