Advertisement

ಇಂದಿನಿಂದ ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಆರಂಭ

09:35 AM Nov 16, 2022 | Team Udayavani |

ಮಣಿಪಾಲ : ಕೊರೊನಾ ಅವಧಿ ಬಳಿಕ ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಾನಕ್ಕೆ ಭೇಟಿ ಕೊಡುವ ಭಕ್ತರ ಸಂಖ್ಯೆ ಕೊರೊನಾ ಪೂರ್ವ ಅವಧಿಗೆ ಸಮನಾಗುತ್ತಿದೆ. ಮಂಗಳವಾರ ಶಬರಿಮಲೆಯಲ್ಲಿ ಧಾರ್ಮಿಕ ವಿಧಿಗಳು ಆರಂಭಗೊಂಡಿದ್ದು ಬುಧವಾರ ದೇವಸ್ಥಾನದ ಬಾಗಿಲು ತೆರೆಯಲಾಗುತ್ತಿದೆ, ಭಕ್ತರಿಂದ ದರ್ಶನ ಆರಂಭವಾಗುತ್ತಿದೆ.

Advertisement

ಕರಾವಳಿಯಾದ್ಯಂತ ಕಾರ್ತಿಕ ಮಾಸದ ಸಂಕ್ರಮಣದಂದು (ಬುಧವಾರ) ಭಕ್ತರು ಮಾಲೆಯನ್ನು ಹಾಕುತ್ತಾರೆ. ಡಿ. 27ರಂದು ಮಂಡಲ ಪೂಜೆ ನಡೆಯಲಿದ್ದು ಬಳಿಕ ಇನ್ನೊಂದಾವರ್ತಿಯಲ್ಲಿ ಮಕರಸಂಕ್ರಮಣ ದರ್ಶನಕ್ಕೆ ತೆರೆಯಲಾಗುತ್ತದೆ. ಡಿಸೆಂಬರ್‌ ಮೊದಲೆರಡು ವಾರಗಳಲ್ಲಿಯೂ ವಿವಿಧೆಡೆ ಶಿಬಿರಗಳ ಮೂಲಕ ಮಾಲೆ ಧರಿಸುತ್ತಾರೆ. ಈ ಸಂದರ್ಭ ವ್ರತಧಾರಿ ಗಳಲ್ಲದೆ ಮನೆಯ ಇತರ ಸದಸ್ಯರೂ ಸಸ್ಯಾಹಾರವನ್ನು ಸ್ವೀಕರಿಸಿರುವುದರಿಂದ ಒಟ್ಟಾರೆ ತರಕಾರಿ, ಹಣ್ಣುಗಳ ಬಳಕೆ ಜಾಸ್ತಿಯಾಗುತ್ತಿದೆ.

ಚೆಂಗನ್ನೂರಿನಿಂದ ನೀಲಕಲ್‌ ವರೆಗೆ ಸ್ಪಾಟ್‌ ಬುಕಿಂಗ್‌ ಮಾಡುವ 12 ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. 15 ಆಸನಗಳಿಗಿಂತ ಕಡಿಮೆ ಇರುವ ವಾಹನಗಳಿಗೆ ಪಂಪೆ ವರೆಗೆ ಹೋಗಲು ಅವಕಾಶವಿದೆ. ಅದಕ್ಕಿಂತ ಹೆಚ್ಚಿನ ಆಸನ ಸಾಮರ್ಥ್ಯದ ವಾಹನಗಳಿಗೆ ನೀಲಕಲ್‌ ವರೆಗೆ ಮಾತ್ರ ಪ್ರವೇಶವಿದೆ. ಅಲ್ಲಿ ಭಕ್ತರು ಇಳಿದು ಸರಕಾರಿ ಬಸ್‌ಗಳಲ್ಲಿ ತೆರಳಬೇಕು. ವಾಹನ ದಟ್ಟಣೆಯನ್ನು ಕಡಿಮೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ.

ಕೊರೊನಾ ಅವಧಿಯಲ್ಲಿ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಈ ಬಾರಿ ನಿತ್ಯ ಒಂದು ಲಕ್ಷ ಭಕ್ತರಿಗೆ ದರ್ಶನಾವಕಾಶ ಸಿಗುವ ಸಾಧ್ಯತೆ ಇದೆ.

ದ.ಕ. ಜಿಲ್ಲೆಯಲ್ಲಿ ಈ ಬಾರಿ 500ಕ್ಕೂ ಹೆಚ್ಚು, ಉಡುಪಿ ಜಿಲ್ಲೆ ಯಲ್ಲಿ 300ಕ್ಕೂ ಹೆಚ್ಚು ಶಿಬಿರಗಳು ಆರಂಭವಾಗಲಿವೆ. ಡಿಸೆಂಬರ್‌ನಲ್ಲಿ ಶಿಬಿರಗಳ ಸಂಖ್ಯೆ ಹೆಚ್ಚಬಹುದು. ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಸಂಘಟನೆ 18 ರಾಜ್ಯಗಳಲ್ಲಿ 4,000ಕ್ಕೂ ಹೆಚ್ಚು ಕಡೆ, ಕರ್ನಾಟಕ ರಾಜ್ಯದ 22 ಜಿಲ್ಲೆಗಳಲ್ಲಿ ಅಸ್ತಿತ್ವಕ್ಕೆ ಬಂದಿವೆ. “ಹರಿವರಾಸನಂ’ ಹಾಡು ರಚನೆಯಾಗಿ ನೂರು ವರ್ಷ ಆಗಿರುವ ಹಿನ್ನೆಲೆಯಲ್ಲಿ ಎರಡೂ ಜಿಲ್ಲೆಗಳ ಮಟ್ಟದ ಕಾರ್ಯಕ್ರಮ ಡಿ. 11ರಂದು ಮಂಗಳೂರಿನಲ್ಲಿ ನಡೆಯಲಿದೆ.
– ಗಣೇಶ ಪೊದುವಾಳ್‌, ರಾಧಾಕೃಷ್ಣ ಮೆಂಡನ್‌, ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಜಿಲ್ಲಾಧ್ಯಕ್ಷರು, ದ.ಕ., ಉಡುಪಿ

Advertisement
Advertisement

Udayavani is now on Telegram. Click here to join our channel and stay updated with the latest news.

Next