Advertisement

ಪೊಳಲಿ ಜಾತ್ರೆ: ಚೆಂಡಿನ ಉತ್ಸವ ಆರಂಭ…ಎ.12: ಮಹಾರಥೋತ್ಸವ

12:53 AM Apr 09, 2023 | Team Udayavani |

ಬಂಟ್ವಾಳ: ಪೊಳಲಿ ಶ್ರೀ ರಾಜರಾಜೇಶ್ವರೀ ಅಮ್ಮನವರ ದೇವ ಸ್ಥಾನದ ವಾರ್ಷಿಕ ಜಾತ್ರೆಯು ಒಂದು ತಿಂಗಳ ಕಾಲ ನಡೆಯುತ್ತಿದ್ದು, ಜಾತ್ರೆಯ ಪುರಲ್ದ ಚೆಂಡು ಖ್ಯಾತಿಯ ಮೊದಲ ದಿನ (ಕೊಡಿ ಚೆಂಡು)ದ ಚೆಂಡಿನ ಉತ್ಸವ ಶುಕ್ರವಾರ ಸಂಜೆ ನಡೆಯಿತು. ಒಟ್ಟು 5 ದಿನಗಳ ಕಾಲ ಚೆಂಡಿನ ಉತ್ಸವ ನಡೆದು 6ನೇ ದಿನವಾದ ಎ. 12ರ ಸಂಜೆ ಮಹಾರಥೋತ್ಸವ ನಡೆಯಲಿದೆ.

Advertisement

ಮೊದಲ ದಿನ ದೇವಳದ ತಂತ್ರಿಗಳು, ಅರ್ಚಕರು, ಆಡಳಿತ ಮಂಡಳಿಯ ಮೊಕ್ತೇಸರರು ಉತ್ಸವದಲ್ಲಿ ಪಾಲ್ಗೊಂಡಿದ್ದು, ದೇವಿಯಲ್ಲಿ ಪ್ರಾರ್ಥಿಸಿ ಬಳಿಕ ಚೆಂಡನ್ನು ಗದ್ದೆಗೆ ತಂದು ಸಾಂಪ್ರದಾಯಿಕ ಮಾತುಗಳ ಮೂಲಕ ಚೆಂಡು ಹಿಡಿದಿದ್ದ ಗಾಣಿಗ ಮನೆತನದವರು ಚೆಂಡನ್ನು ಪರ್ದ ಖಂಡದ ಮನೆತನದವರಿಗೆ ಕೊಟ್ಟು, ಚೆಂಡನ್ನು ಹಾರಿಸಲಾಗುತ್ತದೆ.

ಆಗ ಅಮ್ಮುಂಜೆ, ಮಳಲಿ ಕಡೆಯ ಯುವಕರು, ಮಕ್ಕಳು ಚೆಂಡಾಟದಲ್ಲಿ ಭಾಗವಹಿಸುತ್ತಾರೆ. ಚೆಂಡು ಗದ್ದೆಯ ಬದಿಗೆ ಮುಟ್ಟಿಸಿ ಚೆಂಡು ಹಾರಿಸಿದವರಿಗೆ ಎತ್ತಿಕೊಂಡು ಬಂದು ಕೊಟ್ಟರೆ ಗೆಲುವು ಘೋಷಿಸ ಲಾಗುತ್ತದೆ. ಸುಮಾರು 18 ಕೆಜಿ ತೂಕದ ಚೆಂಡನ್ನು ಮೂಡಬಿದಿರೆ ಚೌಟರ ಸೀಮೆಯ ಪದ್ಮನಾಭ ಚಮಗಾರ ತಯಾರಿಸಿದ್ದಾರೆ.

ಮೊದಲ ದಿನದ ಚೆಂಡಿನ ಉತ್ಸವ ನಡೆದು ಕುಮಾರ ತೇರು ನಡೆಯುತ್ತದೆ. ದಿನಕ್ಕೆ ಮೂರು ಬಾರಿ ಚೆಂಡಾಟ ನಡೆದು ಬಳಿಕ ದೇವಸ್ಥಾನಕ್ಕೆ ತಂದು ಪೂಜೆಯ ಬಳಿಕ ಒಂದು ಸುತ್ತು ಮೆರವಣಿಗೆಯ ಮೂಲಕ ಚೆಂಡಿನ ಉತ್ಸವ ಸಂಪನ್ನಗೊಳ್ಳುತ್ತದೆ. ಎರಡನೇ ಚೆಂಡು ಶನಿವಾರ ನಡೆಯಿತು.

ಪೊಳಲಿ ಉತ್ಸವದ ವಿವರ
ಎ. 8ರಂದು 2ನೇ ಚೆಂಡು, ಹೂ ತೇರು, ಎ. 9ರಂದು 3ನೇ ಚೆಂಡು, ಸೂರ್ಯಮಂಡಲ ರಥ, ಎ. 10ರಂದು 4ನೇ ಚೆಂಡು ಚಂದ್ರಮಂಡಲ ರಥ, ಎ. 11ರಂದು ಕಡೇ ಚೆಂಡು, ಆಳು ಪಲ್ಲಕ್ಕಿ ರಥ-ಬೆಳ್ಳಿ ರಥ, ಎ. 12ರಂದು ಸಂಜೆ ಮಹಾರಥೋತ್ಸವ, ಎ. 13ರಂದು ಅವಭೃಥ ಸ್ನಾನ, ಧ್ವಜಾವರೋಹಣ, ಉಳ್ಳಾಕ್ಲು-ಮಗೃಂತಾಯಿ ದೈವಗಳ ನೇಮ, ಬೆಳಗ್ಗೆ ತಲಾಭಾರ ಸೇವೆ, ಎ. 14ರಂದು ಶ್ರೀ ಕೊಡಮಣಿತ್ತಾಯ ನೇಮ, ಎ. 15ರಂದು ಸಂಪ್ರೋಕ್ಷಣೆ, ಮಂತ್ರಾಕ್ಷತೆಯ ಮೂಲಕ ವಾರ್ಷಿಕ ಜಾತ್ರೆ ಸಮಾಪನಗೊಳ್ಳಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next